ಕರುಣಾಜನಕ ಕಥೆ

7

ಕರುಣಾಜನಕ ಕಥೆ

Published:
Updated:
Deccan Herald

ಇಪ್ಪತ್ತೈದು ವರ್ಷಗಳ ಹಿಂದಿನ ಘಟನೆ. ಅಂಚೆ ಇಲಾಖೆಯಲ್ಲಿ ಕೆಲಸ ಮಾಡುತ್ತಿದ್ದ ನನಗೆ ಬಿಣಗಾ ಗ್ರಾಮದ ಕಾಸ್ಟಿಕ್ ಸೋಡ ಕಾರ್ಖಾನೆ ಆವರಣದಲ್ಲಿರುವ ಅಂಚೆ ಕಚೇರಿಗೆ ನಿಯೋಜನೆ ಮೇಲೆ ಕಳುಹಿಸಿದ್ದರು.

ಕಚೇರಿಯಿಂದ ಹೊರಗಡೆ ನೋಡಿದೆ. ಕಟ್ಟುಮಸ್ತಾದ ವ್ಯಕ್ತಿಯೊಬ್ಬ ಆಧಾರಕ್ಕೆ ಉದ್ದನೆಯ ಕೋಲು ಹಿಡಿದು ಕಾಲೆಳೆಯುತ್ತ ಬಂದು ಅಲ್ಲಿಯೇ ಎದುರಿನಲ್ಲಿರುವ ಕಟ್ಟೆಯ ಮೇಲೆ ಕುಳಿತ. ಕಚೇರಿ ಪಕ್ಕದಲ್ಲಿಯೇ ಕಾರ್ಖಾನೆಯ ಕ್ಯಾಂಟೀನ್‌ ಇತ್ತು. ಕ್ಯಾಂಟೀನ್‌ಗೆ ಬರುವ, ಹೋಗುವ ನೌಕರರು ಆತನ ಕೈಗೆ ಹಣ ನೀಡಿ ಸಾಗುತ್ತಿದ್ದರು.

ನಾನು ಹೊರಗಡೆ ಬಂದು ‘ನೀವು ಯಾರು? ಏನು ನಿಮ್ಮ ಹೆಸರು?’ ಎಂದು ವಿಚಾರಿಸಿದೆ. ಆತ ತೊದಲುತ್ತ ‘ರಾಯರೇ, ಚಂದ್ರಕಾಂತ ಎಂದು ನನ್ನ ಹೆಸರು. ಹದಿಮೂರು ವರ್ಷಗಳ ಹಿಂದೆ ನಾನು ಇದೇ ಕಾರ್ಖಾನೆಯಲ್ಲಿ ನೌಕರನಾಗಿದ್ದೆ. ನೌಕರಿಗೆ ಸೇರಿ ಒಂದೆರಡು ವರ್ಷಗಳಲ್ಲಿ ಪಾರ್ಶ್ವವಾಯುವಿಗೆ ಬಲಿಯಾಗಿಬಿಟ್ಟೆ. ಹೀಗಾಗಿ ನನ್ನ ನೌಕರಿ ಹೋಯಿತು. ಇಂದು ಕಾರ್ಖಾನೆ ನೌಕರರಿಗೆ ಸಂಬಳದ ದಿನ. ಪ್ರತಿ ಸಂಬಳದ ದಿನ ಇಲ್ಲಿ ಬಂದು ಕುಳಿತುಕೊಳ್ಳುತ್ತೇನೆ. ಎಲ್ಲಾ ನೌಕರರು ಬಂದು ಕಾಸು ಕೊಟ್ಟು ಹೋಗುತ್ತಾರೆ’ ಎಂದು ಅಳುತ್ತ ಹೇಳುವ ಬದಲು ನಗು ನಗುತ್ತಲೇ ತನ್ನ ಪರಿಸ್ಥಿತಿ ವಿವರಿಸಿದ.

ಹಾಗೇ ಮಾತು ಮುಂದುವರಿಯಿತು. ‘ಪ್ರತಿಯೊಬ್ಬರೂ ₹ 5, ₹ 10 ಕೊಟ್ಟು ಹೋಗುತ್ತಾರೆ. ಅಂತೂ ಮನೆಗೆ ಹೋಗುವಾಗ ಸೆಂಚುರಿ ಹೊಡೆದೇ ಹೋಗುತ್ತೇನೆ. ಕ್ರಿಕೆಟ್‍ನಲ್ಲಿ ಕಪಿಲ್‌ ದೇವ್, ಸಚಿನ್ ತೆಂಡೂಲ್ಕರ್‌ ಪಿಚ್‌ನ ನಡುವೆ ಓಡಿ ಸೆಂಚುರಿ ಹೊಡೆದರೆ ನಾನು ಕುಳಿತಲ್ಲಿಯೇ ಸೆಂಚುರಿ ಹೊಡೆಯುತ್ತೇನೆ’ ಎಂದು ಗಹಗಹಿಸಿ ನಗತೊಡಗಿದ.

ಆತನ ಹಾಸ್ಯಭರಿತ ಮಾತು ಕೇಳಿ ನಾನು ತುಂಬಾ ಖುಷಿಪಟ್ಟೆ. ಆತನೊಬ್ಬ ನಾಟಕದ ಅತ್ಯುತ್ತಮ ಹಾಸ್ಯ ಪಾತ್ರಧಾರಿಯಾಗಿದ್ದ ಎಂದು ಅಕ್ಕಪಕ್ಕದವರು ಹೇಳಿದರು.

ಮಧ್ಯಾಹ್ನವಾಗುತ್ತ ಬಂತು. ಚಂದ್ರಕಾಂತ ರನ್‌ ಗಳಿಸುತ್ತಲೇ ಇದ್ದ. ಆತನ ಹಾಸ್ಯ ಮಾತುಗಳಿಂದ ಪುಳಕಿತನಾದ ನಾನು ಪುನಃ ಅವನಲ್ಲಿ ತೆರಳಿ ಚಹಾ ಕುಡಿಯಲು ನಮ್ಮ ಕಚೇರಿಗೆ ಬರುವಂತೆ ಆಹ್ವಾನಿಸಿದೆ. ಅದಕ್ಕೆ ಆತ ‘ಇಲ್ಲ ರಾಯರೇ, ಈಗ ಬರುವುದಿಲ್ಲ. ಸೆಂಚುರಿ ಹೊಡೆಯಲು ಇನ್ನು ಕೆಲವೇ ರನ್‌ಗಳು ಬಾಕಿ ಉಳಿದಿವೆ. ಸೆಂಚುರಿ ಹೊಡೆದ ನಂತರ ನಾನೇ ಬಂದು ನಿಮಗೆ ಚಹಾ ಕುಡಿಸುತ್ತೇನೆ’ ಎಂದು ಹೇಳಿ ಪುನಃ ಮೊದಲಿನಂತೆ ಬಾಯ್ತುಂಬ ನಗತೊಡಗಿದ.

ಅರ್ಧಗಂಟೆ ಕಳೆದಿರಬಹುದು. ಆತನೇ ನನ್ನನ್ನು ಕರೆದು ‘ಮಾಸ್ತರ‍್ರೇ, ಈಗಷ್ಟೇ ಸೆಂಚುರಿ ಹೊಡೆದೆ. ನೂರಾ ಒಂದು ರೂಪಾಯಿ ಆಯಿತು. ದೇವರು ನನ್ನನ್ನು ಮರೆತರೂ ಈ ಕಾರ್ಖಾನೆ ನೌಕರರು ಮಾತ್ರ ನನ್ನನ್ನು ಮರೆಯಲಿಲ್ಲ’ ಎಂದು ಹೇಳಿ ನೌಕರರನ್ನು ಸ್ಮರಿಸುತ್ತ ಮುಖ ಮುಚ್ಚಿಕೊಂಡು ಬಿಕ್ಕಿಬಿಕ್ಕಿ ಅಳತೊಡಗಿದ. ನನಗರಿವಿಲ್ಲದೇ ನಾನೂ ಸಹ ಆತನ ಕಣ್ಣೀರಲ್ಲಿ ಭಾಗಿಯಾಗಿಬಿಟ್ಟಿದ್ದೆ. 

ಬರಹ ಇಷ್ಟವಾಯಿತೆ?

 • 1

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !