80 ಮಕ್ಕಳ ಪ್ರವೇಶಕ್ಕೆ ಅನುಮತಿ: ಭರವಸೆ

7
ಕೇಂದ್ರೀಯ ವಿದ್ಯಾಲಯದ ನೂತನ ಕಟ್ಟಡದ ಉದ್ಘಾಟನೆ, ₹16 ಕೋಟಿ ವೆಚ್ಚದಲ್ಲಿ ನಿರ್ಮಾಣ

80 ಮಕ್ಕಳ ಪ್ರವೇಶಕ್ಕೆ ಅನುಮತಿ: ಭರವಸೆ

Published:
Updated:
Deccan Herald

ಚಾಮರಾಜನಗರ: ‘ಇಲ್ಲಿನ ಕೇಂದ್ರೀಯ ವಿದ್ಯಾಲಯದಲ್ಲಿ 80 ಮಕ್ಕಳ ಪ್ರವೇಶಕ್ಕೆ ಅನುಮತಿ ನೀಡುವ ಸಂಬಂಧ ಕೇಂದ್ರ ಮಾನವ ಸಂಪನ್ಮೂಲ ಅಭಿವೃದ್ಧಿ ಸಚಿವ ಪ್ರಕಾಶ್‌ ಜಾವಡೇಕರ್‌ ಅವರೊಂದಿಗೆ ಮಾತುಕತೆ ನಡೆಸುತ್ತೇನೆ’ ಎಂದು ಕೇಂದ್ರ ರಾಸಾನಿಯಕ ಮತ್ತು ರಸಗೊಬ್ಬರ ಹಾಗೂ ಸಂಸದೀಯ ವ್ಯವಹಾರಗಳ ಸಚಿವ ಅನಂತ್‌ಕುಮಾರ್‌ ಭರವಸೆ ನೀಡಿದರು.

ತಾಲ್ಲೂಕಿನ ಮಾದಾಪುರ ಗ್ರಾಮದ ಬಳಿ ನೂತನವಾಗಿ ನಿರ್ಮಿಸಲಾಗಿರುವ ಕೇಂದ್ರೀಯ ವಿದ್ಯಾಲಯ ಕಟ್ಟಡವನ್ನು ಉದ್ಘಾಟಿಸಿ ಅವರು ಮಾತನಾಡಿದರು.

‘ಕಾಲೇಜು ಮಾದರಿಯಲ್ಲಿ ಹೊಸ ಕಟ್ಟಡ ಇದೆ. ಇದನ್ನೂ ಜಾವಡೇಕರ್‌ ಗಮನಕ್ಕೆ ತರುತ್ತೇನೆ. ಇಲ್ಲಿನ ಸಂಸದರ ಬೇಡಿಕೆಯಂತೆ 40 ಮಕ್ಕಳ ಬದಲಾಗಿ 80 ಮಕ್ಕಳ ಪ್ರವೇಶಕ್ಕೆ ಅನುಮತಿ ನೀಡಿದರೆ ಜಿಲ್ಲೆಯ ಮಕ್ಕಳಿಗೆ ಗುಣಮಟ್ಟದ ಶಿಕ್ಷಣ ಸಿಗುವುದಕ್ಕೆ ಅನುಕೂಲವಾಗಲಿದೆ. ಭವಿಷ್ಯದಲ್ಲಿ ಅವರು ಐಎಎಸ್‌, ಐಪಿಎಸ್‌ನಂತಹ ಉನ್ನತ ಹುದ್ದೆಗಳಿಗೆ ಮಾಡಲಿದ್ದಾರೆ’ ಎಂದು ವಿಶ್ವಾಸ ವ್ಯಕ್ತಪಡಿಸಿದರು.

‘ಈ ಪ್ರಸ್ತಾವದ ವಿಚಾರವಾಗಿ ಕೇಂದ್ರೀಯ ವಿದ್ಯಾಲಯ ಸಂಘಟನೆಯ ಬೆಂಗಳೂರು ವಲಯದ ಉಪ ಆಯುಕ್ತ ದೇವಕುಮಾರ್‌ ಜೊತೆ ಮಾತನಾಡಿದ್ದೇನೆ. ಒಂದು ವಾರದಲ್ಲೇ ಅನುಮತಿ ನೀಡಬಹುದು ಎಂದು ಹೇಳಿದ್ದಾರೆ. ಸಚಿವರೊಂದಿಗೆ ಮಾತನಾಡಿ ಇದಕ್ಕೆ ವ್ಯವಸ್ಥೆ ಮಾಡುತ್ತೇನೆ’ ಎಂದರು.

‘ನರೇಂದ್ರ ಮೋದಿ ನೇತೃತ್ವದ ಎನ್‌ಡಿಎ ಸರ್ಕಾರ ಅಧಿಕಾರಕ್ಕೆ ಬಂದ ನಂತರ ದೇಶದಲ್ಲಿ ಹೊಸದಾಗಿ 104 ಕೇಂದ್ರೀಯ ವಿದ್ಯಾಲಯಗಳು ಮತ್ತು 63 ನವೋದಯ ಶಾಲೆಗಳನ್ನು ತೆರೆಯಲಾಗಿದೆ. ಕೇಂದ್ರೀಯ ವಿದ್ಯಾಲಯಗಳಲ್ಲಿ ಪಾಠದ ಜೊತೆಗೆ ತಾಂತ್ರಿಕ ಶಿಕ್ಷಣವನ್ನೂ ಮಕ್ಕಳಿಗೆ ಬೋಧಿಸುವ ಚಿಂತನೆ ಸರ್ಕಾರಕ್ಕೆ ಇದೆ. ಈ ವ್ಯವಸ್ಥೆ ಚೀನಾದಲ್ಲಿ ಈಗಾಗಲೇ ಇದೆ’ ಎಂದು ಅವರು ಹೇಳಿದರು. 

ಕನ್ನಡದ ಬಗ್ಗೆ ಹೆಮ್ಮೆ ಇರಲಿ: ‘ನಾನು ಕನ್ನಡ ಶಾಲೆಯಲ್ಲಿ ಓದಿದವನು. ರಾಷ್ಟ್ರೀಯ, ಅಂತರರಾಷ್ಟ್ರೀಯ ಒಪ್ಪಂದಗಳೇ ಆಗಿರಲಿ ಕನ್ನಡದಲ್ಲೇ ಸಹಿ ಮಾಡುತ್ತೇನೆ. ಕನ್ನಡಿಗರಾದ ನಮಗೆ ಕನ್ನಡದ ಬಗ್ಗೆ ಹೆಮ್ಮೆ ಇರಬೇಕು. ಮಾತೃಭಾಷೆ ಇಲ್ಲದಿದ್ದರೆ ನಮ್ಮ ಸಂಸ್ಕೃತಿ –ಜಾನಪದವಿಲ್ಲ. ನಾವು ಎಂದಿಗೂ ಭಾಷೆಯ ಸೊಗಡು, ಸಂಬಂಧವನ್ನು ಕಳೆದುಕೊಳ್ಳಬಾರದು’ ಎಂದು ಕಿವಿ ಮಾತು ಹೇಳಿದ ಅವರು, ಕೇಂದ್ರೀಯ ವಿದ್ಯಾಲಯದ ಪಠ್ಯದಲ್ಲಿ ಕನ್ನಡವನ್ನು ಒಂದು ವಿಷಯವನ್ನಾಗಿ ಸೇರ್ಪಡೆಗೊಳಿಸಲು ಸರ್ಕಾರದ ಮಟ್ಟದಲ್ಲಿ ಯತ್ನಿಸುವುದಾಗಿ ಹೇಳಿದರು.

ಗಿಡ ನೆಡಲು ಸಲಹೆ: ಕೇಂದ್ರೀಯ ವಿದ್ಯಾಲಯದ ಆವರಣದಲ್ಲಿ ಗಿಡಗಳನ್ನು ನೆಡುವಂತೆಯೂ ಅವರು ಮಕ್ಕಳಿಗೆ ಸಲಹೆ ನೀಡಿದರು.

ಪ್ರಾಥಮಿಕ ಮತ್ತು ಪ್ರೌಢ ಶಿಕ್ಷಣ ಸಚಿವ ಎನ್‌.ಮಹೇಶ್‌ ಮಾತನಾಡಿ, ‘ಪ್ರತಿಷ್ಠಿತ ಶಿಕ್ಷಣ ಸಂಸ್ಥೆಯಾಗಿರುವ ಕೇಂದ್ರೀಯ ವಿದ್ಯಾಲಯಗಳು ದೇಶದಾದ್ಯಂತ ಏಕರೂಪದ ಶಿಕ್ಷಣ ತರುವ ನಿಟ್ಟಿನಲ್ಲಿ ಕೆಲಸ ಮಾಡುತ್ತಿವೆ. ಸದ್ಯ ಸಲ್ಲಿ ಇಂಗ್ಲಿಷ್‌ ಮತ್ತು ಹಿಂದಿಯಲ್ಲೇ ಬೋಧನೆ ಮಾಡಲಾಗುತ್ತಿದೆ. ಕನ್ನಡದ ಸಂಸ್ಕೃತಿ ಮತ್ತು ಬೇರುಗಳನ್ನು ಉಳಿಸುವುದಕ್ಕಾಗಿ ಈ ಶಿಕ್ಷಣ ಸಂಸ್ಥೆಗಳಲ್ಲಿ ಕನ್ನಡವನ್ನು ಒಂದು ವಿಷಯವಾಗಿ ಬೋಧಿಸಬೇಕು. ಕೇಂದ್ರ ಸರ್ಕಾರ ಈ ಬಗ್ಗೆ ಕ್ರಮ ಕೈಗೊಳ್ಳಬೇಕು’ ಎಂದು ಮನವಿ ಮಾಡಿದರು.

 ‘ಕೇಂದ್ರೀಯ ವಿದ್ಯಾಲಯಗಳು ನನ್ನ ವ್ಯಾಪ್ತಿಗೆ ಬರದಿದ್ದರೂ, ಅಲ್ಲಿನ ಪಠ್ಯಕ್ರಮ, ಬೋಧನಾ ವಿಧಾನವನ್ನು ಅರಿವುದಕ್ಕಾಗಿ ರಾಜ್ಯದಲ್ಲಿರುವ ಎಲ್ಲ 46 ಕೇಂದ್ರೀಯ ವಿದ್ಯಾಲಯಗಳಿಗೂ ಭೇಟಿ ನೀಡುತ್ತೇನೆ’ ಎಂದರು.

ಶಾಸಕರಾದ ಎಸ್‌.ಎ. ರಾಮದಾಸ್‌, ಸಿ.ಎಸ್‌. ನಿರಂಜನ್ ಕುಮಾರ್‌, ಜಿಲ್ಲಾ ಪಂಚಾಯಿತಿ ಅಧ್ಯಕ್ಷೆ ಶಿವಮ್ಮ, ಜಿಲ್ಲಾ ಪಂಚಾಯಿತಿ ಉಪಾಧ್ಯಕ್ಷ ಜೆ. ಯೋಗೀಶ್‌, ಜಿಲ್ಲಾ ಪಂಚಾಯಿತಿ ಸದಸ್ಯ ಸಿ.ಎನ್‌. ಬಾಲರಾಜ್‌, ತಾಲ್ಲೂಕು ಪಂಚಾಯಿತಿ ಅಧ್ಯಕ್ಷೆ ದೊಡ್ಡಮ್ಮ, ತಾಲ್ಲೂಕು ಪಂಚಾಯಿತಿ ಉಪಾಧ್ಯಕ್ಷ ಪಿ.ಎನ್‌. ದಯಾನಿಧಿ, ತಾಲ್ಲೂಕು ಪಂಚಾಯಿತಿ ಸದಸ್ಯೆ ಪುಷ್ಪಲತ, ಮಾದಾಪುರ ಗ್ರಾಮ ಪಂಚಾಯಿತಿ ಅಧ್ಯಕ್ಷ ಕೆ.ಎಸ್‌. ಸಿದ್ಧರಾಜು, ಜಿಲ್ಲಾ ಪಂಚಾಯಿತಿ ಸಿಇಒ ಡಾ. ಕೆ. ಹರೀಶ್‌ ಕುಮಾರ್‌, ಜಿಲ್ಲಾ ಪೊಲೀಸ್‌ ವರಿಷ್ಠಾಧಿಕಾರಿ ಧರ್ಮೇಂದ್ರ ಕುಮಾರ್‌ ಮೀನಾ, ಹೆಚ್ಚುವರಿ ಜಿಲ್ಲಾಧಿಕಾರಿ ಕೆ.ಎಂ. ಗಾಯಿತ್ರಿ, ಕೇಂದ್ರೀಯ ವಿದ್ಯಾಲಯ ಸಂಘಟನ್‌ ಬೆಂಗಳೂರು ವಲಯದ ಉಪ ಆಯುಕ್ತ ಪಿ. ದೇವಕುಮಾರ್‌, ಕಾಂಗ್ರೆಸ್‌ ಮುಖಂಡ ಎಸ್‌. ಬಾಲರಾಜ್‌, ನಂಜುಂಡಸ್ವಾಮಿ ಇದ್ದರು.

ಮತ್ತೊಂದು ನವೋದಯ ಶಾಲೆ ಸ್ಥಾಪನೆಗೆ ಕ್ರಮ

‘ಚಾಮರಾಜನಗರದಲ್ಲಿ ಮತ್ತೊಂದು ನವೋದಯ ಶಾಲೆ ತೆರೆಯಬೇಕು ಎಂಬ ಬೇಡಿಕೆ ಇದೆ. ಇದನ್ನೂ ಸಚಿವ ಪ್ರಕಾಶ್‌ ಜಾವಡೇಕರ್‌ ಅವರ ಗಮನಕ್ಕೆ ತರುತ್ತೇನೆ’ ಎಂದು ಅನಂತ್‌ಕುಮಾರ್‌ ಹೇಳಿದರು.

ಪರಸ್ಪರ ಹೊಗಳಿಕೆಯ ಸುರಿಮಳೆ

ಕಾರ್ಯಕ್ರಮದಲ್ಲಿ ಸಂಸದ ಆರ್‌. ಧ್ರುವನಾರಾಯಣ ಮತ್ತು ಕೇಂದ್ರ ಸಚಿವ ಅನಂತ್‌ಕುಮಾರ್‌ ಅವರು ಪರಸ್ಪರ ಹೊಗಳಿಕೊಂಡು ಪ್ರೇಕ್ಷಕರಿಂದ ಚಪ್ಪಾಳೆ ಗಿಟ್ಟಿಸಿಕೊಂಡರು.

ಪ್ರಸ್ತಾವಿಕವಾಗಿ ಮಾತನಾಡಿದ ಆರ್‌. ಧ್ರುವನಾರಾಯಣ ಅವರು, ‘ಕೇಂದ್ರೀಯ ವಿದ್ಯಾಲಯವನ್ನು ಚಾಮರಾಜನಗರ ಜಿಲ್ಲೆಗೆ ಮಂಜೂರು ಮಾಡಲು ಶ್ರಮಿಸಿದ್ದಾರೆ. ಸಂಸ್ಥೆಯ ಆರಂಭಕ್ಕೆ 10 ಎಕರೆ ಜಮೀನು ಬೇಕು ಎಂಬ ನಿಯಮ ಇದ್ದರೂ, ಅಂದಿನ ಮಾನವ ಸಂಪನ್ಮೂಲ ಅಭಿವೃದ್ಧಿ ಸಚಿವೆ ಸ್ಮೃತಿ ಇರಾನಿ ಅವರೊಂದಿಗೆ ಮಾತುಕತೆ ನಡೆಸಿ, ನಮ್ಮಲ್ಲಿ ಏಳೂವರೆ ಎಕರೆ ಜಾಗ ಮಾತ್ರ ಲಭ್ಯವಿದ್ದರೂ, ನಿಯಮ ಸಡಿಲಿಸಿ ವಿದ್ಯಾಲಯ ಆರಂಭವಾಗುವಂತೆ ಮಾಡಿದ್ದಾರೆ’ ಎಂದು ಹೇಳಿದರು.

ಅಷ್ಟಕ್ಕೇ ನಿಲ್ಲದೇ, ‘ಹಿಂದಿನ ಸರ್ಕಾರದಲ್ಲಿ ಆಸ್ಕರ್‌ ಫರ್ನಾಂಡಿಸ್‌ ಅವರು ನಮ್ಮನ್ನು ಅಂದಿನ ಪ್ರಧಾನಿ ಮನಮೋಹನ್‌ ಸಿಂಗ್‌ ಅವರ ಬಳಿ ಕರೆದುಕೊಂಡು ಹೋಗಿ ಆಗಬೇಕಾದ ಕೆಲಸವನ್ನು ಮಾಡಿಸುತ್ತಿದ್ದರು. ಈ ಸರ್ಕಾರದಲ್ಲಿ ಅನಂತಕುಮಾರ್‌ ಅವರು ಈ ಕೆಲಸ ಮಾಡುತ್ತಿದ್ದಾರೆ’ ಎಂದರು.

‘ಸಚಿವರಾಗಿಯೂ ಅವರು ಉತ್ತಮ ಕೆಲಸ ಮಾಡುತ್ತಿದ್ದಾರೆ. ಎಲ್ಲ ರೈತರಿಗೆ ಯೂರಿಯಾ ಲಭ್ಯವಾಗುವಂತೆ ನೋಡಿದ್ದಾರೆ. ಜನೌಷಧಿ ಕೇಂದ್ರಗಳ ಮೂಲಕ ಕಡಿಮೆ ಬೆಲೆಯಲ್ಲಿ ಜನರಿಗೆ ಔಷಧಿ ಸಿಗುವಂತೆ ಮಾಡಿದ್ದಾರೆ’ ಎಂದು ಶ್ಲಾಘಿಸಿದರು.

ಇದಕ್ಕೆ ಪ್ರತಿಯಾಗಿ ಅನಂತ್‌ಕುಮಾರ್‌ ಅವರು ತಮ್ಮ ಭಾಷಣದ ಸರದಿ ಬಂದಾಗ ಧ್ರುವನಾರಾಯಣ ಅವರನ್ನು ಹೊಗಳಿದರು.

‘ಕ್ಷೇತ್ರದ ಬಗ್ಗೆ ಸದಾ ಚಿಂತಿಸುತ್ತಿರುವ ಧ್ರುವನಾರಾಯಣ ಅವರು, ನಾನು ಮೆಚ್ಚಿದ ಸಂಸದ’ ಎಂದು ಹೇಳಿದಾಗ ಪ್ರೇಕ್ಷಕರು ಕರತಾಡನ ಮಾಡಿದರು.

ಬರಹ ಇಷ್ಟವಾಯಿತೆ?

 • 1

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !