ಗುರುವಾರ , ಡಿಸೆಂಬರ್ 3, 2020
23 °C
ಕೈಗಾರಿಕೋದ್ಯಮಿಗಳ ಜತೆ ಕೆಐಎಡಿಬಿ ಸಿಇಒ ಸಂವಾದ

ಕೈಗಾರಿಕಾ ಜಮೀನಿನ ದರ ಶೇ 20 ಮೀರಲ್ಲ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಬೆಂಗಳೂರು: ‘ಹೊಸ ಕೈಗಾರಿಕಾ ಪ್ರದೇಶಗಳಲ್ಲಿನ ಜಮೀನಿನ ದರವನ್ನು ಆರು ತಿಂಗಳೊಳಗೆ ಅಂತಿಮಗೊಳಿಸುತ್ತೇವೆ’ ಎಂದು ಕರ್ನಾಟಕ ಕೈಗಾರಿಕಾ ಪ್ರದೇಶ ಅಭಿವೃದ್ಧಿ ಮಂಡಳಿಯ (ಕೆಐಎಡಿಬಿ) ಮುಖ್ಯ ಕಾರ್ಯನಿರ್ವಹಣಾಧಿಕಾರಿ ಎನ್‌.ಶಿವಶಂಕರ್‌ ತಿಳಿಸಿದರು.

ಕರ್ನಾಟಕ ವಾಣಿಜ್ಯೋದ್ಯಮ ಮಹಾಸಂಘವು (ಎಫ್‌ಕೆಸಿಸಿಐ) ಮಂಗಳವಾರ ಆಯೋಜಿಸಿದ್ದ ಸಂವಾದದಲ್ಲಿ ಅವರು ಮಾತನಾಡಿದರು.

‘18 ತಿಂಗಳೊಳಗೆ ವೇಮಗಲ್‌, ಮಾಲೂರು, ನರಸಾಪುರ, ಹೊಸಕೋಟೆಯಲ್ಲಿ ಹೊಸ ಕೈಗಾರಿಕಾ ಪ್ರದೇಶಗಳನ್ನು ಅಭಿವೃದ್ಧಿಪಡಿಸುತ್ತೇವೆ. ಹೊಸ ಕೈಗಾರಿಕಾ ಪ್ರದೇಶಗಳಲ್ಲಿನ ಜಮೀನಿನ ದರವು ಈಗಿನ ದರಕ್ಕಿಂತ ಶೇ 20 ರಷ್ಟು ಮೀರುವುದಿಲ್ಲ. ಮೂಲಸೌಕರ್ಯಗಳು ಅಲ್ಲಿ ಇರಲಿವೆ’ ಎಂದರು.

‘ಹಳೆ ಕೈಗಾರಿಕಾ ಪ್ರದೇಶಗಳ ಜಮೀನಿನ ದರಗಳನ್ನು ಮರುನಿಗದಿ ಮಾಡಲು ಹಲವೊಂದು ತೊಡಕುಗೊಳಿವೆ. ಹಾಗಾಗಿ ಆ ಪ್ರದೇಶಗಳ ದರವನ್ನು 2 ವರ್ಷಗಳ ಒಳಗೆ ಅಂತಿಮಗೊಳಿಸುತ್ತೇವೆ’ ಎಂದು ಅವರು ಹೇಳಿದರು.

‘ಭೂ ಬ್ಯಾಂಕ್‌ಗಾಗಿ ಬೆಂಗಳೂರು, ಕೋಲಾರ ಸುತ್ತಮುತ್ತಲಿನ ಪ್ರದೇಶಗಳು, ಮಧುಗಿರಿ, ಮುಳವಾಡದಲ್ಲಿ ಹೊಸದಾಗಿ ಜಮೀನುಗಳನ್ನು ಸ್ವಾಧೀನಪಡಿಸಿಕೊಳ್ಳಲು ಯೋಜಿಸಿದ್ದೇವೆ. ಹೊಸ ಕೈಗಾರಿಕೋದ್ಯಮಿಗಳಿಗಾಗಿ ದಾಬಸ್‌ಪೇಟೆ, ದೇವನಹಳ್ಳಿ, ಹೊಸಕೋಟೆ, ವೇಮಗಲ್‌, ಗೌರಿಬಿದನೂರು ಕೈಗಾರಿಕಾ ಪ್ರದೇಶಗಳ ಸುತ್ತಲಿನ ಜಮೀನುಗಳನ್ನು ಸ್ವಾಧೀನ ಪಡಿಸಿಕೊಳ್ಳುತ್ತಿದ್ದೇವೆ. 2020ರ ಜನವರಿಯಲ್ಲಿ ಜಾಗತಿಕ ಹೂಡಿಕೆದಾರರ ಸಮಾವೇಶ ನಡೆಸಲು ಯೋಜಿಸಿದ್ದೇವೆ’ ಎಂದರು.

‘ಕೈಗಾರಿಕಾ ಪ್ರದೇಶಗಳಿಗೆ ಸಂಸ್ಕರಿಸಿದ ನೀರನ್ನು ಹರಿಸುವ ಮೂಲಕ ನೀರಿನ ಕೊರತೆ ನೀಗಿಸಲು ಯೋಜನೆಗಳನ್ನು ಹಾಕಿಕೊಂಡಿದ್ದೇವೆ. ಗೌರಿಬಿದನೂರು ಪ್ರದೇಶಕ್ಕೆ ಕೋಲಾರದಲ್ಲಿನ ಸಂಸ್ಕರಿಸಿದ ನೀರು ರವಾನಿಸಲು ಚಿಂತನೆ ನಡೆದಿದೆ. ತುಮಕೂರಿನ ವಸಂತನರಸಾಪುರ ಪ್ರದೇಶಕ್ಕೆ 3 ಕೋಟಿ ಲೀಟರ್‌ ಸಂಸ್ಕರಿಸಿದ ನೀರು ಕೊಡಲು ಕಾರ್ಯಯೋಜನೆ ರೂಪಿಸುತ್ತಿದ್ದೇವೆ’ ಎಂದು ಹೇಳಿದರು.

‘ತುಮಕೂರಿನ ಕೈಗಾರಿಕಾ ಪ್ರದೇಶಗಳಿಗೆ ಕುಡಿಯುವ ನೀರನ್ನು ಸರಬರಾಜು ಮಾಡಲು ಎತ್ತಿನಹೊಳೆ ಯೋಜನೆಯಲ್ಲಿ ಅವಕಾಶ ಮಾಡಿಕೊಡಲು ಸರ್ಕಾರಕ್ಕೆ ಪ್ರಸ್ತಾವನೆ ಸಲ್ಲಿಸುತ್ತಿದ್ದೇವೆ’ ಎಂದು ತಿಳಿಸಿದರು.

ಅಂಕಿ–ಅಂಶ
145: 
ಕೆಐಎಡಿಬಿ ಅಭಿವೃದ್ಧಿಪಡಿಸಿದ ಕೈಗಾರಿಕಾ ಪ್ರದೇಶಗಳು
1.5 ಲಕ್ಷ ಎಕರೆ: ಕೆಐಎಡಿಬಿ ಅಭಿವೃದ್ಧಿಪಡಿಸಿದ ಕೈಗಾರಿಕಾ ಪ್ರದೇಶದ ವಿಸ್ತೀರ್ಣ

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಈ ವಿಭಾಗದಿಂದ ಇನ್ನಷ್ಟು