ಮಕ್ಕಳಿಲ್ಲವೆಂದು ಯಾರದ್ದೋ ಮಗು ಅಪಹರಿಸಿದ!

ಸೋಮವಾರ, ಮೇ 20, 2019
32 °C

ಮಕ್ಕಳಿಲ್ಲವೆಂದು ಯಾರದ್ದೋ ಮಗು ಅಪಹರಿಸಿದ!

Published:
Updated:

ಬೆಂಗಳೂರು: ಮದುವೆ ಆಗಿ ಹತ್ತು ವರ್ಷ ಕಳೆದರೂ ಮಕ್ಕಳಾಗಲಿಲ್ಲವೆಂದು ಯಾರದ್ದೋ ಮಗುವನ್ನು ಕದ್ದು ತನ್ನ ಮನೆಯಲ್ಲಿ ಇಟ್ಟುಕೊಂಡಿದ್ದ ದಾವಣಗೆರೆಯ ರಮೇಶ್ (33) ಎಂಬಾತನನ್ನು ಸೆರೆಹಿಡಿದಿರುವ ಸಂಪಿಗೆಹಳ್ಳಿ ಪೊಲೀಸರು, ಕೃತ್ಯಕ್ಕೆ ಸಹಕರಿಸಿದ ಕಾರಣಕ್ಕೆ ಆತನ ಸ್ನೇಹಿತ ಮಂಜುನಾಥ ಅಲಿಯಾಸ್ ಜೆಸಿಬಿಯನ್ನೂ (29) ಬಂಧಿಸಿ ಜೈಲಿಗೆ ಕಳುಹಿಸಿದ್ದಾರೆ.

ರಾಯಚೂರಿನ ಶರಣಪ್ಪ ಹಾಗೂ ಲಕ್ಷ್ಮಿ ದಂಪತಿ, ಕೂಲಿ ಕೆಲಸಕ್ಕಾಗಿ ಇಬ್ಬರು ಮಕ್ಕಳ ಜತೆ ಒಂದೂವರೆ ತಿಂಗಳ ಹಿಂದೆ ನಗರಕ್ಕೆ ಬಂದಿದ್ದರು.

ಸಂಪಿಗೆಹಳ್ಳಿ ಸಮೀಪದ ಎಸ್‌ಆರ್‌ಕೆ ನಗರದಲ್ಲಿ ಶೆಡ್ ಹಾಕಿಕೊಂಡು ನೆಲೆಸಿದ್ದ ಅವರು, ಸಮೀಪದ ಕಟ್ಟಡವೊಂದರಲ್ಲಿ ಕೆಲಸ ಮಾಡುತ್ತಿದ್ದರು.

ಏ.10ರ ಮಧ್ಯಾಹ್ನ 1 ಗಂಟೆ ಸುಮಾರಿಗೆ ದಂಪತಿ ಮೂರು ವರ್ಷದ ಮಗಳು, ತಂದೆ ಬಳಿ ₹ 2 ಪಡೆದು ತಿಂಡಿ ತರಲು ಅಂಗಡಿಗೆ ಹೋಗುತ್ತಿತ್ತು. ಈ ವೇಳೆ ಸ್ಕೂಟರ್‌ನಲ್ಲಿ ಬಂದ ಆರೋಪಿಗಳು, ಆ ಮಗುವನ್ನು ಎತ್ತಿಕೊಂಡು ಪರಾರಿಯಾಗಿದ್ದರು. ಅರ್ಧ ತಾಸು ಕಳೆದರೂ ಮಗಳು ವಾಪಸ್ ಬಾರದಿದ್ದಾಗ ಪೋಷಕರು ಸುತ್ತಮುತ್ತಲ ರಸ್ತೆಗಳಲ್ಲೆಲ್ಲ ಹುಡುಕಾಡಿದ್ದರು. ಪತ್ತೆಯಾಗದಿದ್ದಾಗ ಸಂಜೆ ಠಾಣೆ ಮೆಟ್ಟಿಲೇರಿದ್ದರು.

ಪೊಲೀಸರು ಸ್ಥಳೀಯ ಅಂಗಡಿಯೊಂದರ ಮಾಲೀಕರನ್ನು ವಿಚಾರಣೆ ನಡೆಸಿದಾಗ, ‘ಮಗು ಕಾಣೆಯಾಗುವುದಕ್ಕೂ ಸ್ವಲ್ಪ ಸಮಯದ ಮುನ್ನ ಇಬ್ಬರು ವ್ಯಕ್ತಿಗಳು ನಮ್ಮ ಅಂಗಡಿಗೆ ಬಂದಿದ್ದರು. ಅವರ ಮೇಲೆ ಸಂಶಯವಿದೆ’ ಎಂದಿದ್ದರು. ಆ ನಂತರ ಸಿ.ಸಿ ಟಿ.ವಿ ಕ್ಯಾಮೆರಾಗಳನ್ನು ಪರಿಶೀಲಿಸಿದಾಗ ಅವರ ಸಂಶಯ ನಿಜವಾಗಿತ್ತು. ಸ್ಕೂಟರ್‌ನ ನೋಂದಣಿ ಸಂಖ್ಯೆ ಆಧರಿಸಿ ತನಿಖೆ ಕೈಗೆತ್ತಿಕೊಂಡ ಪೊಲೀಸರು, ವರ್ತೂರಿನ ಗುಂಜೂರುಪಾಳ್ಯದಲ್ಲಿ ಆರೋಪಿಗಳನ್ನು ಸೆರೆ ಹಿಡಿದು ಮಗುವನ್ನು ರಕ್ಷಿಸಿದ್ದಾರೆ.

‘ಮಗು ಇದೆ ಎಂದಿದ್ದೆ’: ‘ಪತ್ನಿಗೆ ಹೆಣ್ಣು ಮಗುವೆಂದರೆ ಇಷ್ಟ. ಆದರೆ, ಎರಡು ಬಾರಿ ಆಕೆಗೆ ಗರ್ಭಪಾತವಾಯಿತು. ಸಂಬಂಧಿಕರ ಹತ್ತಿರ, ‘ನಮಗೆ 4 ವರ್ಷದ ಮಗಳಿದ್ದಾಳೆ. ಅಜ್ಜಿ–ತಾತನ ಜತೆ ಇದ್ದಾಳೆ’ ಎಂದು ಸುಳ್ಳು ಹೇಳಿಕೊಂಡೇ ಬಂದಿದ್ದೆವು. ಹೇಗಾದರೂ ಮಾಡಿ ಮಗು ಪಡೆಯಲೇಬೇಕೆಂದು ನಿರ್ಧರಿಸಿ, ಅಪಹರಣಕ್ಕೆ ಸಂಚು ರೂಪಿಸಿದ್ದೆ’ ಎಂದು ರಮೇಶ್ ಹೇಳಿಕೆ ಕೊಟ್ಟಿದ್ದಾಗಿ ಪೊಲೀಸರು ಹೇಳಿದರು.

‘ಆ ದಿನ ಕೆಲಸದ ನಿಮಿತ್ತ ಸ್ನೇಹಿತನ ಜತೆ ಸಂಪಿಗೆಹಳ್ಳಿಗೆ ತೆರಳಿದ್ದೆ. ಆಗ ದಾರಿಯಲ್ಲಿ ಹೆಣ್ಣು ಮಗು ನಡೆದುಕೊಂಡು ಬರುತ್ತಿರುವುದು ಕಾಣಿಸಿತು. ಸ್ನೇಹಿತನಿಗೆ ಸ್ಕೂಟರ್ ಚಾಲೂ ಮಾಡಲು ಹೇಳಿದೆ. ಆತ ಹತ್ತಿರಕ್ಕೆ ಹೋಗುತ್ತಿದ್ದಂತೆಯೇ, ‘ಚಾಕೊಲೇಟ್ ಕೊಡಿಸುತ್ತೇವೆ ಬಾ’ ಎಂದು ಆಮಿಷವೊಡ್ಡಿ ಮಗುವನ್ನು ಎತ್ತಿಕೊಂಡು ಹೋಗಿದ್ದೆವು’ ಎಂದೂ ಹೇಳಿದ್ದಾನೆ.

‘‍‍ಪತ್ನಿಗೆ ಗೊತ್ತಿರಲಿಲ್ಲ’
‘ಪತ್ನಿ ದಾವಣಗೆರೆಯಲ್ಲೇ ಇದ್ದಳು. ಮಗುವನ್ನು ಅಪಹರಿಸಿ ತಂದಿರುವ ವಿಚಾರ ಆಕೆಗೆ ಗೊತ್ತಿರಲಿಲ್ಲ. ಈ ಆರು ದಿನ ನಾನೇ ಮನೆಯಲ್ಲಿ ಆರೈಕೆ ಮಾಡುತ್ತಿದ್ದೆ. ‘ಇದು ಅನಾಥ ಮಗು. ರೈಲ್ವೆ ನಿಲ್ದಾಣದಲ್ಲಿ ಸಿಕ್ಕಿತು’ ಎಂದು ಸುಳ್ಳು ಹೇಳಿ ಪತ್ನಿಗೆ ನಂಬಿಸಲು ನಿರ್ಧರಿಸಿದ್ದೆ’ ಎಂದು ಆರೋಪಿ ಹೇಳಿಕೆ ನೀಡಿದ್ದಾನೆ.

ಇರ್ತಾರಾ ಮೋದಿ? ಬರ್ತಾರಾ ರಾಹುಲ್?

ಲೋಕಸಭೆ ಫಲಿತಾಂಶಕ್ಕಾಗಿ ವಿಶ್ವವೇ ಬೆರಗುಗಣ್ಣಿನಿಂದ ಕಾಯುತ್ತಿದೆ. ನರೇಂದ್ರ ಮೋದಿ ಗೆಲ್ತಾರಾ? ರಾಹುಲ್‌ ಗಾಂಧಿ ಬರ್ತಾರಾ? ರಾಜಕಾರಣದ ಕ್ಷಣಕ್ಷಣದ ಮಾಹಿತಿ, ತಾಜಾ ಅಪ್‌ಡೇಟ್‌ಗಳಿಗಾಗಿ www.prajavani.net/prajamatha ನೋಡಿ.

ಫೇಸ್‌ಬುಕ್‌ನಲ್ಲಿ ನಮ್ಮನ್ನು ಲೈಕ್ ಮಾಡಿ ಅಥವಾ ಟ್ವಿಟರ್, ಯೂಟ್ಯೂಬ್, ಇನ್‌ಸ್ಟಾಗ್ರಾಂನಲ್ಲಿ ಫಾಲೊ ಮಾಡಿ.

ತ್ವರಿತ ಸುದ್ದಿ, ನಿಖರ ವಿಶ್ಲೇಷಣೆಗೆ www.prajavani.net ಓದಿ. 'ಪ್ರಜಾವಾಣಿ' ಅತ್ಯಂತ ವಿಶ್ವಾಸಾರ್ಹ ಸುದ್ದಿ ಮಾಧ್ಯಮ.

ಬರಹ ಇಷ್ಟವಾಯಿತೆ?

 • 1

  Happy
 • 0

  Amused
 • 0

  Sad
 • 0

  Frustrated
 • 1

  Angry

Comments:

0 comments

Write the first review for this !