ಭಾನುವಾರ, ಡಿಸೆಂಬರ್ 15, 2019
21 °C

ಶಾಲಾ ಸಮಸ್ಯೆ; ಧ್ವನಿ ಎತ್ತಿದ ಚಿಣ್ಣರು

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Deccan Herald

ಬೆಂಗಳೂರು: ಹೆಸರಘಟ್ಟ ಹೋಬಳಿ ಕಸಘಟ್ಟಪುರ ಗ್ರಾಮ ಪಂಚಾಯಿತಿಯ ಮಕ್ಕಳ ಗ್ರಾಮಸಭೆಯು ಸೋಲದೇವನಹಳ್ಳಿ ಗ್ರಾಮದಲ್ಲಿ ನಡೆಯಿತು. ಏಳು ಕಿರಿಯ ಪ್ರಾಥಮಿಕ ಶಾಲೆಯ ಮಕ್ಕಳು ಭಾಗವಹಿಸಿದ್ದ ಸಭೆಯಲ್ಲಿ, ಶಾಲೆಯ ಪ್ರಾಥಮಿಕ ಸೌಲಭ್ಯಗಳ ಕೊರತೆಯ ಬಗ್ಗೆ ಚಿಣ್ಣರು ಧ್ವನಿ ಎತ್ತಿದರು.

ಸೋಲದೇವನಹಳ್ಳಿ ಕಿರಿಯ ಪ್ರಾಥಮಿಕ ಶಾಲೆಯ ಏಳನೇ ತರಗತಿ ವಿದ್ಯಾರ್ಥಿನಿ ಮೇಘಾ ಮಾತನಾಡಿ, ‘ನಮ್ಮ ಶಾಲೆಯ ಜಾಗವನ್ನು ವ್ಯಕ್ತಿಯೊಬ್ಬರು ಒತ್ತುವರಿ ಮಾಡಿಕೊಂಡಿದ್ದಾರೆ. ನಮಗೆ ಆಟದ ಮೈದಾನವಿಲ್ಲ. ಒತ್ತುವರಿ ಜಾಗವನ್ನು ತೆರವು ಮಾಡಿಸಿ ಕೊಡಿ’ ಎಂದು ಕೇಳಿಕೊಂಡರು.

ಕಸಘಟ್ಟಪುರ ಅಭಿವೃದ್ದಿ ಅಧಿಕಾರಿ ವೆಂಕಟೇಶ್ ಉತ್ತರಿಸಿ, ‘ಈಗಾಗಲೇ ಈ ಬಗ್ಗೆ ಸಂಬಂಧಿಸಿದ ಎಲ್ಲ ಅಧಿಕಾರಿಗಳಿಗೆ ದೂರನ್ನು ನೀಡಿದ್ದೇವೆ. ಶೀಘ್ರದಲ್ಲಿಯೇ ಒತ್ತುವರಿ ತೆರವುಗೊಳಿಸಲಾಗುವುದು’ ಎಂದರು.

‘ದೊಡ್ಡಬ್ಯಾಲಕೆರೆ ಶಾಲೆಯ ಎದುರಿಗೆ ವಿದ್ಯುತ್ ತಂತಿ ಹಾದು ಹೋಗಿದೆ. ವಿದ್ಯುತ್‌ ಕಂಬವನ್ನು ಶಾಲೆಯ ಎದುರಿನಿಂದ ಬೇರೆ ಕಡೆಗೆ ವರ್ಗಾಯಿಸಿ’ ಎಂದು ವಿದ್ಯಾರ್ಥಿನಿ ಮನವಿ ಮಾಡಿದರು.

‘ಶೌಚಾಲಯವನ್ನು ಸ್ವಚ್ಛ ಮಾಡಲು ಒಬ್ಬರ ನೇಮಕವನ್ನು ಮಾಡಿಕೊಡಿ’ ಎಂದು ಕೇಳಿಕೊಂಡರು.

ಗುಣಿ ಅಗ್ರಹಾರದ ಕಿರಿಯ ಪ್ರಾಥಮಿಕ ಶಾಲೆಯ ವಿದ್ಯಾರ್ಥಿನಿ ಕಾವ್ಯಾ ಮಾತನಾಡಿ, ‘ಶಾಲೆಯ ಮುಂದಿನ ಮೈದಾನವನ್ನು ಸಮತಟ್ಟು ಮಾಡಿಕೊಡಿ’ ಎಂದರು. ಮಕ್ಕಳ ಗ್ರಾಮಸಭೆಯ ಅಧ್ಯಕ್ಷತೆಯನ್ನು ಸೋಲದೇವನಹಳ್ಳಿ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯ ಶಿಕ್ಷಣ ಸಂಸತ್ ಅಧ್ಯಕ್ಷೆ ಭಾನುಪ್ರಿಯಾ ವಹಿಸಿದ್ದಳು.

ಪ್ರತಿಕ್ರಿಯಿಸಿ (+)