ಗುರುವಾರ , ಡಿಸೆಂಬರ್ 12, 2019
24 °C
ವಿಧಾನಸೌಧ ಪೊಲೀಸರಿಂದ ಎಫ್‌ಡಿಎ ಬಂಧನ * ಹಿರಿಯ ಸಹಾಯಕಿ, ಜಮೇದಾರ್‌ಗೆ ಮಚ್ಚಿನೇಟು

ಕೆಪಿಎಸ್‌ಸಿ ನೌಕರರಿಬ್ಬರ ಕೊಲೆಗೆ ಯತ್ನ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Deccan Herald

ಬೆಂಗಳೂರು: ಕರ್ನಾಟಕ ಲೋಕಸೇವಾ ಆಯೋಗದ (ಕೆಪಿಎಸ್‌ಸಿ) ಎಫ್‌ಡಿಎ ಎಸ್‌.ಕೆ.ನಟರಾಜ್ (44) ಎಂಬಾತ, ಕೆಪಿಎಸ್‌ಸಿಯ ಹಿರಿಯ ಸಹಾಯಕಿ ಬಿ.ಆರ್. ಜಯಲಕ್ಷ್ಮಿ (41) ಹಾಗೂ ಜಮೇದಾರ್ ಕೆ.ರಾಮು (51) ಅವರ ಮೇಲೆ ಮಚ್ಚಿನಿಂದ ಹಲ್ಲೆ ನಡೆಸಿ ಕೊಲೆಗೆ ಯತ್ನಿಸಿದ್ದಾನೆ.

ವಿಧಾನಸೌಧ ಹಿಂಭಾಗದ ದೇವರಾಜ್ ಅರಸು ರಸ್ತೆಯಲ್ಲಿರುವ ಕಚೇರಿಯಲ್ಲಿ (ಉದ್ಯೋಗ ಸೌಧ) ಸೋಮವಾರ ಬೆಳಿಗ್ಗೆ ಈ ಘಟನೆ ನಡೆದಿದೆ. ತೀವ್ರವಾಗಿ ಗಾಯಗೊಂಡಿರುವ ಜಯಲಕ್ಷ್ಮಿ ಹಾಗೂ ರಾಮು ಅವರನ್ನು ಮಲ್ಲಿಗೆ ಆಸ್ಪತ್ರೆಗೆ ದಾಖಲಿಸಲಾಗಿದೆ. ಜಯಲಕ್ಷ್ಮಿಯವರ ಆರೋಗ್ಯ ಸ್ಥಿತಿ ಚಿಂತಾಜನಕವಾಗಿದೆ.

ಕೆಪಿಎಸ್‌ಸಿ ಕಾರ್ಯದರ್ಶಿ ಆರ್‌.ಆರ್‌. ಜನ್ನು ಅವರ ಆಪ್ತ ಸಹಾಯಕರಾಗಿ ಜಯಲಕ್ಷ್ಮಿಯವರು ಸದ್ಯ ಕೆಲಸ ಮಾಡುತ್ತಿದ್ದರು. ರಾಮು ಸಹ ಕಾರ್ಯದರ್ಶಿ ಕಚೇರಿಯ ಜಮೇದಾರನಾಗಿದ್ದರು. ಘಟನೆ ಸಂಬಂಧ ಕೆಪಿಎಸ್‌ಸಿ ಉಪ ಕಾರ್ಯದರ್ಶಿ ನೀಡಿರುವ ದೂರಿನನ್ವಯ ಆರೋಪಿ ನಟರಾಜ್‌ನನ್ನು ವಿಧಾನಸೌಧ ಪೊಲೀಸರು ಬಂಧಿಸಿದ್ದಾರೆ. 

ಕಾಗದದಲ್ಲಿ ಮಚ್ಚು ಮುಚ್ಚಿಟ್ಟುಕೊಂಡಿದ್ದ: ಘಟನೆ ಬಗ್ಗೆ ಪೊಲೀಸರಿಗೆ ಹೇಳಿಕೆ ನೀಡಿರುವ ರಾಮು, ‘ಎಂದಿನಂತೆ ಬೆಳಿಗ್ಗೆ ಕೆಲಸಕ್ಕೆ ಬಂದು ಕಾರ್ಯದರ್ಶಿಯವರ ಕೊಠಡಿ ಸ್ವಚ್ಛಗೊಳಿಸುತ್ತಿದ್ದೆ. ಕೊಠಡಿಗೆ ಬಂದು ಕಡತವೊಂದನ್ನು ನೀಡಿದ್ದ ನಟರಾಜ್, ‘ಇದನ್ನು ಸಾಹೇಬ್ರ ಟೇಬಲ್‌ ಮೇಲಿಡು. ಅವರು ಬಂದೊಡನೆ ನನ್ನನ್ನು ಕರಿ’ ಎಂದು ಹೇಳಿದ್ದರು. ಕಡತವನ್ನು ಟೇಬಲ್‌ ಮೇಲಿಡಲು ಹೊರಟಿದ್ದಾಗಲೇ ಆತ, ಹಿಂದಿನಿಂದ ಬಂದು ತಲೆಗೆ ಮಚ್ಚಿನಿಂದ ಹೊಡೆದ. ಆತನಿಂದ ತಪ್ಪಿಸಿಕೊಂಡು ಕೊಠಡಿಯಿಂದ ಹೊರಗಡೆ ಓಡಿ ಬಂದು ಚೀರಾಡಿದೆ. ಆತ, ಕಾಗದದಲ್ಲಿ ಮಚ್ಚು ಮುಚ್ಚಿಟ್ಟುಕೊಂಡು ಬಂದಿದ್ದ ಎಂಬುದು ಅವಾಗಲೇ ಗೊತ್ತಾಯಿತು’ ಎಂದು ತಿಳಿಸಿದ್ದಾರೆ.

‘ನನ್ನ ಚೀರಾಟ ಕೇಳಿ ಸ್ಥಳಕ್ಕೆ ಬಂದ ಜಯಲಕ್ಷ್ಮಿ ಜೊತೆಗೂ ಆರೋಪಿ ಜಗಳ ತೆಗೆದಿದ್ದ. ‘ನನಗೆ ಎಲ್ಲರೂ ಮೋಸ ಮಾಡುತ್ತಿದ್ದಾರೆ. ಈಗ ನೀನು (ಜಯಲಕ್ಷ್ಮಿ) ಸಹ ಮೋಸ ಮಾಡುತ್ತಿದ್ದಿಯಾ. ನಿನ್ನನ್ನು ಸುಮ್ಮನೇ ಬಿಡುವುದಿಲ್ಲ’ ಎಂದು ಮಚ್ಚಿನಿಂದ ಮುಖಕ್ಕೆ ಹೊಡೆದಿದ್ದ. ಅವರು ಸಹ ಸ್ಥಳದಲ್ಲೇ ಕುಸಿದು ಬಿದ್ದಿದ್ದರು. ಅಷ್ಟರಲ್ಲೇ ಸ್ಥಳಕ್ಕೆ ಬಂದ ಭದ್ರತಾ ಸಿಬ್ಬಂದಿ, ನಟರಾಜ್‌ನನ್ನು ಹಿಡಿದುಕೊಂಡು ಹೊರಗಡೆ ಕರೆದೊಯ್ದುರು. ನಮ್ಮಿಬ್ಬರನ್ನು ಸಹೋದ್ಯೋಗಿಗಳೇ ಆಸ್ಪತ್ರೆಗೆ ಕರೆತಂದರು’ ಎಂದು ರಾಮು ಹೇಳಿದ್ದಾರೆ. 

ಮದುವೆಗೆ ಒಪ್ಪದಿದ್ದಕ್ಕೆ ಕೃತ್ಯ: ‘ಬನಶಂಕರಿ ನಿವಾಸಿಯಾದ ನಟರಾಜ್‌, 2001ರಲ್ಲಿ ಕೆಲಸಕ್ಕೆ ಸೇರಿದ್ದ. ಅವರಿಗೆ ಪತ್ನಿ ಹಾಗೂ ಮಕ್ಕಳಿದ್ದಾರೆ. ಕೌಟುಂಬಿಕ ಕಲಹದಿಂದಾಗಿ ಪತ್ನಿ, ಆತನಿಗೆ ವಿಚ್ಛೇದನ ನೀಡಿದ್ದರು. ಹೀಗಾಗಿ ಆರೋಪಿ, ಒಬ್ಬಂಟಿಯಾಗಿ ನೆಲೆಸಿದ್ದ’ ಎಂದು ಪೊಲೀಸರು ಹೇಳಿದರು.

‘2003ರಲ್ಲಿ ಕೆಲಸಕ್ಕೆ ಸೇರಿದ್ದ ಜಯಲಕ್ಷ್ಮಿ ಅವರಿಗೂ ಮದುವೆಯಾಗಿದೆ. ಕೆಲಸಕ್ಕೆ ಬಂದಾಗಲೇ ಅವರಿಗೆ ನಟರಾಜ್‌ನ ಪರಿಚಯವಾಗಿತ್ತು’ ಎಂದರು.

‘ಜಯಲಕ್ಷ್ಮಿ, ನನ್ನೊಂದಿಗೆ ಸಲುಗೆಯಿಂದ ಇದ್ದರು. ಮನೆಗೂ ಆಗಾಗ ಬಂದು ಹೋಗುತ್ತಿದ್ದರು. ನನಗೂ ಪತ್ನಿ ಇಲ್ಲದಿದ್ದರಿಂದಲೇ, ಅವರನ್ನೇ ಮದುವೆಯಾಗಲು ನಿರ್ಧರಿಸಿದ್ದೆ. ಆ ಬಗ್ಗೆ ಅವರ ಜೊತೆ ಮಾತನಾಡಿದ್ದೆ. ಅದಕ್ಕೆ ಅವರೂ ಒಪ್ಪಿಕೊಂಡಿದ್ದರು. ಇತ್ತೀಚೆಗೆ ನಿರ್ಧಾರ ಬದಲಿಸಿದ್ದ ಅವರು, ಮದುವೆ ಆಗುವುದಿಲ್ಲವೆಂದು ಹೇಳಿದರು. ಹೀಗಾಗಿಯೇ ಅವರನ್ನು ಕೊಲೆ ಮಾಡಲು ತೀರ್ಮಾನಿಸಿ, ಮೆಜೆಸ್ಟಿಕ್‌ನಲ್ಲಿ ಮಚ್ಚು ಖರೀದಿಸಿದ್ದೆ. ನೇರವಾಗಿ ಜಯಲಕ್ಷ್ಮಿ ಅವರಿಗೆ ಹೊಡೆದರೆ, ನಮ್ಮಿಬ್ಬರ ಸಲುಗೆಯ ವಿಷಯ ಸಹೋದ್ಯೋಗಿಗಳಿಗೆ ಗೊತ್ತಾಗುತ್ತದೆ ಎಂಬ ಕಾರಣಕ್ಕೆ, ಮೊದಲಿಗೆ ಜಮೇದಾರ್‌ ಮೇಲೆ ಹಲ್ಲೆ ಮಾಡಿದೆ. ನಂತರ, ಸ್ಥಳಕ್ಕೆ ಬಂದ ಜಯಲಕ್ಷ್ಮಿ ಮೇಲೆ ಮಚ್ಚು ಬೀಸಿದೆ. ಅಷ್ಟರಲ್ಲೇ ಭದ್ರತಾ ಸಿಬ್ಬಂದಿ ಬಂದು ಹಿಡಿದುಕೊಂಡರು. ಇಲ್ಲದಿದ್ದರೆ, ಅವರನ್ನು ಅಲ್ಲಿಯೇ ಸಾಯಿಸುತ್ತಿದ್ದೆ’ ಎಂದು ಆರೋಪಿ ಹೇಳಿಕೆ ನೀಡಿರುವುದಾಗಿ ಪೊಲೀಸರು ವಿವರಿಸಿದರು.  
ಗುಣಮುಖರಾದ ನಂತರ ಹೇಳಿಕೆ: ‘ಜಯಲಕ್ಷ್ಮಿಯವರ ಮುಖ ಹಾಗೂ ದವಡೆ ಭಾಗದಲ್ಲಿ ತೀವ್ರ ಗಾಯಗಳಾಗಿವೆ. ಅವರ ಮುಖಕ್ಕೆಲ್ಲ ಬ್ಯಾಂಡೇಜ್ ಸುತ್ತಲಾಗಿದ್ದು, ಅವರು ಮಾತನಾಡುವ ಸ್ಥಿತಿಯಲ್ಲಿಲ್ಲ. ಗುಣಮುಖರಾದ ನಂತರವೇ ಹೇಳಿಕೆ ಪಡೆಯಲಿದ್ದೇವೆ’ ಎಂದು ಪೊಲೀಸರು ಮಾಹಿತಿ ನೀಡಿದರು.  

ಭದ್ರತಾ ವೈಫಲ್ಯ: ತನಿಖೆ

ಆರೋಪಿ ನಟರಾಜ್, ತನ್ನ ಬ್ಯಾಗ್‌ನಲ್ಲೇ ಮಚ್ಚು ತೆಗೆದುಕೊಂಡು ಕಚೇರಿಯೊಳಗೆ ಹೋಗಿದ್ದಾನೆ. ಆತನನ್ನು ಪರಿಶೀಲನೆ ಮಾಡದೇ ಭದ್ರತಾ ಸಿಬ್ಬಂದಿ ಲೋಪ ಎಸಗಿರುವುದು ಮೇಲ್ನೋಟಕ್ಕೆ ಕಂಡು ಬಂದಿದೆ. ಆ ಬಗ್ಗೆ ಕೇಂದ್ರ ವಿಭಾಗದ ಡಿಸಿಪಿ ದೇವರಾಜ್ ಅವರೇ ತನಿಖೆ ನಡೆಸುತ್ತಿದ್ದಾರೆ.

‘ಇತ್ತೀಚೆಗಷ್ಟೇ ಲೋಕಾಯುಕ್ತ ಕಚೇರಿಗೆ ನುಗ್ಗಿದ್ದ ವ್ಯಕ್ತಿಯೊಬ್ಬ, ಲೋಕಾಯುಕ್ತರಿಗೆ ಚಾಕುವಿನಿಂದ ಇರಿದಿದ್ದ. ಈಗ ಕೆಪಿಎಸ್‌ಸಿ ಕಚೇರಿಯಲ್ಲಿ ಉದ್ಯೋಗಿಯೇ ಅಂಥ ಕೃತ್ಯ ಎಸಗಿದ್ದಾನೆ. ಇದೊಂದು ಗಂಭೀರ ವಿಷಯ. ಭದ್ರತೆಯಲ್ಲಿ ಲೋಪ ಕಂಡುಬಂದರೆ, ತಪ್ಪಿತಸ್ಥರ ವಿರುದ್ಧ ಶಿಸ್ತುಕ್ರಮ ಕೈಗೊಳ್ಳಲಾಗುವುದು’ ಎಂದು ಪೊಲೀಸ್‌ ಅಧಿಕಾರಿಯೊಬ್ಬರು ತಿಳಿಸಿದರು.

‘ರಾಜ್ಯದ ಸರ್ಕಾರಿ ಹುದ್ದೆಗಳ ಭರ್ತಿಗೆ ನೇಮಕಾತಿ ನಡೆಸುವ ಕೆಪಿಎಸ್‌ಸಿ ಕಚೇರಿಗೆ ಪ್ರತ್ಯೇಕ ಭದ್ರತಾ ಸಿಬ್ಬಂದಿ ಇದ್ದಾರೆ. ಪೊಲೀಸರನ್ನೂ ಅವರು ಒಳಗೆ ಬಿಡುವುದಿಲ್ಲ. ನಟರಾಜ್‌, ನೌಕರನೆಂಬ ಕಾರಣಕ್ಕೆ ಹೆಚ್ಚು ಪರಿಶೀಲನೆ ನಡೆಸದೇ ಒಳಗೆ ಬಿಟ್ಟಿರುವುದು ಸದ್ಯಕ್ಕೆ ಗೊತ್ತಾಗಿದೆ’ ಎಂದು ಹೇಳಿದರು. 

ಪ್ರತಿಕ್ರಿಯಿಸಿ (+)

ಈ ವಿಭಾಗದಿಂದ ಇನ್ನಷ್ಟು