ಗುರುವಾರ , ಡಿಸೆಂಬರ್ 5, 2019
20 °C
ವನ್ಯಜೀವಿಗಳ ಹಾವಳಿ ನಡುವೆ ತರಾವರಿ ಬೆಳೆಯುತ್ತಿರುವ ಮಗುವಿನಳ್ಳಿ ರೈತ

ಕಾಡಂಚಿನ ಕೃಷಿ ಸಾಧಕ ಚಿನ್ನಸ್ವಾಮಿ

ಮಲ್ಲೇಶ ಎಂ. Updated:

ಅಕ್ಷರ ಗಾತ್ರ : | |

Prajavani

ಗುಂಡ್ಲುಪೇಟೆ: ಕಾಡಂಚಿನಲ್ಲಿರುವ ಜಮೀನಿನಲ್ಲಿ ವನ್ಯಜೀವಿಗಳ ಹಾವಳಿಯ ನಡುವೆ ಕೃಷಿ ಮಾಡಬೇಕು ಎಂದರೆ ಅದಕ್ಕೆ ತಾಳ್ಮೆ ಬೇಕು, ಧೈರ್ಯವೂ ಇರಬೇಕು. ಅಂತಹದ್ದರಲ್ಲಿ ತಾಲ್ಲೂಕಿನ ಮಗುವಿನಹಳ್ಳಿ ಗ್ರಾಮದ ರೈತರೊಬ್ಬರು ವಿವಿಧ ಬೆಳೆಗಳನ್ನು ಬೆಳೆದು ಮಾದರಿಯಾಗಿದ್ದಾರೆ. 

ಬಂಡೀಪುರ ಹುಲಿ ಸಂರಕ್ಷಿತ ಪ್ರದೇಶದ ಗೋಪಾಲಸ್ವಾಮಿ ವಲಯಕ್ಕೆ ಹೊಂದಿಕೊಂಡಂತೆ ಮಗುವಿನಹಳ್ಳಿ ಗ್ರಾಮ ಇದೆ. ಇಲ್ಲಿನ ರೈತ ಚಿನ್ನಸ್ವಾಮಿ ಅವರು ಕಾಡಂಚಿನಲ್ಲಿರುವ ತಮ್ಮ ಐದು ಎಕರೆ ಜಮೀನಿನಲ್ಲಿ ಟೊಮೆಟೊ, ಈರುಳ್ಳಿ, ಹಾಗಲಕಾಯಿ, ಆಲೂಗೆಡ್ಡೆ, ಮೆಣಸಿನಕಾಯಿಗಳನ್ನು ಬೆಳೆದು ಯಶಸ್ವಿಯಾಗಿದ್ದಾರೆ.

ಹನಿ ನೀರಾವರಿ ವ್ಯವಸ್ಥೆಯನ್ನು ಅಳವಡಿಸಿಕೊಂಡು ಕಡಿಮೆ ನೀರಿನಲ್ಲೇ ‌ಅವರು ಕೃಷಿ ಮಾಡುತ್ತಿದ್ದಾರೆ. ಮಾರುಕಟ್ಟೆಯ ಏರಿಳಿತವನ್ನು ಗಮನಿಸುತ್ತಾ ಬೇಸಾಯ ಮಾಡಿದರೆ ಲಾಭ ಕಾಣುವುದರಲ್ಲಿ ಸಂಶಯವೇ ಇಲ್ಲ ಎಂಬುದು ಅವರ ಅನಿಸಿಕೆ. ಆದರೆ, ಪ್ರಾಣಿಗಳ ಹಾವಳಿಯಿಂದ ಪಾರಾದರೆ ಮಾತ್ರ ಲಾಭ ಸಿಗುತ್ತದೆ ಎಂದು ಹೇಳುತ್ತಾರೆ ಅವರು. 

‘ಈ ಪ್ರದೇಶದಲ್ಲಿ ಆನೆ, ಹಂದಿ ಮತ್ತು ಜಿಂಕೆಗಳ ಹಾವಳಿ ಹೆಚ್ಚು. ಒಮ್ಮೆ ಹಂದಿಗಳು ದಾಳಿ ಮಾಡಿದರೆ ಎಕರೆಯಷ್ಟು ಆಲೂಗೆಡ್ಡೆ ನಾಶವಾಗುತ್ತದೆ. ಅವುಗಳನ್ನು ಜಮೀನುಗಳಿಗೆ ಬಾರದಂತೆ ಕಾಯುವುದೇ ಕಷ್ಟ, ಆನೆಗಳನ್ನು ಒಮ್ಮೆ ಓಡಿಸಿದರೆ ಬರುವುದಿಲ್ಲ. ಆದರೆ ಹಂದಿಗಳು ಮತ್ತೆ ಮತ್ತೆ ದಾಳಿ ಮಾಡುತ್ತದೆ. ಕಾಡು ಪ್ರಾಣಿಗಳಿಂದ ಬೆಳೆ ನಾಶವಾದರೆ ಅರಣ್ಯ ಇಲಾಖೆಯವರು ಪರಿಹಾರ ನೀಡುವುದು ವರ್ಷವಾಗುತ್ತದೆ’ ಎಂದು ಚಿನ್ನಸ್ವಾಮಿ ಅವರು ‘ಪ್ರಜಾವಾಣಿ’ಗೆ ತಿಳಿಸಿದರು.

‘ಒಂದು ಎಕರೆಯಲ್ಲಿ ಟೊಮೆಟೊ ಬೆಳೆಯಲು ₹40 ಸಾವರದಿಂದ ₹50 ಸಾವಿರ ರೂಪಾಯಿ ಖರ್ಚಾಗುತ್ತದೆ. ಕಾಡು ಪ್ರಾಣಿ ನಾಶ ಮಾಡಿದರೆ ಎಕರೆಗೆ ಕೇವಲ ₹5,000 ದಿಂದ ₹6,000 ಕೊಡುತ್ತಾರೆ, ಈ ಹಣ ಯಾವುದಕ್ಕೂ ಸಾಲುವುದಿಲ್ಲ. ಹಂದಿಗಳು ಯಾವಾಗಲೂ ಕಾಡಂಚಿನಲ್ಲಿ ಇರುತ್ತವೆ. ಜಮೀನಿನ ಸುತ್ತ ಬೇಲಿಯನ್ನು ಭದ್ರ ಪಡಿಸಿ ಹಗಲು ರಾತ್ರಿ ಎನ್ನದೆ ಕಾವಲು ಕಾಯಬೇಕಿದೆ’ ಎಂಬುದು ಅವರ ಅನುಭವದ ಮಾತು.

ಕುಟುಂಬದ ಕಾಯಕ: ‘ಬೇಸಾಯದ ಜೊತೆಯಲ್ಲಿ ಪಶು ಸಂಗೋಪನೆ ಮಾಡುತ್ತ ಕೃಷಿಯಲ್ಲಿ ತೊಡಗಿದಾಗ ಸಮತೋಲನ ಇರುತ್ತದೆ. ಜಮೀನಿನಲ್ಲಿ ಎಲ್ಲ ಕೃಷಿ ಚಟುವಟಿಕೆಗಳಿಗೆ ಕುಟುಂಬದ ಸದಸ್ಯರು ನೆರವಾಗುತ್ತಾರೆ. ಕಳೆ ತೆರವುಗೊಳಿಸುವುದು ಸೇರಿದಂತೆ ಇನ್ನಿತರ ಕೆಲಸಗಳು ಇದ್ದಾಗ ಕೂಲಿಯಾಳುಗಳನ್ನು ಕರೆದು ಕೆಲಸ ಮಾಡಿಸಲಾಗುತ್ತದೆ’  ಎಂದು ಚಿನ್ನಸ್ವಾಮಿ ಅವರು ವಿವರಿಸಿದರು.

‘ಸರ್ಕಾರ ರೈತರ ಬೆನ್ನಿಗೆ ನಿಲ್ಲಬೇಕು’

‘ಎರಡು ವರ್ಷಗಳಿಂದ ತರಕಾರಿ ಬೆಳೆಗಳಿಗೆ ಉತ್ತಮ ಬೆಲೆ ಸಿಕ್ಕಿಲ್ಲ. ಈ ಭಾರಿ ಬೆಲೆ ಇದೆ, ಆದರೆ ಹೆಚ್ಚು ಮಳೆಯಾಗುತ್ತಿರುವ ಕಾರಣ ಈರುಳ್ಳಿಗೆ ಕಾಯಿಲೆ ಬರುತ್ತಿದೆ. ಎಲ್ಲವನ್ನು ಸರಿದೂಗಿಸಿಕೊಂಡು ಬೆಳೆದರೆ ಮಾರುಕಟ್ಟೆಗಳಲ್ಲಿ ದಾಲ್ಲಾಳಿಯ ಹಾವಳಿಯಿಂದ ರೈತರಿಗೆ ನಷ್ಟವಾಗುತ್ತಿದೆ. ಸರ್ಕಾರ ರೈತರ ಬೆಳೆಗಳಿಗೆ ಬೆಂಬಲ ಬೆಲೆ ನೀಡಿದರೆ ಮಾತ್ರ ಯುವಕರು ಕೃಷಿಯಲ್ಲಿ ಮುಂದುವರೆಯುತ್ತಾರೆ’ ಎಂದು ಚಿನ್ನಾಸ್ವಾಮಿ ಅಭಿಪ್ರಾಯಪಡುತ್ತಾರೆ.

ಪ್ರತಿಕ್ರಿಯಿಸಿ (+)

ಈ ವಿಭಾಗದಿಂದ ಇನ್ನಷ್ಟು