ಗ್ರಾಮೀಣ ಮಕ್ಕಳಿಗಾಗಿ ಕರ್ನಾಟಕ ಪಬ್ಲಿಕ್ ಶಾಲೆ ಆರಂಭ

ಸೋಮವಾರ, ಜೂನ್ 17, 2019
28 °C
ಕಾಡಂಚಿನ ಗ್ರಾಮಗಳಿಗೆ ಹಂಗಳ ಕೇಂದ್ರ ಸ್ಥಾನ; ಸರ್ಕಾರಿ ಶಾಲೆಗೆ ಉತ್ತಮ ಸ್ಪಂದನೆ

ಗ್ರಾಮೀಣ ಮಕ್ಕಳಿಗಾಗಿ ಕರ್ನಾಟಕ ಪಬ್ಲಿಕ್ ಶಾಲೆ ಆರಂಭ

Published:
Updated:
Prajavani

ಗುಂಡ್ಲುಪೇಟೆ: ರಾಜ್ಯ ಸರ್ಕಾರ ಈ ಶೈಕ್ಷಣಿಕ ವರ್ಷದಿಂದ ಆರಂಭಿಸಲು ಉದ್ದೇಶಿರುವ ಕರ್ನಾಟಕ ಪಬ್ಲಿಕ್‌ ಶಾಲೆಗೆ ತಾಲ್ಲೂಕಿನ ಹಂಗಳ ಸರ್ಕಾರಿ ಶಾಲೆಯನ್ನು ಆಯ್ಕೆ ಮಾಡಲಾಗಿದ್ದು, ಸಕಲ ಸಿದ್ಧತೆಗಳು ನಡೆದಿವೆ.

ತಾಲ್ಲೂಕಿನಲ್ಲಿಯೇ ಅತಿ ಹೆಚ್ಚು ಜನಸಂಖ್ಯೆ ಹೊಂದಿರುವ ಹೋಬಳಿ ಕೇಂದ್ರ ಹಂಗಳ. ಇದು ಕಾಡಂಚಿನ ಗ್ರಾಮಗಳಿಗೆ ಕೇಂದ್ರ ಸ್ಥಾನವಾಗಿದೆ.

ಅನುದಾನ ಬಿಡುಗಡೆ: ಒಂದೇ ಕಡೆ ಇರುವ ಸರ್ಕಾರಿ ಪ್ರಾಥಮಿಕ, ಪ್ರೌಢಶಾಲೆ ಹಾಗೂ ಪದವಿಪೂರ್ವ ಕಾಲೇಜುಗಳನ್ನು ಒಂದುಗೂಡಿಸಿ ಕರ್ನಾಟಕ ಪಬ್ಲಿಕ್ ಶಾಲೆಯಾಗಿ ಮಾರ್ಪಾಡು ಮಾಡಲಾಗುತ್ತಿದೆ. ಸಾರ್ವಜನಿಕ ಶಿಕ್ಷಣ ಇಲಾಖೆ ಈಗಾಗಲೇ ಶಾಲೆಗೆ ಅಗತ್ಯ ಮೂಲಸೌಕರ್ಯಗಳಿಗೆ ಅಂದಾಜು ಪಟ್ಟಿ ಸಲ್ಲಿಸಿ ಮೊದಲ ಹಂತದಲ್ಲಿ ₹ 45 ಲಕ್ಷ ಅನುದಾನದಲ್ಲಿ ಶಾಲೆಯ ಕೊಠಡಿಗಳ ನವೀಕರಣ, ವಿದ್ಯುತ್ ಸಂಪರ್ಕ, ಗ್ರೀನ್ ಬೋರ್ಡ್ ಆಳವಡಿಕೆ, ಸ್ಮಾರ್ಟ್ ತರಗತಿ ವ್ಯವಸ್ಥೆ, ಗ್ರಂಥಾಲಯ ಮತ್ತು ಪ್ರಯೋಗಾಲಯ ವ್ಯವಸ್ಥೆ ಮಾಡಿದೆ.

‘ಶಾಲಾ ಕೊಠಡಿಗಳಿಗೆ ಬಣ್ಣ ಬಳಿಯಲಾಗಿದೆ. ಬಯಲು ರಂಗಮಂದಿರದಲ್ಲಿ ಚಿತ್ರ ಬಿಡಿಸಿ, ಸುತ್ತುಗೋಡೆಗಳನ್ನು ಎತ್ತರಿಸಿ ಸಿಸಿಟಿವಿ ಕ್ಯಾಮೆರಾ ಅಳವಡಿಸಲಾಗಿದೆ. ಕಾಡಂಚಿನ ಗ್ರಾಮಗಳಾದ ಮಂಗಲ, ಯಲಚೆಟ್ಟಿ, ಜಕ್ಕಹಳ್ಳಿ, ಮೇಲುಕಾಮನಹಳ್ಳಿ, ಮಗುವಿನಹಳ್ಳಿ, ದೇವರಹಳ್ಳಿ, ಕಲ್ಲಿಗೌಡನಹಳ್ಳಿ ಭಾಗಗಳಿಂದ ಹೆಚ್ಚಿನ ವಿದ್ಯಾರ್ಥಿಗಳು ಈ ಶಾಲೆಗೆ ಬರುತ್ತಾರೆ. ನಮ್ಮಲ್ಲಿ ಗುಣಮಟ್ಟದ ಶಿಕ್ಷಣ ದೊರೆಯುತ್ತಿದೆ. ಈ ಕಾರಣದಿಂದ ಅನೇಕ ಮಕ್ಕಳು ಹಾಗೂ ಅವರ ಪೋಷಕರು ಖಾಸಗಿ ಶಾಲೆಗಳಿಂದ ವರ್ಗಾವಣೆ ಬಯಸಿ ಇಲ್ಲಿಗೆ ಸೇರಿಸುತ್ತಿದ್ದಾರೆ’ ಎಂದು ಎಸ್‍ಡಿಎಂಸಿ ಅಧ್ಯಕ್ಷ ವೃಷಭೇಂದ್ರ ‘ಪ್ರಜಾವಾಣಿ’ಗೆ ತಿಳಿಸಿದರು.

‘ಮಕ್ಕಳಿಗೆ ಉತ್ತಮ ಶಿಕ್ಷಣ ಕೊಡಿಸಬೇಕು ಎಂಬ ಉದ್ದೇಶದಿಂದ ಆರ್ಥಿಕವಾಗಿ ತೊಂದರೆಯಾದರೂ ಖಾಸಗಿ ಶಾಲೆಗಳಿಗೆ ಸೇರಿಸುತ್ತಿದ್ದೆವು. ಸರ್ಕಾರಿ ಶಾಲೆಗಳಲ್ಲಿ ಉತ್ತಮ ಇಂಗ್ಲಿಷ್‌ ಮಾಧ್ಯಮದಲ್ಲಿ ಶಿಕ್ಷಣ ದೊರೆತರೆ ಸರ್ಕಾರಿ ಶಾಲೆಗಳಿಗೆ ಸೇರಿಸುತ್ತೇವೆ. ಈಗಾಗಲೇ, ವರ್ಗಾವಣೆ ಪತ್ರವನ್ನು ತಂದಿದ್ದೇವೆ’ ಎಂದು ಹಂಗಳ ಗ್ರಾಮದ ಸ್ವಾಮಿ ತಿಳಿಸಿದರು.

ಲಾಟರಿ ಮೂಲಕ ಆಯ್ಕೆ

‘ಈಗಾಗಲೇ 1ರಿಂದ 12ನೇ ತರಗತಿಯವರೆಗೆ ಸುಮಾರು 744 ವಿದ್ಯಾರ್ಥಿಗಳು ವ್ಯಾಸಂಗ ಮಾಡುತ್ತಿದ್ದಾರೆ. ಈ ಬಾರಿ ಇಂಗ್ಲಿಷ್ ಮಾಧ್ಯಮದಲ್ಲಿ ಎಲ್‍ಕೆಜಿ ತರಗತಿ ಆರಂಭವಾಗುತ್ತದೆ. ಈಗಾಗಲೇ, ಅರ್ಜಿಗಳನ್ನು ವಿತರಣೆ ಮಾಡಲಾಗಿದೆ. 30 ವಿದ್ಯಾರ್ಥಿಗಳನ್ನು ಮಾತ್ರ ಆಯ್ಕೆ ಮಾಡಿಕೊಳ್ಳಲಾಗುತ್ತದೆ. ಹೆಚ್ಚು ಅರ್ಜಿಗಳು ಬಂದರೆ ಲಾಟರಿ ಮೂಲಕ ಆಯ್ಕೆ ಮಾಡಲಾಗುವುದು’ ಎಂದು ಶಾಲೆಯ ಪ್ರಾಂಶುಪಾಲ ನಾಗಪ್ಪ ‘ಪ್ರಜಾವಾಣಿ’ಗೆ ತಿಳಿಸಿದರು.

‘ಎಲ್‍ಕೆಜಿ ಆರಂಭ ಮಾಡಲಾಗುತ್ತಿದೆ. ಇದಕ್ಕಾಗಿ ಎನ್‍ಎಸ್‍ಟಿ ತರಬೇತಿ ಹೊಂದಿರುವ ಅಥವಾ ಬಿ.ಇಡಿ ಇನ್ ಚೈಲ್ಡ್ ಕೇರ್, ಡಿಪ್ಲೊಮಾ ಇನ್ ಚೈಲ್ಡ್ ಎಜುಕೇಷನ್ ಆಗಿರುವ ಸಿಬ್ಬಂದಿಯನ್ನು ನೇಮಕಮಾಡಲಾಗುತ್ತದೆ’ ಎಂದು ಅವರು ಮಾಹಿತಿ ನೀಡಿದರು.

 

ವಿರಾಟ್ ಕೊಹ್ಲಿ ನಾಯಕತ್ವದ ಭಾರತ ಕ್ರಿಕೆಟ್‌ ತಂಡ ಕಪ್ ಗೆಲ್ಲುತ್ತಾ? ಐಸಿಸಿ ವಿಶ್ವಕಪ್ 2019 ಯಾರು ಗೆಲ್ಲುತ್ತಾರೆ? ಕೋಟ್ಯಂತರ ಕ್ರಿಕೆಟ್ ಪ್ರೇಮಿಗಳ ನಿರೀಕ್ಷೆಗೆ ಉತ್ತರ ಸಿಗುವ ಕಾಲ ಬಂದಿದೆ. ವಿಶ್ವಕಪ್ ಕ್ರಿಕೆಟ್‌ನ ಸ್ಕೋರ್ ಅಪ್‌ಡೇಟ್ಸ್‌, ಮ್ಯಾಚ್‌ಗಳ ವರದಿ, ವಿಶ್ವಕಪ್ ಕ್ರಿಕೆಟ್ ಹೆಜ್ಜೆ ಗುರುತು, ಆಟಗಾರರ ಸಂದರ್ಶನ, ವೇಳಾಪಟ್ಟಿ ತಿಳಿದುಕೊಳ್ಳಲು www.prajavani.net ಜಾಲತಾಣಕ್ಕೆ ಭೇಟಿ ನೀಡಿ. ಕ್ರೀಡಾಪ್ರೇಮಿಗಳ ನೆಚ್ಚಿನ ಆಯ್ಕೆ ‘ಪ್ರಜಾವಾಣಿ’. ಇದು ಅತ್ಯಂತ ವಿಶ್ವಾಸಾರ್ಹ ಸುದ್ದಿ ಮಾಧ್ಯಮ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !