ಕುಣಿಗಲ್ ಶಾಸಕರ ಪತ್ನಿಯ ಬ್ಯಾಗ್‌ ಕದ್ದೊಯ್ದರು

7
ವಿಜಯನಗರದ ಫೆಡರಲ್ ಬ್ಯಾಂಕ್‌ ಎದುರು ಘಟನೆ * ವ್ಯವಸ್ಥಾಪಕನಿಂದ ಪೊಲೀಸರಿಗೆ ದೂರು

ಕುಣಿಗಲ್ ಶಾಸಕರ ಪತ್ನಿಯ ಬ್ಯಾಗ್‌ ಕದ್ದೊಯ್ದರು

Published:
Updated:

ಬೆಂಗಳೂರು: ಕುಣಿಗಲ್ ಶಾಸಕ ಡಾ. ಎಚ್.ಡಿ.ರಂಗನಾಥ್ ಅವರ ಪತ್ನಿ ಸುಮಾ ಅವರ ಗಮನ ಬೇರೆಡೆ ಸೆಳೆದ ದುಷ್ಕರ್ಮಿಗಳು, ಅವರ ಕಾರಿನಲ್ಲಿದ್ದ ಬ್ಯಾಗ್‌ ಕದ್ದೊಯ್ದಿದ್ದಾರೆ.

ವಿಜಯನಗರ ಪೊಲೀಸ್ ಠಾಣೆಯಿಂದ ಅರ್ಧ ಕಿ.ಮೀ ದೂರದಲ್ಲಿರುವ ಫೆಡರಲ್ ಬ್ಯಾಂಕ್ ಶಾಖೆ ಎದುರು ಈ ಘಟನೆ ನಡೆದಿದೆ. ಆ ಸಂಬಂಧ ರಂಗನಾಥ್‌ ಅವರ ವ್ಯವಸ್ಥಾಪಕ ಜೆ. ನವೀನ್ ನೀಡಿರುವ ದೂರಿನನ್ವಯ ಎಫ್‌ಐಆರ್‌ ದಾಖಲಾಗಿದೆ.

‘ಸುಮಾ ಅವರು ಕೆಲಸದ ನಿಮಿತ್ತ ವಿಜಯನಗರದ ಫೆಡರಲ್‌ ಬ್ಯಾಂಕ್‌ಗೆ ಶನಿವಾರ ಮಧ್ಯಾಹ್ನ ಹೋಗಿದ್ದರು. ಅವರ ಜೊತೆಯಲ್ಲಿ ನವೀನ್ ಸಹ ಇದ್ದರು. ಬ್ಯಾಂಕ್ ಕೆಲಸ ಮುಗಿಸಿಕೊಂಡು ಹೊರಗೆ ಬಂದಿದ್ದ ಸುಮಾ, ಕಾರಿನಲ್ಲಿ ಕುಳಿತುಕೊಂಡಿದ್ದರು. ಅದೇ ವೇಳೆ ಸ್ಥಳಕ್ಕೆ ಬಂದಿದ್ದ ಇಬ್ಬರು ದುಷ್ಕರ್ಮಿಗಳು, ಗಮನ ಬೇರೆಡೆ ಸೆಳೆದು ಕಾರಿನಲ್ಲಿದ್ದ ಬ್ಯಾಗ್‌ ಕದ್ದುಕೊಂಡು ಪರಾರಿಯಾಗಿದ್ದಾರೆ’ ಎಂದು ಪೊಲೀಸ್ ಮೂಲಗಳು ತಿಳಿಸಿವೆ.

‘ಘಟನಾ ಸ್ಥಳದಲ್ಲಿರುವ ಕೆಲವು ಸಿ.ಸಿ.ಟಿ.ವಿ ಕ್ಯಾಮೆರಾದಲ್ಲಿ ಆರೋಪಿಗಳ ದೃಶ್ಯ ಸೆರೆಯಾಗಿದೆ. ಆದರೆ, ಅದು ಅಸ್ಪಷ್ಟವಾಗಿದೆ. ಬೇರೆ ಎಲ್ಲಿಯಾದರೂ ಕ್ಯಾಮೆರಾಗಳಿವೆಯೇ ಎಂಬುದನ್ನು ಪತ್ತೆ ಹಚ್ಚುತ್ತಿದ್ದೇವೆ’ ಎಂದು ಹೇಳಿವೆ.  

ಶಾಸಕರ ₹1.15 ಲಕ್ಷ ಬ್ಯಾಗ್‌ನಲ್ಲಿತ್ತು: ‘ಶಾಸಕ ರಂಗನಾಥ್‌ ಅವರಿಗೆ ಸೇರಿದ್ದ ₹1.15 ಲಕ್ಷ ನಗದು, ವಿವಿಧ ಬ್ಯಾಂಕ್‌ಗಳ ಖಾತೆ ಪುಸ್ತಕಗಳು, ಚೆಕ್ ಪುಸ್ತಕಗಳು ಬ್ಯಾಗ್‌ನಲ್ಲಿದ್ದವು’ ಎಂದು ನವೀನ್‌ ದೂರಿನಲ್ಲಿ ತಿಳಿಸಿದ್ದಾರೆ.

‘ಸುಮಾ ಅವರ ಕಾರಿನ ಮೂಲ ಆರ್‌.ಸಿ ಪುಸ್ತಕ, ಮೂಲ ಜಿಪಿಎ, ಬ್ಯಾಂಕ್‌ನ ಅಸಲಿ ದಾಖಲೆಗಳು ಸಹ ಬ್ಯಾಗ್‌ನಲ್ಲಿದ್ದವು. ನನ್ನ ಆಧಾರ್ ಕಾರ್ಡ್, ಚುನಾವಣಾ ಗುರುತಿನ ಚೀಟಿ, ವಿವಿಧ ಬ್ಯಾಂಕ್ ಎಟಿಎಂ ಕಾರ್ಡ್, ಪಾನ್ ಕಾರ್ಡ್ ಹಾಗೂ ವೈಯಕ್ತಿಕ ₹10,000 ಸಹ ಅದರಲ್ಲಿತ್ತು’ ಎಂದು ನವೀನ್‌ ಹೇಳಿದ್ದಾರೆ.  

ಬರಹ ಇಷ್ಟವಾಯಿತೆ?

 • 8

  Happy
 • 2

  Amused
 • 2

  Sad
 • 0

  Frustrated
 • 3

  Angry

Comments:

0 comments

Write the first review for this !