ಕರಿಗೂದಲಿಗೂ ಮಿಗಿಲೇನಿದೆ?

ಭಾನುವಾರ, ಮಾರ್ಚ್ 24, 2019
31 °C

ಕರಿಗೂದಲಿಗೂ ಮಿಗಿಲೇನಿದೆ?

Published:
Updated:
Prajavani

ಪದವಿಯ ಸಹಪಾಠಿ ಲಲಿತಾ ಅಪರೂಪಕ್ಕೆ ಮನೆಗೆ ಬಂದಳು. ಅವಳನ್ನು ನೋಡಿ ಬಹಳ ವರ್ಷಗಳಾಗಿತ್ತು. ‘ಏನೇ ಲಲ್ಲಿ ಅಪರೂಪಕ್ಕೆ ಮನೆಗೆ ಬಂದೆ?’ ಎಂದೆ. ಅದಕ್ಕವಳು ‘ಏನಿಲ್ವೆ ವಸು, ನನ್ನ ಮಗಳ ಮದುವೆ ಫಿಕ್ಸ್ ಆಗಿದೆ. ನಿಶ್ಚಿತಾರ್ಥಕ್ಕೆ ಕರೆಯೋಣಾಂತ ಬಂದೆ’ ಎಂದಳು. ‘ಓಹ್ ಹೌದಾ! ಕಂಗ್ರಾಟ್ಸ್ ಕಣೆ. ಹುಡುಗ ಏನು ಮಾಡೋದು? ಯಾವೂರು’ ಎಂದು ಒಂದೇ ಉಸುರಿಗೆ ಕೇಳಿದ ನನಗೆ ಎಲ್ಲವನ್ನೂ ಹೇಳಿದ ಅವಳನ್ನ ‘ಪರವಾಗಿಲ್ಲ ಕಣೆ ಲಲ್ಲಿ ಬೇಗ ಅತ್ತೆ ಆಗ್ತಿದೀಯ ಬಿಡಮ್ಮ’ ಎಂದೆ.

‘ಇನ್ನೂ ಹಾಗೇ ಇದೀಯ ಕಣೆ ಕಾಲೇಜಲ್ಲಿದ್ದಾಗೆ. ಬಿಳಿಕೂದಲು ಬಂದಿಲ್ಲ ಅನ್ಸತ್ತೆ. ಅದಕ್ಕೇ ಇನ್ನೂ ಹುಡುಗಿ ಹಾಗೆ ಕಾಣ್ತಿದೀಯ’ ಎಂದೆ. ಅದಕ್ಕವಳು ‘ಅಮ್ಮಾ ತಾಯಿ. ಥೂ ಬಿಡೆ! ಈ ಹಾಳಾದ ಬಿಳಿಕೂದಲ ಬಗ್ಗೆ ಮಾತ್ರ ಮಾತಾಡಬೇಡ. ನನಗೋ ಬಣ್ಣ ಹಚ್ಚಿ ಹಚ್ಚಿ ಸಾಕಾಗಿದೆ. ಮದುವೆಯಾದ ಕೆಲವೇ ವರ್ಷಗಳಲ್ಲಿ ತುಂಬ ಬಿಳಿಕೂದಲು ಬಂದುಬಿಡ್ತು ಕಣೆ. ಒಂದ್ಸಾರಿ ನಾನೂ ನಮ್ಮನೆಯವರೂ ನನ್ನ ಮಗಳನ್ನ ಕರ್ಕೊಂಡು ಬರಲು ಸ್ಕೂಲಿಗೆ ಹೋದರೆ, ಮಕ್ಕಳು ಸಾನ್ವಿ ನಿಮ್ಮ ಡ್ಯಾಡಿ ಮತ್ತೆ ನಿಮ್ಮಜ್ಜಿ ಬಂದಿದಾರೆ ಅನ್ನೋದೆ! ನಮ್ಮೆಜಮಾನರೋ ಮುಸಿ ಮುಸಿ ನಗ್ತಿದಾರೆ! ನನಗೋ ಎಲ್ಲಿಲ್ಲದ ಕೋಪ ಬಂತು. ಬಣ್ಣ ಹಾಕದ ಕೂದಲಿಗೆ ಅಂದಿನಿಂದಲೇ ಬಣ್ಣ ಹಾಕಲು ಆರಂಭಿಸಿ ಉದ್ದನೆಯ ಜಡೆಯನ್ನ ಕತ್ತರಿಸಿ ಸ್ಟೆಪ್ ಕಟ್ ಮಾಡಿಸಿದೆ. ಮಗಳ ಮದುವೆಯಾಗಿ ಒಂದು ಮೊಮ್ಮಗು ಬರ್ಲಿ ನೋಡು ಆಮೇಲೆ ನನ್ನನ್ನ’ ಎಂದಳು. ‘ಆಮೇಲೇನೆ?’ ಎಂದೆ. ‘ಅದಕ್ಕವಳು ಬಣ್ಣ ಹಚ್ಚೋದನ್ನ ಬಿಟ್ಟುಬಿಡ್ತೀನಿ ಕಣೆ!’ ಎಂದಳು.

‘ಅದಿರಲಿ ಲಲ್ಲಿ, ಇಲ್ಲಿ ಕೇಳೆ 80 ವರ್ಷದ ನನ್ನ ಸೋದರತ್ತೆಯ ಮುಂದಲೆಯಲ್ಲಿ ಕಾಣುತ್ತಿದ್ದ ಕೆಲವೇ ಬಿಳಿಗೂದಲನ್ನು ನೋಡಿ ಅತ್ತೆ ನಿಮಗಿಷ್ಟೇ ಬಿಳಿಕೂದಲು ಬಂದಿರೋದಾ? ಅಂದೆ. ಅದಕ್ಕವರು ತಟ್ಟನೆ ಏನನ್ನಬೇಕು? ನೋಡೆ ಮಗ ಆಗಲೇ ಮುಂದಲೆಲೆಲ್ಲಾ ನೆರೆ ಬಂದವೆ ಕಣೆ! ಅಂದದ್ದ ಕೇಳಿ ತಲೆ ಸುತ್ತುವಂತಾಗಿ ನಾನು ಪ್ರತಿಯಾಗಿ ಹೇಳಿದೆ. ಅತ್ತೆ ನನ್ನ ಕೂದಲನ್ನ ಬಿಚ್ಚಿ ತೋರಿಸಿದರೆ ನೀವು ತಲೆ ಸುತ್ತಿ ಬೀಳ್ತೀರ ಅಂತ.’ ಹೌದು ಅವರಿಗೂ ನಮಗೂ ಬಹುಶಃ 40 ವರ್ಷಗಳ ವ್ಯತ್ಯಾಸವಿರಬಹುದಾದರೂ ಅವರ ತಲೆಯಲ್ಲಿರುವ ಬೆರಳೆಣಿಕೆಯ ಬಿಳಿಕೂದಲಿನಷ್ಟು ಕಪ್ಪುಕೂದಲು ನನ್ನ ತಲೆಯಲ್ಲಿ ಇಲ್ಲವೆನಿಸಿ ನಗು ಬಂತು!

‘ವಸು, ಮೊನ್ನೆ ದೇವಸ್ಥಾನದಲ್ಲಿ ಶೈಲು ಸಿಕ್ಕಿ ಏನಂದ್ಲು ಗೊತ್ತಾ? ನನಗೆ ಯೂಟ್ರಸ್ ಆಪರೇಷನ್ ಆಗಿ ಮನೆಯಲ್ಲಿ ನೋಡ್ಕೊಳೋರು ಯಾರೂ ಇಲ್ಲ ಅಂತ ತವರಿಗೆ ಹೋಗಿ ಅಮ್ಮನ ಮನೇಲಿದ್ದೆ. ಆ ಸಮಯದಲ್ಲಿ ಅಮ್ಮ ನಂಜಾಗುತ್ತೆ ಅಂತ ತಲೆಸ್ನಾನ ಮಾಡಿದರೂ ಯಾವುದೇ ಕಾರಣಕ್ಕೂ ತಲೆಕೂದಲಿಗೆ ಬಣ್ಣ ಹಚ್ಚಲು ಬಿಡಲಿಲ್ಲ. ಸರಿ ಒಂದು ತಿಂಗಳು ಸುಧಾರಿಸಿಕೊಂಡು ಅಮ್ಮನೊಂದಿಗೆ ಊರಿಗೆ ಬಂದೆ. ರೂಮಿನಲ್ಲಿ ಮುಖದವರೆಗೆ ಹೊದ್ದು ಮಲಗಿದ್ದೆ. ನಮ್ಮ ಮನೆ ಕೆಲಸದ ಲಕ್ಷ್ಮಿ ಬಂದವಳೆ, ಓ ಅಜ್ಜಿ ಯಾವಾಗ ಬಂದ್ರಿ? ಅಕ್ಕೋರು ಬರಲಿಲ್ಲವಾ ಎಂದು ಕೇಳೋದೆ? ಅಯ್ಯೋ ನಾನು ಕಣೆ ನಿಮ್ಮಕ್ಕ’ ಎಂದೆ.

ಕೂಡಲೆ ಅವಳು ‘ಯಾಕಜ್ಜಮ್ಮರೆ ನೀವೂ ಅಕ್ಕೋರಂಗೇ ಇದೀರ ಬುಡಿ’ ಅಂದ್ಲು. ‘ಏಯ್ ಅಲ್ಲ ಕಣೆ ನಾನೇ ನಿಮ್ಮಕ್ಕ. ಒಂದು ತಿಂಗಳು ನಾನಿಲ್ದಿದ್ದಕ್ಕೆ ನನ್ನನ್ನ ಮರೆತೇ ಬಿಟ್ಟೆಯಾ? ಅಮ್ಮ ಅಡುಗೆ ಮನೇಲಿದಾರೆ’ ಅಂದಾಗ, ಅವಳು ತೀರ ಹತ್ತಿರಕ್ಕೆ ಬಂದು ಮತ್ತೆ ಮತ್ತೆ ನನ್ನನ್ನು ನೋಡಿ ಗಾಬರಿಯಿಂದ ಬಾಯಿ ಮೇಲೆ ಬೆರಳಿಟ್ಟುಕೊಂಡು ‘ಅಯ್ಯೋ ಅಕ್ಕೋರೆ, ನೀವಾ? ಯಾಕಿಂಗಾಗ್ಬುಟ್ಟಿದಿರಾ? ತಲೆ ಕೂದ್ಲೆಲ್ಲಾ ಬೆಳ್ಳಗಾಗಿ ನೋಡಕ್ಕಾಯ್ತಿಲ್ಲ. ಸ್ಯಾನೆ ವಯಸ್ಸಾದಂಗೆ ಕಾಣ್ತಿದೀರಾ ಎಂದು ತಲೆಮೇಲೆ ಕೈಹೊತ್ತು ಕೂತ್ಲು. ನನ್ನ ಕಡೆಗೊಮ್ಮೆ ಅನುಕಂಪದ ದೃಷ್ಟಿ ಬೀರುತ್ತಾ, ‘ಅದಿರ್ಲಿ, ಅಣ್ಣೋರು ನಿಮ್ಮುನ್ನ ಗುರ್ತಿಡುದ್ರಾ? ಪಾಪ ಅವ್ರಿಗೆ ನಿಮ್ಮನ್ನ ನೋಡಿ ಹೆಂಗಾಗಿರನ! ಏನಾರ ಆಗ್ಲಿ ಅಯ್ಯೋ ಅಣ್ಣಾವ್ರಿಗೆ ಇಂತ ಮೋಸ ಆಗ್ಬಾರ್ದಾಗಿತ್ತು’ ಅಂದಾಗ ನನಗೂ ಕೋಪ ಬಂದು ‘ಯಾಕೆ’ ಅಂದೆ. ಅದಕ್ಕವಳು ‘ಅಕ್ಕೋರೆ ನೀವು ಇಲ್ಲಿದ್ದಾಗ ನೀವಿರೋ ಬೆಳ್ಳನೆ ಬಣ್ಣಕ್ಕೂ ಕರ‍್ರನೆ ಕೂದಲಿಗೂ ಎಂತಾ ಚೆಂದಾಗಿ ಕಾಣ್ತಿದ್ರಿ ಗೊತ್ತಾ? ರಾಜಕುಮಾರನಂಗಿರೋ ಅಣ್ಣಾವ್ರಿಗೆ ತಕ್ಕನಂಗಿದ್ರಿ. ಆದ್ರೆ ಈಗ ಮಾತ್ರ ನನ್ಕೈಲಿ ನೋಡಕ್ಕಾಗ್ತಿಲ್ಲ’ ಅಂತ ಒಂದೇ ಉಸುರಿಗೆ ಬಡಬಡಾಯಿಸಿದಳು.‌

‘ಅಲ್ಲಾ ಏನಾರ ಬಣ್ಣ ಗಿಣ್ಣ ಹಚ್ಕಂತಿದ್ರಿ ಅನ್ಸುತ್ತೆ ಅದ್ಕೆಯ?’ ಎಂದಾಗ, ನಾನು ಆಗಾಗ್ಗೆ ಹೇರ್ ಡೈ ಹಾಕಿ ಬಿಳಿಯ ಕೂದಲು ಕಾಣದಂತೆ ಮೇಂಟೇನ್ ಮಾಡ್ತಿದ್ದದ್ದು ಅವಳ ಮುಂದೆ ಬಟಾಬಯಲಾದ ಮೇಲೆ ಪೇಪರು ಟಿ.ವಿ.ಗೆ ಹಾಕಿಸಿದಂತೇನೆ ಸರಿ ಎನಿಸಿತು ಕಣೆ!

 ಲಲ್ಲಿ, ಈ ಅಕಾಲಿಕ ನೆರೆಗೆ ಕಾರಣ ಏನಂತೆ ಗೊತ್ತಾ? ಹಾರ್ಮೋನುಗಳ ಅಸಮತೋಲನ, ಹೈಪೋಥೈರಾಯ್ಡಿಸಮ್, ಥೈರಾಯ್ಡ್, ಅಪೌಷ್ಟಿಕತೆ ಹಾಗೂ ವಿಟಮಿನ್ ಬಿ, ಕಬ್ಬಿಣದ ಅಂಶ, ಅಯೊಡಿನ್ ಕೊರತೆ, ರಕ್ತದ ಒತ್ತಡ, ರಕ್ತಹೀನತೆ. ಇನ್ನಿತರೆ ಕಾರಣಗಳೆಂದರೆ ಇಂದು ನಾವು ಸೇವಿಸುತ್ತಿರುವ ಕಲಬೆರಕೆ ಆಹಾರ, ಕಲುಷಿತ ವಾತಾವರಣ, ಕೂದಲಿಗೆ ಹಚ್ಚುವ ಎಣ್ಣೆ, ಬಳಸುವ ರಾಸಾಯನಿಕ ಶಾಂಪೂಗಳು, ಸೋಪುಗಳು. ಎಲ್ಲಕೂ ಮಿಗಿಲಾಗಿ ಇಂದಿನ ಒತ್ತಡದ ಬದುಕು. ದೇಹಕ್ಕೆ ಬೇಕಾದ ವ್ಯಾಯಾಮ, ಯೋಗ, ಮನಸ್ಸಿಗೆ ಬೇಕಾದ ಧ್ಯಾನ, ಪ್ರಾಣಾಯಾಮದ ಕೊರತೆ ಕೂಡ ಕಾರಣವಂತೆ.

ಹಾಗೇ ಪರಿಹಾರವೆಂದರೆ ದಾಸವಾಳದ ಹೂವು, ಎಲೆ, ಮೆಹೆಂದಿ ಎಲೆಗಳನ್ನು ರುಬ್ಬಿ ಹಚ್ಚುವುದು. ನೆಲ್ಲಿಕಾಯಿ ಎಣ್ಣೆಯನ್ನು ಹಚ್ಚುವುದು. ಬಾದಾಮಿ ಎಣ್ಣೆ, ಕೊಬ್ಬರಿ ಎಣ್ಣೆಯಲ್ಲಿ ಕರಿಬೇವಿನ ಸೊಪ್ಪನ್ನು ಕುದಿಸಿ ಹಚ್ಚುವುದು. ಕರಿ ಬೇವಿನ ಸೊಪ್ಪನ್ನು ತಿನ್ನುವುದರಿಂದ ಬಿಳಿಕೂದಲು ಬರುವುದನ್ನು ತಡೆಗಟ್ಟಬಹುದೆಂಬುದು ಹಲವರ ಸಲಹೆ. ಅಂತೆಯೇ ಶಾಂಪೂ ಸೋಪು ಬಳಸದೆ ಸೀಗೆಪುಡಿ, ಸಿಜ್ಜಿಲುಪುಡಿ, ಅಂಟವಾಳ ಬಳಸುವುದು ಕೂಡ ಪರಿಹಾರ ಎನ್ನುತ್ತಾರೆ. ಕರಿ ಎಳ್ಳೆಣ್ಣೆ, ಹರಳೆಣ್ಣೆ ಬಳಸುವುದರಿಂದ ನೆರೆಗೂದಲು ಬರುವುದನ್ನು ತಡೆಯಬಹುದಂತೆ ಕಣೆ.

ಅದಿರಲಿ ನಿನಗೆ ನೆನಪಿದ್ಯಾ ವಸು. ನಾವು ಚಿಕ್ಕವರಿರುವಾಗ ತಲೆಕೂದಲಿಗೆ, ಸೂಜಿದಾರ ಏರ್ಪಿನ್ನು ಅಂತ ಕೂಗ್ಕೊಂಡು ಬರ್ತಾ ಇದ್ದರು. ಆಗೆಲ್ಲ ಅಜ್ಜಿಯ, ಅಮ್ಮನ ಬಿಳಿಕೂದಲು ಮಿಕ್ಸ್ ಇರೋ ಕೂದಲನ್ನ ಕೊಟ್ಟರೂ ತಗೊಂಡು ಏರ್ಪಿನ್ ಕೊಡ್ತಾ ಇದ್ರು. ಆದ್ರೆ ಈಗ ಏನು ಗೊತ್ತಾ 100 ಗ್ರಾಂ. ತಲೆಕೂದಲಿಗೆ ₹ 400 ಅಂತ ಬೀದಿಲಿ ಕೂಗ್ತಾ ಬಂದಾಗ ನಾನು ಕೂದಲನ್ನು ಕೊಟ್ಟೆ ಅದನ್ನು ನೋಡಿದ ಅವಳು, ‘ಅಕ್ಕ ಪೂರ್ತಿ ಕರಿಕೂದಲಿದ್ರೆ ಮಾತ್ರಾ ಕೊಡಿ. ಈ ತರ ಅರ್ಧ ಬಿಳಿ, ಅರ್ಧ ಕರಿ ಇರೋ ಕೂದಲನ್ನ ತಗೋಳಲ್ಲ’ ಅನ್ನೋದೆ! ನನಗೋ ಅವಮಾನ ಎನಿಸಿ. ‘ಕರಿಕೂದಲು ಬಿಳಿಕೂದಲು ಅಂತ ಹೇಳಿಲ್ಲವಲ್ಲ. ಬರೀ ತಲೆಕೂದಲು ಅಂದಿದ್ದು ತಾನೆ?’ ಎಂದು ಬಂದ ಕೋಪದಲ್ಲಿ, ಕ್ಯಾಕ್ಟಸ್ ಗಿಡಗಳ ಬುಡಕ್ಕೆ ಕೂದಲನ್ನು ಹಾಕಿದರೆ ಸೊಂಪಾಗಿ ಬೆಳೆಯುತ್ತವೆ ಎಂದು ಎಂದೋ ಓದಿದ್ದು ನೆನಪಾಗಿ ತಕ್ಷಣ ಆ ಕೂದಲನ್ನ ಪುಡಿ ಪುಡಿ ಮಾಡಿ ಗಿಡದ ಬುಡಕ್ಕೆ ಹಾಕಿದೆ ಕಣೆ!

‘ಅಲ್ವೇ ಲಲ್ಲಿ ಮದುವೆ, ಮುಂಜಿ, ಹಬ್ಬ ಹರಿದಿನಗಳು ಮೊದಲೇ ಗೊತ್ತಿರೋದ್ರಿಂದ ಬಣ್ಣ ಹಚ್ಚಿಕೊಂಡು ರೆಡಿಯಾಗಬಹುದು. ಆದರೆ, ಸಾವು, ನೋವಿಗೆ ದಿಢೀರನೆ ಹೋಗಬೇಕಾದಾಗ ಗಂಟೆಗಟ್ಟಲೆ ಬಿಡಬೇಕಾದ ಹೇರ್ ಡೈ ಹಚ್ಚಿ ಸ್ನಾನ ಮುಗಿಸಿ ಹೋಗುವುದರೊಳಗೆ ಸಂಸ್ಕಾರ ಮುಗಿದೇ ಹೋಗಿರುತ್ತದೆ. ಹಾಗೇ ಹೋಗೋಣಾಂದ್ರೆ ಅರೆವಯಸ್ಸಿನಲ್ಲಿ ಬಂದ ನೆರೆಯನ್ನು ನೋಡಲಾಗುವುದಿಲ್ಲ.’

ಸದ್ಯ ಇತ್ತೀಚೆಗೆ ನಮ್ಮಗಳ ಕಷ್ಟವನ್ನು ನೋಡಿಯೋ ಏನೋ ಯಾರೋ ಪುಣ್ಯಾತ್ಮರು ಹತ್ತು ನಿಮಿಷಗಳಲ್ಲಿ ಹಿಡಿಯುವ, ಇಲ್ಲವೆ ಸ್ನಾನ ಮಾಡುವಾಗಲೇ ಹಚ್ಚಿ ಕೇವಲ ಐದು ನಿಮಿಷಗಳಲ್ಲಿ ಹಿಡಿಯುವ ಹೇರ್‌ ಡ್ರೈಗಳ ಆವಿಷ್ಕಾರವನ್ನೇ ಮಾಡಿದ್ದಾರೆ. ಅವರಿಗೊಂದು ಸಲಾಂ’ ಎಂದೆ.

ಅದಕ್ಕವಳು ‘ಏಯ್ ವಸು ನೋಡೆ ಯಾರಾದ್ರೂ ಪುಣ್ಯಾತ್ಮರು ಪರ್ಮನೆಂಟಾಗಿ ಬಿಳಿಕೂದಲು ಕಾಣದಂತೆ ಕೂದಲು ಸದಾ ಕಪ್ಪಗೇ ಇರುವಂತೆ ಮಾಡೋದಾದ್ರೆ ಒಂದು ಲಕ್ಷವಾದರೂ ಸರಿ ನನ್ನ ವಡವೆಗಳನ್ನ ಮಾರಿಯಾದ್ರೂ ಹಾಕಿಸ್ಕೋತಿನಿ ಕಣೇ’ ಅನ್ನೋದಾ?! ಅಂದರೆ ಕಪ್ಪುಕೂದಲಿನ ಬೆಲೆ ಒಡವೆಗಿಂತಲೂ ಮಿಗಿಲು ಎಂದಾಯ್ತು! 

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !