ಶ್ರೀಲಂಕಾಕ್ಕೆ ಹೊಸ ಪ್ರಧಾನಿ ಸೋಮವಾರ ನೇಮಕ

7

ಶ್ರೀಲಂಕಾಕ್ಕೆ ಹೊಸ ಪ್ರಧಾನಿ ಸೋಮವಾರ ನೇಮಕ

Published:
Updated:

ಕೊಲಂಬೊ: ಶ್ರೀಲಂಕಾ ಅಧ್ಯಕ್ಷ ಮೈತ್ರಿಪಾಲ ಸಿರಿಸೇನಾ ಅವರು ದೇಶಕ್ಕೆ ಹೊಸ ಪ್ರಧಾನಿಯನ್ನು ಸೋಮವಾರ ನೇಮಿಸಲಿದ್ದಾರೆ. ಆದರೆ, ಪದಚ್ಯುತ ಪ್ರಧಾನಿ ರನಿಲ್‌ ವಿಕ್ರಮಸಿಂಘೆ ಅವರನ್ನು ಮರು ನೇಮಕ ಮಾಡದಿರಲು ನಿರ್ಧರಿಸಿದ್ದಾರೆ. ಇದರಿಂದ ದೇಶದಲ್ಲಿ ಅನಿಶ್ಚಿತ ರಾಜಕೀಯ ಪರಿಸ್ಥಿತಿ ಮತ್ತೆ ಉದ್ಭವಿಸಿದೆ.

ಕಳೆದ ತಿಂಗಳು ಶ್ರೀಲಂಕಾ ಸಂಸತ್ತನ್ನು ವಿಸರ್ಜನೆ ಮಾಡಿದ ಅಧ್ಯಕ್ಷರ ಕ್ರಮ ಅಸಾಂವಿಧಾನಿಕವೆಂದು ಇಲ್ಲಿನ ಸುಪ್ರೀಂ ಕೋರ್ಟ್‌ ಗುರುವಾರ ತೀರ್ಪು ನೀಡಿತ್ತು. ತೀರ್ಪಿನ ನಂತರ ಅಧ್ಯಕ್ಷರು ಈ ತೀರ್ಮಾನಕ್ಕೆ ಬಂದಿದ್ದಾರೆ ಎಂದು ಕೊಲಂಬೊ ಪೇಜ್‌ ಪತ್ರಿಕೆ ವರದಿ .

ಈ ತೀರ್ಪಿನ ನಂತರ, ಸಿರಿಸೇನಾ ಅವರ ಅಧ್ಯಕ್ಷತೆಯಲ್ಲಿ ಯುನೈಟೆಡ್‌ ಫ್ರೀಡಂ ಅಲಯನ್ಸ್‌ (ಯುಪಿಎಫ್‌ಎ) ಮುಖಂಡರ ವಿಶೇಷ ಸಭೆ ಅಧ್ಯಕ್ಷರ ಕಾರ್ಯಾಲಯದಲ್ಲಿ ನಡೆಯಿತು. ಪ್ರಧಾನಿಯಾಗಿದ್ದ ವಿಕ್ರಮಸಿಂಘೆ ಅವರನ್ನು ಪದಚ್ಯುತಗೊಳಿಸಿ ಅವರ ಜಾಗಕ್ಕೆ ಅಧ್ಯಕ್ಷರು ನೇಮಿಸಿದ್ದ ಮಹಿಂದಾ ರಾಜಪಕ್ಸೆ ಕೂಡ ಸಭೆಯಲ್ಲಿ ಪಾಲ್ಗೊಂಡಿದ್ದರು ಎಂದು ಅದು ಹೇಳಿದೆ.

ಸಂಸತ್‌ ವಿಸರ್ಜನೆ ಸಂಬಂಧ ಸುಪ್ರೀಂಕೋರ್ಟ್‌ ನೀಡಿರುವ ತೀರ್ಪು ಸ್ವಾಗತಿಸುವುದಾಗಿ ಸಭೆಯಲ್ಲಿ ತಿಳಿಸಿದ ಸಿರಿಸೇನಾ ಅವರು, ಆದರೆ ಯಾವುದೇ ಕಾರಣಕ್ಕೂ ವಿಕ್ರಮಸಿಂಘೆ ಜತೆಗೆ ಆಡಳಿತ ನಡೆಸುವುದಿಲ್ಲವೆಂದು ಹೇಳಿರುವುದಾಗಿ ಅದು ವರದಿ ಮಾಡಿದೆ.

ರನಿಲ್‌ ವಿಕ್ರಮಸಿಂಘೆ ನೇತೃತ್ವದ ಯುನೈಟೆಡ್ ನ್ಯಾಷನಲ್ ಪಾರ್ಟಿ (ಯುಎನ್‌ಪಿ) ದೇಶವನ್ನು ಅಧೋಗತಿಗೆ ಕೊಂಡೊಯ್ಯುತ್ತಿರುವುದನ್ನು ತಡೆಗಟ್ಟುವ ಸಲುವಾಗಿ ಸಂಸತ್ತನ್ನು ವಿಸರ್ಜಿಸುವ ನಿರ್ಧಾರ ತೆಗೆದುಕೊಂಡಿದ್ದಾಗಿ ಅಧ್ಯಕ್ಷರು ಹೇಳಿದ್ದಾರೆಂದು ವರದಿ ತಿಳಿಸಿದೆ.

ಯುಎನ್‌ಪಿ ವಿರೋಧಿ ಕೂಟವನ್ನು ಬಲಪಡಿಸಲು ಬದ್ಧವಾಗಿರುವುದಾಗಿ ಹೇಳಿರುವ ಸಿರಿಸೇನಾ, ಶ್ರೀಲಂಕಾ ಫ್ರೀಡಂ ಪಾರ್ಟಿ (ಎಸ್ಎಲ್ಎಫ್‌ಪಿ) ಸಂಸದರು ಯುಎನ್‌ಪಿಯೊಂದಿಗೆ ಮತ್ತೆ ಸರ್ಕಾರ ರಚಿಸಲು ಪ್ರಸ್ತಾವ ಇಡಬಾರದು ಎಂದು ಒತ್ತಾಯಿಸಿದ್ದಾರೆ.

ರನಿಲ್‌ ವಿಕ್ರಮಸಿಂಘೆ ಅವರನ್ನು ಪದಚ್ಯುತಗೊಳಿಸಿ, ಅವರ ಜಾಗಕ್ಕೆ ಮಹಿಂದಾ ರಾಜಪಕ್ಸೆ ಅವರನ್ನು ಅಧ್ಯಕ್ಷರು ನೇಮಿಸಿದಾಗಿನಿಂದ ಲಂಕಾದಲ್ಲಿ ರಾಜಕೀಯ ಬಿಕ್ಕಟ್ಟು ತಲೆದೋರಿದೆ. ಇದಾದ ನಂತರ, 225 ಸದಸ್ಯ ಬಲದ ಸಂಸತ್ತನ್ನು ಇನ್ನೂ 20 ತಿಂಗಳ ಅವಧಿ ಇದ್ದಾಗಲೇ ವಿಸರ್ಜಿಸಿ, ಜನವರಿ 5ರಂದು ಮಧ್ಯಂತರ ಚುನಾವಣೆಗೆ ಸಿರಿಸೇನಾ ಆದೇಶಿಸಿದ್ದರು.

ಸರಳ ಬಹುಮತಕ್ಕಾಗಿ 113 ಸಂಸದರ ಬೆಂಬಲ ಪಡೆಯಲು ರಾಜಪಕ್ಸೆ ವಿಫಲರಾಗುವ ಸೂಚನೆ ಕಾಣುತ್ತಿದ್ದಂತೆಯೇ, ಸಂಸತ್ತಿನ ವಿಸರ್ಜನೆಗೆ ಮುಂದಾಗಿದ್ದರು. ಆದರೆ ಮತ್ತೊಂದೆಡೆ, ವಿಕ್ರಮಸಿಂಘೆ ಸಂಸತ್ತಿನಲ್ಲಿ 117 ಸಂಸದರ ಬೆಂಬಲವನ್ನು ಸಾಬೀತು ಮಾಡಿದ್ದರು.

ನ. 9ರಂದು ಸಂಸತ್ತನ್ನು ವಿಸರ್ಜಿಸಿದ ನಂತರ ಸಿರಿಸೇನಾ ವಿರುದ್ಧ ನ್ಯಾಯಾಲಯದಲ್ಲಿ 13 ಅರ್ಜಿಗಳು ಸಲ್ಲಿಕೆಯಾಗಿದ್ದವು. ಇದೀಗ, ಸುಪ್ರೀಂ ಕೋರ್ಟ್‌ ತೀರ್ಪಿನಿಂದಾಗಿ, ಸಂಸತ್‌ಗೆ ಅವಧಿಪೂರ್ವ ‌ಚುನಾವಣೆ ನಡೆಯುವ ಸಾಧ್ಯತೆ ಇಲ್ಲ.

Tags: 

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !