ಬುಧವಾರ, ಜೂನ್ 3, 2020
27 °C

ಹುಲಿ ಗೂಡಿನಡೆಗಿನ ಪಯಣ

ಆಕಾಶ ಯಲಿಗಾರ Updated:

ಅಕ್ಷರ ಗಾತ್ರ : | |

‘ವೂಲ್ಫಪ್ಯಾಕ್’ - ಪ್ರವಾಸದ ಮೂಲಕ ದೇಶ- ವಿದೇಶ ಸುತ್ತಾಡಲೆಂದೇ ಕಟ್ಟಿಕೊಂಡ ಒಂದು ಪುಟ್ಟ ಯುವ ಸಮೂಹದ ಗುಂಪು. ಆ ಗುಂಪಿನಲ್ಲಿ ನಾನೂ ಒಬ್ಬ. ಈ ಬಾರಿ ನಮ್ಮ ಪ್ರವಾಸ ಸ್ವರ್ಗಸದೃಶ ಭೂತಾನ್‌ಗೆ. ಅಲ್ಲಿ ಕಳೆದ ಏಳು ದಿನಗಳ ಅನುಭವ ಅದ್ಭುತ, ಅನನ್ಯ. ಇಡೀ ಪ್ರವಾಸದಲ್ಲಿ ತುಂಬಾ ನೆನಪಾಗಿ ಉಳಿದಿದ್ದು ‘ಟೈಗರ್ ನೆಸ್ಟ’ ಚಾರಣ.

ಭೂತಾನಿನ ಪಾಂಟಶೋಲಿಂಗ ಬಿಟ್ಟು ಪಾರೋ ಎಂಬ ಜಾಗ ತಲುಪಿದಾಗ ರಾತ್ರಿ ಹನ್ನೊಂದಾಗಿತ್ತು. ಅಲ್ಲಿ ಬೇಗ ಕತ್ತಲು ಆವರಿಸುವುದರಿಂದ ಬಹುತೇಕ ಹೋಟೆಲುಗಳು ರಾತ್ರಿ ಎಂಟೂವರೆ ಎನ್ನುವಷ್ಟರಲ್ಲೇ ಬಂದ್ ಆಗುತ್ತವೆ. ಈ ವಿಷಯ ಗೊತ್ತಿದ್ದು ಆಲಸಿತನ ತೋರಿಸಿದ ಪರಿಣಾಮ, ಆ ರಾತ್ರಿ ನಮ್ಮದೇ ತಿನಿಸುಗಳಿಂದಲೇ ಹೊಟ್ಟೆ ತುಂಬಿಸಿಕೊಂಡು ಮಲಗಿದೆವು.

ಮುಂಜಾನೆ ಎದ್ದಾಗಲೇ ಗೊತ್ತಾದದ್ದು ನಾವಿರುವ ತಾಣ ಗಂಧದ ಗುಡಿಯಂತಹ ಹಸಿರ ಕಾಡಿನ ನಡುವೆ ಎಂದು. ಅಬ್ಬಾ, ಎಂಥ ಸೊಬಗು. ಗೋನು ಮೆಲೆತ್ತಿದಷ್ಟೂ ಎತ್ತರವಾಗಿ ಬೆಳೆದು ನಿಂತ ಪೈನ ಮರಗಳು, ನಾವಿದ್ದ ರೆಸಾರ್ಟಿಗೆ ಮುಖ ಮಾಡಿ ನಿಂತ ಪರ್ವತ ಸಮೂಹ, ಅದರ ಉತ್ತುಂಗದಲ್ಲಿ ಸಣ್ಣದಾಗಿ ಕಾಣುವ ‘ಟೈಗರ್ ನೆಸ್ಟ್’ ಎಂದೇ ಜಗತ್ಪ್ರಸಿದ್ಧವಾಗಿರುವ ತಕ್ಸಂಗ್ ಮೊನಾಸ್ಟ್ರಿ. ಅತ್ಯಂತ ಕಡಿದಾದ ಪರ್ವತದ ಇಳಿಜಾರ ಬಂಡೆಯ ಮೇಲೆ ಕಟ್ಟಿರುವ ಈ ದೇವಾಲಯವನ್ನು ಬರೀ ಫೋಟೊನಲ್ಲಿ ನೋಡಿಯೆ ಮೈ ಜುಮ್ ಎಂದಿತ್ತು!

ಬುದ್ಧನ ಅವತಾರವೆಂದೇ ಆರಾಧಿಸುವ ಗುರು ರಿಂನಪೂಚೇ ಹುಲಿಯ ಮೇಲೆ ಸವಾರಿ ಮಾಡುತ್ತಾ ಬಂದು ಇಲ್ಲಿಯ ಒಂದು ಗುಹೆಯಲ್ಲಿ ಧ್ಯಾನ ಮಾಡಿದರೆಂದು, ಈ ದೇವಾಲಯ ‘ಟೈಗರ್ ನೆಸ್ಟ್’ ಎಂದು ಪ್ರಸಿದ್ಧಿ ಪಡೆದಿದೆ. ಈ ಹೆಸರಿಗಾದರು ಒಂದು ಹುಲಿ ಕಾಣಿಸೀತು ಎಂದು ಬಯಸಿದ್ದ ನನಗೆ ಕಂಡದ್ದು ಮಾತ್ರ ಕರಡಿಯಂತೆ ಮೈಯಲ್ಲಾ ಕೂದಲು ಮಾಡಿಕೊಂಡಿರುವ ಪಕ್ಕಾ ಹಿಮಾಲಯದ ನಾಯಿಗಳು!

ಜಪಾನ್ ರಾಜಕುಮಾರಿ ದರ್ಶನ
ಮುಂಜಾನೆ ಎಂಟರ ಚಳಿ ಮಿಶ್ರಿತ ಬಿಸಿಲಿನಲ್ಲಿ ನಮ್ಮ ಟ್ರೆಕ್ಕಿಂಗ್ ಶುರುವಾಯಿತು. ಆದರೆ ಅದೇ ದಿನವೇ ಜಪಾನಿನ ರಾಜಕುಮಾರಿ ತಕ್ಸಂಗ್‌ಗೆ ಭೇಟಿ ನೀಡುವುದು ಗೊತ್ತಾಯಿತು. ಇನ್ನೇನು ಆ ಪರ್ವತದ ಅಡಿ ಮುಟ್ಟಬೇಕಿತ್ತು. ಅಷ್ಟರಲ್ಲೇ ಒಂದರ ಹಿಂದೊಂದು ಸಾಲು ಸಾಲಾಗಿ ಕಾರುಗಳು ಹೊರಟವು. ಒಂದು ಕಾರಿನ ಮೇಲೆ ಜಪಾನಿನ ಬಾವುಟವಿತ್ತು. ಅದನ್ನು ನೋಡಿ, ರಾಜಕುಮಾರಿ ಬಂದಿರುವುದು ಖಾತರಿಯಾಯಿತು. ಕಾರುಗಳು ಹೋಗುತ್ತಿದ್ದಂತೆ ಎಲ್ಲರೂ ‘ಹುಯ್ಯ’ ಎಂದು ಸಂಭ್ರಮಿಸುತ್ತ ಬೇಸ್‍ ನತ್ತ ಓಡಿದೆವು, ಕೇಳಿರದ, ನೋಡಿರದ ರಾಜಕುಮಾರಿಯನ್ನು ಕಾಣಲು!

ನಾವು ಬೇಸ್ ತಲುಪುವಷ್ಟರಲ್ಲೆ ರಾಜಕುಮಾರಿ ಮುಂದೆ ಹೊರಟಾಗಿತ್ತು. ಸರಿ, ತಲೆಗೆ ಐನೂರು ರೂಪಾಯಿ ಕಟ್ಟಿ , ಕೈಲೊಂದು ಬಾಡಿಗೆಗಿರುವ ಕಟ್ಟಿಗೆಯನ್ನು ಹಿಡಿದು ತಕ್ಸಂಗ್‌ನತ್ತ ಹೆಜ್ಜೆ ಹಾಕಿದೆವು. ತಾನು ಕುದುರೆ ಮೇಲೆ ಬರುತ್ತೇನೆಂದು ನಿರ್ಧರಿಸಿದ್ದ ನಮ್ಮ ಗುರುಗಳನ್ನು ಸ್ವಲ್ಪ ಹುರಿದುಂಬಿಸಿ (ಹೆದರಿಸಿ) ಕಾಲ್ನಡಿಗೆಯಲ್ಲೇ ಬರುವಂತೆ ಮಾಡಿದೆವು.

ಪರ್ವತದತ್ತ ಹೆಜ್ಜೆ ಹಾಕುತ್ತಿದ್ದಾಗ ದೇವಾಲಯದ ಸಣ್ಣ ಪ್ರತಿರೂಪಗಳು, ಹರಿವ ಝರಿ, ಗುಡ್ಡದ ತಿರುವಿನಲ್ಲಿ ಹಸಿರ ರಾಶಿ, ಶ್ವೇತ ಧ್ವಜಗಳು, ಕೊರೆಯುವ ಬಿಸಿಲು, ತಣ್ಣನೆಯ ನೆರಳು, ಅಲ್ಲಲ್ಲಿ ಯಾತ್ರಿಕರೇ ಗುಪ್ಪೆ ಮಾಡಿ ನಿರ್ಮಿಸಿದ ಕಲ್ಲಿನ ಗೋಪುರಗಳು, ಬೌದ್ಧರ ಪ್ರಾರ್ಥನಾ ಚಕ್ರ, ನೀವು ಹೋದಲ್ಲೆಲ್ಲಾ ಹಿಂಬಾಲಿಸುತ್ತ ಪಟಪಟವೆಂದು ಗಾಳಿಯಲ್ಲೇ ಮಂತ್ರ ಹೇಳುವ ಬಣ್ಣ ಬಣ್ಣದ ಪ್ರಾರ್ಥನಾ ಬಾವುಟಗಳು ನಮ್ಮನ್ನು ಮತ್ತೊಂದು ಲೋಕಕ್ಕೆ ಕೊಂಡೊಯ್ದವು.

ಅವಸರವಿಲ್ಲದೇ ಆರಾಮವಾಗಿಯೇ ಸಾಗುತ್ತಿದ್ದ ನಾವು, ಪರ್ವತದ ತುದಿ ತಲುಪಲು ತೆಗೆದು ಕೊಂಡ ಸಮಯ ಬರೊಬ್ಬರಿ ನಾಲ್ಕು ತಾಸು. ಆ ತುದಿಯ ಅಂಚಿನಿಂದ ಕಂಡ ತಕ್ಸಂಗ್ ಮೊನಾಸ್ಟ್ರಿಯ ವಿಹಂಗಮ ನೋಟ, ನನ್ನ ಜೀವನದ ಅದ್ಭುತ ಕ್ಷಣಗಳಲ್ಲೊಂದು.

ಪಕ್ಕದ ಪರ್ವತದ ಇಳಿಜಾರಲ್ಲಿರುವ ಆ ದೇವಾಲಯ ಸೇರಲು, ಮೆಟ್ಟಿಲುಗಳ ಸಹಾಯದಿಂದ ಕಣಿವೆಯಲ್ಲಿ ಇಳಿದು ಮೇಲೆ ಹತ್ತಿ ಹೋಗಬೇಕಾಗಿತ್ತು. ರಾಜಕುಮಾರಿಯ ವಿಶೇಷ ಪೂಜೆಯ ಸಲುವಾಗಿ ಕೆಳಗೆ ಹೋಗುವುದನ್ನು ಕೆಲ ನಿಮಿಷಗಳ ಕಾಲ ತಡೆಯಲಾಗಿತ್ತು. ಆಕೆ ಪೂಜೆ ಮುಗಿಸಿ, ನಾವಿದ್ದ ತುದಿಗೆ ಬಂದಾಗ ಪ್ರತಿಯೊಬ್ಬರು ಎದ್ದು ನಿಂತು ಗೌರವ ಸೂಚಿಸಿದರು. ಆಕೆ ಎಲ್ಲರತ್ತಲೂ ಮುಗುಳ್ನಗುತ್ತಾ ಕೈ ಬೀಸಿ, ಕೆಲವೇ ಕ್ಷಣಗಳಲ್ಲಿ ಮಾಯವಾದಳು ಕಿನ್ನರಿಯಂತೆ!

ಹಾಗೋ ಹೀಗೂ ಮೆಟ್ಟಿಲು ಇಳಿದು, ಮತ್ತೆ ಹತ್ತಿ ತಕ್ಸಂಗ್ ಬಾಗಿಲು ಸೇರಿದೆವು. ಅತ್ಯಂತ ಕಡಿದಾದ ಜಾಗದಲ್ಲಿ ನಿರ್ಮಿಸಿರುವ ಈ ದೇವಾಲಯ ಸಂಕೀರ್ಣದ ಒಂದು ಭಾಗ ಪರ್ವತವನ್ನು ಅಪ್ಪಿಕೊಂಡರೆ ಇನ್ನೊಂದು ಭಾಗ ಪ್ರಪಾತವನ್ನೇ ಛೇಡಿಸುತ್ತ ಕುಳಿತುಬಿಟ್ಟಿದೆ. ಈ ಸಂಕೀರ್ಣವು ನಾಲ್ಕು ಮುಖ್ಯ ದೇವಾಲಯ ಮತ್ತು ಎಂಟು ಗುಹೆಗಳನ್ನು ಹೊಂದಿದೆ. ಪ್ರತಿಯೊಂದು ದೇವಾಲಯದಲ್ಲೂ ಸುಂದರವಾಗಿ ಅಲಂಕರಿಸಿದ ಬುದ್ಧನ ವಿಗ್ರಹಗಳಿವೆ. ಇವುಗಳ ಎದುರು ಪ್ರಕೃತಿಯ ಸೌಂದರ್ಯ ತೋರಲು ಸಣ್ಣ ಕಿಟಕಿಗಳಿವೆ. ನಿಮಗೆ ಯಾವುದು ಹಿತವೆನಿಸುವುದೊ ಅತ್ತ ಕಡೆ ತಿರುಗಬಹುದು!

ಗುಡ್ಡ ಹತ್ತಿದ ಆಯಾಸವೆಲ್ಲವನ್ನು ಈ ದೇವಾಲಯದ ಪರಿಸರ ಮರೆಸಿಹಾಕಿತ್ತು, ಹೊಟ್ಟೆ ತಾಳ ಹಾಕುವ ತನಕ. ನಾವು ರೆಸಾರ್ಟಿನಿಂದಲೇ ಕಟ್ಟಿ ತಂದ ಪರೋಟ ತಿಂದು ವಾಪಸ್ ಬೇಸ್‍ನತ್ತ ಹೊರಟೆವು.
ಈ ಇಳಿಯುವ ಕಾಯಕವೇ ಕಷ್ಟ. ಅತ್ತ ಓಡಲು ಆಗದು ನಿಧಾನವಾಗಿ ನಡೆಯಲು ಆಗದು. ಕಾಲಿಗೆ ಬ್ರೇಕ್ ಹಾಕುತ್ತ ಹೊರಡಬೇಕು. ಬೇಸ್ ತಲುಪಿದಾಗ ಸಂಜೆ ನಾಲ್ಕಾಗಿತ್ತು. ನಮಗಾಗಿ ಕಾಯುತ್ತ ನಿಂತಿದ್ದ ಬಬ್ಲೂ (ಡ್ರೈವರ್), ನಮ್ಮನ್ನೆಲ್ಲ ರೆಸಾರ್ಟಿಗೆ ಬಿಟ್ಟು ‘ಶಾಪಿಂಗ್ ಮಾಡಬೇಕಾ’ ಎಂದು ಕೇಳಿದ್ದಕ್ಕೆ ‘ಹುಂ ನಡಿ’ ಎಂದು ಮರಳಿ ಕಾರು ಹತ್ತಿಕುಳಿತ ಮಹಿಳಾಮಣಿಯರ ಶಕ್ತಿ ಸಾಮರ್ಥ್ಯಕ್ಕೆ ಬೆರಗಾಗಿ ಮನಸ್ಸಿನಲ್ಲೆ ಸಾಷ್ಟಂಗ ನಮಸ್ಕಾರ ಹಾಕಿದೆ.


‘ವೂಲ್ಫಪ್ಯಾಕ್‌’ ಪ್ರವಾಸಿ ತಂಡ

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.