ಸೋಮವಾರ, ಡಿಸೆಂಬರ್ 9, 2019
21 °C
ಕ್ವೀರ್‌ ಹಬ್ಬ: ಸಂಭ್ರಮಿಸಿದ ಲೈಂಗಿಕ ಅಲ್ಪಸಂಖ್ಯಾತರು

ಗೌರವಕ್ಕಾಗಿ ಮೊಳಗಿತು ಕೂಗು

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Deccan Herald

ಬೆಂಗಳೂರು: ‘ನಮ್ಮ ದೇಹ–ನಮ್ಮ ಹಕ್ಕು, ನಮ್ಮ ಲೈಂಗಿಕತೆ–ನಮ್ಮ ಹಕ್ಕು, ಬದುಕಿ–ಬದುಕಲು ಬಿಡಿ, ಘನತೆ–ಗೌರವದ ಜೀವನ ನಮ್ಮ ಹಕ್ಕು–ನಮಗೆ ಸ್ವಾತಂತ್ರ್ಯ ಬೇಕು, ನೋಡಿ ಸ್ವಾಮಿ ನಾವಿರೋದು ಹೀಗೆ....’ 

ಮೆಜೆಸ್ಟಿಕ್ ಕೆಂಪೇಗೌಡ ಬಸ್‌ ನಿಲ್ದಾಣದ ಸಮೀಪದ ತುಳಸಿ ಉದ್ಯಾನದಿಂದ ಪುರಭವನದವರೆಗೂ ನಡೆದ ‘ಸ್ವಾಭಿಮಾನ ಜಾಥಾ’ದಲ್ಲಿ ಮೊಳಗಿದ ಘೋಷವಾಕ್ಯಗಳಿವು.

ಲೈಂಗಿಕ ಅಲ್ಪಸಂಖ್ಯಾತರು ಮತ್ತು ಲೈಂಗಿಕ ಕಾರ್ಯಕರ್ತರ ಹಕ್ಕುಗಳ ರಕ್ಷಣಾ ಒಕ್ಕೂಟ (ಸಿಎಸ್ಎಂಆರ್) ಭಾನು
ವಾರ ಏರ್ಪಡಿಸಿದ್ದ 11ನೇ ವರ್ಷದ ‘ನಮ್ಮ ಪ್ರೈಡ್‌ ಮತ್ತು ಕರ್ನಾಟಕ ಕ್ವೀರ್‌ ಹಬ್ಬ’ದ ಅಂಗವಾಗಿ ಈ ಜಾಥಾ ನಡೆಯಿತು. ನೂರಾರು ಲೈಂಗಿಕ ಅಲ್ಪಸಂಖ್ಯಾತರು ಮತ್ತು ಅವರ ಬಗ್ಗೆ ಕಾಳಜಿ ಇರುವ ಕಾರ್ಯಕರ್ತರು ಪಾಲ್ಗೊಂಡರು.

ಆಕರ್ಷಕ ಉಡುಗೆಗಳನ್ನು ತೊಟ್ಟು, ವಿಧ–ವಿಧವಾಗಿ ಅಲಂಕಾರಗಳಿಂದ ಭೂಷಿತರಾದ ಎಲ್‌ಜಿಬಿಟಿಕ್ಯೂಐಎ+(ಸಲಿಂಗ ಕಾಮಿಗಳು, ಉಭಯ ಲಿಂಗರತಿಗಳು, ಲಿಂಗ ಪರಿವರ್ತಿತರು) ಒಬ್ಬರನೊಬ್ಬರು ತಬ್ಬಿಕೊಂಡು, ಪರಸ್ಪರ ಚುಂಬಿಸುವ ಮೂಲಕ ಲೈಂಗಿಕ ಸ್ವಾತಂತ್ರ್ಯಕ್ಕೆ ಹಕ್ಕೊತ್ತಾಯ ಮಾಡಿದರು.

ಕೆಲವು ಕಾರ್ಯಕರ್ತರು ದಾರಿಹೋಕರಿಗೆ ನಿರೋಧ್‌ಗಳನ್ನು ಹಂಚುವ ಮೂಲಕ ಸುರಕ್ಷಿತ ಲೈಂಗಿಕತೆಯ ಅರಿವು ಮೂಡಿಸಿದರು. ತುಳಸಿ ಉದ್ಯಾನದಲ್ಲಿ ಮಧ್ಯಾಹ್ನ 2ಕ್ಕೆ ಆರಂಭವಾದ ಜಾಥಾ, ಸಂಜೆ ಪುರಭವನಕ್ಕೆ ಬಂದು ತಲುಪಿತು. ಸಮುದಾಯದ ಸದಸ್ಯರು ರವೀಂದ್ರ ಕಲಾಕ್ಷೇತ್ರ ಆವರಣದ ಸಂಸ ಬಯಲು ರಂಗ ಮಂದಿರದಲ್ಲಿ ರಾತ್ರಿ 8ರವರೆಗೆ ನೃತ್ಯ, ಗಾಯನ, ಭಾವಾಭಿನಯದ ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ನಡೆಸಿಕೊಟ್ಟರು.

ಸಮುದಾಯದ ಬೇಡಿಕೆಗಳು

* ಸುಪ್ರೀಂಕೋರ್ಟ್‌ನ ತೀರ್ಪಿನಂತೆ ಐಪಿಸಿ 377 ಸೆಕ್ಷನ್‌ ರದ್ದುಗೊಂಡಿರುವ ಬಗ್ಗೆ ಸರ್ಕಾರಗಳು ಸಾರ್ವಜನಿಕರಲ್ಲಿ ಅರಿವು ಮೂಡಿಸಬೇಕು.

* ಎಲ್‌ಜಿಬಿಟಿಕ್ಯೂಐಎ+ ಸಮುದಾಯದ ಕುರಿತು ಸಂವೇದನೆ ಮೂಡಿಸಲು ಅಭಿಯಾನಗಳನ್ನು ಹಮ್ಮಿಕೊಳ್ಳಬೇಕು

* ಕರ್ನಾಟಕ ಲೈಂಗಿಕ ಅಲ್ಪಸಂಖ್ಯಾತರ ನೀತಿ–2017 ಅನ್ನು ಅನುಷ್ಠಾನಗೊಳಿಸಬೇಕು

* ಸಮುದಾಯದ ಘನತೆ ಮತ್ತು ಅಭಿವ್ಯಕ್ತಿಗೆ ಪೂರಕವಾಗಿ ‘ಲೈಂಗಿಕ ಅಲ್ಪಸಂಖ್ಯಾತರ (ಹಕ್ಕುಗಳ ರಕ್ಷಣೆ) ಕಾಯ್ದೆ–2016’ಕ್ಕೆ ತಿದ್ದುಪಡಿ ತರಬೇಕು

* ದೌರ್ಜನ್ಯ, ನಿಂದನೆ, ತಾರತಮ್ಯ ತಡೆಯಬೇಕು

* ಸರ್ಕಾರಿ ಉದ್ಯೋಗ ಮತ್ತು ಕಲ್ಯಾಣ ಕಾರ್ಯಕ್ರಮಗಳಲ್ಲಿ ಸಮಾನ ಫಲಾನುಭವಿಗಳೆಂದು ಪರಿಗಣಿಸಬೇಕು

***

ನಮಗೂ ವಿವಾಹವಾಗುವ, ಮಕ್ಕಳನ್ನು ದತ್ತು ಪಡೆಯುವ, ಪಿತ್ರಾರ್ಜಿತ ಆಸ್ತಿಯಲ್ಲಿ ಪಾಲು ಪಡೆಯುವ ಹಕ್ಕು ನೀಡಬೇಕು

ಮೀನಾಕ್ಷಿ, ಲೈಂಗಿಕ ಅಲ್ಪಸಂಖ್ಯಾತೆ

ಪ್ರತಿಕ್ರಿಯಿಸಿ (+)