ಜಿಲ್ಲೆಯಲ್ಲಿ 17,277 ಪ್ರಕರಣಗಳು ಇತ್ಯರ್ಥಕ್ಕೆ ಬಾಕಿ

7
ಜುಲೈ 14ರಂದು ನ್ಯಾಯಾಲಯಗಳಲ್ಲಿ ಲೋಕ ಅದಾಲತ್‌: ನ್ಯಾಯಾಧೀಶ ಜಿ. ಬಸವರಾಜ

ಜಿಲ್ಲೆಯಲ್ಲಿ 17,277 ಪ್ರಕರಣಗಳು ಇತ್ಯರ್ಥಕ್ಕೆ ಬಾಕಿ

Published:
Updated:
ಪತ್ರಿಕಾಗೋಷ್ಠಿಯಲ್ಲಿ ಪ್ರಧಾನ ಜಿಲ್ಲಾ ಮತ್ತು ಸೆಷನ್ಸ್‌ ನ್ಯಾಯಾಧೀಶ ಜಿ. ಬಸವರಾಜ ಅವರು ಮಾತನಾಡಿದರು. ಜಿಲ್ಲಾ ವಕೀಲರ ಸಂಘದ ಪ್ರಧಾನ ಕಾರ್ಯದರ್ಶಿ ಅರುಣ್‌ ಕುಮಾರ್‌, ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರ ಸದಸ್ಯ ಕಾರ್ಯದರ್ಶಿ ಸಿ.ಜಿ. ವಿಶಾಲಾಕ್ಷಿ ಮತ್ತು ಜಿಲ್ಲಾ ವಕೀಲರ ಸಂಘದ ಅಧ್ಯಕ್ಷ ಉಮ್ಮತ್ತೂರು ಇಂದುಶೇಖರ್‌ ಇದ್ದರು 

ಚಾಮರಾಜನಗರ: ಜಿಲ್ಲೆಯ ವಿವಿಧ ನ್ಯಾಯಾಲಯಗಳಲ್ಲಿ 8,909 ಸಿವಿಲ್ ಮತ್ತು 8,368 ಕ್ರಿಮಿನಲ್ ಪ‍್ರಕರಣಗಳು (ಮೇ ತಿಂಗಳವರೆಗೆ) ಇತ್ಯರ್ಥಕ್ಕೆ ಬಾಕಿ ಇವೆ ಎಂದು ಪ್ರಧಾನ ಜಿಲ್ಲಾ ಮತ್ತು ಸೆಷನ್ಸ್‌ ನ್ಯಾಯಧೀಶ ಜಿ. ಬಸವರಾಜ ಅವರು ಇಲ್ಲಿ ಶನಿವಾರ ಹೇಳಿದರು.

ಜುಲೈ 14ರಂದು ನಡೆಯಲಿರುವ ರಾಷ್ಟ್ರೀಯ ಲೋಕ ಅದಾಲತ್‌ ಕುರಿತಂತೆ ವಿವರ ನೀಡಲು ಕರೆದಿದ್ದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಕಳೆದ ಲೋಕ ಅದಾಲತ್‌ನಲ್ಲಿ 187 ಸಿವಿಲ್‌ ಮತ್ತು ಕ್ರಿಮಿನಲ್‌ ಪ್ರಕರಣಗಳು ಹಾಗೂ ಸುಮಾರು 60ರಷ್ಟು ವ್ಯಾಜ್ಯ ಪೂರ್ವ ಪ್ರಕರಣಗಳನ್ನು ಇತ್ಯರ್ಥ ಪಡಿಸಲಾಗಿದೆ ಎಂದು ಹೇಳಿದರು.

‘ಚಾಮರಾಜನಗರ, ಗುಂಡ್ಲುಪೇಟೆ, ಯಳಂದೂರು ಮತ್ತು ಕೊಳ್ಳೇಗಾಲದ ನ್ಯಾಯಾಲಯಗಳ ಆವರಣದಲ್ಲಿ ಜುಲೈ 14ರಂದು ಲೋಕ ಅದಾಲತ್‌ ನಡೆಯಲಿದ್ದು, 10 ಬೈಠಕ್‌ಗಳಿಗೆ ಸಂಧಾನಕಾರರನ್ನು ನೇಮಿಸುವ ಮೂಲಕ ಅದಾಲತ್‌ ನಡೆಸಲಾಗುವುದು’ ಎಂದು ಅವರು ಹೇಳಿದರು.

‘ಸಾರ್ವಜನಿಕ ಹಿತಾಸಕ್ತಿ ಪ್ರಕರಣಗಳನ್ನು ಬಿಟ್ಟು, ಇತರ ಯಾವುದೇ ಸಿವಿಲ್‌ ಪ್ರಕರಣಗಳು (ದಾಂಪತ್ಯ ಜೀವನಕ್ಕೆ ಸಂಬಂಧಿಸಿದ ದಾಂಪತ್ಯ ಹಕ್ಕುಗಳ ಪುನರ್‌ ಸ್ಥಾಪನೆ, ಜೀವನಾಂಶ, ಮಕ್ಕಳ ರಕ್ಷಣೆಗೆ ಸಂಬಂಧಿಸಿದ ಎಲ್ಲ ಪ್ರಕರಣಗಳು), ಮೋಟಾರ್‌ ವಾಹನ ಅಪಘಾತಕ್ಕೆ ಸಂಬಂಧಿಸಿದ ಪ್ರಕರಣಗಳು, ‌ಕೈಗಾರಿಕಾ ವಿವಾದ ಕಾಯ್ದೆ ಅಡಿಯಲ್ಲಿರುವ ಪ್ರಕರಣಗಳು ಮತ್ತು ಇತರ ಎಲ್ಲ ಸ್ವರೂಪದ ಪ್ರರಕಣಗಳು, ದಂಡ ಕ್ರಿಯಾ ಸಂಹಿತೆ (ಐಪಿಸಿ) ಸೆಕ್ಷನ್‌ 320 (1) ಮತ್ತು 320 (2)ರ ಅಡಿಯಲ್ಲಿ ರಾಜಿ ಮಾಡಿಕೊಳ್ಳಬಹುದಾದ ಎಲ್ಲ ಅಪರಾಧಗಳು, ಚೆಕ್‌ ಬೌನ್ಸ್‌ ಪ್ರಕರಣಗಳು, ಕಾರ್ಮಿಕ ಕಾಯ್ದೆ ಅಡಿಯಲ್ಲಿ ಬರುವ ಪ್ರಕರಣಗಳು, ಅಕ್ರಮ ಕಲ್ಲು, ಮರಳು ಸಾಗಣೆಗೆ ಸಂಬಂಧಿಸಿದ ಪ್ರಕರಣಗಳು ಹಾಗೂ ಇತರ ಯಾವುದೇ ಅಪರಾಧ ಸ್ವರೂಪದ, ರಾಜಿ ಮಾಡಿಕೊಳ್ಳಬಹುದಾದ ಅಪರಾಧಗಳನ್ನು ಲೋಕ ಅದಾಲತ್‌ನಲ್ಲಿ ರಾಜಿ ಮಾಡಿಕೊಳ್ಳಬಹುದು’ ಎಂದು ಅವರು ಹೇಳಿದರು.

‘ನ್ಯಾಯಾಲಯದಲ್ಲಿ ಇತ್ಯರ್ಥಕ್ಕೆ ಬಾಕಿ ಇರುವ ಯಾವುದೇ ಪ್ರಕರಣಗಳ ಬಗ್ಗೆ ಸಂಬಂಧಿಸಿದ ಅರ್ಜಿದಾರರು, ಪ್ರಕರಣಗಳನ್ನು ಲೋಕ ಅದಾಲತ್‌ಗೆ ಕಳುಹಿಸಿಕೊಡಿ ಎಂದು ಮನವಿ ಮಾಡಿದಲ್ಲಿ, ಪ್ರಕರಣಗಳನ್ನು ಸಂಬಂಧ ಪಟ್ಟ ಲೋಕ ಅದಾಲತ್‌ನ ಸಂಧಾನಕಾರರಿಗೆ ಕಳುಹಿಸಲಾಗುತ್ತದೆ. ಸಂಧಾನಕಾರರು ಎರಡೂ ಕಡೆಯವರ ಸಮಸ್ಯೆಗಳನ್ನು ಆಲಿಸಿ, ಅವರ ಮನವೊಲಿಸಿ ರಾಜಿ ಮಾಡಲು ಪ್ರಯತ್ನಿಸುತ್ತಾರೆ. ರಾಜಿ ಸಂಧಾನ ಏರ್ಪಟ್ಟರೆ, ಅದರ ಅನುಸಾರ ತೀರ್ಪು ನೀಡುತ್ತಾರೆ’ ಎಂದು ನ್ಯಾಯಾಧೀಶರು ವಿವರಿಸಿದರು.

‘ವ್ಯಾಜ್ಯಪೂರ್ವ ಪ್ರಕರಣಗಳಿಗೂ ಅವಕಾಶ’

‘ಲೋಕ ಅದಾಲತ್‌ನಲ್ಲಿ ವ್ಯಾಜ್ಯಪೂರ್ವ ಪ್ರಕರಣಗಳನ್ನು ವಕೀಲರ ನೆರವಿಲ್ಲದೇ ಇತ್ಯರ್ಥ ಪಡಿಸಬಹುದಾಗಿದೆ. ಯಾವುದೇ ಶುಲ್ಕ ಭರಿಸದೇ ಇಂತಹ ಪ್ರಕರಣಗಳನ್ನು ವಿಲೇವಾರಿ ಮಾಡಬಹುದು’ ಎಂದು ಬಸವರಾಜ ಅವರು ತಿಳಿಸಿದರು. ಯಾವುದೇ ವ್ಯಾಜ್ಯ ಮತ್ತು ವ್ಯಾಜ್ಯಪೂರ್ವ ಪ್ರಕರಣಗಳಲ್ಲಿ ಅರ್ಜಿದಾರರು ಪರಿಶಿಷ್ಟ ಜಾತಿ, ಪರಿಶಿಷ್ಟ ವರ್ಗಕ್ಕೆ ಸೇರಿದಲ್ಲಿ, ಮಹಿಳೆಯರಾಗಿದ್ದಲ್ಲಿ, ಅಂಗವಿಕಲರಾಗಿದ್ದಲ್ಲಿ, ಕಾರ್ಮಿಕರಾಗಿದ್ದಲ್ಲಿ ಅವರು ಕಾನೂನು ಸೇವಾ ಪ್ರಾಧಿಕಾರದ ಸಂಪರ್ಕಿಸಿದಲ್ಲಿ ಅವರಿಗೆ ಉಚಿತವಾಗಿ ವಕೀಲರನ್ನು ನೇಮಕ ಮಾಡಿ, ಅವರಿಗೆ ಸೂಕ್ತ ಪರಿಹಾರ ಪಡೆಯಲು ಅವಕಾಶ ಕಲ್ಪಿಸಲಾಗುತ್ತದೆ. ಅಲ್ಲದೇ ₹ 1 ಲಕ್ಷಕ್ಕಿಂತ ಕಡಿಮೆ ಆದಾಯ ಹೊಂದಿರುವ ಯಾವುದೇ ಜಾತಿಗೆ ಸೇರಿದ ವರ್ಗದವರಿಗೆ ಉಚಿತ ಕಾನೂನು ಸೇವೆ ಮತ್ತು ವಕೀಲರ ನೇಮಕ ಮತ್ತು ಅಗತ್ಯವಿದ್ದಲ್ಲಿ ನ್ಯಾಯಾಲಯ ಶುಲ್ಕ ಪಾವತಿಸಿ ಅವರ ಸಮಸ್ಯೆಗಳಿಗೆ ಕಾನೂನಿನಲ್ಲಿ ಪರಿಹಾರ ಕೊಡಿಸಲಾಗುತ್ತದೆ ಎಂದು ಅವರು ಮಾಹಿತಿ ನೀಡಿದರು.

ಲೋಕ ಅದಾಲತ್‌ನ ಅನುಕೂಲಗಳು

* ಲೋಕ ಅದಾಲತ್‌ನಲ್ಲಿ ರಾಜಿ ಸಂಧಾನದ ಮೂಲಕ ತೀರ್ಮಾನಿಸಿ ನೀಡಿದ ತೀರ್ಪು ಅಂತಿಮ ಆಗಿರುತ್ತದೆ. ಅದರ ವಿರುದ್ಧ ಮೇಲ್ಮನವಿ ಸಲ್ಲಿಸಲು ಅವಕಾಶ ಇರುವುದಿಲ್ಲ.

* ಇಲ್ಲಿ ಪ್ರಕರಣಗಳನ್ನು ಇತ್ಯರ್ಥಪಡಿಸಿಕೊಂಡರೆ, ಅರ್ಜಿದಾರರು ಸಂದಾಯ ಮಾಡಿದ ನ್ಯಾಯಾಲಯದ ಶುಲ್ಕದಲ್ಲಿ ಶೇ 75ರಷ್ಟನ್ನು ವಾಪಸ್‌ ನೀಡಲಾಗುತ್ತದೆ.

* ಲೋಕ ಅದಾಲತ್‌ನ ತೀರ್ಪಿನ ವಿರುದ್ಧ ಮೇಲ್ಮನವಿ ಸಲ್ಲಿಸಲು ಅವಕಾಶ ಇಲ್ಲದೇ ಇರುವುದರಿಂದ ಪ್ರಕರಣ ಅಂತಿಮ ಘಟ್ಟ ತಲುಪಿ ಮುಂದೆ ವಂಶಪಾರಂಪರ್ಯವಾಗಿ ವ್ಯಾಜ್ಯ ಮುಂದುವರಿಯುವುದಕ್ಕೆ ತಡೆ ಬೀಳುತ್ತದೆ. ಇದರಿಂದ ಕುಟುಂಬಗಳ ನಡುವೆ ಸಾಮರಸ್ಯ ಉಂಟಾಗುತ್ತದೆ.

* ಪ್ರಕರಣಗಳ ಇತ್ಯರ್ಥ ವಿಳಂಬ ಆಗುವುದನ್ನು ತಪ್ಪಿಸಬಹುದು

 

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !