ಸೋಮವಾರ, ಸೆಪ್ಟೆಂಬರ್ 27, 2021
23 °C
ಮತ ಎಣಿಕೆಗೆ ಇನ್ನು ಎಂಟು ದಿನಗಳು ಮಾತ್ರ

ಲೋಕಸಭಾ ಚುನಾವಣೆ: ಗೆಲುವು ಯಾರಿಗೆ: ಹೆಚ್ಚಿದ ಕುತೂಹಲ, ಮುಖಂಡರಲ್ಲಿ ತಳಮಳ

ಸೂರ್ಯನಾರಾಯಣ ವಿ. Updated:

ಅಕ್ಷರ ಗಾತ್ರ : | |

Prajavani

ಚಾಮರಾಜನಗರ: ಚಾಮರಾಜನಗರ ಲೋಕಸಭಾ ಕ್ಷೇತ್ರಕ್ಕೆ ಏಪ್ರಿಲ್‌ 18ರಂದು ನಡೆದಿದ್ದ ಚುನಾವಣೆಯ ಮತ ಎಣಿಕೆ ಕಾರ್ಯಕ್ಕೆ ದಿನಗಣನೆಗೆ ಆರಂಭವಾಗಿದೆ. ಏಪ‍್ರಿಲ್‌ 23ರಂದು ಫಲಿತಾಂಶ ಹೊರಬೀಳಲಿದ್ದು, ವಿಜಯಲಕ್ಷ್ಮಿ ಯಾರಿಗೆ ಒಲಿಯಲಿದ್ದಾಳೆ ಎಂಬ ಕುತೂಹಲ ಜನರಲ್ಲಿ ಮನೆ ಮಾಡಿದೆ.

ಫಲಿತಾಂಶದ ನಿರೀಕ್ಷೆಯಲ್ಲಿರುವ ರಾಜಕೀಯ ಪಕ್ಷಗಳ, ಅದರಲ್ಲೂ ಕಾಂಗ್ರೆಸ್‌ ಮತ್ತು ಬಿಜೆಪಿ ಮುಖಂಡರಲ್ಲಿ ತಳಮಳ ಆರಂಭವಾಗಿದೆ.

ಕಣದಲ್ಲಿ 10 ಅಭ್ಯರ್ಥಿಗಳು ಇದ್ದರೂ ಕಾಂಗ್ರೆಸ್‌ನ ಆರ್‌.ಧ್ರುವನಾರಾಯಣ ಮತ್ತು ಬಿಜೆಪಿಯ ವಿ.ಶ್ರೀನಿವಾಸ ಪ್ರಸಾದ್‌ ನಡುವೆ ಸಮಬಲದ ಸ್ಪರ್ಧೆ ನಡೆದಿದೆ ಎಂದು ಹೇಳಲಾಗುತ್ತಿದೆ.

ಬಹುಜನ ಸಮಾಜ ಪಕ್ಷದಿಂದ ಡಾ.ಶಿವಕುಮಾರ್‌ ಸ್ಪರ್ಧಿಸಿದ್ದರೂ ಕಾಂಗ್ರೆಸ್‌ ಮತ್ತು ಬಿಜೆಪಿಯ ಅಭ್ಯರ್ಥಿಗಳಿಗೆ ನಿರೀಕ್ಷಿತ ಮಟ್ಟದಲ್ಲಿ ಪೈಪೋಟಿ ನೀಡುವಲ್ಲಿ ಅವರು ಯಶ ಕಂಡಿಲ್ಲ ಎನ್ನಲಾಗುತ್ತಿದೆ. ಮತದಾನದ ನಂತರ ಬಿಎಸ್‌ಪಿ ವಿವಿಧ ವಿಧಾನಸಭಾ ಕ್ಷೇತ್ರಗಳಲ್ಲಿ ಹಮ್ಮಿಕೊಂಡಿದ್ದ ಕೃತಜ್ಞತಾ ಸಭೆಗಳಲ್ಲಿ ಅದರ ಮುಖಂಡರು ನೀಡಿರುವ ಹೇಳಿಕೆಗಳನ್ನು ಗಮನಿಸಿದರೆ, ಫಲಿತಾಂಶಕ್ಕೆ ಮೊದಲು ಸೋಲೊಪ್ಪಿಕೊಂಡಂತೆಯೇ ಕಾಣುತ್ತದೆ.

ಬಿರುಸಿನ ಚರ್ಚೆ: ಮತ ಎಣಿಕೆಯ ದಿನ ಸಮೀಪಿಸುತ್ತಿದ್ದಂತೆಯೇ ಜನಸಾಮಾನ್ಯರ ನಡುವೆ ಫಲಿತಾಂಶದ ಬಗ್ಗೆ ಬಿರುಸಿನ ಚರ್ಚೆ ಆರಂಭಗೊಂಡಿದೆ. ಆರ್‌.ಧ್ರುವನಾರಾಯಣ ಗೆಲ್ಲುತ್ತಾರೆಯೇ ಅಥವಾ ವಿ.ಶ್ರೀನಿವಾಸ ಪ್ರಸಾದ್‌ ಅವರಿಗೆ ಮತದಾರ ಒಲಿದಿದ್ದಾನೆಯೇ ಎಂಬ ಬಗ್ಗೆಯೇ ಚರ್ಚೆ ನಡೆಯುತ್ತಿದೆ. 

ಯಾವ ಜಾತಿ‌ಯ ಮತದಾರರು ಯಾರ ಮೇಲೆ ಹೆಚ್ಚು ಒಲವು ತೋರಿರಬಹುದು? ಮತಗಳ ವಿಭಜನೆಯಾಗಿವೆಯೇ? ಯಾವ ವಿಧಾನಸಭಾ ಕ್ಷೇತ್ರದಲ್ಲಿ ಯಾರು ಮುನ್ನಡೆ ಕಾಯ್ದುಕೊಳ್ಳಬಹುದು ಎಂಬ ಪ್ರಶ್ನೆಗಳಿಗೆ ಉತ್ತರ ಕಂಡುಕೊಳ್ಳಲು ಜನರು ಯತ್ನಿಸುತ್ತಿದ್ದಾರೆ.

ಮುಖಂಡರ ಲೆಕ್ಕಾಚಾರ

ಕಾಂಗ್ರೆಸ್‌ ಮತ್ತು ಬಿಜೆಪಿ ಮುಖಂಡರು ಕೂಡ ಲೆಕ್ಕಾಚಾರದಲ್ಲಿ ತೊಡಗಿದ್ದಾರೆ. ಸುಲಭದಲ್ಲಿ ಗೆಲುವು ಪಡೆಯುವ ನಿರೀಕ್ಷೆಯಲ್ಲಿದ್ದ ಕಾಂಗ್ರೆಸ್‌ಗೆ ವಿ.ಶ್ರೀನಿವಾಸ ಪ್ರಸಾದ್‌ ಅವರು ಪ್ರಬಲ ಪೈಪೋಟಿ ನೀಡಿದ್ದಾರೆ ಎಂಬುದನ್ನು ಸ್ಥಳೀಯ ಮುಖಂಡರು ಒಪ್ಪಿಕೊಳ್ಳುತ್ತಾರೆ. 

ಚಾಮರಾಜನಗರ ಲೋಕಸಭಾ ಕ್ಷೇತ್ರದ ಎಂಟು ವಿಧಾನಸಭಾ ಕ್ಷೇತ್ರಗಳ ಪೈಕಿ ಎಲ್ಲೆಲ್ಲಿ ಪಕ್ಷದ ಅಭ್ಯರ್ಥಿ ಧ್ರುವನಾರಾಯಣ ಅವರು ಮುನ್ನಡೆ ಸಾಧಿಸಬಹುದು?, ಎಲ್ಲಿ ಹಿನ್ನಡೆಯಾಗಬಹುದು ಯಾವ ಸಮುದಾಯದರು ಯಾರನ್ನು ಹೆಚ್ಚು ಬೆಂಬಲಿಸಿದ್ದಾರೆ ಎಂಬುದರ ಬಗ್ಗೆ ಪಕ್ಷದ ಆಂತರಿಕ ವಲಯದಲ್ಲಿ ಚರ್ಚೆ ನಡೆಯುತ್ತಿದೆ.

ಹೋದ ವರ್ಷ 1.41 ಲಕ್ಷ ಮತಗಳ ಅಂತರದಿಂದ ಧ್ರುವನಾರಾಯಣ ಅವರು ಗೆದ್ದಿದ್ದರು. ಈ ಬಾರಿ ಮತ್ತೆ ಅವರೇ ಗೆಲ್ಲುತ್ತಾರೆ ಎಂದು ಮುಖಂಡರು ದೃಢವಿಶ್ವಾಸದಿಂದ ಹೇಳುತ್ತರಾದರೂ ಗೆಲುವಿನ ಅಂತರ ತೀರಾ ಕಡಿಮೆ ಇರಬಹುದು ಎಂದು ಅಭಿಪ್ರಾಯಪಡುತ್ತಾರೆ. ಅವರ ಪ್ರಕಾರ, ಎಂಟು ವಿಧಾನಸಭಾ ಕ್ಷೇತ್ರಗಳ ಪೈಕಿ ಐದು (ಎಚ್‌.ಡಿ.ಕೋಟೆ, ವರುಣಾ, ತಿ.ನರಸೀಪುರ ಮತ್ತು ಹನೂರು) ಕ್ಷೇತ್ರಗಳಲ್ಲಿ ಧ್ರುವನಾರಾಯಣ ಅವರಿಗೆ ಮುನ್ನಡೆ ಸಿಗಲಿದೆ; ಚಾಮರಾಜನಗರ, ಕೊಳ್ಳೇಗಾಲ ಮತ್ತು ನಂಜನಗೂಡು ಕ್ಷೇತ್ರಗಳಲ್ಲಿ ಸಮಬಲ ಇದೆ.

ಇತ್ತ, ಬಿಜೆಪಿ ಮುಖಂಡರು ಕೂಡ ಗೆಲುವಿನ ವಿಶ್ವಾಸದಲ್ಲಿದ್ದಾರೆ. ಶ್ರೀನಿವಾಸ ಪ್ರಸಾದ್‌ ಅವರನ್ನು ಕಣಕ್ಕಿಳಿಸಿರುವುದರಿಂದ ಪಕ್ಷ ಗೆಲ್ಲುವ ಎಲ್ಲ ಅವಕಾಶಗಳೂ ಇವೆ ಎಂಬುದು ಅವರ ಪ್ರತಿಪಾದನೆ. ಈ ಬಾರಿ ಹೆಚ್ಚು ಪ್ರಮಾಣದಲ್ಲಿ ಮತದಾನ ನಡೆದಿರುವುದು ಪಕ್ಷಕ್ಕೆ ಅನುಕೂಲವಾಗಲಿದೆ ಎಂಬ ನಂ‌ಬಿಕೆಯಲ್ಲಿ ಅವರಿದ್ದಾರೆ.

ಐದು ವಿಧಾನಸಭಾ ಕ್ಷೇತ್ರಗಳಲ್ಲಿ (ಗುಂಡ್ಲುಪೇಟೆ, ಚಾಮರಾಜನಗರ, ಕೊಳ್ಳೇಗಾಲ, ನಂಜನಗೂಡು ಮತ್ತು ಎಚ್‌.ಡಿ.ಕೋಟೆ) ಶ್ರೀನಿವಾಸ ಪ್ರಸಾದ್‌ ಅವರಿಗೆ ಮುನ್ನಡೆ ಸಿಗುತ್ತದೆ ಎಂದು ಬಿಜೆಪಿ ನಾಯಕರು ಖಾಸಗಿಯಾಗಿ ಹೇಳುತ್ತಾರೆ. ಹನೂರು, ವರುಣಾ ಮತ್ತು ತಿ.ನರಸೀಪುರದಲ್ಲಿ ಕಾಂಗ್ರೆಸ್‌ ಅಭ್ಯರ್ಥಿ ಸ್ವಲ್ಪ ಮುನ್ನಡೆ ಗಳಿಸಬಹುದು ಎಂಬುದು ಅವರ ಲೆಕ್ಕಾಚಾರ. ಮೋದಿ ಅಲೆ, ಯಡಿಯೂರಪ್ಪ ವರ್ಚಸ್ಸು ಮತ್ತು ಶ್ರೀನಿವಾಸ ಪ್ರಸಾದ್‌ ಅವರ ರಾಜಕೀಯ ಅನುಭವ ಚುನಾವಣೆಯಲ್ಲಿ ಪಕ್ಷಕ್ಕೆ ನೆರವಾಗಿದೆ ಎಂದು ಅವರು ದೃಢವಾಗಿ ನಂಬಿದ್ದಾರೆ.

ಯಾರಿಗೆ ಬಿದ್ದಿವೆ ಜೆಡಿಎಸ್‌ ಮತಗಳು?

ಹನೂರು, ತಿ.ನರಸೀಪುರ ಮತ್ತು ಎಚ್‌.ಡಿ.ಕೋಟೆಯಲ್ಲಿ ಮೈತ್ರಿ ಧರ್ಮ ಪಾಲನೆಯಾಗಿಲ್ಲ ಎಂಬ ಮಾತುಗಳು ಕೇಳಿ ಬಂದಿವೆ. ಜೆಡಿಎಸ್‌ ಶಾಸಕರನ್ನು ಹೊಂದಿರುವ ತಿ.ನರಸೀಪುರ ಹಾಗೂ ಜೆಡಿಎಸ್‌ ಪ್ರಾಬಲ್ಯವಿರುವ ಎಚ್‌.ಡಿ.ಕೋಟೆಯಲ್ಲಿ ಅದರ ಬೆಂಬಲಿಗರ ಎಲ್ಲ ಮತಗಳು ಧ್ರುವನಾರಾಯಣ ಅವರಿಗೆ ಬಿದ್ದಿಲ್ಲ ಎಂದು ಕಾಂಗ್ರೆಸ್‌ ಮುಖಂಡರು ಹೇಳುತ್ತಿದ್ದಾರೆ. ತಿ.ನರಸೀಪುರದಲ್ಲಿ ಪಕ್ಷದಿಂದಲೇ ಒಳ ಏಟು ಬಿದ್ದಿರುವ ಗುಮಾನಿಯನ್ನೂ ಅವರು ವ್ಯಕ್ತಪಡಿಸಿದ್ದಾರೆ.

ಹನೂರಿನಲ್ಲಿ ಜೆಡಿಎಸ್‌ ಮತಗಳು ಬಿದ್ದಿವೆ ಎಂದು ಮುಖಂಡರು ಹೇಳಿದರೂ ಎಲ್ಲರೂ ಕಾಂಗ್ರೆಸ್‌ ಬೆಂಬಲಿಸಿರುವ ಬಗ್ಗೆ ಶಂಕೆ ವ್ಯಕ್ತಪಡಿಸುತ್ತಿದ್ದಾರೆ. ಬಿಜೆಪಿಯನ್ನು ಬೆಂಬಲಿಸುವ ಕುರಿತಾಗಿ ಜೆಡಿಎಸ್ ಕಾರ್ಯಕರ್ತ ಎನ್ನಲಾದ ವ್ಯಕ್ತಿ ಹಾಗೂ ಮತದಾರರೊಬ್ಬರ ನಡುವಿನ ಸಂಭಾಷಣೆಯ ಆಡಿಯೊ ತುಣುಕೊಂದು ಚುನಾವಣೆ ಬಳಿಕ ವಾಟ್ಸ್‌ಆ್ಯಪ್‌ಗಳಲ್ಲಿ ಹರಿದಾಡಿದ್ದು ಕಾಂಗ್ರೆಸ್‌ ಮುಖಂಡರ ಶಂಕೆಗೆ ಕಾರಣ.

ಮೈಸೂರು ಭಾಗದ ಕೆಲವು ಜೆಡಿಎಸ್‌ ನಾಯಕರು ಪಕ್ಷದ ಪರವಾಗಿ ಕೆಲಸ ಮಾಡಿದ್ದಾರೆ ಎಂದು ಬಿಜೆಪಿ ನಾಯಕರು ಖಾಸಗಿಯಾಗಿ ಹೇಳುತ್ತಿದ್ದಾರೆ. ಇದು ಪಕ್ಷಕ್ಕೆ ನೆರವಾಗಲಿದೆ ಎಂಬುದು ಅವರ ಅಭಿಪ್ರಾಯ. 23ರಂದು ಎಲ್ಲವೂ ಸ್ಪಷ್ಟವಾಗಲಿದೆ.  

 

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು