ಸೋಮವಾರ, ಆಗಸ್ಟ್ 3, 2020
24 °C
ಚಂಚಲೆಯಾಗಿದ್ದ ವಿಜಯಲಕ್ಷ್ಮಿ, ಕೊನೆ ಹಂತದಲ್ಲಿ ಶ್ರೀನಿವಾಸ್‌ ಪ್ರಸಾದ್‌ಗೆ ಒಲಿದಳು

ಚಾಮರಾಜನಗರ: ಮೊದಲ ಬಾರಿಗೆ ಅರಳಿದ ‘ಕಮಲ’

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಚಾಮರಾಜನಗರ: ಕಾಂಗ್ರೆಸ್‌ ಮತ್ತು ಬಿಜೆಪಿ ನಡುವೆ ಜಿದ್ದಾಜಿದ್ದಿನ ಕದನಕ್ಕೆ ಸಾಕ್ಷಿಯಾಗಿದ್ದ ಚಾಮರಾಜನಗರ ಮೀಸಲು ಲೋಕಸಭಾ ಕ್ಷೇತ್ರದಲ್ಲಿ ಬಿಜೆಪಿ ರೋಚಕ ಜಯ ಸಾಧಿಸಿದೆ. ಆ ಮೂಲಕ ಕಾಂಗ್ರೆಸ್‌ನ ‘ಭದ್ರಕೋಟೆ’ ಎಂದೇ ದಶಕಗಳಿಂದ ಗುರುತಿಸಿಕೊಂಡಿದ್ದ ಕ್ಷೇತ್ರದಲ್ಲಿ ಮೊದಲ ಬಾರಿಗೆ ಕಮಲ ಅರಳಿದೆ.

ಅನುಭವಿ ರಾಜಕಾರಣಿ ವಿ.ಶ್ರೀನಿವಾಸ ಪ್ರಸಾದ್‌ ಅವರು ಒಂದು ಕಾಲದ ತಮ್ಮ ಒಡನಾಡಿ ಕಾಂಗ್ರೆಸ್‌ನ ಆರ್‌. ಧ್ರುವನಾರಾಯಣ ಅವರನ್ನು ಕೇವಲ 1,817 ಮತಗಳ ಅಂತರದಿಂದ ಸೋಲಿಸಿ ಗೆಲುವಿನ ನಗೆ ಬೀರಿದ್ದಾರೆ. ಮಧ್ಯಾಹ್ನ 3 ಗಂಟೆವರೆಗೂ ಗೆದ್ದೇ ಗೆಲ್ಲುತ್ತೇವೆ ಎಂಬ ವಿಶ್ವಾಸದಲ್ಲಿದ್ದ ಕಾಂಗ್ರೆಸ್‌ ಮುಖಂಡರು ಇಳಿ ಸಂಜೆಯಾಗುತ್ತಿದ್ದಂತೆಯೇ ಸೋಲೊಪ್ಪಿಕೊಂಡರು. 

ಮೊದಲ ಜಯ: ಚಾಮರಾಜನಗರ ಕ್ಷೇತ್ರದಲ್ಲಿ ಬಿಜೆಪಿಗೆ ಇದು ಮೊದಲ ಜಯ. 1962ರಲ್ಲಿ ಮೀಸಲು ಲೋಕಸಭಾ ಕ್ಷೇತ್ರವಾಗಿ ಗುರುತಿಸಿಕೊಂಡಿದ್ದ ಚಾಮರಾಜನಗರ ನಗರ ಲೋಕಸಭಾ ಕ್ಷೇತ್ರ ಕಾಂಗ್ರೆಸ್‌ ಭದ್ರಕೋಟೆ ಎಂದೇ ಪರಿಗಣಿತವಾಗಿದೆ. ಇದುವರೆಗೆ ಬಿಜೆಪಿ ಇಲ್ಲಿ ಖಾತೆ ತೆರೆದಿರಲಿಲ್ಲ. 1991ರಲ್ಲಿ ಮೊದಲ ಬಾರಿಗೆ ಬಿಜೆಪಿ ಇಲ್ಲಿ ಸ್ಪರ್ಧಿಸಿತ್ತು. 1999ರಲ್ಲಿ ಲೋಕಶಕ್ತಿಯಿಂದ ಸ್ಪರ್ಧಿಸಿದ್ದ ವಿ.ಶ್ರೀನಿವಾಸ ಪ್ರಸಾದ್‌ ಅವರಿಗೆ ಬಿಜೆಪಿ ಬೆಂಬಲ ನೀಡಿತ್ತು. 2004ರಲ್ಲಿ ಅದು ಮತ್ತೆ ಜೆಡಿಯುಗೆ ಕ್ಷೇತ್ರ ಬಿಟ್ಟಿಕೊಟ್ಟಿತ್ತು.

2009 ಮತ್ತು 2014ರಲ್ಲಿ ಎ.ಆರ್.ಕೃಷ್ಣಮೂರ್ತಿ ಅವರು ಬಿಜೆಪಿ ಅಭ್ಯರ್ಥಿಯಾಗಿದ್ದರು. ಎರಡೂ ಬಾರಿಯೂ ಧ್ರುವನಾರಾಯಣ ಅವರ ವಿರುದ್ಧ ಸೋಲು ಕಂಡಿದ್ದರು. ಮೊದಲ ಬಾರಿ ಕೇವಲ 4,002 ಮತಗಳಿಂದ ಸೋತಿದ್ದರೆ, 2014ರಲ್ಲಿ
1.41 ಲಕ್ಷ ಅಂತರಗಳಿಂದ ಮಂಡಿಯೂರಿದ್ದರು.

ಕೊನೆ ಕ್ಷಣದ ಅಭ್ಯರ್ಥಿ:  1999ರ ನಂತರ ಲೋಕಸಭಾ ಚುನಾವಣೆಗೆ ಸ್ಪರ್ಧಿಸದೆ ರಾಜ್ಯ ರಾಜಕಾರಣದಲ್ಲಿದ್ದ ಶ್ರೀನಿವಾಸ ಪ್ರಸಾದ್‌ ಕಾಂಗ್ರೆಸ್‌ನಿಂದ ಹೊರಬಂದು ಬಿಜೆಪಿಗೆ ಸೇರಿದ ಬಳಿಕ 2017ರಲ್ಲಿ ನಡೆದಿದ್ದ ನಂಜನಗೂಡು ವಿಧಾನಸಭಾ ಉಪಚುನಾವಣೆಯಲ್ಲಿ ಸೋತ ನಂತರ ಚುನಾವಣಾ ರಾಜಕೀಯದಿಂದ ಹಿಂದೆ ಸರಿದಿದ್ದರು. ಇನ್ನು ಮುಂದೆ ಚುನಾವಣೆಗೆ ಸ್ಪರ್ಧಿಸುವುದಿಲ್ಲ ಎಂದೂ ಹೇಳಿದ್ದರು. ಆದರೆ, ಕೊನೆ ಕ್ಷಣದಲ್ಲಿ ಮುಖಂಡರ ಒತ್ತಾಯಕ್ಕೆ ಮಣಿದು ಸ್ಪರ್ಧಿಸಲು ತೀರ್ಮಾನಿಸಿದ್ದರು. 

ದಡ ಸೇರಿಸಿದ ಮೋದಿ ಅಲೆ: ಶ್ರೀನಿವಾಸ್‌ ಪ್ರಸಾದ್‌ ಅವರು ಪ್ರಧಾನಿ ಮೋದಿ ಅವರ ಅಲೆ, ಬಿಜೆಪಿ ರಾಜ್ಯ ಘಟಕದ ಅಧ್ಯಕ್ಷ ಬಿ.ಎಸ್‌.ಯಡಿಯೂರಪ್ಪ ಅವರ ವರ್ಚಸ್ಸು ಹಾಗೂ ತಮ್ಮ ರಾಜಕೀಯ ಅನುಭವವನ್ನು ನಂಬಿದ್ದರು.  ಕಾಂಗ್ರೆಸ್‌ಗೆ ಹೋಲಿಸಿದರೆ ಹೆಚ್ಚು ಪ್ರಚಾರವನ್ನೂ ಮಾಡದಿದ್ದ ಅವರು, ಕಡಿಮೆ ಮತಗಳ ಅಂತರದಿಂದ ಗೆಲುವಿನ ದಡ ಸೇರಿದ್ದಾರೆ. ಕಾಂಗ್ರೆಸ್‌ನ ಮತಬ್ಯಾಂಕ್‌ ಎಂದೇ ಪರಿಗಣಿತವಾಗಿದ್ದ ದಲಿತ ಮತಗಳನ್ನು ಬಿಜೆಪಿಗೆ ಸೆಳೆಯಲು ಅವರು ಯಶಸ್ವಿಯಾಗಿದ್ದಾರೆ.

ಕೊನೆ ಕ್ಷಣದಲ್ಲಿ ವಿಜಯಮಾಲೆ

22 ಸುತ್ತುಗಳಲ್ಲಿ ನಡೆದ ಮತ ಎಣಿಕೆಗಳ ಪೈಕಿ 19 ಸುತ್ತಿನವರೆಗೂ ಕಾಂಗ್ರೆಸ್‌ನ ಆರ್‌.ಧ್ರುವನಾರಾಯಣ ಅವರೇ ಮುನ್ನಡೆ ಸಾಧಿಸಿದ್ದರು. ಏಳನೇ ಸುತ್ತು ಮುಗಿಯುವ ಸಂದರ್ಭದಲ್ಲಿ 13 ಸಾವಿರ ಮತಗಳ ಮುನ್ನಡೆಯನ್ನು ಅವರು ಪಡೆದಿದ್ದರು. ನಂತರ ಸುತ್ತಿನಲ್ಲಿ ಮುನ್ನಡೆಯ ಅಂತರ ಕಡಿಮೆಯಾಗುತ್ತಾ ಬಂತು. 15ನೇ ಸುತ್ತಿಗೆ ಆಗುವಾಗ ಅದು 5,500–6,000 ‌ಮತಗಳ ಅಂತರಕ್ಕೆ ಬಂದು ನಿಂತಿತು. ನಂತರದ ಎರಡು ಮೂರು ಸುತ್ತುಗಳಲ್ಲಿ ಮೂರು ಸಾವಿರ ಮತಗಳ ಅಂತರಕ್ಕೆ ಇಳಿದ ಮುನ್ನಡೆ ನಂತರ ಸಂಪೂರ್ಣವಾಗಿ ಕುಸಿಯಿತು.

19ನೇ ಸುತ್ತಿನ ಹೊತ್ತಿಗೆ ಶ್ರೀನಿವಾಸ ಪ್ರಸಾದ್‌ ಅವರು ಸ್ವಲ್ಪ ಮುನ್ನಡೆ ಸಾಧಿಸಲು ಆರಂಭಿಸಿದರು. ಆರು ಇವಿಎಂಗಳಲ್ಲಿ ತಾಂತ್ರಿಕ ದೋಷ ಕಂಡು ಬಂದ ಕಾರಣಕ್ಕೆ ಕೊನೆಗೆ ವಿವಿಪ್ಯಾಟ್‌ ಮತ ಖಾತರಿ ಪತ್ರಗಳ ಎಣಿಕೆ ಮಾಡಲಾಯಿತು. ಇದರಲ್ಲಿ ಅವರು ಮತ್ತಷ್ಟು ಹೆಚ್ಚು ಮುನ್ನಡೆ ಗಳಿಸಿದರು. ಚಲಾವಣೆಯಾಗಿದ್ದ 2,943 ಅಂಚೆ ಮತ ಪತ್ರಗಳ ಪೈಕಿ 1,527 ಮತಗಳು ಬಿದ್ದುದರಿಂದ ಶ್ರೀನಿವಾಸ ಪ್ರಸಾದ್‌ ಅವರ ಮುನ್ನಡೆಯ ಅಂತರ 1,817ಕ್ಕೆ ಹಿಗ್ಗಿತು.

ಬಾರದ ಶ್ರೀನಿವಾಸ್‌: ಕಾಂಗ್ರೆಸ್‌ ಅಭ್ಯರ್ಥಿ ಧ್ರುವನಾರಾಯಣ ಅವರು ಬೆಳಿಗ್ಗೆಯಿಂದಲೇ ಮತ ಎಣಿಕೆ ಕೇಂದ್ರಕ್ಕೆ ಬಂದಿದ್ದರೆ, ಶ್ರೀನಿವಾಸ ಪ್ರಸಾದ್‌ ಅವರು ಬಂದಿರಲಿಲ್ಲ. ಸಂಜೆ ಗೆಲುವು ಖಚಿತವಾಗುತ್ತಲೇ ಮೈಸೂರಿನ ತಮ್ಮ ನಿವಾಸದಿಂದ ಚಾಮರಾಜನಗರದತ್ತ ಹೊರಟರು.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಈ ವಿಭಾಗದಿಂದ ಇನ್ನಷ್ಟು