ಹೊಲಸು ರಾಜಕಾರಣ ಶುದ್ಧೀಕರಿಸಲು ಹೋರಾಟ

ಶುಕ್ರವಾರ, ಏಪ್ರಿಲ್ 19, 2019
22 °C
ಈಗಿನ ರಾಜಕೀಯ ಅವಸಾನದ ಅಂಚಿನಲ್ಲಿದೆ– ಉತ್ತಮ ಪ್ರಜಾಕೀಯ ಪಾರ್ಟಿ ಅಭ್ಯರ್ಥಿ ಎಂ. ನಾಗರಾಜು ಮಾತು

ಹೊಲಸು ರಾಜಕಾರಣ ಶುದ್ಧೀಕರಿಸಲು ಹೋರಾಟ

Published:
Updated:
Prajavani

* ಯಾವ ಪರಿಕಲ್ಪನೆಯ ಅಡಿಯಲ್ಲಿ ನಿಮ್ಮ ಪಕ್ಷ ಸ್ಥಾಪನೆಯಾಗಿದೆ?
ಮತದಾರರು ಪ್ರಜಾಪ್ರಭುತ್ವ ವ್ಯವಸ್ಥೆಯ ಭಾಗವಾಗಬೇಕು. ಇಲ್ಲಿ ಅವರ ಸಹಭಾಗಿತ್ವ ಅತ್ಯಂತ ಮುಖ್ಯ. ದೇಶದಲ್ಲಿ ಪ್ರಜೆಗಳ ಪ್ರಭುತ್ವವೇ ಸ್ಥಾಪನೆಯಾಗಬೇಕು. ಸಂವಿಧಾನದ ಆಶಯದಂತೆ ಪ್ರಜೆಗಳು ತಮ್ಮ ಅಭ್ಯರ್ಥಿಯನ್ನು ಆಯ್ಕೆ ಮಾಡಬೇಕು. ಮತದಾನ ‘ದಾನ’ವಾಗಿರಬೇಕು. ಮತ ‘ಬೇಟೆ’, ಮತ ‘ಖರೀದಿ’ ಆಗಿರಬಾರದು ಎಂಬುದು ನಮ್ಮ ಪಕ್ಷದ ಸಿದ್ಧಾಂತ.

ಈಗ ರಾಜಕಾರಣ ಉದ್ಯಮವಾಗಿದೆ. ಬಂಡವಾಳ ಹಾಕಿ ಹಣ ಮಾಡುವ ದಂಧೆ ಆಗಿದೆ. ಹೊಲಸು ರಾಜಕಾರಣವನ್ನು ಶುದ್ಧೀಕರಿಸಬೇಕು ಎನ್ನುವ ಗುರಿಯೊಂದಿಗೆ ಪಕ್ಷ ಸ್ಥಾಪನೆಯಾಗಿದೆ. 

* ಜನರು ನಿಮ್ಮ ತತ್ವ ಸಿದ್ಧಾಂತಗಳನ್ನು ಒಪ್ಪಿಕೊಳ್ಳುತ್ತಾರಾ?
ನಮ್ಮ ಕಲ್ಪನೆಯ ರಾಜಕೀಯ ವ್ಯವಸ್ಥೆಯ ಬಗ್ಗೆ ಜನರಿಗೆ ತಿಳಿ ಹೇಳುತ್ತಿದ್ದೇವೆ. ಇದಕ್ಕಾಗಿ ಸಾಮಾಜಿಕ ಜಾಲತಾಣಗಳನ್ನು ಬಳಸುತ್ತಿದ್ದೇವೆ. ರಾಜಕಾರಣದ ಶುದ್ಧೀಕರಣಕ್ಕೆ ಉಪೇಂದ್ರ ಅವರು ಕ್ರಾಂತಿಕಾರಕವಾದ ಹೆಜ್ಜೆ ಇಟ್ಟಿದ್ದಾರೆ. ಬಳ್ಳಾರಿ ಬಿಟ್ಟು ಉಳಿದ 27 ಕ್ಷೇತ್ರಗಳಲ್ಲಿ ನಮ್ಮ ಪಕ್ಷದ ಅಭ್ಯರ್ಥಿಗಳು ಸ್ಪರ್ಧಿಸುತ್ತಿದ್ದಾರೆ. 

ಚಾಮರಾಜನಗರ ಜಿಲ್ಲೆಯೊಂದರಲ್ಲಿ ಒಂದೂವರೆ ಲಕ್ಷ ಜನರಿಗೆ ನಾವು ತಲುಪಿದ್ದೇವೆ. ಜನರೇ ತಮ್ಮ ತಮ್ಮಲ್ಲೇ ಪ್ರಚಾರ ನಡೆಸುತ್ತಿದ್ದಾರೆ. ಪ್ರಾಮಾಣಿಕ ಮತ್ತು ಸ್ವಚ್ಛ ರಾಜಕೀಯ ವ್ಯವಸ್ಥೆ ಬೇಕು ಎಂಬ ಕಾರಣಕ್ಕೆ ಪ್ರಾಮಾಣಿಕ ಪ್ರಯತ್ನ ಮಾಡುತ್ತಿದ್ದಾರೆ.

* ನಿಮಗೆ ರಾಜಕೀಯದ ಅನುಭವವಿದೆಯೇ?
ರಾಜಕಾರಣದಲ್ಲಿ ನನ್ನ ಅನುಭವ ಶೂನ್ಯ. ಮತದಾರನಾಗಿ ಚುನಾವಣಾ ಪ್ರಕ್ರಿಯೆಯಲ್ಲಿ ಭಾಗಿಯಾಗಿದ್ದೇನೆ. ನಮ್ಮ ಪಕ್ಷದಲ್ಲಿ ಯಾರೂ ರಾಜಕಾರಣಿಗಳಿಲ್ಲ. ಚುನಾವಣೆಯಲ್ಲಿ ಗೆದ್ದರೆ ಸಂಬಳಕ್ಕೆ ದುಡಿಯುವ ಕಾರ್ಮಿಕರಂತೆ ಕೆಲಸ ಮಾಡುತ್ತೇವೆ. ಜನರಿಗೆ ಆಗಬೇಕಾದ ಕೆಲಸಗಳನ್ನು ಮಾಡುತ್ತೇವೆ. ಮಾಡಿದ ಕೆಲಸಕ್ಕೆ ತಕ್ಕ ಸಂಬಳ ಪಡೆಯಬೇಕು ಎಂಬುದು ಪಕ್ಷದ ನಿಲುವು.

* ಪ್ರಚಾರ ಹೇಗೆ ನಡೆಯುತ್ತಿದೆ?
ನಾನು ಬಹಿರಂಗ ಪ್ರಚಾರ ನಡೆಸುವುದಿಲ್ಲ. ಧ್ವನಿವರ್ಧಕದ ಮೂಲಕವೂ ಮತ ಕೇಳುವುದಿಲ್ಲ. ವೆಚ್ಚರಹಿತ ಚುನಾವಣೆ ನಮ್ಮ ಗುರಿ. ಈ ಹಿಂದೆ ಆಯ್ಕೆಯಾದವರು ಪ್ರತಿ ಐದು ವರ್ಷಗಳಿಗೊಮ್ಮೆ ಜನತೆಯ ಮುಂದೆ ಹೋಗಿ ತಮ್ಮ ಪರಿಚಯ ಹೇಳಿಕೊಂಡು ಮತ ಕೇಳುವುದು ಎಂದರೆ, ಅವರನ್ನು ಅವರೇ ಗೇಲಿ ಮಾಡಿದಂತೆ. 

* ಕ್ಷೇತ್ರದ ಅಭಿವೃದ್ಧಿಗೆ ನೀವು ಹಾಕಿಕೊಂಡಿರುವ ಯೋಜನೆಗಳೇನು?
ಅಭಿವೃದ್ಧಿಗೆ ಸಂಬಂಧಿಸಿದಂತೆ ನಮ್ಮದೇ ಕಲ್ಪನೆಗಳಿವೆ. ಆದರೆ, ಏನು ಕೆಲಸ ಆಗಬೇಕು ಎಂದು ಮತದಾರರನ್ನೇ ಕೇಳುವುದಕ್ಕೆ ಆದ್ಯತೆ ನೀಡುತ್ತಿದ್ದೇವೆ. ತಮಗೆ ಏನು ಬೇಕು ಎಂಬುದನ್ನು ಜನರೇ ಹೇಳಬೇಕು. ಜನಪ್ರತಿನಿಧಿಯಾಗಿ ಅದನ್ನು ನಾವು ಈಡೇರಿಸಬೇಕು. ‌

ರಾಜಕೀಯ ಪಕ್ಷಗಳು ತಮಗೆ ಬೇಕಾದ ಹಾಗೆ ಪ್ರಣಾಳಿಕೆ ಸಿದ್ಧಪಡಿಸುತ್ತವೆ. ಆದರೆ, ನಮ್ಮ ಪ್ರಣಾಳಿಕೆಯನ್ನು ಜನರೇ ತಯಾರಿಸುತ್ತಾರೆ. 

* ಪಕ್ಷವನ್ನು ಹೇಗೆ ಸಂಘಟಿಸುತ್ತೀರಿ?
ಪಕ್ಷದ ಸಂಘಟನೆಗೆ ನಾವು ಪ್ರಾಮುಖ್ಯ ನೀಡುವುದಿಲ್ಲ. ಈ ಚುನಾವಣೆಯ ನಂತರ ನಾವು ಮತ್ತೆ ಜನರ ಮುಂದೆ ಬರುವುದು ಮುಂದಿನ ಚುನಾವಣೆಗೇ. ನಮ್ಮ ಉದ್ದೇಶವನ್ನು ಕೆಲವು ಮಂದಿಗೆ ತಿಳಿಸುತ್ತೇವೆ. ಅವರು ಇತರರಿಗೆ ಈ ಬಗ್ಗೆ ಹೇಳುತ್ತಾರೆ. ಹಾಗೆ ಇದು ಒಬ್ಬರಿಂದ ಒಬ್ಬರಿಗೆ ಪ್ರಚಾರ ಆಗಬೇಕು ಎಂಬುದು ನಮ್ಮ ಆಶಯ.

* ಪಕ್ಷವನ್ನು ಜನರು ಸ್ವೀಕರಿಸುತ್ತಾರೆ ಎಂಬ ವಿಶ್ವಾಸವಿದೆಯೇ?
ನಾವೀಗ ಮೊದಲ ಹೆಜ್ಜೆ ಇಟ್ಟಿದ್ದೇವೆ. ನಮ್ಮ ಪಕ್ಷ ಯಾರ ವಿರುದ್ಧವೂ ಅಲ್ಲ. ಹದಗೆಟ್ಟ ರಾಜಕೀಯ ವ್ಯವಸ್ಥೆಯನ್ನು ಸುಧಾರಿಸುವುದಷ್ಟೇ ನಮ್ಮ ಉದ್ದೇಶ. 

ಮುಂದಿನ ಐದು ವರ್ಷಗಳಲ್ಲಿ ನಮ್ಮ ಆಶಯಗಳನ್ನು ಒಳಗೊಂಡ ರಾಜಕಾರಣ ದೇಶದಲ್ಲಿ ಸ್ಥಾಪನೆಯಾಗುವ ವಿಶ್ವಾಸವಿದೆ. ರಾಜ್ಯದಲ್ಲಿ ರಾಜಕೀಯ ಅಕಾಡೆಮಿಯೂ ಸ್ಥಾಪ‍ನೆಗೊಳ್ಳಲಿದೆ. ಈಗಿನ ರಾಜಕಾರಣ ಸಾವಿನ ಕೊನೆಯ ಹಂತದಲ್ಲಿದೆ. ರಾಜಕೀಯ ಪಕ್ಷಗಳು ಚುನಾವಣಾ ಮೈತ್ರಿ ಮಾಡಿಕೊಂಡಿರುವುದು ಅವಸಾನದ ಮುನ್ಸೂಚನೆ.

* ಬಿಜೆಪಿ, ಕಾಂಗ್ರೆಸ್‌ನಂತಹ ರಾಜಕೀಯ ಪಕ್ಷಗಳಿಗೆ ಪೈಪೋಟಿ ನೀಡುವ ವಿಶ್ವಾಸ ಇದೆಯೇ?
ಅಭ್ಯರ್ಥಿಯಾಗಿ ನಾನಿಲ್ಲಿ ಗೌಣ. ಮತದಾರರ ನಡುವೆಯೇ ಪೈಪೋಟಿ ಇರಬೇಕು. ಯಾವ ಅಭ್ಯರ್ಥಿ ಯೋಗ್ಯ ಎನ್ನುವುದನ್ನು ಅವರೇ ನಿರ್ಧರಿಸಿ ಮತದಾನ ಮಾಡಬೇಕು.

ಮುಕ್ತ ಚುನಾವಣೆಯಾದರೆ ಅದು ಉತ್ತಮ ಪ್ರಜಾಕೀಯ ಪಾರ್ಟಿಯ ಗೆಲುವು. ಬಂಡವಾಳ ಹಾಕಿ ಚುನಾವಣೆ ಎದುರಿಸುವವರು ಗೆದ್ದರೆ ಮತದಾರ ಪ್ರಭುಗಳು ಮತ್ತೆ ಸೋತಂತೆ ಆಗುತ್ತದೆ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !