‘ನನ್ನನ್ನು ಆಶೀರ್ವದಿಸಿದಂತೆ ಸುನೀತಾಗೂ ಆಶೀರ್ವದಿಸಿ’

ಶುಕ್ರವಾರ, ಏಪ್ರಿಲ್ 26, 2019
35 °C
ಬಬಲೇಶ್ವರ ವಿಧಾನಸಭಾ ಕ್ಷೇತ್ರದ ಮತದಾರರಿಗೆ ಮನವಿ ಮಾಡಿದ ಗೃಹ ಸಚಿವ

‘ನನ್ನನ್ನು ಆಶೀರ್ವದಿಸಿದಂತೆ ಸುನೀತಾಗೂ ಆಶೀರ್ವದಿಸಿ’

Published:
Updated:
Prajavani

ವಿಜಯಪುರ: ‘ವಿಧಾನಸಭಾ ಚುನಾವಣೆಯಲ್ಲಿ ನನಗೆ ಆಶೀರ್ವದಿಸಿದಂತೆ, ಲೋಕಸಭಾ ಚುನಾವಣೆಯಲ್ಲಿ ಮೈತ್ರಿಕೂಟದ ಅಭ್ಯರ್ಥಿ ಸುನೀತಾ ಚವ್ಹಾಣ ಅವರಿಗೂ ಬಬಲೇಶ್ವರದ ಜನರು ಆಶೀರ್ವದಿಸಬೇಕು’ ಎಂದು ಗೃಹ ಸಚಿವ ಎಂ.ಬಿ.ಪಾಟೀಲ ಮನವಿ ಮಾಡಿದರು.

ನಗರದ ಪಾಟೀಲ ಗಾರ್ಡೇನಿಯಾ ಸಭಾಂಗಣದಲ್ಲಿ ಗುರುವಾರ ಸಂಜೆ ಬಬಲೇಶ್ವರ ಮತಕ್ಷೇತ್ರದ ಕಾರ್ಯಕರ್ತರು, ಮುಖಂಡರ ಸಭೆಯನ್ನುದ್ದೇಶಿಸಿ ಮಾತನಾಡಿದ ಅವರು, ‘ಎಂ.ಬಿ.ಪಾಟೀಲರು ಸೋತಿದ್ದಾರೆ ಎಂದು ಅನೇಕರು ಅಪಪ್ರಚಾರ ಮಾಡಿದರು. ಆದರೆ ಬಬಲೇಶ್ವರದ ಜನರು 1 ಲಕ್ಷ ಮತಗಳ ಹೆಚ್ಚು ಅಂತರದಿಂದ ಹರಸಿದ್ದೀರಿ, ಇದನ್ನು ನಾನು ಎಂದಿಗೂ ಮರೆಯುವುದಿಲ್ಲ’ ಎಂದರು.

‘ಬಬಲೇಶ್ವರಕ್ಕೆ ಅತಿರಥ ಮಹಾರಥರು ಬಂದು ಹೋದರು. ಪ್ರಧಾನಿ ಮೋದಿ, ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಅಮಿತ್ ಶಾ, ಬಿ.ಎಸ್.ಯಡಿಯೂರಪ್ಪ ಮೊದಲಾದವರು ಪ್ರಚಾರ ಮಾಡಿದರು. ಆದರೂ ನೀವು ನನಗೆ ಆಶೀರ್ವದಿಸಿದಿರಿ’ ಎಂದು ಉಪಕಾರ ಸ್ಮರಣೆ ಮಾಡಿದರು.

ನೀರಾವರಿ ಸಚಿವನಾಗಬೇಕಿತ್ತು..!
‘ಮತ್ತೊಮ್ಮೆ ನೀರಾವರಿ ಸಚಿವನಾಗುವ ಸದಾವಕಾಶ ದೊರಕಿದ್ದರೆ, ರಾಜ್ಯದ ಚಿತ್ರಣವೇ ಬದಲಾಗುತ್ತಿತ್ತು. ವಿಜಯಪುರ ಜಿಲ್ಲೆಯಲ್ಲಿ ನೀರಾವರಿ ಯೋಜನೆಗಳಿಗೆ ಆದ್ಯತೆ ನೀಡಿದಂತೆ, ಚಿತ್ರದುರ್ಗ ಸೇರಿದಂತೆ ರಾಜ್ಯದ ಹಲ ಭಾಗಗಳಲ್ಲಿ ನೀರಾವರಿ ಯೋಜನೆಗಳನ್ನು ನಿರ್ಣಾಯಕ ಹಂತಕ್ಕೆ ತಲುಪಿಸುವ ಪ್ರಯತ್ನ ಮಾಡಿದ್ದೆ.

ಚಿತ್ರದುರ್ಗದಲ್ಲಿಯೂ ನೀರಾವರಿ ಯೋಜನೆ ಪೂರ್ಣಗೊಳ್ಳುವ ಹಂತದಲ್ಲಿದೆ. ಮುಕ್ತಾಯದಲ್ಲಿರುವ ಯೋಜನೆಯನ್ನೇ ಪ್ರಧಾನಿ ಮೋದಿ ತಮ್ಮ ಭಾಷಣದಲ್ಲಿ ಹೇಳಿಕೊಂಡಿದ್ದಾರೆ. ಈ ಯೋಜನೆಯನ್ನು ಪೂರ್ಣಗೊಳಿಸಿದ ಕೀರ್ತಿ ಈ ಹಿಂದಿನ ಸಿದ್ದರಾಮಯ್ಯ ಸರ್ಕಾರಕ್ಕೆ ಸಲ್ಲಬೇಕು’ ಎಂದರು.

ವಿಧಾನ ಪರಿಷತ್ ಸದಸ್ಯ ಸುನೀಲಗೌಡ ಪಾಟೀಲ, ಮಾಜಿ ಶಾಸಕ ಪ್ರೊ.ರಾಜು ಆಲಗೂರ, ಜಿ.ಪಂ. ಮಾಜಿ ಅಧ್ಯಕ್ಷ ಅರ್ಜುನ ರಾಠೋಡ, ಜಿಲ್ಲಾ ಕಾಂಗ್ರೆಸ್ ಘಟಕದ ಅಧ್ಯಕ್ಷ ರವಿಗೌಡ ಪಾಟೀಲ, ಕೆಪಿಸಿಸಿ ಕಾರ್ಯದರ್ಶಿ ಸಂಗಮೇಶ ಬಬಲೇಶ್ವರ, ಸೋಮನಾಥ ಬಾಗಲಕೋಟ, ವಿ.ಎಸ್.ಪಾಟೀಲ, ಬಾಪುಗೌಡ ಪಾಟೀಲ ಶೇಗುಣಸಿ, ಸಿದ್ದಣ್ಣ ಸಕ್ರಿ, ವಿದ್ಯಾರಾಣಿ ತುಂಗಳ, ಜಾಕೀರ ಬಾಗವಾನ, ಯಾಕೂಬ್ ಜತ್ತಿ, ಕೆ.ಎಚ್.ಮುಂಬಾರೆಡ್ಡಿ ಹಾಜರಿದ್ದರು.

**
ಸಿದ್ಧೇಶ್ವರ ಸ್ವಾಮೀಜಿ ಆಶಯ ಈಡೇರಿಕೆಗೆ ಪ್ರಾಮಾಣಿಕವಾಗಿ ಪ್ರಯತ್ನಿಸಿದ್ದೇನೆ. ಕೆಲವರು ವಿನಾಃ ಕಾರಣ ಟೀಕೆ ಮಾಡುತ್ತಿದ್ದಾರೆ. ಅವರಿಗೆ ಸೂಕ್ತ ಸಮಯದಲ್ಲಿ ಸಮರ್ಪಕ ಉತ್ತರ ನೀಡುವೆ
-ಎಂ.ಬಿ.ಪಾಟೀಲ, ಗೃಹ ಸಚಿವ

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !