ಪ್ರೀತಿಯ ಮಾಯೆ...

7

ಪ್ರೀತಿಯ ಮಾಯೆ...

Published:
Updated:

ನಾನು ಎರಡು ವರ್ಷಗಳ ಹಿಂದೆ ಪ್ರತಿಷ್ಠಿತ ಕಂಪನಿಯೊಂದರಲ್ಲಿ ಕೆಲಸ ಮಾಡುತ್ತಿದ್ದೆ. ನಾನು ಪ್ರೀತಿಸುತ್ತಿದ್ದ ಹುಡುಗ ಬೇರೆ ಮದುವೆಯಾದ. ಆಗಿನಿಂದ ನನಗೆ ಕೆಲಸದ ಮೇಲೆ ಆಸಕ್ತಿ ಹೊರಟು ಹೋಗಿತ್ತು. ಜೀವನ ನರಕ ಎನ್ನಿಸುತಿತ್ತು. ಆ ಬೇಸರದಿಂದ ಹೊರ ಬರಬೇಕು, ಬೇರೊಬ್ಬ ಒಳ್ಳೆಯ ಹುಡುಗನನ್ನು ಮದುವೆಯಾಗಬೇಕು ಎಂದು ನಿರ್ಧರಿಸಿ ಮ್ಯಾಟ್ರಿಮೋನಿಯಲ್ಲಿ ನನ್ನ ವಿವರಗಳನ್ನು ಹಾಕಿದ್ದೆ.

ಅದರಲ್ಲಿ ನನಗೆ ಒಬ್ಬ ಹುಡುಗ ಇಷ್ಟವಾಗಿ ಮೊಬೈಲ್ ನಂಬರ್‌ಗಳನ್ನು ಎಕ್ಸ್‌ಚೇಂಜ್‌ ಮಾಡಿಕೊಂಡಿದ್ದೆವು. ಅವನು ನನಗೆ ’ನೀನು ಎಂದರೆ ಇಷ್ಟ, ನಿನ್ನನ್ನೇ ನಂಬಿದ್ದೇನೆ, ಮಿಸ್ ಮಾಡ್ಕೋತಾ ಇದೀನಿ, ನೀನ್ ಬೇಕು‘ ಅಂತೆಲ್ಲಾ ಮೆಸೇಜ್ ಮಾಡ್ತಿದ್ದ. ದುಃಖದಲ್ಲಿದ್ದ ನನಗೆ ಅವನ ಮಾತುಗಳು ಹಿಡಿಸಿದವು. ನಿಧಾನಕ್ಕೆ ನಾನು ಅವನನ್ನು ಪ್ರೀತಿಸಲು ಆರಂಭಿಸಿದೆ.

ಒಮ್ಮೆ ಅವನ ಬಳಿ ನನ್ನ ಪ್ರೇಮವನ್ನು ನಿವೇದನೆ ಮಾಡಿಕೊಂಡೆ. ಆದರೆ ಅವನು ‘ನನಗೆ ಪ್ರೀತಿ ಎಲ್ಲ ಇಷ್ಟ ಇಲ್ಲ, ನೀನು ನನ್ನ ಸ್ನೇಹಿತೆ ಅಷ್ಟೆ‘ ಎಂದು ನನ್ನ ಹೃದಯವನ್ನೇ ಚೂರು ಮಾಡಿದ. ಒಮ್ಮೆ ಮೋಸ ಹೋದ ಮೇಲೂ ಮತ್ತೆ ಪ್ರೀತಿ ಎಂದು ಜೀವನ ಹಾಳು ಮಾಡ್ಕೋತಾ ಇದೀನಿ ಅನ್ನಿಸುತ್ತಿದೆ. ಈಗ ಹುಡುಗರನ್ನು ನೋಡಿದ್ರೆ ಅಹಸ್ಯ ಭಾವನೆ ಮೂಡುತ್ತದೆ. ಆದರೆ ನಾನು ಯಾವತ್ತೂ ಅವನನ್ನು ಭೇಟಿ ಮಾಡಿಲ್ಲ. ನನ್ನ ಫೋಟೊಗಳನ್ನು ಅವರಿಗೆ ಕಳುಹಿಸಿದ್ದೇನೆ. ಅವನು ನಿಂಗೆ ಮೆಳ್ಳಗಣ್ಣು ಎಂದಿದ್ದ. ಆದರೆ ನನಗೆ ಯಾವತ್ತೂ ಹಾಗೆ ಅನ್ನಿಸಿಲ್ಲ. ನಾನು ನೋಡಲು ಚೆನ್ನಾಗಿಯೇ ಇದ್ದೇನೆ. ಈಗ ನಾನು ಬೇಸರದಿಂದ ಕೆಲಸವನ್ನು ಬಿಟ್ಟಿದ್ದೇನೆ. ಐಎಎಸ್ ಮಾಡಬೇಕೆಂಬ ಆಸೆ ಇತ್ತು. ಆದರೆ ಈಗ ಪ್ರೇಮಿಯ ಗುಂಗಿನಲ್ಲಿ ಮುಳುಗಿ ಹೋಗಿದ್ದೇನೆ. ನಾನು ಯಾವುದಕ್ಕೂ ಲಾಯಕ್ ಇಲ್ಲ ಅನ್ನಿಸುತ್ತಿದೆ. ಈಗ ನನ್ನ ಜೊತೆ ಕೆಲಸವೂ ಇಲ್ಲ, ಗುರಿ ಸಾಧಿಸುವ ಹಟವೂ ಇಲ್ಲ. ಅವನ ಮಾಯೆಯಿಂದ ಹೊರ ಬರಲು ನನಗೆ ಸಾಧ್ಯವಾಗುತ್ತಿಲ್ಲ. ‌

ಹೆಸರು, ಊರು ಬೇಡ

ಜೀವನ ನಿಂತಿರುವುದು ಕೇವಲ ಮದುವೆ ಹಾಗೂ ಪ್ರೀತಿಯ ಮೇಲೆ ಮಾತ್ರವಲ್ಲ. ಯಾವಾಗ ನಿಮ್ಮ ಪ್ರೀತಿ ನೀವು ಅಂದುಕೊಂಡ ದಾರಿಯಲ್ಲಿ ಸಾಗುತ್ತಿಲ್ಲ ಅನ್ನಿಸುತ್ತದೋ ಆಗ ಕೊಂಚ ಅದರಿಂದ ಬೇರೆ ಕಡೆಗೆ ಯೋಚಿಸಿ. ನಿಮಗೆ ಸೂಕ್ತ ಎನ್ನಿಸುವ ಬಾಳಸಂಗಾತಿಯನ್ನು ಹುಡುಕಿಕೊಳ್ಳುವುದರ ಮೇಲೆ ಗಮನ ಹರಿಸುವ ಬದಲು ನಿಮ್ಮ ಕೆಲಸದ ಮೇಲೆ ಭದ್ರವಾಗಿ ತಳವೂರುವ ದಾರಿಯನ್ನು ಕಂಡುಕೊಳ್ಳಿ. ಅದರ ಮೇಲೆ ಸಾಧನೆ ಮಾಡುವ ಗುರಿಯನ್ನು ಇರಿಸಿಕೊಳ್ಳಿ ಹಾ‌ಗೂ ಅದರ ಮೇಲೆ ಕೆಲಸ ಮಾಡಿ. ಇಂದಿನ ಜಗತ್ತಿನಲ್ಲಿ ಆದಷ್ಟು ಸ್ವತಂತ್ರರಾಗಿರಲು ಪ್ರಯತ್ನಿಸಿ. ಇಂದಿನ ಯುವಜನತೆ ಹೆಚ್ಚು ಸ್ವತಂತ್ರರಾಗಿರುವುದು ಉತ್ತಮ. ಅವಶ್ಯಕತೆ ಬಿದ್ದರೆ ಉನ್ನತ ಶಿಕ್ಷಣದೊಂದಿಗೆ ನಿಮ್ಮನ್ನು ನೀವು ಅಪ್‌ಡೇಟ್ ಮಾಡಿಕೊಳ್ಳಿ. ಅದರ ಜೊತೆ ಜೊತೆಗೆ ನಿಮಗೆ ಯಾವುದರ ಮೇಲೆ ಒಲವಿದೆ ಅದನ್ನು ಹಿಂಬಾಲಿಸಿ. ಅದು ಓದುವುದೇ ಆಗಬಹುದು, ಅಡುಗೆ ಮಾಡುವುದು ಆಗಬಹುದು, ತೋಟಗಾರಿಕೆ ಇತ್ಯಾದಿ ಯಾವುದರಿಂದಲೂ ಆಗಬಹುದು. 

ಇನ್ನು ಮದುವೆಯ ಬಗ್ಗೆ ಹೇಳುವುದಾದರೆ ನಿಮಗೆ ಈಗಾಗಲೇ ಅದರಲ್ಲಿ ಕೆಟ್ಟ ಅನುಭವಗಳಾಗಿವೆ. ಅದನ್ನು ನೈಸರ್ಗಿಕವಾಗಿ ಆಗಲು ಬಿಡಿ. ನಿಮ್ಮ ಆಯ್ಕೆಗೆ ತಕ್ಕಂತಹ ಸಂಗಾತಿ ದೊರೆಯಬಹುದು, ಎಲ್ಲದ್ದಕ್ಕೂ ಸರಿಯಾದ ಸಮಯ ಕೂಡಿ ಬರಬೇಕು. ನಿಮ್ಮ ಕೆಲಸದ ಮೇಲೆ ಗಮನ ಹರಿಸಿ. ನಿಮ್ಮ ಸ್ನೇಹಿತರೊಂದಿಗೆ ಸಂಪರ್ಕದಲ್ಲಿರಿ. ಸಾಮಾಜಿಕವಾಗಿ ನಿಮ್ಮನ್ನು ತೆರೆದುಕೊಳ್ಳಿ. ಕೆಲವೊಂದು ಸ್ವಯಂಪ್ರೇರಿತ ಕೆಲಸಗಳನ್ನು ಮಾಡಿ. ಇವೆಲ್ಲವೂ ನಿಮ್ಮನ್ನು ಋಣಾತ್ಮಕ ಯೋಚನೆಗಳಿಂದ ಹೊರ ಬರಲು ಸಹಾಯ ಮಾಡುತ್ತವೆ. 

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !