ಮಂಗಳವಾರ, ನವೆಂಬರ್ 19, 2019
27 °C
ಶಾಲಾ ಶಿಕ್ಷಣ ಸುಧಾರಣೆ ವ್ಯವಸ್ಥೆ ಅರಿಯುವ ನಿಟ್ಟಿನಲ್ಲಿ ಪ್ರವಾಸ, ಮಾಜಿ ವಿಧಾನಸಭಾಧ್ಯಕ್ಷ, ಕೆ.ಆರ್.ರಮೇಶ್‌ಕುಮಾರ್ ಜತೆಗೂಡಿ ಸಿಎಂ ಕೇಜ್ರಿವಾಲ್ ಜತೆ ಚರ್ಚೆ

ದೆಹಲಿ ಶಾಲೆಗೆ ಚಿಕ್ಕಬಳ್ಳಾಪುರ ಜಿ.ಪಂ ಅಧ್ಯಕ್ಷ ಮಂಜುನಾಥ್ ಭೇಟಿ

Published:
Updated:
Prajavani

ಚಿಕ್ಕಬಳ್ಳಾಪುರ: ಮಾಜಿ ವಿಧಾನಸಭಾಧ್ಯಕ್ಷ, ಶಾಸಕ ಕೆ.ಆರ್.ರಮೇಶ್‌ಕುಮಾರ್ ಜತೆಗೂಡಿ ಜಿಲ್ಲಾ ಪಂಚಾಯಿತಿ ಅಧ್ಯಕ್ಷ ಎಚ್.ವಿ.ಮಂಜುನಾಥ್‌ ಅವರು ಇತ್ತೀಚೆಗೆ ದೆಹಲಿಗೆ ಭೇಟಿ ನೀಡಿ ಅಲ್ಲಿನ ಶಾಲಾ ಶಿಕ್ಷಣ ಸುಧಾರಣೆ ವ್ಯವಸ್ಥೆ ಅರಿಯುವ ಜತೆಗೆ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ ಅವರನ್ನು ಭೇಟಿ ಮಾಡಿ ಚರ್ಚೆ ನಡೆಸಿದರು.

ಪಶ್ಚಿಮ ವಿನೋದ ನಗರ ಶಾಲೆಗೆ ಭೇಟಿ ನೀಡಿದ ರಮೇಶ್‌ಕುಮಾರ್ ಮತ್ತು ಮಂಜುನಾಥ್‌ ಅವರು ಸುಮಾರು ಎರಡು ಗಂಟೆಗಳ ಕಾಲ ವಿದ್ಯಾರ್ಥಿಗಳು, ಶಿಕ್ಷಕರೊಂದಿಗೆ ಸಂವಾದ ನಡೆಸಿ ಅಲ್ಲಿನ ಕ್ರಾಂತಿಕಾರಕ ಬದಲಾವಣೆ ಕ್ರಮವನ್ನು ಮನವರಿಕೆ ಮಾಡಿಕೊಂಡರು. ಬಳಿಕ ಕೇಜ್ರಿವಾಲ್ ಅವರನ್ನು ಗೃಹ ಕಚೇರಿಯಲ್ಲಿ ಭೇಟಿ ಸುಮಾರು ಒಂದು ಗಂಟೆ ಕಾಲ ಅವರೊಂದಿಗೆ ಮಾತುಕತೆ ನಡೆಸಿದರು.

ಈ ಭೇಟಿ ಕುರಿತಂತೆ ‘ಪ್ರಜಾವಾಣಿ’ಯೊಂದಿಗೆ ಮಾತನಾಡಿದ ಎಚ್.ವಿ.ಮಂಜುನಾಥ್‌, ‘ದೆಹಲಿಯಲ್ಲಿ 2015ರಲ್ಲಿ ಎಎಪಿ ಸರ್ಕಾರ ಅಧಿಕಾರ ವಹಿಸಿಕೊಂಡ ನಂತರ, ಅಲ್ಲಿನ ಸರ್ಕಾರಿ ಶಾಲೆಗಳಲ್ಲಿ ಬೋಧನಾ ವಿಧಾನ ಹಾಗೂ ಶಿಕ್ಷಣ ಗುಣಮಟ್ಟ ಸುಧಾರಣೆಯಾಗಿರುವ ಬಗ್ಗೆ ಕೇಳಿದ್ದೆ. ಆದರೆ, ಬಹಳ ವರ್ಷಗಳಿಂದ ದೆಹಲಿ ಶಾಲೆಗಳನ್ನು ನೋಡಬೇಕು ಎಂಬ ಆಸೆ ಈಡೇರಿರಲಿಲ್ಲ’ ಎಂದು ಹೇಳಿದರು.

‘ದೆಹಲಿ ಸರ್ಕಾರ ಸರ್ಕಾರಿ ಶಾಲೆಗಳಲ್ಲಿ ಮೂಲಸೌಕರ್ಯಗಳಲ್ಲದೆ ಪಠ್ಯ ಕ್ರಮಗಳಲ್ಲೂ ಕ್ರಾಂತಿಕಾರಕ ಬದಲಾವಣೆಗಳನ್ನು ಮಾಡಿದ್ದು, ಮಕ್ಕಳಲ್ಲಿ ಅಗಾಧ ಆತ್ಮವಿಶ್ವಾಸ ಮೂಡಿಸಿದೆ. ನಯಾಪೈಸೆ ಶುಲ್ಕ ಪಡೆಯದೆ, ಪ್ರತಿಯೊಂದು ಉಚಿತವಾಗಿ ಒದಗಿಸುವ ಮೂಲಕ ಬಡವರ ಮಕ್ಕಳನ್ನು ಕೂಡ ಸಮಾಜದ ಮುಖ್ಯವಾಹಿನಿಗೆ ತರುವಲ್ಲಿ ಕ್ರೇಜಿವಾಲ್‌ ಅವರು ಅದ್ಭುತವಾದ ರೀತಿ ಶಾಲೆಗಳನ್ನು ರೂಪುಗೊಳಿಸಿದ್ದಾರೆ’ ಎಂದು ಶ್ಲಾಘಿಸಿದರು.

‘ಶಿಕ್ಷಣಕ್ಕೆ ವ್ಯಯಿಸುವ ಹಣ ವೆಚ್ಚವಲ್ಲ. ಬದಲಿಗೆ ಉತ್ತಮ ನಾಳೆಗಳಿಗಾಗಿ ವಿನಿಯೋಗಿಸುವ ಹೂಡಿಕೆ ಎಂಬುದನ್ನು ನಾವು ಇವತ್ತು ಮನಗಾಣಬೇಕಿದೆ. ಆ ದಿಸೆಯಲ್ಲಿ ನಮ್ಮ ರಾಜ್ಯದ ಎಲ್ಲ ರಾಜಕಾರಣಿಗಳು ಒಮ್ಮೆಯಾದರೂ ದೆಹಲಿಗೆ ಭೇಟಿ ನೀಡಿ ಅಲ್ಲಿನ ಶಾಲೆಗಳನ್ನು ವೀಕ್ಷಿಸಿ ಕನಿಷ್ಠ ತಾಲ್ಲೂಕಿಗೊಂದು ಆದರೂ ಅಂತಹ ಶಾಲೆಯ ತೆರೆಯಲು ಪ್ರಯತ್ನಿಸಬೇಕಿದೆ’ ಎಂದರು.

‘ಇವತ್ತು ಖಾಸಗಿ ಶಾಲೆಗಳ ಪೈಪೋಟಿ ನಡುವೆ ಕಮರುತ್ತಿರುವ ಸರ್ಕಾರಿ ಶಾಲೆಗಳನ್ನು ಖಾಸಗಿ ಶಾಲೆಗಳಿಗೆ ಸೆಡ್ಡು ಹೊಡೆಯುವ ರೀತಿ ರೂಪಿಸಿ ಬಡವರ ಮಕ್ಕಳಲ್ಲಿ ಕೀಳರಿಮೆ ತೊಡೆದು ಆತ್ಮವಿಶ್ವಾಸ ವೃದ್ಧಿಸುವ ಅಗತ್ಯವಿದೆ. ನಾವು ಕೂಡ ಉಳ್ಳವರ ಮಕ್ಕಳಂತೆ ಒಳ್ಳೆಯ ಶಾಲೆಯಲ್ಲಿ ಓದುತ್ತಿದ್ದೇವೆ ಎಂಬ ಭಾವನೆ ಸರ್ಕಅರಿ ಶಾಲೆ ಮಕ್ಕಳಲ್ಲಿ ಗಟ್ಟಿಗೊಳಿಸುವ ಅಗತ್ಯವಿದೆ’ ಎಂದು ಹೇಳಿದರು.

ಪ್ರತಿಕ್ರಿಯಿಸಿ (+)