ಶನಿವಾರ, ಸೆಪ್ಟೆಂಬರ್ 18, 2021
22 °C
ಮೊಟ್ಟೆ ದರ ಇಳಿಕೆ

ಬೀನ್ಸ್‌, ಟೊಮೆಟೊ ಬೆಲೆ ಏರುಮುಖಿ; ಬಿಸಿಲ ಝಳಕ್ಕೆ ಬಾಡಿದ ಹೂವು

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಚಾಮರಾಜನಗರ: ತರಕಾರಿ ಮಾರುಕಟ್ಟೆಯಲ್ಲಿ ಈ ವಾರ ಬೀನ್ಸ್‌ ಹಾಗೂ ಟೊಮೆಟೊ ದರ ಏರಿಕೆ ಕಂಡಿದೆ. ಹಸಿ ಮೆಣಸು ಮತ್ತು ದಪ್ಪ ಮೆಣಸಿನಕಾಯಿ ಬೆಲೆಯಲ್ಲೂ ಹೆಚ್ಚಳವಾಗಿದೆ. 

ಬೀನ್ಸ್‌ ಬೆಲೆ ಎರಡು ವಾರಗಳ ಹಿಂದೆ ಇದ್ದ ದರ (ಕೆಜಿಗೆ ₹80) ತಲುಪಿದೆ. ಕಳೆದ ವಾರ ಟೊಮೆಟೊ ಬೆಲೆ ₹30 ಇತ್ತು. ಈ ವಾರ ₹10 ಏರಿಕೆಯಾಗಿದೆ. ಹಸಿ ಮೆಣಸಿನಕಾಯಿ, ದಪ್ಪ ಮೆಣಸಿನ ಕಾಯಿ ₹ 20 ಹೆಚ್ಚಳವಾಗಿದೆ.  

‘ಹಾಪ್‌ಕಾಮ್ಸ್‌ಗೆ ಎರಡು ವಾರಗಳಿಂದ ಬೀನ್ಸ್‌ ಮತ್ತು ಟೊಮೆಟೊ ಕಡಿಮೆ ಪ್ರಮಾಣದಲ್ಲಿ ಆವಕವಾಗುತ್ತಿದೆ. ಮದುವೆ ಇನ್ನಿತರ ಶುಭ ಸಮಾರಂಭಗಳಿಗೆ ಇವುಗಳಿಗೆ ಬೇಡಿಕೆ ಇದೆ. ಬಿಸಿಲಿಗೆ ಬೀನ್ಸ್‌ ಇಳುವರಿ ಬರುವುದಿಲ್ಲ. ಆದ್ದರಿಂದ ಬೆಲೆಯಲ್ಲಿ ಹೆಚ್ಚಳವಾಗಿದೆ’ ಎಂದು ಹಾಪ್‌ಕಾಮ್ಸ್‌ ಮಾರಾಟಗಾರ ಮಧು ‘ಪ್ರಜಾವಾಣಿ’ಗೆ ತಿಳಿಸಿದರು.

ಈರುಳ್ಳಿ ಬೆಲೆ ₹ 3 ಕಡಿಮೆಯಾಗಿದೆ. ಉಳಿದ ಎಲ್ಲ ತರಕಾರಿಗಳ ಬೆಲೆ ಯಥಾಸ್ಥಿತಿ ಮುಂದುವರಿದಿದೆ. ಜಾತ್ರೆ, ಶುಭ ಸಮಾರಂಭಗಳು ಕಡಿಮೆಯಾಗುತ್ತಿರುವ ಬೆನ್ನಲ್ಲೇ ಬೇಡಿಕೆ ಕಡಿಮೆಯಾಗುತ್ತಿದೆ. ಬೆಲೆ ಕೂಡ ಇಳಿಮುಖವಾಗುತ್ತಿದೆ ಎನ್ನುತ್ತಾರೆ ವ್ಯಾಪಾರಿಗಳು.

ಹಣ್ಣುಗಳು: ಬೇಸಿಗೆಯಲ್ಲಿ ಹಣ್ಣುಗಳೀಗೆ ಬೇಡಿಕೆ ಇದ್ದರೂ, ಅವುಗಳ ಬೆಲೆಯಲ್ಲಿ ಗಣನೀಯ ಪ್ರಮಾಣದಲ್ಲಿ ಹೆಚ್ಚಳ ಅಥವಾ ಕಡಿಮೆ ಆಗಿಲ್ಲ. ಕಲ್ಲಂಗಡಿ ₹ 5, ಸೇಬು ₹ 20, ಕಿತ್ತಳೆ ₹ 10, ಸಪೋಟಾ ₹ 5 ಕಡಿಮೆಯಾಗಿವೆ. 

ಮೊಟ್ಟೆ ದರ ಇಳಿಕೆ:ಪ್ರತಿ ಮೂರು ದಿನಗಳಿಗೊಮ್ಮೆ ಬದಲಾಗುವ ಮೊಟ್ಟೆ ಧಾರಣೆ ಈ ವಾರ ₹ 15 ಕಡಿಮೆಯಾಗಿದೆ. ಮೊಟ್ಟೆಗೂ ಬಿಸಿಲ ಶಾಖ ತಟ್ಟಿರುವ ಪರಿಣಾಮ ದರ ಕಡಿಮೆಯಾಗಿದೆ ಎನ್ನುತ್ತಾರೆ ಮೊಟ್ಟೆ ವ್ಯಾಪಾರಿಗಳು. ಮಾಂಸ ಮಾರುಕಟ್ಟೆಯಲ್ಲಿ ಬೆಲೆ ಯಾವುದೇ ಬದಲಾವಣೆ ಕಂಡು ಬಂದಿಲ್ಲ. ಯಥಾಸ್ಥಿತಿ ಮುಂದುವರಿದಿದೆ. 

‘ಬಿಸಿಲ ತಾಪಕ್ಕೆ ಹೂವು ಬಿಡುವುದಿಲ್ಲ’

ಬೇಸಿಗೆಯಲ್ಲಿ ಹೂವುಗಳ ಉತ್ಪಾದನೆ ಕಡಿಮೆ. ಇದರಿಂದ ಮಾರುಕಟ್ಟೆಯಲ್ಲಿ ಹೂವಿಗೆ ಬೇಡಿಕೆ ಇದೆ. ಒಂದೆರಡು ದಿನಗಳಿಂದ ಮಳೆಯಾಗುತ್ತಿದೆ. ಮುಂದಿನ ದಿನಗಳಲ್ಲಿ ಅಥವಾ ಮೇ ತಿಂಗಳ ಅಕ್ಷಯ ತೃತೀಯದ ಹೊತ್ತಿಗೆ ಬೆಲೆ ಏರಿಕೆಯಾಗುವ ನಿರೀಕ್ಷೆ ಇದೆ ಎನ್ನುತ್ತಾರೆ ಹೂವಿನ ವ್ಯಾಪಾರಿಗಳು.

‘ಬಿಸಿಲ ಝಳಕ್ಕೆ ಹೂವು ಬಿಡುವುದಿಲ್ಲ. ಹೀಗಾಗಿ ಹೂವುಗಳ ಆವಕ ಕಡಿಮೆ ಪ್ರಮಾಣದಲ್ಲಿ ಆಗುತ್ತದೆ. ಕೆಲ ಹೂವುಗಳಿಗೆ ಬೇಡಿಕೆ ಇದೆ.  ಹೀಗಾಗಿ ಹೂವಿನ ಬೆಲೆಯಲ್ಲಿ ಕೊಂಚ ಏರಿಕೆ ಕಂಡಿದೆ’ ಎಂದು ಹೂವಿನ ವ್ಯಾಪಾರಿ ಮಹೇಶ್‌ ‘ಪ್ರಜಾವಾಣಿ’ಗೆ ತಿಳಿಸಿದರು. 

 

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು