ಮಂಗಳವಾರ, ಏಪ್ರಿಲ್ 20, 2021
32 °C
ಮಾರುಕಟ್ಟೆ ಮೇಲೆ ಬದಲಾದ ವಾತಾವರಣ, ಆಷಾಢ ಮಾಸದ ಪ್ರಭಾವ

ಕೈಗೆಟುಕುತ್ತಿದೆ ಹೂವು, ತರಕಾರಿ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಚಾಮರಾಜನಗರ: ಆಷಾಢ ಮಾಸ ಮತ್ತು ವಾತಾವರಣದಲ್ಲಿ ಆಗಿರುವ ಬದಲಾವಣೆಯಿಂದಾಗಿ ಮಾರುಕಟ್ಟೆಯಲ್ಲಿ ಬಹುತೇಕ ತರಕಾರಿಗಳು ಹಾಗೂ ಹೂವುಗಳ ಬೆಲೆ ಕಡಿಮೆಯಾಗಿದೆ.

ಆಷಾಢದಲ್ಲಿ ಶುಭ ಸಮಾರಂಭಗಳು, ಜಾತ್ರೆಗಳು ನಡೆಯುವುದಿಲ್ಲ. ದೇವಸ್ಥಾನಗಳಲ್ಲಿ ಸೋಮವಾರ, ಶುಕ್ರವಾರ ಮಾತ್ರ ವಿಶೇಷ ಪೂಜೆಗಳು ನಡೆಯುತ್ತವೆ. ಈ ದಿನಗಳ ಹಿಂದಿನ ದಿನ ಹೂವುಗಳ ಬೆಲೆ ಸ್ವಲ್ಪ ಹೆಚ್ಚಿರುತ್ತದೆ. ಉಳಿದ ದಿನಗಳಲ್ಲಿ ಕಡಿಮೆ ಇರುತ್ತದೆ ಎಂದು ಹೇಳುತ್ತಾರೆ ವ್ಯಾಪಾರಿಗಳು.

ಮಲ್ಲಿಗೆಯ ಬೆಲೆ ಗಣನೀಯವಾಗಿ ಕುಸಿದಿದೆ. ಕಳೆದ ವಾರ ಬಿಡಿ ಹೂವಿನ ಮಾರುಕಟ್ಟೆಯಲ್ಲಿ ಕೆಜಿಗೆ ₹ 200ರಿಂದ 250 ಇದ್ದ ಮಲ್ಲಿಗೆಯ ದರ ಈ ವಾರ ₹ 130ಕ್ಕೆ ಇಳಿಕೆಯಾಗಿದೆ.

‘ಆಷಾಢ ಮುಗಿಯುವವರೆಗೂ ಹೂವುಗಳ ಬೆಲೆ ಇದೇ ರೀತಿ ಮುಂದುವರಿಯಲಿದೆ. ದೇವಸ್ಥಾನಗಳು, ಅಂಗಡಿ ಹಾಗೂ ಇನ್ನಿತರ ಜಾಗಗಳಿಗೆ ಪ್ರತಿನಿತ್ಯ ಹೂವನ್ನು ಕೊಡುತ್ತೇವೆ. ಜನರು ಬಂದು ಖರೀದಿ ಮಾಡುವುದು ಕಡಿಮೆ’ ಎಂದು ಹೂವಿನ ವ್ಯಾಪಾರಿ ಕೃಷ್ಣ ತಿಳಿಸಿದರು.

ತರಕಾರಿಗಳ ಪೈಕಿ ಸೌತೆಕಾಯಿ, ಹಸಿ ಬಟಾಣಿ, ಶುಂಠಿ ಬೆಲೆಯಲ್ಲಿ ಹೆಚ್ಚಳವಾಗಿದೆ. ಹಸಿಮೆಣಸಿನಕಾಯಿ, ತೆಂಗಿನಕಾಯಿ ಬೆಲೆಯಲ್ಲಿ ಸ್ವಲ್ಪ ಇಳಿದಿದೆ. ಹಾಪ್‌ಕಾಮ್ಸ್‌ನಲ್ಲಿ ಕೆಜಿ ಸೌತೆಕಾಯಿ ₹ 5, ಹಸಿ ಬಟಾಣಿ ₹ 20 ಮತ್ತು ಶುಂಠಿ ₹ 30 ತುಟ್ಟಿಯಾಗಿದೆ. ಕೆಜಿ ಹಸಿಮೆಣಸಿನಕಾಯಿ ₹ 10 ಕಡಿಮೆಯಾಗಿದೆ. ತೆಂಗಿನಕಾಯಿ ಬೆಲೆ (ಒಂದಕ್ಕೆ) ₹ 2 ಕಡಿಮೆಯಾಗಿದೆ. 

‘ಈ ವಾರ ತುಂತುರು ಮಳೆಯಾಗುತ್ತಿದೆ. ಇದರಿಂದ ಜನರು ಹಾಪ್‌ಕಾಮ್ಸ್‌ ಕಡೆ ಧಾವಿಸಿ ತರಕಾರಿ ಖರೀದಿಸುವುದು ವಿರಳ. ತರಕಾರಿಗಳಿಗೆ ಬೇಡಿಕೆ ಇದೆ. ಆದರೆ, ಬೆಲೆ ಏರಿಕೆ ಆಗಿಲ್ಲ. ಕಳೆದ ವಾರ ಶುಂಠಿ ಕೆಜಿಗೆ ₹ 120 ಇತ್ತು. ಈ ವಾರ ₹ 30 ಏರಿಕೆಯಾಗಿದೆ’ ಎಂದು ಹಾಪ್‌ಕಾಮ್ಸ್‌ ವ್ಯಾಪಾರಿ ಮಹೇಶ್ ‘ಪ್ರಜಾವಾಣಿ’ಗೆ ಹೇಳಿದರು.

ಹಣ್ಣುಗಳು: ಫಲಗಳ ಪೈಕಿ ಕಿತ್ತಳೆ ದರ ₹ 20 ಇಳಿಕೆ ಕಂಡಿದೆ. ದಾಳಿಂಬೆ ₹ 20 ಹೆಚ್ಚಳವಾಗಿದೆ. ಉಳಿದ ಹಣ್ಣುಗಳ ಬೆಲೆಯಲ್ಲಿ ವ್ಯತ್ಯಾಸವಾಗಿಲ್ಲ.  

ಮೊಟ್ಟೆ ಬೆಲೆ ಇಳಿಕೆ: ಮೊಟ್ಟೆ ಬೆಲೆ ಈ ವಾರ ₹ 62 ಕಡಿಮೆಯಾಗಿದೆ. ಕಳೆದ ವಾರ ₹ 412 ಇತ್ತು. ಈ ವಾರ ₹ 360 ಆಗಿದೆ.

ಮಾಂಸ, ಮೀನು: ಕಳೆದೆರಡು ವಾರಗಳಿಂದ ಮೀನು ಹಾಗೂ ಚಿಕನ್‌ ಬೆಲೆಯಲ್ಲಿ ವ್ಯತ್ಯಾಸ ಕಂಡು ಬರುತ್ತಿದೆ. ಈ ವಾರವೂ ಅದು ಮುಂದುವರಿದಿದೆ.

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು