ಶುಕ್ರವಾರ, ಡಿಸೆಂಬರ್ 13, 2019
26 °C
ಮಲ್ಲಿಗೆ, ಕಾಕಡ, ಚೆಂಡು ಹೂ ತುಟ್ಟಿ, ಮಾಂಸ ದರ ಯಥಾಸ್ಥಿತಿ

ಚಾಮರಾಜನಗರ | ಹಣ್ಣು ತರಕಾರಿ ಬೆಲೆ ಹೆಚ್ಚಳ, ಜೇಬು ಸುಡುತ್ತಿದೆ ಈರುಳ್ಳಿ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಚಾಮರಾಜನಗರ: ಮದುವೆ, ಗೃಹ ಪ್ರವೇಶದಂತಹ ಶುಭ ಸಮಾರಂಭಗಳ ಭರಾಟೆಯ ನಡುವೆ ಮಾರುಕಟ್ಟೆಯಲ್ಲಿ ಕೆಲವು ತರಕಾರಿ, ಹಣ್ಣುಗಳ ದರ ಏರಿಕೆಯಾಗಿದ್ದರೆ, ಕೆಲವು ಹೂವುಗಳೂ ತುಟ್ಟಿಯಾಗಿವೆ.

ಮೂಸಂಬಿ ಕಳೆದ ವಾರ ₹ 80 ಇತ್ತು. ಈ ವಾರ ₹ 20 ಏರಿಕೆಯಾಗಿದೆ. ಸಪೋಟಾ, ದ್ರಾಕ್ಷಿ ₹ 20 ಹೆಚ್ಚಳವಾಗಿದೆ. ಏಲಕ್ಕಿ ಬಾಳೆ ₹ 15, ಪಚ್ಚಬಾಳೆ ₹ 10, ಸೇಬು ₹ 20 ಕಡಿಮೆಯಾಗಿದೆ. ಉಳಿದ ಎಲ್ಲ ಹಣ್ಣುಗಳ ಬೆಲೆ ಯಥಾಸ್ಥಿತಿ ಮುಂದುವರಿದಿದೆ.

‘ಮೂಸಂಬಿ ಮಾರುಕಟ್ಟೆಗೆ ಬರುವುದು ಕಡಿಮೆಯಾಗಿದೆ. ಬೇಡಿಕೆ ಹೆಚ್ಚಾಗಿದ್ದು, ಈ ವಾರ ₹ 20 ಏರಿಕೆಯಾಗಿದೆ. ಅನೇಕ ಹಣ್ಣುಗಳು ಮಾರುಕಟ್ಟೆಗೆ ಬಾರದ ವೇಳೆ ಬೆಲೆಯಲ್ಲಿ ವ್ಯತ್ಯಾಸ ಕಂಡುಬರುತ್ತದೆ. ವಾತಾವರಣಕ್ಕೆ ತಕ್ಕಂತೆ ಹಣ್ಣುಗಳಿಗೆ ಬೇಡಿಕೆ ಇರುತ್ತದೆ. ಅದರಂತೆ ಬೆಲೆಯಲ್ಲೂ ವ್ಯತ್ಯಾಸವಾಗಲಿದೆ’ ಎನ್ನುತ್ತಾರೆ ಹಾಪ್‌ಕಾಮ್ಸ್‌ ವ್ಯಾಪಾರಿ ಮಧು. 

ಹೂವುಗಳ ಬೆಲೆ ಹೆಚ್ಚಳ: ಹೂವುಗಳ ಪೈಕಿ  ಚೆಂಡು ಹೂ, ಮಲ್ಲಿಗೆ, ಕಾಕಡ ಬೆಲೆ ಹೆಚ್ಚಾಗಿದೆ. 

ಬಿಡಿ ಹೂವಿನ ಮಾರುಕಟ್ಟೆಯಲ್ಲಿ ಚೆಂಡು ಹೂ ₹ 30, ಸಗಂಧರಾಜ ₹ 70, ಮಲ್ಲಿಗೆ ₹ 200, ಕಾಕಡ ₹ 300 ಹೆಚ್ಚಳವಾಗಿದೆ. ಉಳಿದೆಲ್ಲ ಹೂವುಗಳ ಬೆಲೆಗಳು ಸ್ಥಿರವಾಗಿವೆ.

‘ಮದುವೆ, ಶುಭ ಸಮಾರಂಭಗಳಿದ್ದರೂ ಕೆಲ ದಿನಗಳು ಮಾತ್ರ ಬೆಲೆ ಹೆಚ್ಚಳವಾಗುತ್ತದೆ. ಪೂಜಾ ಕಾರ್ಯಕ್ರಮಗಳ ಹಿಂದಿನ ದಿನ ಮಾತ್ರ ಬೆಲೆಯಲ್ಲಿ ವ್ಯತ್ಯಾಸ ಕಂಡು ಬರುತ್ತದೆ’ ಎಂದು ಬಿಡಿ ಹೂವು ಮಾರಾಟಗಾರ ಎಂ.ರವಿಚಂದ್ರ ‘ಪ್ರಜಾವಾಣಿ’ಗೆ ತಿಳಿಸಿದರು.

ಮಾಂಸ ಮಾರುಕಟ್ಟೆಯಲ್ಲಿ ಈ ವಾರ 100 ಮೊಟ್ಟೆಗೆ ₹ 37 ಏರಿಕೆಯಾಗಿದ್ದು, ₹ 425 ದರ ಇದೆ. ಚಿಕನ್‌, ಮಟನ್‌ ಹಾಗೂ ಮೀನುಗಳ ಬೆಲೆಯಲ್ಲಿ ವ್ಯಾತ್ಯಾಸವಾಗಿಲ್ಲ.

ಜೇಬು ಸುಡುತ್ತಿದೆ ಈರುಳ್ಳಿ: ತರಕಾರಿಗಳ ಪೈಕಿ ಈರುಳ್ಳಿ ಗ್ರಾಹಕರ ಜೇಬು ಸುಡುತ್ತಿದೆ. ಕಳೆದ ವಾರ ₹ 40ರ ಆಸುಪಾಸಿನಲ್ಲಿದ್ದ ಕೆಜಿ ಈರುಳ್ಳಿ ದರ ಈ ವಾರ ₹ 60ರಿಂದ ₹ 73ರ ವರೆಗೆ ಇದೆ.  

ಕ್ಯಾರೆಟ್‌, ಮರಗೆಣಸು, ಬೀಟ್‌ರೂಟ್‌, ದಪ್ಪ ಮೆಣಸಿನಕಾಯಿಗಳ ಬೆಲೆ  ₹ 10, ಆಲೂಗೆಡ್ಡೆ, ಸೌತೆಕಾಯಿ, ಬದನೆಕಾಯಿ ₹ 5 ಹೆಚ್ಚಳವಾಗಿದೆ.

ಹಸಿ ಬಟಾಣಿ ₹ 10, ನಿಂಬೆಹಣ್ಣು (ಒಂದರ) ₹ 1 ಕಡಿಮೆಯಾಗಿದೆ. ಎಲ್ಲ ಬಗೆಯ ಸೊಪ್ಪುಗಳ (ಕಟ್ಟು) ಬೆಲೆ ₹ 10 ಇದೆ. 

ಪ್ರತಿಕ್ರಿಯಿಸಿ (+)