ಗರಿಷ್ಠ ತೆರಿಗೆ ವಿಧಿಸುವ ಭಾರತ: ಟ್ರಂಪ್‌ ಕಿಡಿ

ಶನಿವಾರ, ಏಪ್ರಿಲ್ 20, 2019
29 °C

ಗರಿಷ್ಠ ತೆರಿಗೆ ವಿಧಿಸುವ ಭಾರತ: ಟ್ರಂಪ್‌ ಕಿಡಿ

Published:
Updated:
Prajavani

ವಾಷಿಂಗ್ಟನ್‌: ‘ಜಗತ್ತಿನಲ್ಲೇ ಅತಿ ಹೆಚ್ಚು ತೆರಿಗೆ ವಿಧಿಸುವ ರಾಷ್ಟ್ರಗಳಲ್ಲಿ ಭಾರತವು ಒಂದು’ ಎಂದು ಅಮೆರಿಕ ಅಧ್ಯಕ್ಷ ಡೊನಾಲ್ಡ್‌ ಟ್ರಂಪ್‌ ಕಿಡಿಕಾರಿದ್ದಾರೆ.

‘ಹ್ಯಾರ್ಲೆ ಡೇವಿಡ್‌ಸನ್‌ ಮೋಟಾರ್‌ಸೈಕಲ್‌ಗಳು ಸೇರಿದಂತೆ ಅಮೆರಿಕದ ಹಲವು ಉತ್ಪನ್ನಗಳ ಮೇಲೆ ಶೇಕಡ 100ರಷ್ಟು ಸುಂಕ ವಿಧಿಸಲಾಗಿದೆ’ ಎಂದು ಅಸಮಾಧಾನ
ವ್ಯಕ್ತಪಡಿಸಿದ್ದಾರೆ.

ರಾಷ್ಟ್ರೀಯ ರಿಪಬ್ಲಿಕನ್‌ ಸಂಸದೀಯ ಸಮಿತಿ ಉದ್ದೇಶಿಸಿ ಮಾತನಾಡಿದ ಅವರು, ‘ದುಬಾರಿ ಸುಂಕ ವಿಧಿಸುವುದು ಉತ್ತಮ ಬೆಳವಣಿಗೆ ಅಲ್ಲ. ಭಾರತದಿಂದ ರಫ್ತು ಮಾಡುವ ಹಲವು ಉತ್ಪನ್ನಗಳಿಗೆ ನಾವು ಯಾವುದೇ ರೀತಿಯ ಸುಂಕ ವಿಧಿಸುವುದಿಲ್ಲ’ ಎಂದು ಪ್ರತಿಪಾದಿಸಿದರು.

‘ಭಾರತ ಸುಂಕಗಳ ರಾಜ. ಅಮೆರಿಕದ ಉತ್ಪನ್ನಗಳ ಮೇಲೆ ಅಪಾರ ಸುಂಕ ವಿಧಿಸಲಾಗುತ್ತಿದೆ’ ಎಂದು ಟ್ರಂಪ್‌ ಹಿಂದೆಯೂ ಹಲವು ಬಾರಿ ಟೀಕಿಸಿದ್ದರು.

ಸುಧಾರಿಸಿದ ಸಂಬಂಧ: ಚೀನಾ ಜತೆಗಿನ ಸಂಬಂಧವನ್ನು ವಿಶ್ಲೇಷಿಸಿದ ಟ್ರಂಪ್‌, ‘ಈಗ ಆ ದೇಶದ ಜತೆ ವ್ಯಾಪಾರ ಸಂಬಂಧ ಸುಗಮವಾಗಿ ಸಾಗುತ್ತಿದೆ. ಚೀನಾಗೂ ನಮ್ಮ ಅಗತ್ಯವಿದೆ’ ಎಂದು ಇದೇ ಸಂದರ್ಭದಲ್ಲಿ ಹೇಳಿದರು.

‘ಅಮೆರಿಕದ ಕಾರ್ಮಿಕರ ಹಿತದೃಷ್ಟಿಯಿಂದ ಮುರಿದುಬಿದ್ದಿರುವ ವ್ಯಾಪಾರ ಒಪ್ಪಂದವನ್ನು ಮತ್ತೆ ಕೈಗೆತ್ತಿಕೊಳ್ಳಲಾಗಿದೆ. ನಮ್ಮ ದೇಶದಿಂದ ಚೀನಾ ಹೆಚ್ಚು ಲಾಭ ಪಡೆದಿದೆ’ ಎಂದು ಹೇಳಿದರು.

ಚೀನಾದಿಂದ ಆಮದು ಮಾಡಿಕೊಳ್ಳಲಾಗುವ ಉಕ್ಕು ಮತ್ತು ಆಲ್ಯುಮಿನಿಯಂ ವಸ್ತುಗಳ ಮೇಲೆ ಅತಿ ಹೆಚ್ಚು ಸುಂಕವನ್ನು ಕಳೆದ ವರ್ಷ ಮಾರ್ಚ್‌ನಲ್ಲಿ ಟ್ರಂಪ್‌ ವಿಧಿಸಿದ್ದರು.

ಚೀನಾ ಸಹ ಗರಿಷ್ಠ ಆಮದು ಸುಂಕ ಹೇರುವ ಮೂಲಕ ಅಮೆರಿಕ ವಿರುದ್ಧ ತಿರುಗೇಟು ನೀಡಿತ್ತು. ಇದರಿಂದಾಗಿ, ವಿಶ್ವದ ಎರಡು ಬೃಹತ್‌ ಆರ್ಥಿಕ ರಾಷ್ಟ್ರಗಳಾದ ಚೀನಾ ಮತ್ತು ಅಮೆರಿಕ ವಾಣಿಜ್ಯ ಸಮರಕ್ಕೆ ಮುಂದಾಗಿದ್ದವು.

ಬರಹ ಇಷ್ಟವಾಯಿತೆ?

 • 4

  Happy
 • 0

  Amused
 • 0

  Sad
 • 1

  Frustrated
 • 2

  Angry

Comments:

0 comments

Write the first review for this !