ಗುರುವಾರ , ಸೆಪ್ಟೆಂಬರ್ 23, 2021
28 °C
ಅಸಂಘಟಿತ ಕಾರ್ಮಿಕರ ಒಡಲಾಳದ ನೋವಿನ ಧ್ವನಿಗಿಲ್ಲ ಯಾರ ಬೆಂಬಲ...

‘ನಿಲ್ಲಲು ನೆಲೆಯಿಲ್ಲ; ಕನಿಷ್ಠ ಸೌಕರ್ಯಗಳು ನಮಗಿಲ್ಲ...’

ಡಿ.ಬಿ.ನಾಗರಾಜ Updated:

ಅಕ್ಷರ ಗಾತ್ರ : | |

Prajavani

ವಿಜಯಪುರ: ‘ದಿನಾಲೂ ಮೂರೊತ್ತು ಮನೆ ಮಂದಿ ಉಣ್ಣಬೇಕು ಎಂದರೇ, ಹೆಗಲಿಗೆ ಸನಿಕೆ, ಪಿಕಾಶಿ, ಗುದ್ದಲಿ ಹಿಡಿದು ನಸುಕಿನಲ್ಲೇ ನಾವ್ ಊರ್‌ ಬಿಡ್ಬೇಕು... ಊರ್‌ ಬಿಡುವಾಗ್ಲೇ ರೊಟ್ಟಿ ಬುತ್ತಿ, ಕುಡಿಯಾಕ ನೀರ್ ನಮ್‌ ತಲೆ ಮೇಲಿರಬೇಕು...’

‘ಇದು ಒಂದ್ ದಿನದ ಕತೆಯಲ್ಲ. ವರ್ಸದ 365 ದಿನವೂ ತಪ್ಪದ ಕಾಯಕ. ಒಂದ್ ತಿಂಗ್ಳಲ್ಲಿ ನಮಗ 10 ದಿನ ಕೆಲ್ಸ ಸಿಕ್ಕರೆ ನಮ್ ಪುಣ್ಯ...’

ನೆತ್ತಿ ಸುಡುವ ಕೆಂಡದಂಥಹ ಬಿಸಿಲನ್ನು ಲೆಕ್ಕಿಸದೆ, ವಿಜಯಪುರದ ಸೊಲ್ಲಾಪುರ ರಸ್ತೆಯ ಬಿಎಲ್‌ಡಿಇ ಸಂಸ್ಥೆ ಮುಂಭಾಗ, ಅಥಣಿ ರಸ್ತೆಯ ಗೋದಾವರಿ ವೃತ್ತದಲ್ಲಿ ಬುಧವಾರ ಕೂಲಿ ಕೆಲಸ ಅರಸಿ ನೆರೆದಿದ್ದ ಕಾರ್ಮಿಕ ಸಮೂಹದ ಮಾತುಗಳಿವು.

‘ಬಿಸಿಲು, ಮಳೆ, ಚಳಿ ಎನ್ನದೇ ನಿತ್ಯವೂ ಇದೇ ಜಾಗದಲ್ಲಿ ತಂಡೋಪ ತಂಡವಾಗಿ ಹಲ ವರ್ಷಗಳಿಂದ ನಿಲ್ಲುತ್ತಿದ್ದೇವೆ. ಇಲ್ಲಿಯವರೆಗೂ ಯಾರೊಬ್ಬರೂ ನಮ್ಗ ಕನಿಷ್ಠ ಸೌಕರ್ಯ ಒದಗಿಸಲು ಮುಂದಾಗಿಲ್ಲ. ನಾವೇನು ಮನುಷ್ಯರೋ ? ಇಲ್ಲವೋ ಎಂಬುದೇ ಅರಿವಾಗದಾಗದೈತಿ.

ನಾವ್‌ ನಿತ್ಯ ಇಲ್ಲಿಯೇ ಕೂಲಿ ಅರಸಿ ನಿಲ್ತೀವಿ ಅಂಥಹ ಎಲ್ಲರಿಗೂ ಗೊತ್ತೈತಿ. ಕಾರ್ಮಿಕ ಅಧಿಕಾರಿಗಳಿಂದ ಹಿಡಿದು, ಸಂಘಟನೆಯ ಪ್ರಮುಖರು ಯಾರೊಬ್ಬರೂ ಇಲ್ಲಿವರೆಗೂ ಬಂದು ನಮ್ಮ ಕಷ್ಟ ಸುಖ ಆಲಿಸಿಲ್ಲ.

ಇವತ್ತಿನ (ಮೇ 1) ವಿಶೇಷ ಏನು ಎಂಬುದು ನಮಗರಿವಿಲ್ಲ. ಮಧ್ಯಾಹ್ನ ಎರಡು ದಾಟ್ತು. ನೂರಕ್ಕೂ ಹೆಚ್ಚು ಮಂದಿಗೆ ಕೆಲಸಾನೆ ಸಿಗಲಿಲ್ಲ. ಊರಿಂದ ಹೊತ್ತು ತಂದಿದ್ದ ಬುತ್ತಿಯೂ ಮುಗಿದೈತಿ. ವಾಪಸ್‌ ಹೋಗಲು ಖರ್ಚಿಗೆ ಕಾಸು ಇಲ್ಲದಂಗಗಾಗೈತಿ...

ಸಾಲ ಮಾಡ್ಕೊಂಡು ಹೊಳ್ಳಿ ಊರಿಗೆ ಹೋಗಬೇಕಾಗೈತಿ. ಇಷ್ಟೊತ್ತಿನ ತನ್ಕ ಬಿಸಿಲ ಝಳ ತಡೆಯಲಕ್ಕಾಗಿಲ್ಲ. ರಸ್ತೆ ಬದಿಯಿದ್ದರೆ ಪೊಲೀಸರು ದೂರ ನಿಲ್ರೀ ಅನ್ತ್ವಾರೆ. ಅಂಗಡಿ ಮುಂದ ಹೋದ್ರೇ ಮಾಲೀಕ ಏಯ್ ಅತ್ತ ಹೋಗ್ರೋ ಅಂಥಹ ಗದರುತ್ತ್ವಾನೆ. ಇಲ್ಲೊಂದು ಮರವೂ ಇಲ್ಲ. ವಿಧಿಯಿಲ್ಲದೆ ಕೆಲ್ಸ ಸಿಗೋ ತನ್ಕ ಬಿಸಿಲಲ್ಲೇ ನಿಂತಿರುತ್ತೇವೆ. ಕನಿಷ್ಠ ಪಕ್ಷ ಕುಡಿಯೋ ನೀರು ಇಲ್ಲೆಲ್ಲೂ ನಮ್ಗ ಸಿಗಲ್ಲ’ ಎಂದು ಬಸವನಬಾಗೇವಾಡಿಯ ಶಿವು ಅಂಗಡಗೇರಿ, ದೇವಾಪುರದ ವಿಠ್ಠಲ ಕೊಲ್ಹಾರ, ವಿಜಯಪುರದ ಬಸವರಾಜ ಪೂಜಾರಿ, ಸವನಹಳ್ಳಿಯ ಶ್ರೀಮಂತ ಪಡಸಲಗಿ ‘ಪ್ರಜಾವಾಣಿ’ ಬಳಿ ತಮ್ಮ ನಿತ್ಯದ ತೊಳಲಾಟವನ್ನು ಎಳೆ ಎಳೆಯಾಗಿ ಬಿಚ್ಚಿಟ್ಟರು.

‘ನಮ್ಮೂರುಗಳಲ್ಲೇ ನೀರಾವರಿ ಇದ್ದಿದ್ದರೇ ಕೆಲ್ಸ ಹುಡ್ಕೊಂಡು ಎಲ್ಗೂ ಹೋಗ್ಬೇಕಿರಲಿಲ್ಲ. ಅಂಥಹ ಭಾಗ್ಯ ಇನ್ನೂ ಬಂದಿಲ್ಲ. ಮಳೆಯಂತೂ ದೂರದ ಮಾತಾಯ್ತು. ಊರಲ್ಲಿ ಗ್ರಾಮ ಪಂಚಾಯ್ತಿಯವ್ರು ಯಾವೊಂದು ಮಾಹಿತಿ ಕೊಡಲ್ಲ. ನಾವು ಬೇಡ್ಕೊಂಡು ತಿನ್ನೋರಲ್ಲ. ಮೈ ಮುರಿದು ದುಡ್ಕೊಂಡು ತಿನ್ನೋರು. ನಮ್ಗ ನಿತ್ಯ ಕೆಲಸ ಸಿಕ್ಕರೆ ಸಾಕು. ಬೇರೆ ಏನು ಬೇಕಿಲ್ಲ.

ಅಂದೇ ದುಡ್ಕೊಂಡು ಅಂದೇ ತಿನ್ನೋ ಜಾತಿ ನಮ್ದು. ಇಂಥದ್ರಲ್ಲಿ ತಿಂಗಳಾಗ 10 ದಿನ ಕೆಲ್ಸ ಸಿಗವಲ್ದು. ಯಾರೊಬ್ಬರಿಗೂ ಬ್ಯಾಡವಾದ ಕೂಸುಗಳಂಗ ಬದುಕಕ್ತ್ವೀ’ ಎಂದು ಹೇಳಿದರು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು