ಮೇಯರ್‌ ಮೇಡಂ, ಇಲ್ನೋಡಿ ನಮ್‌ ಸಮಸ್ಯೆ!

7

ಮೇಯರ್‌ ಮೇಡಂ, ಇಲ್ನೋಡಿ ನಮ್‌ ಸಮಸ್ಯೆ!

Published:
Updated:

ಬೆಂಗಳೂರು: ನೂತನ ಮೇಯರ್‌ ಗಂಗಾಂಬಿಕೆ ಅವರಿಗೆ ಅಹವಾಲು ಹೇಳಿಕೊಳ್ಳಲು ‘ಪ್ರಜಾವಾಣಿ’ ಕಲ್ಪಿಸಿರುವ ಅವಕಾಶಕ್ಕೆ ಸಾರ್ವಜನಿಕರಿಂದ ಭಾರಿ ಪ್ರತಿಕ್ರಿಯೆ ವ್ಯಕ್ತವಾಗಿದೆ. ಬಂದಿರುವ ದೂರುಗಳಲ್ಲಿ ರಸ್ತೆಗೆ ಸಂಬಂಧಿಸಿದ ಸಮಸ್ಯೆಗಳೇ ಹೆಚ್ಚಾಗಿವೆ. ರಾಜಕಾಲುವೆಯ ಹೂಳು ಎತ್ತದಿರುವುದಕ್ಕೆ ಆಕ್ಷೇಪ ವ್ಯಕ್ತವಾಗಿದೆ. ಮೇಯರ್‌ಗೆ ಜನರು ಸಲ್ಲಿಸಿರುವ ಕೆಲವು ಅಹವಾಲುಗಳು ಇಲ್ಲಿವೆ.

ರಸ್ತೆ ಗುಂಡಿ ಮುಚ್ಚಿಸಿ

ರಸ್ತೆಗಳನ್ನು ಗುಂಡಿ ಮುಕ್ತವಾಗಿಸಲು ಮತ್ತು ಅವುಗಳ ಅಭಿವೃದ್ಧಿಗೆ ಆದ್ಯತೆಯ ಮೇಲೆ ಕ್ರಮ ಕೈಗೊಳ್ಳಬೇಕು. ಒಳ ಚರಂಡಿ ವ್ಯವಸ್ಥೆಯನ್ನು ಬಲಪಡಿಸಬೇಕು. ಈ ಎರಡು ಕೆಲಸಗಳನ್ನು ಮೇಯರ್‌ ಆದ್ಯತೆಯ ಮೇರೆಗೆ ಮಾಡಬೇಕೆನ್ನುವುದು ನಗರದ ಜನರ ಆಶಯವಾಗಿದೆ.

–ರಮೇಶ್ ಎಂ.ಬಿ, ಭರತ್‌ನಗರ

ರಸ್ತೆ ಉಬ್ಬುಗಳನ್ನು ತೆರವುಗೊಳಿಸಿ

ವೇಗ ನಿಯಂತ್ರಣಕ್ಕಾಗಿ ಇತ್ತೀಚೆಗೆ ಯಲಹಂಕ ಪೊಲೀಸ್ ಠಾಣೆಯಿಂದ ದೊಡ್ಡಬಳ್ಳಾಪುರದ ಆವಲಹಳ್ಳಿವರೆಗೆ ಅವೈಜ್ಞಾನಿಕವಾಗಿ ರಸ್ತೆ ಉಬ್ಬುಗಳನ್ನು ನಿರ್ಮಿಸಲಾಗಿದೆ. ಅವುಗಳಿಂದ ದ್ವಿಚಕ್ರ ವಾಹನ ಸವಾರರಿಗೆ ಬೆನ್ನುನೋವು ಅತಿಯಾಗಿ ಕಾಣಿಸಿಕೊಳ್ಳುತ್ತಿದೆ. ಅವುಗಳನ್ನು ತೆರವುಗೂಳಿಸಿ

–ಅಂದಾನಯ್ಯ,ಯಲಹಂಕ

ರಾಜಕಾಲುವೆ ಹೂಳೆತ್ತಿ

ಹೊಮ್ಮದೇವನಹಳ್ಳಿ ರಸ್ತೆಯ ಎರಡನೇ ಅಡ್ಡ ರಸ್ತೆಯ ಮೈಲ್‌ ಸ್ಟೋನ್‌ ಶಾಲೆಯ ಬಳಿಯ ರಾಜ ಕಾಲುವೆಯ ಹೂಳೆತ್ತಿಲ್ಲ. ಇದರಿಂದ ನೀರು ಸರಾಗವಾಗಿ ಹರಿಯಲು ಆಗುತ್ತಿಲ್ಲ. ಸುತ್ತಮುತ್ತಲಿನ ಪ್ರದೇಶವನ್ನು ಕಳೆ ಗಿಡಗಳು ಆವರಿಸಿಕೊಂಡಿವೆ. ಅಂಜನಾಪುರದ ಡಬಲ್‌ ರಸ್ತೆ ಬಳಿ ಬೀದಿ ದೀಪಗಳೇ ಇಲ್ಲ. ಸುತ್ತಮುತ್ತ ಕಸದ ಸಮಸ್ಯೆ ಅತಿಯಾಗಿದೆ. ಕನಕಪುರ ರಸ್ತೆಯ ಎ2ಬಿ ರಸ್ತೆ ಎದುರಿನ ಬೀದಿ ಸಂಪೂರ್ಣ ಗುಂಡಿಮಯವಾಗಿದೆ. ಹಾಗಾಗಿ ಮೂಲಸೌಕರ್ಯಗಳಿಗೆ ಹೆಚ್ಚಿನ ಆದ್ಯತೆ ನೀಡಬೇಕು. 

–ರೇಣುಕಾ ಪ್ರಸಾದ್‌  

ಒಳಚರಂಡಿ ದುರಸ್ತಿಗೊಳಿಸಿ

ರಾಜ್‌ಕುಮಾರ್‌ ರಸ್ತೆ ಎದುರಿನ ಟಿವಿಎಸ್‌ ಶೋರೂಮ್‌ ಬಳಿಯಲ್ಲಿರುವ ಒಳಚರಂಡಿ ಮಳೆ ಬಂದಾಗ ಉಕ್ಕುತ್ತದೆ. ವಾಹನ ಸವಾರರು, ಪಾದಚಾರಿಗಳು ಚರಂಡಿಯ ತ್ಯಾಜ್ಯದ ನೀರಿನಲ್ಲಿ ಓಡಾಡುವಂತಾಗಿದೆ. ಶೀಘ್ರ ಅದನ್ನು ದುರಸ್ತಿಗೊಳಿಸಿ.

–ಆನಂದ, ರಾಜಾಜಿನಗರ 2ನೇ ಬ್ಲಾಕ್‌

ಅಂಡರ್‌ಪಾಸ್‌ ಕಾಮಗಾರಿ ಪೂರ್ಣಗೊಳಿಸಿ

ಕಳೆದ ನಾಲ್ಕು ವರ್ಷಗಳಿಂದ ಕೊಡಿಗೇಹಳ್ಳಿ ಬಳಿ ರೈಲ್ವೆ ಅಂಡರ್‌ಪಾಸ್‌ ಕಾಮಗಾರಿ ನಿಧಾನಗತಿಯಲ್ಲಿ
ಸಾಗುತ್ತಿದೆ. ಮತ್ತೊಂದು ವರ್ಷ ಸಾರ್ವಜನಿಕರನ್ನು ಕಾಯಿಸ್ಎ ಕೂಡಲೇ ಮೇಯರ್‌ ಅವರು ಈ ಬಗ್ಗೆ ಗಮನಹರಿಸಿ, ಕಾಮಗಾರಿ ತ್ವರಿತಗತಿಯಲ್ಲಿ ಮುಗಿಯುವಂತೆ ನೋಡಿಕೊಳ್ಳಬೇಕು.  

–ನಾರಾಯಣ ಭಟ್‌, ಟೆಲಿಕಾಂ ಬಡಾವಣೆ, ಕೊಡಿಗೇಹಳ್ಳಿ

ಇಂಗುಗುಂಡಿ ನಿರ್ಮಿಸಿ

ಇಳಿಜಾರು ರಸ್ತೆಯ ಇಕ್ಕೆಲಗಳಲ್ಲಿ ಇಂಗು ಗುಂಡಿಗಳನ್ನು ನಿರ್ಮಾಣ ಮಾಡಿದರೆ, ಮಳೆ ನೀರು ಗುಂಡಿಯ ಮೂಲಕ ಇಳಿದು ಅಂತರ್ಜಲ ಮಟ್ಟ
ಹೆಚ್ಚಾಗಲು ಅನುಕೂಲವಾಗುತ್ತದೆ. ತಗ್ಗು ಪ್ರದೇಶದ ಮನೆಗಳಿಗೆ ನೀರು ನುಗ್ಗವ ಸಂಭವವನ್ನೂ ಇದರಿಂದ ತಪ್ಪಿಸಬಹುದು. 

–ಜಿ.ಕೆ.ನರಸಿಂಹರಾವ್‌

ಬೀದಿನಾಯಿಗಳನ್ನು ನಿಯಂತ್ರಿಸಿ

ನಗರದಲ್ಲಿ ಬೀದಿನಾಯಿಗಳ ಕಾಟ ಹೆಚ್ಚುತ್ತಿದೆ. ಪ್ರತಿನಿತ್ಯವೂ ಸುತ್ತಮುತ್ತಲಿನ ಜನ ಭಯದ ನೆರಳಿನಲ್ಲೇ ಓಡಾಡುವಂತಾಗಿದೆ.
ಚಿಕ್ಕ ಮಕ್ಕಳನ್ನು
ಆಟವಾಡಲು ಹೊರಗೆ ಬಿಡಲೇಬಾರದು ಎನ್ನುವಂತಹ ಸ್ಥಿತಿ ನಿರ್ಮಾಣವಾಗಿದೆ. ಕೂಡಲೇ ಈ ಬಗ್ಗೆ ಕ್ರಮವಹಿಸಿ. 

–ಶ್ವೇತಾ, ಉಳ್ಳಾಲ ಮುಖ್ಯರಸ್ತೆ

ಡಾಂಬರೀಕರಣಕ್ಕೆ ಒತ್ತು ನೀಡಿ

ನಗರದ ಸುತ್ತಮುತ್ತಲಿನ ಪ್ರದೇಶಗಳಲ್ಲಿ ರಸ್ತೆಗಳು ಬಹಳಷ್ಟು ಹದಗೆಟ್ಟಿವೆ. ಮಳೆಗಾಲದಲ್ಲಿ ಇನ್ನಷ್ಟು ಹದಗೆಡುತ್ತಿವೆ.
ಹಾಗಾಗಿ ರಸ್ತೆ ಡಾಂಬರೀಕರಣಕ್ಕೆ ಸೂಕ್ತ ಕ್ರಮ ವಹಿಸಬೇಕು. ಇದರಿಂದ ಸಾರ್ವಜನಿಕರು ನಿತ್ಯ ಗೋಳಾಡುವುದನ್ನು ತಪ್ಪಿಸಿದಂತಾಗುತ್ತದೆ.

–ಜಿ.ಎಲ್.ನಾಗರಾಜ, ಪಟ್ಟೇಗರಪಾಳ್ಯ

ವಾಹನಗಳ ಸಂಖ್ಯೆ ನಿಯಂತ್ರಿಸಿ

ನಗರದಲ್ಲಿ ದಿನೇ ದಿನೇ ವಾಹನಗಳ ಸಂಖ್ಯೆ ಹೆಚ್ಚಾಗುತ್ತಿವೆ. ಇದರಿಂದ ವಾತಾವರಣ ಹದಗೆಡುತ್ತಿದೆ. ವಾಹನ ಸಂಖ್ಯೆಗಳನ್ನು ತಗ್ಗಿಸಲು ಮತ್ತು ಉತ್ತಮ ಪರಿಸರ ನಿರ್ಮಾಣಕ್ಕಾಗಿ ಅಗತ್ಯ ಕ್ರಮ
ಕೈಗೊಳ್ಳಬೇಕು.    

–ಮರಲಿಂಗ, ರಿಚ್ಮಂಡ್ ಸರ್ಕಲ್

ನಿತ್ಯ ಕಸ ವಿಲೇವಾರಿ ತಪ್ಪದೆ ನಡೆಯಲಿ

ನಗರದ ಯಾವ ಮೂಲೆಯನ್ನೂ ಬಿಡದೆ, ನಿತ್ಯ ಸರಿಯಾಗಿ‌ ಕಸ ವಿಲೇವಾರಿ ಆಗಬೇಕು. ಮನೆ ಮುಂದೆ ಸ್ಥಳಾವಕಾಶ ಇಲ್ಲದಿದ್ದರೂ, ಜನರು ಎರಡು-ಮೂರು ವಾಹನಗಳನ್ನು ನಿಲ್ಲಿಸುತ್ತಾರೆ.  ರಸ್ತೆಯ ಎರಡು ಬದಿಯಲ್ಲೂ ವಾಹನಗಳನ್ನು ನಿಲ್ಲಿಸುವವರೂ ಇದ್ದಾರೆ. ಇದರಿಂದ ಸಾರ್ವಜನಿಕರು ‌ಓಡಾಡಲು ಸಾಕಷ್ಟು ತೊಂದರೆಗಳಾಗುತ್ತಿವೆ. ಹಾಗಾಗಿ ಬಿಬಿಎಂಪಿ ಇದಕ್ಕೆ ಸೂಕ್ತ ಕ್ರಮ ಕೈಗೊಳ್ಳಬೇಕು.

–ಎನ್.ವಿ.ಅಂಬಾಮಣಿ ಮೂರ್ತಿ

ನಮ್ಮ ವಾಟ್ಸ್‌ಆ್ಯಪ್ ಸಂಖ್ಯೆ: 95133 22930

Tags: 

ಬರಹ ಇಷ್ಟವಾಯಿತೆ?

  • 1

    Happy
  • 0

    Amused
  • 0

    Sad
  • 0

    Frustrated
  • 2

    Angry

Comments:

0 comments

Write the first review for this !