ಭಾನುವಾರ, ಸೆಪ್ಟೆಂಬರ್ 26, 2021
21 °C

‘ಮೀ ಟೂ’ಗಳ ದಾಳಿ

ಪ್ರಕಾಶ್‌ ಶೆಟ್ಟಿ Updated:

ಅಕ್ಷರ ಗಾತ್ರ : | |

Deccan Herald

ಈಚೆಗಷ್ಟೇ ಕೇರಳ ಮತ್ತು ಕೊಡಗಿನ ಮೇಲೆ ಪ್ರಕೃತಿ ಹೇಗೆ ಪ್ರಕೋಪ ತೋರಿಸಿದ್ದಾಳೆ ಎಂಬುದನ್ನು ನಾವು ಮರೆಯುವಂತಿಲ್ಲ. ಅದರ ಬೆನ್ನಲ್ಲೇ ಸ್ತ್ರೀ ಶಕ್ತಿ ‘ಮೀ- ಟೂ’ ರೂಪ ತಾಳಿ ದೇಶದಾದ್ಯಂತ ತಾಂಡವವಾಡತೊಡಗಿದೆ. ಈ ಮೀ-ಟೂಗೆ ಹೋಲ್‌ಸೇಲಾಗಿ ಚಂಡ ಪ್ರಚಂಡ ಗಂಡು ಪ್ರಾಣಿಗಳು ಬಲಿಯಾಗುತ್ತಿದ್ದಾರೆ. 

ಮೀ-ಟೂವಿನಿಂದ ಗುಟ್ಟು ರಟ್ಟಾದ ಬಗ್ಗೆಯೇ ಈಗ ಎಲ್ಲೆಲ್ಲೂ ಗಹನವಾದ ಚರ್ಚೆಗಳು ನಡೆಯುತ್ತಿವೆ. ಅಂತಹ ಒಂದು ಬಿಸಿ ಬಿಸಿ ಮಾತುಕತೆಯು ಮನೆಯೊಡತಿ ಮತ್ತು ಕೆಲಸದಾಕೆ ನಡುವೆ ನಡೆಯಲಾರಂಭಿಸಿತು. ಅತ್ತ ಒಮ್ಮೆ ಕಿವಿ ಕೊಡಿ.

ಕೆಲಸದಾಕೆ: ಅಮ್ಮಾವ್ರೆ, ಎಲ್ಲರೂ ಅದೇನೋ ಮೀ-ಟೂ, ಮೀ-ಟೂ ಅಂತಿರ್ತಾರಲ್ಲ. ಏನದು?

ಮನೆಯೊಡತಿ: ಓಹ್, ಅದಾ? ನಮ್ಮ ಸುತ್ತ ಮುತ್ತ ಅನೇಕ ಗೂಳಿಗಳು ಇರುತ್ತೆ. ಅವುಗಳು ಮಹಿಳೆಯರ ಮೇಲೆ ಆಕ್ರಮಣ ಮಾಡುತ್ತಿರುತ್ತವೆ. ಹಾಗೆ ಆಕ್ರಮಣಕ್ಕೊಳಗಾದ ಕೆಲವು ಮಹಿಳೆಯರು ಬಹಳ ವರ್ಷಗಳ ನಂತರ ‘ನನಗೂ ಹಾಗಾಗಿತ್ತು’ ಎಂದು ಖ್ಯಾತರನ್ನೆಲ್ಲಾ ಕುಖ್ಯಾತರನ್ನಾಗಿಸುತ್ತಿದ್ದಾರೆ.

ಕೆಲಸದಾಕೆ: ಛೆ, ಛೇ… ಗೂಳಿಗಳು ಹಾಗೆ ಮಾಡುತ್ತೇನಮ್ಮಾ? ನನಗೆ ನಂಬೋಕಾಗಲ್ಲ.

ಮನೆಯೊಡತಿ: ಅಯ್ಯೋ, ನೀನೊಬ್ಬಳು ಪೆದ್ದು! ಗೂಳಿಗಳೆಂದರೆ ಗಂಡು ಪ್ರಾಣಿಗಳು ಅಂತ ಅರ್ಥ! ಓಹ್… ಗಂಡು ಪ್ರಾಣಿ ಅಂದ್ಬಿಟ್ಟು ಮತ್ತೆ ನಿನ್ನನ್ನು ಕನ್‌ಫ್ಯೂಸ್ ಮಾಡುತ್ತಿದ್ದೇನೆ. ಸರಿ, ಕೆಲವು ಗಂಡಸರು ಗೂಳಿ ತರ ಇರ್ತಾರೆ ನೋಡು… ಅವರನ್ನು ಗೂಳಿ ಅಂದೆ ಅಷ್ಟೆ.

ಕೆಲಸದಾಕೆ: ಹಾಗೋ! ಆದರೆ ಇವರೆಲ್ಲರೂ ಈಗ ಒಮ್ಮಿಂದೊಮ್ಮೆಲ್ಲೇ ಮೀ-ಟೂ ಅನ್ನುತ್ತಾ ಸಿಟ್ಟು ತೋರಿಸಲು ಕಾರಣವೇನಮ್ಮಾ?

ಮನೆಯೊಡತಿ: ಅದು ಯಾಕೆಂದ್ರೆ… ಅವರ ಮೇಲೆ ಲೈಂಗಿಕ ದೌರ್ಜನ್ಯ ನಡೆದಾಗ ‘ಬೇಟಿ ಬಚಾವೋ’ ಇರಲಿಲ್ಲ. ಈಗ ನಮ್ಮ ಕೇಂದ್ರ ಸರ್ಕಾರದ ಯೋಜನೆಗಳಲ್ಲಿ ‘ಬೇಟಿ ಬಚಾವೋ’ ಒಂದಾಗಿರುವುದರಿಂದ ಈ ಮಹಿಳೆಯರು ಧ್ವನಿ ಎತ್ತಿದ್ದಾರೆ.

ಕೆಲಸದಾಕೆ: ಅಂದರೆ ಸರ್ಕಾರ ಈ ಗೂಳಿಗಳನ್ನೆಲ್ಲಾ ಸುಮ್ಮನೆ ಬಿಡೊಲ್ಲ. ಅಲ್ಲವೇನಮ್ಮಾ?

ಮನೆಯೊಡತಿ: ಸುಮ್ಮನೆ ಬಿಡಲ್ಲಾಂತ ಕೇಂದ್ರದ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಸಚಿವೆ ಕಟ್ಟುನಿಟ್ಟಾಗಿ ಮೀ-ಟೂಗೆ ಬೆಂಬಲ ಕೂಡಾ ನೀಡಿದ್ದಾರೆ. ಆದರೆ…

ಕೆಲಸದಾಕೆ: ಆದರೇನಮ್ಮಾ? ಅವರನ್ನೆಲ್ಲಾ ಒದ್ದು ಒಳಗೆ ಹಾಕಿದ್ರಾಯಿತು!

ಮನೆಯೊಡತಿ: ಅದು ಅಷ್ಟು ಸುಲಭವಿಲ್ಲ ತಾಯಿ! ಈ ಗೂಳಿಗಳು ಅಂದೆನಲ್ಲಾ... ಇವರೆಲ್ಲಾ ಖ್ಯಾತನಾಮರು!

ಕೆಲಸದಾಕೆ: ಹಾಗೇಂತ ಅವರಿಗಾಗಿ ಕಾನೂನು ಬದಲಾವಣೆ ಮಾಡೋಕಾಗುತ್ತೇನಮ್ಮಾ? ಅನೈತಿಕ ಸಂಬಂಧ ಅಪರಾಧವಲ್ಲಾಂತ ಮೊನ್ನೆ ಮಾಡಿದ್ರಲ್ಲ… ಹಾಗೇ!

ಮನೆಯೊಡತಿ: ಪರವಾಗಿಲ್ವೇ ನೀನು! ಈಗ ಏನಾಗಿದೆ ಅಂದ್ರೆ, ಸಚಿವ ದೊರೆಯೇ ಈ ಮೀ-ಟೂ ಪಟ್ಟಿಯಲ್ಲಿ ಸೇರ್ಕೋಂಡುಬಿಟ್ಟಿದ್ದಾರೆ ಕಣೇ!

ಕೆಲಸದಾಕೆ: ಆ ಮಹಿಳಾ ಕಲ್ಯಾಣ ಸಚಿವೆ ಮೀ-ಟೂ ಪರ ಇದ್ದಾರೆಂದು ಹೇಳಿದ್ದೀರಲ್ಲ… ಆಯಮ್ಮಾ ಸಚಿವನ ಮೇಲೆ ಕ್ರಮ ತೆಗೆದುಕೊಳ್ಳಲೇಬೇಕೆಂದು ಹಟ ಹಿಡಿದಿರಾಯಿತಪ್ಪಾ...

ಮನೆಯೊಡತಿ: ಹೌದು, ಹಾಗೆ ಮಾಡಬೇಕು. ಆದರೆ ನನಗ್ಯಾಕೋ ಪ್ರಧಾನಿ ‘ಬೇಟಾ ಬಚಾವೋ’ ಮಾಡ್ತಾರೇನೋಂತ ಸಂಶಯ.

ಕೆಲಸದಾಕೆ: ಅಲ್ಲಮ್ಮಾ, ಮೀ-ಟೂ ಪಟ್ಟಿಯಲ್ಲಿರುವ ಸಿನಿಮಾ ನಟರು ಎಷ್ಟು ಸಜ್ಜನರಾಗಿ ಕಾಣುತ್ತಾರಲ್ಲವೇ? ಬೆಳ್ಳಗಿರೋದೆಲ್ಲಾ ಹಾಲಲ್ಲ ಬಿಡಿ!

ಮನೆಯೊಡತಿ: ಹೂಂ ಮತ್ತೆ! ಅವರೆಲ್ಲಾ ನೋಡೋಕೆ ಹಾಗೆ ಕಾಣೋದು. ಯಾಕೆಂದ್ರೆ ನಾವು ಅವರನ್ನು ನೋಡುವಾಗ ಸಕತ್ ಮೇಕಪ್‌ನಲ್ಲಿರ್ತಾರೆ!

ಕೆಲಸದಾಕೆ: ಅಲ್ಲಮ್ಮಾ… ಈ ಗಂಡಸರು ಹೆಣ್ಣುಗಳನ್ನು ಕಾಮದ ದೃಷ್ಟಿಯಿಂದಲೇ ನೋಡೋದು ಯಾಕಂತ...?

ಮನೆಯೊಡತಿ: ನಿಜ ಕಣೇ. ಹಳೆಯ ಸಿನಿಮಾಗಳನ್ನು ನೋಡಿದರೂ ಅಷ್ಟೇ. ಆವಾಗ ಬಹಿರಂಗವಾಗಿಯೇ ಮುಗ್ಧ ನಟಿಯರಿಗೆ ರೇಪು, ಕ್ಯಾಬರೇಂತ ಸಿಕ್ಕಾಪಟ್ಟೆ ಲೈಂಗಿಕ ದೌರ್ಜನ್ಯ ಎಸಗುತ್ತಿದ್ದರು!

ಕೆಲಸದಾಕೆ: ‘ಅಲ್ಲಮ್ಮಾ, ನಮ್ಮಂತಹವರೂ ಮೀ-ಟೂ ಸೇರ್ಕೋಬಹುದಾ?’

ಮನೆಯೊಡತಿ : ‘ಯಾಕಾಗಲ್ಲ? ನಿನ್ನ ಕತೆಯಿದ್ದರೆ ಹೇಳು. ನಾನೇ ನಿನ್ನನ್ನು ಸೇರಿಸ್ತೀನಿ’.

ಕೆಲಸದಾಕೆ: ‘ಬೇರಾರೂ ಅಲ್ಲಮ್ಮಾ. ನಿಮ್ಮ ಪತಿರಾಯರೇ ನನಗೆ ಎರಡು ವರ್ಷಗಳ ಹಿಂದೆ ಲೈಂಗಿಕ ಹಿಂಸೆ ಕೊಟ್ಟಿದ್ದರು. ನಾನು ಟಪ ಟಪಾಂತ ಕಪಾಳಕ್ಕೆ ಕೊಟ್ಟಿದ್ದೇ ಲಾಸ್ಟು...!’

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು