ಕ್ಯೂಪಾ ಸಂಸ್ಥೆ ಪರ ಮೇನಕಾ ಗಾಂಧಿ ಲಾಬಿ

7
ನಾಯಿಗಳ ಸಂತಾನಶಕ್ತಿಹರಣ ಶಸ್ತ್ರಚಿಕಿತ್ಸೆ ಟೆಂಡರ್‌ *ಪಾಲಿಕೆ ಆಯುಕ್ತರಿಗೆ ಇ–ಮೇಲ್‌ ಕಳುಹಿಸಿದ ಕೇಂದ್ರ ಸಚಿವೆ

ಕ್ಯೂಪಾ ಸಂಸ್ಥೆ ಪರ ಮೇನಕಾ ಗಾಂಧಿ ಲಾಬಿ

Published:
Updated:
Deccan Herald

ಬೆಂಗಳೂರು: ನಾಯಿಗಳ ಸಂತಾನಶಕ್ತಿ ಹರಣ ಶಸ್ತ್ರಚಿಕಿತ್ಸೆ(ಎಬಿಸಿ) ಕಾರ್ಯಕ್ರಮದ ಗುತ್ತಿಗೆಯನ್ನು ನಿರ್ದಿಷ್ಟ ಖಾಸಗಿ ಸಂಸ್ಥೆಗೆ ನೀಡುವಂತೆ ಕೇಂದ್ರ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಸಚಿವೆ ಮೇನಕಾ ಗಾಂಧಿ ಬಿಬಿಎಂಪಿ ಮೇಲೆ ಒತ್ತಡ ಹೇರಿದ್ದಾರೆ.

ಈ ಕುರಿತು ಪಾಲಿಕೆ ಆಯುಕ್ತ ಎನ್‌.ಮಂಜುನಾಥ ಪ್ರಸಾದ್‌ ಅವರಿಗೆ ಅಕ್ಟೋಬರ್‌ 10ರಂದು ಇ–ಮೇಲ್‌ ಕಳುಹಿಸಿದ್ದು, ಇದರ ಪ್ರತಿ ‘ಪ್ರಜಾವಾಣಿ’ಗೆ ಲಭ್ಯವಾಗಿದೆ.

ನಗರದಲ್ಲಿ ನಾಯಿಗಳನ್ನು ಹಿಡಿದು ಅವುಗಳಿಗೆ ಸಂತಾನ ಶಕ್ತಿ ಹರಣ ಶಸ್ತ್ರ ಚಿಕಿತ್ಸೆ ನಡೆಸುವ ಕಾರ್ಯಕ್ರಮದ ಗುತ್ತಿಗೆ ನೀಡಲು ಬಿಬಿಎಂಪಿ ಟೆಂಡರ್‌ ಆಹ್ವಾನಿಸಿತ್ತು. ಇದರಲ್ಲಿ ಭಾಗವಹಿಸಿದ್ದ ಕ್ಯೂಪಾ ಸಂಸ್ಥೆ ಹೆಚ್ಚು ಮೊತ್ತವನ್ನು ನಮೂದಿಸಿದ್ದರಿಂದ ಗುತ್ತಿಗೆ ಸಿಕ್ಕಿರಲಿಲ್ಲ. ಪ್ರಾಣಿ ಹಕ್ಕುಗಳ ಹೋರಾಟಗಾರ್ತಿ ಶ್ಯಾಮಲತಾ ರಾವ್‌ ಎಂಬುವರು ಮೇನಕಾ ಗಾಂಧಿ ಅವರಿಗೆ ಅಕ್ಟೋಬರ್‌ 10ರಂದು ಇ– ಮೇಲ್‌ ಕಳುಹಿಸಿ, ಸರ್ವೋದಯ ಸೇವಾ ಸಂಸ್ಥಾನ ಸಂಸ್ಥೆಯ ವೈದ್ಯ ಡಾ.ಅಕ್ಷಯ್‌ ಪ್ರಕಾಶ್‌ ಅವರನ್ನು ಎಬಿಸಿ ಕಾರ್ಯಕ್ರಮದ ಉಸ್ತುವಾರಿಯನ್ನಾಗಿ ನೇಮಿಸುವಂತೆ ಕೋರಿದ್ದರು. ಅದನ್ನು ಮೇನಕಾ ಅವರು ಮಂಜುನಾಥ ಪ್ರಸಾದ್‌ ಅವರಿಗೆ ಮಾಡಿರುವ ಈ ಮೇಲ್‌ ಜೊತೆಗೆ ಶ್ಯಾಮಲತಾ ಅವರ ಇ–ಮೇಲ್‌ ಅನ್ನೂ ಫಾರ್ವರ್ಡ್‌ ಮಾಡಿದ್ದಾರೆ.

‘ಸಮಗ್ರ ನಗರದಲ್ಲಿ ಎಬಿಸಿ ಕಾರ್ಯಕ್ರಮದ ಹೊಣೆಯನ್ನು ಕ್ಯೂಪಾ ಸಂಸ್ಥೆಗೆ ವಹಿಸಿ. ಅವರ ಪ್ರತಿನಿಧಿಗಳೇ ವಿವಿಧ ಎಬಿಸಿ ಘಟಕಗಳನ್ನು ನಡೆಸಲಿ. ಅಥವಾ ಡಾ ಅಕ್ಷಯ್‌ ಪ್ರಕಾಶ್‌ ಅವರಿಗೆ ಈ ಘಟಕಗಳ (ನಾನು ಸೂಚಿಸಿರುವ ಸಂಸ್ಥೆಗಳನ್ನು ಎಬಿಸಿಕಾರ್ಯಕ್ರಮದಿಂದ ಕೈಬಿಟ್ಟ ಬಳಿಕ) ಸಮಗ್ರ ಉಸ್ತುವಾರಿ ನೊಡಿಕೊಳ್ಳುವ ಹೊಣೆಯನ್ನು ವಹಿಸಿ ಎಂದು ರಂದೀಪ್‌ (ಬಿಬಿಎಂಪಿ ಹೆಚ್ಚುವರಿ ಆಯುಕ್ತ) ಅವರಿಗೆ ಸಲಹೆ ನೀಡಿದ್ದೆ. ನಿತ್ಯವೂ ಶಸ್ತ್ರಚಿಕಿತ್ಸೆ ನಡೆಯುತ್ತಿರುವುದರಿಂದ ಇದು ತುರ್ತಾಗಿ ಆಗಬೇಕಾದ ಕಾರ್ಯ ಎಮದೂ ಹೇಳಿದ್ದೆ. ಅವರ ಜೊತೆ ಪದೇ ಪದೇ ಮಾತನಾಡಿದ್ದೇನೆ. ಆದರೂ ಅವರು ಏನೂ ಕ್ರಮ ಕೈಗೊಂಡಿಲ್ಲ’ ಎಂದು ಅವರು ಉಲ್ಲೇಖಿಸಿದ್ದಾರೆ.

‘ಎಬಿಸಿ ಕಾರ್ಯಕ್ರಮದ ಮೇಲೆ ನಿಗಾ ವಹಿಸಲು ಉತ್ತಮ ಹಾಗೂ ಬದ್ಧತೆ ಇರುವ ವ್ಯಕ್ತಿಗಳನ್ನು ಒಳಗೊಂಡಂತೆ ವಲಯ ಮಟ್ಟದ ಸಮಿತಿಗಳನ್ನು ರಚಿಸಿ ಎಂದೂ ಸಲಹೆ ನೀಡಿದ್ದೆ. ಈ ಕುರಿತು ರಂದೀಪ್‌ ಅವರಿಗೆ  ಕೆಲವೊಂದು ಹೆಸರುಗಳನ್ನೂ ಕಳುಹಿಸಿದ್ದೆ’ ಎಂದೂ ಅವರು ತಿಳಿಸಿದ್ದಾರೆ.

‘ಈ ಎಲ್ಲ ಕ್ರಮಗಳನ್ನು ತಕ್ಷಣವೇ ಕೈಗೊಳ್ಳಿ. ರಂದೀಪ್‌ ಅವರ ಬದಲಿಗೆ ಬೇರೆ ದಕ್ಷ ಅಧಿಕಾರಿಯನ್ನು ನೇಮಿಸಿ’ ಎಂದೂ ಅವರು ಆಯುಕ್ತರನ್ನು ಒತ್ತಾಯಿಸಿದ್ದರು.

ಈ ಕುರಿತು ಪ್ರತಿಕ್ರಿಯಿಸಿರುವ ರಂದೀಪ್‌, ‘ಕರ್ನಾಟಕ ಪಾರದರ್ಶಕ ಕಾಯ್ದೆಯ ಪ್ರಕಾರವೇ ನಾವು ಟೆಂಡರ್‌ ಪ್ರಕ್ರಿಯೆ ನಡೆಸಬೇಕಾಗುತ್ತದೆ. ನನ್ನ ಮೇಲೆ ಅವರು ಮಾಡಿರುವ ಆರೋಪದ ಬಗ್ಗೆ ಪ್ರತಿಕ್ರಿಯಿಸಲು ಬಯಸುವುದಿಲ್ಲ’ ಎಂದು ತಿಳಿಸಿದರು.

ಪಾಲಿಕೆ ಆಯುಕ್ತ ಎನ್‌.ಮಂಜುನಾಥ ಪ್ರಸಾದ್‌ ಅವರೂ, ‘ಟೆಂಡರ್‌  ಪ್ರಕ್ರಿಯೆ ಬದಿಗಿಟ್ಟು ಸಂಸ್ಥೆಯೊಂದಕ್ಕೆ ಕಾರ್ಯಕ್ರಮದ ಗುತ್ತಿಗೆ ನೀಡುವುದು ಕರ್ನಾಟಕ ಪಾರದರ್ಶಕ ಕಾಯ್ದೆಯ ಉಲ್ಲಂಘನೆ ಆಗುತ್ತದೆ’ ಎಂದು ತಿಳಿಸಿದರು.

ಎಬಿಸಿ ವೈಫಲ್ಯ: ಮೇನಕಾ ಕಿಡಿ

‘ನಗರದಲ್ಲಿ ಸಂತಾನ ಹರಣ ಶಸ್ತ್ರ ಚಿಕಿತ್ಸೆಗೆ ಒಳಪಟ್ಟ ನೂರಾರು ನಾಯಿಗಳು ಸಾಯುತ್ತಿವೆ. ಅವೆಲ್ಲ ಸತ್ತಿದ್ದು ಗ್ಯಾಂಗ್ರೀನ್‌ನಿಂದ. ನೀವು ಲಕ್ಷಾಂತರ ರೂಪಾಯಿ ಖರ್ಚು ಮಾಡಿಯೂ  ಯಾವುದೇ ಪ್ರಯೋಜನವಾಗುತ್ತಿಲ್ಲ. ಒಂದು ನಾಯಿ ಸತ್ತರೆ, ಅದರ ಶಸ್ತ್ರಚಿಕಿತ್ಸೆಗೆ ಮಾಡಿದ ಹಣವೂ ವ್ಯರ್ಥ ಹಾಗೂ ಅದರ ಜಾಗಕ್ಕೆ ಇನ್ನೊಂದು ನಾಯಿ ಬಂದು ಸೇರಿಕೊಳ್ಳುತ್ತದೆ. ನಾಯಿ ಕಡಿತ ಪ್ರಕರಣಗಳು ಹೆಚ್ಚುತ್ತಲೇ ಇರುತ್ತವೆ. ಸಾರ್ವಜನಿಕ ಸುರಕ್ಷತೆಗೆ ಸಂಬಂಧಿಸಿದ ಈ ಸಮಸ್ಯೆಯನ್ನು ಗಂಭೀರವಾಗಿ ಪರಿಗಣಿಸಬೇಕು’ ಎಂದು ಮೇನಕಾ ಅವರು ಇಮೇಲ್‌ನಲ್ಲಿ ಉಲ್ಲೇಖಿಸಿದ್ದಾರೆ.

‘ಶಸ್ತ್ರಚಿಕಿತ್ಸೆ ಸಂದರ್ಭದಲ್ಲಿ ಕಾಳಜಿ ವಹಿಸದಿರುವುದು, ಕಳಪೆ ದರ್ಜೆ ಪರಿಕರಗಳ ಬಳಕೆ, ಜೀವರಕ್ಷಕ ಔಷಧಿ ನೀಡಿದಿರುವುದು, ನಾಯಿಗಳ ನಿರ್ವಹಣೆಯಲ್ಲಿ ವೈಫಲ್ಯ ಇದಕ್ಕೆ ಕಾರಣ. ಕೆಲವು ನಾಯಿಗಳು ಹಿಡಿಯುವಾಗಲೇ ಸತ್ತಿವೆ. ಇನ್ನು ಕೆಲವು ಶಸ್ತ್ರಚಿಕಿತ್ಸೆ ನಂತರ ಸೋಂಕಿನಿಂದಾಗಿ ಸತ್ತಿವೆ. ಶಸ್ತ್ರಚಿಕಿತ್ಸೆಯ ಗಾಯಕ್ಕೆ ಹೊಲಿಗೆಯನ್ನೇ ಹಾಕದೆ ಕೆಲವು ನಾಯಿಗಳನ್ನು ಬಿಟ್ಟುಬಿಡಲಾಗಿದೆ’ ಎಂದು ಆರೋಪಿಸಿದ್ದಾರೆ.  

ಎಬಿಸಿ ಕಾರ್ಯಕ್ರಮದ ಗುತ್ತಿಗೆ ಪಡೆದಿರುವ ಎಎಆರ್‌ಎಫ್‌ ಹಾಗೂ ಡಾ.ಗದ್ದಿ  ಸರ್ಕಾರೇತರ ಸಂಸ್ಥೆಗಳು ಸರಿಯಾಗಿ ಕಾರ್ಯನಿರ್ವಹಿಸುತ್ತಿಲ್ಲ ಎಂದೂ ಅವರು ಆರೋಪ ಮಾಡಿರುವ ಸಚಿವೆ, ‘ಅವರಿಗೆ ನೀಡಿರುವ ಗುತ್ತಿಗೆ ರದ್ದುಪಡಿಸಬೇಕು’ ಎಂದು ಒತ್ತಾಯಿಸಿದ್ದಾರೆ.

‘ಎಆರ್‌ಎಫ್‌ ಸಂಸ್ಥೆಯ ದಿಲಿಪ್‌ ಬಫನ ಹಾಗೂ ಸರ್ವೋದಯ ಸಂಸ್ಥೆಯ ವಿನಯ್‌ ಅವರನ್ನು ಭಾರತೀಯ ಪ್ರಾಣಿ ಕಲ್ಯಾಣ ಮಂಡಳಿ (ಎಡಬ್ಲ್ಯುಬಿಐ) ಕಪ್ಪು ಪಟ್ಟಿಗೆ ಸೇರಿಸಿದೆ.  ಆದರೂ ಈ ಎರಡು ಸಂಸ್ಥೆಗಳನ್ನು ಎಬಿಸಿ ಉಸ್ತುವಾರಿ ಸಮಿತಿಯಲ್ಲಿ ಹೇಗೆ ಸ್ಥಾನ ಕಲ್ಪಿಸಿದ್ದೀರಿ’ ಎಂದು ಅವರು ಪ್ರಶ್ನಿಸಿದ್ದಾರೆ.

 

 

 

ಬರಹ ಇಷ್ಟವಾಯಿತೆ?

 • 3

  Happy
 • 0

  Amused
 • 0

  Sad
 • 0

  Frustrated
 • 1

  Angry

Comments:

0 comments

Write the first review for this !