ಪುರುಷರ ಸಂತಾನಶಕ್ತಿಯ ಅಡ್ಡಿ, ಆತಂಕ

7

ಪುರುಷರ ಸಂತಾನಶಕ್ತಿಯ ಅಡ್ಡಿ, ಆತಂಕ

Published:
Updated:

ದಂಪತಿಯ ಮಾನಸಿಕ ಹಾಗೂ ಶಾರೀರಿಕ ಸ್ಥಿತಿಯ ಮೇಲೆ ಪುರುಷಸಂಬಂಧಿ ಸಂತಾನಹೀನತೆ ಸಮಸ್ಯೆ ಅತಿ ಗಾಢ ಪರಿಣಾಮ ಬೀರುತ್ತದೆ. ಅದಕ್ಕೆ ಹಲವು ಕಾರಣಗಳಿವೆ. ಜೊತೆಗೆ ಈ ಸಮಸ್ಯೆ ಭಾರತದಲ್ಲಿ ಅತಿ ಗಣನೀಯ ಪ್ರಮಾಣದಲ್ಲಿ ಏರುತ್ತಿರುವುದು ಆತಂಕ ಉಂಟುಮಾಡಿರುವ ವಿಷಯ. ಆದ್ದರಿಂದ ಸಮಸ್ಯೆಯ ಹಿಂದಿನ ಅಂಶಗಳ ಕಡೆ ಗಮನ ಹರಿಸುವುದು ತುರ್ತು ಅವಶ್ಯಕತೆಯೂ ಹೌದು. ಇದರ ಹಿಂದಿನ ಕಾರಣಗಳನ್ನು ಕಂಡುಕೊಂಡು ಭವಿಷ್ಯದಲ್ಲಿ ಸಮಸ್ಯೆಯನ್ನು ನಿಯಂತ್ರಿಸುವ ಪ್ರಯತ್ನಗಳೂ ನಡೆಯುತ್ತಿವೆ.

ಕಳೆದ 50 ವರ್ಷಗಳ ಅವಧಿಯಲ್ಲಿ ಭಾರತೀಯ ಪುರುಷರಲ್ಲಿ ವೀರ್ಯದ ಪ್ರಮಾಣ ಆತಂಕಕಾರಿ ಮಟ್ಟದಲ್ಲಿ ಇಳಿಕೆಯಾಗಿರುವುದು ಕಂಡುಬಂದಿದೆ. ಅದರಲ್ಲೂ 15 ವರ್ಷಗಳಿಂದೀಚೆಗೆ ಮತ್ತೂ ಆತಂಕಕಾರಿಯಾಗಿ ಗೋಚರಿಸಿದೆ. ಇತ್ತೀಚೆಗಿನ ಒಂದು ವರದಿಯ ಪ್ರಕಾರ, ಇಡೀ ವಿಶ್ವದಲ್ಲೇ 1980ರಿಂದ 2015ರ ಅವಧಿಯಲ್ಲಿ ಪ್ರಮಾಣವು 91 ದಶಲಕ್ಷದಿಂದ 39 ದಶಲಕ್ಷಕ್ಕೆ ಇಳಿದಿದ್ದು, ಸಾಕಷ್ಟು ಕುಗ್ಗಿರುವುದನ್ನು ತೋರುತ್ತದೆ. ಒಟ್ಟಾರೆ 1980ರಿಂದ ಶೇ 57ರಷ್ಟು ಇಳಿಕೆ ಕಂಡುಬಂದಿದೆ.

ಇದೆಲ್ಲಕ್ಕಿಂತ ಮುಖ್ಯವಾಗಿ, ವೀರ್ಯಾಣುವಿನ ಆಕಾರದಲ್ಲಿನ ಅಸಹಜತೆಯು ಸಮಸ್ಯೆಯ ಮೂಲವಾಗಿದೆ. ಇದರೊಂದಿಗೆ ವೃಷಣದಲ್ಲಿ ವೀರ್ಯೋತ್ಪತ್ತಿಗೆ ಕಾರಣವಾಗುವ ಸರ್ಟೋಲಿ ಕೋಶದಲ್ಲೂ ಸಮಸ್ಯೆ ಕಂಡುಬಂದಿದೆ. ಈ ಎಲ್ಲ ಅಂಶಗಳು ಮುಂದಿನ ಪೀಳಿಗೆಯ ಆರೋಗ್ಯದ ಮೇಲೆ ಪರಿಣಾಮ ಬೀರುವುದನ್ನು ನಿರ್ಲಕ್ಷಿಸುವಂತಿಲ್ಲ.

ಪ್ರತಿ ವರ್ಷವೂ ಭಾರತದಲ್ಲಿ 12ರಿಂದ 18 ದಶಲಕ್ಷ ದಂಪತಿ ಸಂತಾನಹೀನತೆ ಸಮಸ್ಯೆ ಎದುರಿಸುತ್ತಿರುವುದು ಕಂಡುಬಂದಿದೆ. ಮೂರು ದಶಕಗಳ ಹಿಂದೆ ಒಬ್ಬ ಭಾರತೀಯ ಪುರುಷನ ವೀರ್ಯದ ಸಹಜ ಸಂಖ್ಯೆಯು ಮಿಲಿ ಲೀಟರಿಗೆ 60 ಮಿಲಿಯನ್ ಇದ್ದದ್ದು ಈಗ 15 ಮಿಲಿಯನ್‍ಗೆ ಬಂದಿದೆ. ವರ್ಷವರ್ಷವೂ ವೀರ್ಯದ ಗುಣಮಟ್ಟವೂ ಶೇ 2ರಷ್ಟು ಕಡಿಮೆಯಾಗಿರುವುದು ಕಂಡುಬಂದಿದೆ. ಮಕ್ಕಳನ್ನು ಪಡೆಯುವ ಸೂಕ್ತ ವಯಸ್ಸಿನ ಶೇ 40ರಷ್ಟು ಪುರುಷರಲ್ಲಿ ವೀರ್ಯದ ಸಂಖ್ಯೆ ಹಾಗೂ ಗುಣಮಟ್ಟದಲ್ಲೂ ಕುಸಿದಿದೆ. ಇದಕ್ಕೆ ಕಾರಣ ಹಲವು. ವಾತಾವರಣ, ಪೌಷ್ಟಿಕಾಂಶದ ಕೊರತೆ, ಸಾಮಾಜಿಕ, ಆರ್ಥಿಕ, ಹಾಗೆಯೇ ಕೆಲವು ಗೋಚರಿಸದ ಕಾರಣಗಳೂ ಇರುತ್ತವೆ.

ಡಯೆತಿಲ್‍ಸ್ಟಿಲ್ಬೆಸ್ಟ್ರಾಲ್ ಎಂಬ ರಾಸಾಯನಿಕವು ವೀರ್ಯದ ಉತ್ಪಾದನಾ ನಾಳದಲ್ಲಿನ ಅಸಹಜತೆಗೆ ಕಾರಣ ಎನ್ನಲಾಗಿದೆ; ಇದು ವೀರ್ಯದ ಉತ್ಪತ್ತಿ, ಹಾಗೆಯೇ ಫಲವತ್ತುಗೊಳ್ಳುವ ಸಾಮರ್ಥ್ಯವನ್ನು ಕುಗ್ಗಿಸುತ್ತದೆ ಎಂಬ ಅಂದಾಜಿದೆ. ಈಗಿನ ಪುರುಷರಲ್ಲಿ ಈ ಅಂಶ ಹೆಚ್ಚು ಕಂಡುಬರುತ್ತಿರುವುದು ಸಮಸ್ಯೆಯ ಮೂಲವನ್ನು ಸೂಚಿಸುತ್ತಿದೆ.

ದಕ್ಷಿಣ ಭಾರತದ ಪುರುಷರಲ್ಲಿ ಸಮಸ್ಯೆಯ ತೀವ್ರತೆ ಇನ್ನೂ ಹೆಚ್ಚಿದೆ. ಹತ್ತು ವರ್ಷಗಳಲ್ಲಿ ವೀರ್ಯದ ಗುಣಮಟ್ಟ ಹಾಗೂ ಪ್ರಮಾಣದ ಕುರಿತು ನಡೆದ ಅಧ್ಯಯನದ ಪ್ರಕಾರ (2000-2001 ರಿಂದ 2010-2011) ಸಹಜಕ್ಕಿಂತ ಕಡಿಮೆ ಎಂದು ಪರಿಗಣಿಸಿದ ವೀರ್ಯಸ್ಖಲನದ (4 ಮಿಲಿ ಲೀಟರ್‌ಗೂ ಕಡಿಮೆ) ಪ್ರಮಾಣವು ಶೇ 34ರಿಂದ 65ರವರೆಗೂ ಏರಿಕೆಯಾಗಿದೆ.

4 ಮಿಲಿ ಲೀಟರ್‌ಗಿಂತ ಹೆಚ್ಚಿನ ವೀರ್ಯಸ್ಖಲನದ ಸಾಧ್ಯತೆಯು ಶೇ 15ರಿಂದ ಶೇ 3ರವರೆಗೂ ಇಳಿದಿದೆ. ಒಟ್ಟಾರೆಯಾಗಿ 25 ವರ್ಷದ ಅವಧಿಯಲ್ಲಿ ಶೇ 30.31 ಮಟ್ಟದಲ್ಲಿ ವೀರ್ಯದ ಗುಣಮಟ್ಟ ಹಾಗೂ ಪ್ರಮಾಣ ಕುಗ್ಗಿರುವುದು ಕಂಡುಬಂದಿದೆ. ವೀರ್ಯದ ಚಲನಶಕ್ತಿಯು ವರ್ಷಕ್ಕೆ ಶೇ 0.17ರಿಂದ 0.6ಗೆ ಇಳಿದಿದ್ದು, 20 ವರ್ಷದಲ್ಲಿ ಒಟ್ಟಾರೆ ಪ್ರಮಾಣ ಶೇ 4-12ರಷ್ಟಿದೆ. ವೀರ್ಯದ ಆಕಾರದಲ್ಲೂ ವರ್ಷಕ್ಕೆ ಶೇ 0.2- 0.9 ಏರುಪೇರು ಕಂಡುಬಂದಿದ್ದು, 20 ವರ್ಷಗಳಲ್ಲಿ ವೀರ್ಯದ ಸಹಜ ಆಕೃತಿಯಲ್ಲಿ ಶೇ 4-18ರಷ್ಟು ದೋಷಗಳು ಕಂಡುಬಂದಿದೆ.

ಪುರುಷರಲ್ಲಿ ವೀರ್ಯದ ಪ್ರಮಾಣದ ಕುಗ್ಗುವಿಕೆಗೆ ಸಾಕಷ್ಟು ಕಾರಣಗಳಿವೆ. ಅದರಲ್ಲಿ ಅತಿ ಮುಖ್ಯವಾದದ್ದು ವಯಸ್ಸು. 1969ರಲ್ಲಿ ಮೊದಲ ಬಾರಿಗೆ ಸಸಾನೊ ಹಾಗೂ ಇಚಿಜೊ ಈ ಕುರಿತು ಪ್ರಸ್ತಾಪಿಸಿದ್ದರು. ವಯಸ್ಸಾಗುತ್ತಿದ್ದಂತೆ ವೀರ್ಯದ ಪ್ರಮಾಣದಲ್ಲೂ ಕುಗ್ಗುವುದಾಗಿ ಅವರು ಹೇಳಿದ್ದರು.

20ರಿಂದ 30 ವಯೋಮಾನದ ಪುರುಷರಲ್ಲಿ, ವೀರ್ಯೋತ್ಪತ್ತಿಯಾಗುವ ಸೆಮಿನಿಫೆರಸ್ ನಾಳಿಕೆಯಲ್ಲಿ ಸ್ಪರ್ಮಾಟಿಡ್ (ಭವಿಷ್ಯದ ವೀರ್ಯ) ಹೆಚ್ಚಿದ್ದು, 40ರಿಂದ 50 ವಯೋಮಾನದ ಪುರುಷರಲ್ಲಿ ಇದು ಶೇ 50ರಷ್ಟು ಕುಗ್ಗುತ್ತದೆ. 80ಕ್ಕಿಂತ ಕಡಿಮೆ ವಯಸ್ಸಿನ ಪುರುಷರಲ್ಲಿ ಇದು ಕೇವಲ ಶೇ 10ರಷ್ಟು ಇರುತ್ತದೆ.

ವೀರ್ಯದಲ್ಲಿನ ತೊಂದರೆ ಗರ್ಭಪಾತಕ್ಕೆ ಎಡೆಮಾಡಿ ಕೊಡುವುದಲ್ಲದೆ, ಡಿಎನ್‍ಎ, ಕ್ರೋಮೋಸೋಮಿನ ಅಸಹಜತೆಯನ್ನು ತಂದೊಡ್ಡುತ್ತವೆ ಎಂಬ ಅಂಶವನ್ನು ಮರೆಯುವಂತಿಲ್ಲ. ಸದ್ಯಕ್ಕೆ ಪುರುಷ ಸಂಬಂಧಿ ಸಂತಾನಹೀನತೆ ಸಮಸ್ಯೆ ಇಡೀ ವಿಶ್ವವನ್ನೇ ಆವರಿಸುತ್ತಿದ್ದು, ಈ ಕುರಿತು ಮತ್ತಷ್ಟು ಪೂರಕ ಸಂಶೋಧನೆ ಹಾಗೂ ಅಧ್ಯಯನಗಳು ನಡೆಯಬೇಕಿರುವುದು ಇಂದಿನ ತುರ್ತಾಗಿದೆ. 

*

–ಡಾ.ಎಸ್‌.ಎಸ್‌.ವಾಸನ್‌

ಬರಹ ಇಷ್ಟವಾಯಿತೆ?

 • 3

  Happy
 • 1

  Amused
 • 1

  Sad
 • 1

  Frustrated
 • 1

  Angry

Comments:

0 comments

Write the first review for this !