ಶನಿವಾರ, ಮೇ 8, 2021
19 °C

ಮುಟ್ಟು ಮುಟ್ಟೆಂದೇಕೆ..?

ಬಾನು ಮುಷ್ತಾಕ್‌ Updated:

ಅಕ್ಷರ ಗಾತ್ರ : | |

ಮುಟ್ಟಿನ ಬಗ್ಗೆ ನಡೆಯುತ್ತಿರುವ ವಾದ- ವಿವಾದಗಳು, ಟೀಕೆ– ಟಿಪ್ಪಣಿಗಳು, ವ್ಯಂಗ್ಯ ಹಾಗೂ ಸಮರ್ಥನೆಗಳು ಸಾಮಾಜಿಕವಾಗಿ ವಿವಿಧ ಪ್ರತಿಕ್ರಿಯೆಗಳನ್ನು ಮೂಡಿಸುತ್ತಿವೆ. ವಿಭಿನ್ನ ಸಾಂಸ್ಕೃತಿಕ ನೋಟದಿಂದ ಈ ಕುರಿತು ವ್ಯಾಖ್ಯಾನವನ್ನು ಮಾಡಬೇಕು ಎಂದು ನನಗೆ ಅನಿಸುತ್ತದೆ. ಮುಸ್ಲಿಂ ಮಹಿಳೆಯಾಗಿ ಮುಟ್ಟಿನ ಬಗ್ಗೆ ಯಾವುದೇ ಗೊಂದಲಗಳು, ಹೇರಿಕೆಗಳು ಅಸ್ಪೃಶ್ಯತೆ ಅಥವಾ ಧರ್ಮಾಧಾರಿತ ಪೂರ್ವಾಗ್ರಹಗಳಿಗೆ ಗುರಿಯಾಗದಂತೆ ಇದುವರೆವಿಗೂ ನನ್ನ ಮುಟ್ಟಿನ ರಹಸ್ಯಗಳನ್ನು ಕಾಪಾಡಿಕೊಂಡಿದ್ದೇನೆ.

ಮೊದಲಿಗೆ ಹೇಳುವುದಾದರೆ ಈ ರೀತಿಯ ಒಂದು ಪ್ರಕ್ರಿಯೆ ಹೆಣ್ಣಿನ ದೇಹದಲ್ಲಿ ನಡೆಯುವುದು ಎಂಬುದರ ಬಗ್ಗೆ ನನಗೆ ಒಂದಿನಿತು ಸುಳಿವು ಕೂಡಾ ಇರಲಿಲ್ಲ. ನನ್ನ ಸಹಪಾಠಿಗಳು ಮತ್ತು ಸ್ನೇಹಿತೆಯರು ಒಂದಲ್ಲ ಒಂದು ಕಾರಣದಿಂದ ಒಂದಲ್ಲ ಒಂದು ಸಂದರ್ಭದಲ್ಲಿ ‘ನಮ್ಮಮ್ಮ ಮೂರು ದಿನ ರಜಾ’ ಎಂದು ರಾಜಾರೋಷವಾಗಿ ನುಡಿಯುತ್ತಿದ್ದರು. ಆದರೆ, ರಜಾ ಅಂದರೆ ಏನು ಎಂಬುದು ನನ್ನ ಅರಿವಿಗೆ ಬರುತ್ತಲೇ ಇರಲಿಲ್ಲ. ಏಕೆಂದರೆ ನಮ್ಮಮ್ಮ ಎಂದೂ ರಜೆ ತೆಗೆದುಕೊಂಡಿರಲಿಲ್ಲ. ಅಸಲಿಗೆ ನಮ್ಮ ಕುಟುಂಬದ ಯಾವ ಹೆಣ್ಣುಮಕ್ಕಳು ಕೂಡ ಎಂದಿಗೂ ರಜೆ ತೆಗೆದುಕೊಂಡಿರಲಿಲ್ಲ.

ಕೆಲವು ವರ್ಷಗಳು ಕಳೆದ ನಂತರ ಈ ರಜೆ ಎಂಬ ವಿಷಯವು ಮುಟ್ಟಾಗಿದ್ದಾಳೆ ಎಂಬುದಕ್ಕೆ ಉಪಯೋಗಿಸಲ್ಪಡುವ ಸಂಕೇತ ಎಂದು ಅರಿವಾಯಿತು. ಆದರೆ, ನಮ್ಮ ಮನೆಗಳಲ್ಲಿ ಯಾವ ಮಹಿಳೆಯರು ಕೂಡ ‘ಮುಟ್ಟು’ ಆಗುತ್ತಿರಲಿಲ್ಲ. ಹೀಗಾಗಿ, ಮುಂದಿನ ನನ್ನ ಹದಿಹರೆಯದ ದಿನಗಳಲ್ಲಿ ನನ್ನ ಈ ವ್ಯಾಖ್ಯಾನ ಮುಂದುವರಿದು ಮುಸ್ಲಿಂ ಮಹಿಳೆಯರು ಯಾರೂ ಕೂಡ ‘ಮುಟ್ಟು’ ಆಗುವುದಿಲ್ಲ ಎಂಬ ‘ಸತ್ಯವನ್ನು’ ಪ್ರಯತ್ನಪಟ್ಟು ಕಂಡುಕೊಂಡೆ.

ನಮ್ಮ ತಂದೆಗೆ ಶಿವಮೊಗ್ಗಕ್ಕೆ ವರ್ಗಾವಣೆ ಆಗಿತ್ತು. ಅಲ್ಲಿದ್ದ ನಮ್ಮ ಮನೆ ಮತ್ತು ಮನೆಯ ಒಡೆಯರಿಗೆ ಸೇರಿದಂತೆ ವಿಶಾಲವಾದ ಹಿತ್ತಲು ಇತ್ತು. ಬಹುಶಃ ಅವರು ಲಿಂಗಾಯತರು ಎಂದು ನನ್ನ ಅನಿಸಿಕೆ. ಅವರ ಮನೆಯಲ್ಲಿ ನನ್ನ ಓರಿಗೆಯ ಒಬ್ಬ ಹೆಣ್ಣು ಮಗಳಿದ್ದಳು. ಸಂಜೆಯ ಹೊತ್ತು ಮತ್ತು ರಜೆಯ ದಿನಗಳಲ್ಲಿ ನಾವಿಬ್ಬರೂ ಸೇರಿ ಅಲ್ಲೇ ಅನೇಕ ಆಟಗಳನ್ನು ಆಡುತ್ತಿದ್ದೆವು.

ಹಿತ್ತಲಿನಲ್ಲಿ ಒಂದು ಎತ್ತಿನ ಗಾಡಿ ಇತ್ತು. ಬಹುದಿನಗಳಿಂದ ಬಳಕೆಯಾಗಿರಲಿಲ್ಲ ಎಂದೆನಿಸುತ್ತದೆ. ಅದರ ಚಕ್ರಕ್ಕೆ ಜೇನುಗೂಡು ಕಟ್ಟಿತ್ತು. ಅದನ್ನು ನೋಡಿ ನಾವು ಹೆದರಿದ್ದೆವು. ಆದರೆ, ನಮಗೆ ನೊಗದಿಂದ ಮೇಲೇರಿ ಗಾಡಿಯ ಕಮಾನಿನ ಒಳಗಡೆ ಕುಳಿತು ಆಟವಾಡಬೇಕಿತ್ತು. ಹೀಗಾಗಿ ನನ್ನ ಗೆಳತಿ ನನಗೆ ಒಂದು ಉಪಾಯ ಹೇಳಿಕೊಟ್ಟಳು. ಜೇನುಹುಳುಗಳಿಗೆ ಕೇಳಿಸುವ ರೀತಿಯಲ್ಲಿ ನಾವಿಬ್ಬರೂ ಕೂಡ ಜೋರು ಜೋರಾಗಿ ಚಪ್ಪಾಳೆ ತಟ್ಟುತ್ತಾ ‘ಜೇನುಹುಳು ಜೇನುಹುಳು ನಮ್ಮನ್ನು ಕಚ್ಚಬೇಡ. ನಾವು ಮುಟ್ಟಾಗಿದ್ದೇವೆ’ ಎಂದು ಹೇಳುತ್ತಾ ಅದಕ್ಕೆ ಎಚ್ಚರಿಕೆ ಕೊಡುವ ಪ್ರಯತ್ನ ಮಾಡುತ್ತಿದ್ದೆವು.

ಆದರೆ, ದುರದೃಷ್ಟವಶಾತ್ ನಮ್ಮ ಆ ಜೋರು ಧ್ವನಿಯ ಅರಚಾಟ ಜೇನುಹುಳುಗಳಿಗೆ ಕೇಳಿಸುವ ಬದಲು ನಾನು ಬೀಬೀ ಎಂದು ಕರೆಯುವ ನನ್ನ ಅಮ್ಮನಿಗೆ ಕೇಳಿಸಬೇಕಾ? ಥಟ್ಟನೆ ಹಿಂಬಾಗಿಲು ತೆರೆಯಿತು ಮತ್ತು ಅಷ್ಟೇ ವೇಗವಾಗಿ ಬೀಬೀ ಅಂಗಳಕ್ಕೆ ಇಳಿದವರೇ ನನ್ನ ಎಡ ರಟ್ಟೆಯನ್ನು ಹಿಡಿದು ದರದರನೆ ಮನೆಯೊಳಗಡೆ ಎಳೆದುಕೊಂಡು ಹೋದರು.

ಮತ್ತು ದಡಬಡನೆ ನಾಲ್ಕೇಟು ಬಡಿದು ‘ಮುಟ್ಟಾಗಿದ್ದೀಯಾ... ಮುಟ್ಟಾಗಿದ್ದೀಯಾ...’ ಅಂತ ವಿಚಾರಣೆ ನಡೆಸುತ್ತಾ ‘ಹಾಗಿದ್ದರೆ ತೋರಿಸು. ಎಲ್ಲಿ ಮುಟ್ಟಾಗಿದ್ದೀಯಾ ತೋರಿಸು’ ಎಂದು ಹೇಳುತ್ತಾ ತಮಗೆ ಒದಗಿ ಬಂದ ಸದವಕಾಶವನ್ನು ಉಪಯೋಗಿಸಿಕೊಳ್ಳುತ್ತಾ ತೊಡೆಸಂದಿಯಲ್ಲಿ ಒಳಶುಂಠಿಯನ್ನು ತಿರುವುತ್ತ ‘ಹಾಳಾಗಿ ಹೋದೆ. ಆ ಹುಡುಗಿ ಜೊತೆ ಸೇರಿ. ಅವಳಿಗೆ ಮಾನ, ಮರ್ಯಾದೆ ಇಲ್ಲ. ಅದೆಲ್ಲವನ್ನೂ ಡಂಗುರ ಸಾರ್ತಾಳೆ. ಅವಳ ಜೊತೆ ಸೇರಿ ನೀನು ಕೂಡಾ ಕುಲಗೆಟ್ಟು ಹೋದೆ. ಹಾಳಾದ್ದು ಆ ಕನ್ನಡ ಸ್ಕೂಲಿಗೆ ಹಾಕಬೇಡಿ ಅಂತ ಬಡ್ಕೊಂಡೆ. ನಿಮ್ಮಪ್ಪ ಕೇಳ್ಳಿಲ್ಲ. ಉರ್ದು... ಉರ್ದುವನ್ನಾದರೂ ಓದಿದ್ದಲ್ಲಿ ನಯವಿನಯ ಲಜ್ಜೆ ಕಲೀತಿದ್ದೆ. ಈಗ ನೋಡು ರಸ್ತೆಯಲ್ಲಿ ನಿಂತುಕೊಂಡು ಮುಟ್ಟಾಗಿದ್ದೇನೆ ಅಂತ ಹೇಳ್ತಾ ಇದೀಯಾ. ಮುಟ್ಟು ಅಂದ್ರೆ ಏನು ಗೊತ್ತಾ ನಿನಗೆ?’ ಎಂದೆಲ್ಲಾ ಕ್ರಾಸ್ ಎಕ್ಸಾಮಿನೇಷನ್ ಮಾಡಿ ಒಬ್ಬ ಅವ್ವ ‘ಕಲ್ಚರಲ್ ಪಾಲಿಟಿಕ್ಸ್‌’ಗೆ ಅನುಗುಣವಾಗಿ ತನ್ನ ಮಗಳ ಮೇಲೆ ಎಷ್ಟು ದೌರ್ಜನ್ಯ ಎಸಗಬಹುದೋ ಅಷ್ಟೆಲ್ಲವನ್ನೂ ಮಾಡಿ ನನ್ನನ್ನು ಒಂಟಿ ಕಾಲಿನ ಮೇಲೆ ನಿಲ್ಲಿಸಿ ಹೋದರು.

ನನ್ನ ಮೊಂಡುತನ ಮತ್ತು ಬಂಡುಕೋರತನವನ್ನು ಕನ್ನಡದ ಮೇಲೆ ಎತ್ತಿ ಹಾಕಿದ್ದು ಬೇರೆ ನನಗೆ ಅಪಾರ ದುಃಖವನ್ನು ಉಂಟು ಮಾಡಿತ್ತು. ಆಮೇಲೆ ಈ ಪ್ರಕರಣ ನನಗೆ ಎಷ್ಟೋ ಸಾರಿ ಬದುಕಿನ ಬೇರೆ ಬೇರೆ ಕಾಲ ಘಟ್ಟದಲ್ಲಿ ನೆನಪಾಗಿದೆ. ಉರ್ದು ಓದಿದ್ದ ಇಸ್ಮತ್ ಚುಗ್ತಾಯಿ ‘ಲೆಹಾಫ್’ ಎಂಬ ಕಥೆಯನ್ನು ಬರೆದಿದ್ದು ನೆನಪಾಗಿ ನನಗೆ ನಾನೇ ದುಃಖ ಶಮನವನ್ನು ಮಾಡಿಕೊಂಡೆ.

ಈಗ ಮುಟ್ಟಿನ ಪುರಾಣ ತನ್ನ ಎಲ್ಲೆಗಳನ್ನು ವಿಸ್ತರಿಸುತ್ತಾ ಸಾಂಸ್ಕೃತಿಕ ಮೌಲ್ಯಗಳನ್ನು ಪ್ರಶ್ನಿಸುತ್ತಾ ಜಾತಿ ರಾಜಕಾರಣವನ್ನು ಮುಂದೊಡ್ಡಿ, ನಂತರ ಲಿಂಗಾಧಾರಿತ ಮೌಲ್ಯಗಳನ್ನು ವಿಶ್ಲೇಷಿಸುತ್ತಾ ಭಾಷೆ ಹಾಗೂ ಯಜಮಾನಿಕೆಯ ರಾಜಕಾರಣಗಳನ್ನು ನಿಕಷಕ್ಕೆ ಒಡ್ಡುತ್ತಾ ಮುಂದುವರಿದಿದೆ. ಮಕ್ಕಳ ಹಕ್ಕುಗಳ ಬಗ್ಗೆ ಅರಿವನ್ನು ಮೂಡಿಸುತ್ತಾ ಎಲ್ಲಿಂದ ಎಲ್ಲಿಯವರೆಗೋ ಈ ಮುಟ್ಟಿನ ಪಯಣ.

ಮುಟ್ಟಿನ ಬಟ್ಟೆಯನ್ನು ಒಗೆದು ಹಾಕುವ ತಾಳ್ಮೆ ಸಹನೆ, ಸಮಯ ಪ್ರಜ್ಞೆ ಇದು ಯಾವುದೂ ಕೂಡ ನನ್ನಲ್ಲಿರಲಿಲ್ಲ. ಅದೆಲ್ಲವನ್ನೂ ಕೂಡ ಪ್ರತಿ ತಿಂಗಳು ಬೀಬೀ ಒಗೆದು ಹಾಕಿ ಡೆಟಾಲ್ ನೀರನ್ನು ಚಿಮುಕಿಸಿ ಸೂರ್ಯನ ಬಿಸಿಲಿನಲ್ಲಿ ಒಣಗಿ ಹಾಕುತ್ತಿದ್ದರು.

ಹಾಗೆ ಮಾಡುವಾಗ ಅಥವಾ ನಂತರ ‘ನೀನು ಹಾಗೆ ಮುಟ್ಟಿನ ಬಟ್ಟೆಗಳನ್ನು ಎಲ್ಲೆಂದರಲ್ಲಿ ಬಿಸಾಡಬೇಡ. ಅದರ ಹತ್ತಿರ ಸರಿದು ಹೋದಲ್ಲಿ ಧಾಬಿನ್‍ನ (ಹೆಣ್ಣು ನಾಗರ)ದ ಕಣ್ಣುಗಳು ಕುರುಡಾಗುತ್ತವೆ. ಆಗ ಅದು ಶಪಿಸುತ್ತದೆ. ಅದರ ಶಾಪ ಫಲಿಸುತ್ತದೆ ಮತ್ತು ಹಾಗೆ ಬಟ್ಟೆಯನ್ನು ಬಿಸಾಡಿದ ಹೆಂಗಸಿಗೆ ಮಕ್ಕಳಾಗುವುದಿಲ್ಲ’. ಅವರ ಯಾವ ನಂಬಿಕೆಗಳು, ಕಥೆಗಳು, ಬೇಡಿಕೆಗಳು ಕೂಡ ನನ್ನ ಮೇಲೆ ಯಾವ ಪರಿಣಾಮವನ್ನೂ ಬೀರುವಂತೆ ಇರಲಿಲ್ಲ.

ಪ್ರಾಪ್ತ ವಯಸ್ಸಿನಲ್ಲಿ ಉಂಟಾಗುವ ಹಾರ್ಮೋನುಗಳ ಪ್ರಭಾವದಿಂದ ಕ್ರಿಯಾಶೀಲವಾದ ಅಂಡಾಶಯಗಳು ಉತ್ಪಾದಿಸುವ ಅಂಡಗಳು ಫಲಿತವಾಗದಿದ್ದಲ್ಲಿ ನಿರ್ಗಮಿಸುವ ಕ್ರಿಯೆಯೇ ಮುಟ್ಟು ಎಂಬುದು ದೇಹರಚನೆ ಶಾಸ್ತ್ರದ ವ್ಯಾಖ್ಯಾನ. ಅಥವಾ ಅಂಡವು ಫಲಿತವಾದರೂ ಕೂಡ ಮಗುವಿನ ಜನನದ ವೇಳೆಯಲ್ಲಿ ರಕ್ತದ ಜಾರು ಬಂಡೆ ಪ್ರಕೃತಿಯ ಕೊಡುಗೆ. ನೆತ್ತಿ, ಕಣ್ಣು, ಮೂಗು, ಮೈ ಕೈ ಎಲ್ಲದಕ್ಕೂ ತಾಯಿಯ ನೆತ್ತರನ್ನು ಬಳಿದುಕೊಂಡು ಹುಟ್ಟುವ ಗಂಡು ಅದರ ಬಗ್ಗೆ ಹುಟ್ಟುಹಾಕಿರುವ ಹೇಸಿಗೆಯ ಭಾವ, ತಾರತಮ್ಯ ಅದನ್ನೇ ಬಂಡವಾಳವನ್ನಾಗಿಸಿಕೊಂಡು ನೆತ್ತರ ರುಚಿಯನ್ನು ಕಂಡು ಬಲಿತಿರುವ ನಾಲಿಗೆಯಿಂದ ಉದ್ಧರಿಸುವ ಆದೇಶಗಳು. ಅಬ್ಬಾ! ಈ ಗಂಡು ಜನ್ಮವೇ ಎಷ್ಟೊಂದು ವಿಚಿತ್ರ ವಿಸ್ಮಯ ಮತ್ತು ಹೇಸಿಗೆಯಿಂದ ಕೂಡಿದ ಆಘಾತಕಾರಿ ಅಸ್ತಿತ್ವ ಎಂದೆನಿಸಿದಾಗ ಅಂತಹ ಪುರುಷರಿಗೆ ಶೇಮ್ ಶೇಮ್!

ಮುಟ್ಟಿಗೂ ಎಷ್ಟೊಂದು ನೆನಪುಗಳು. ಆಗ ನನಗೆ ಸುಮಾರು ಹದಿಮೂರು ವರ್ಷಗಳಿರಬಹುದು. ರಾತ್ರಿ ಸುಮಾರು ಎಂಟು ಗಂಟೆ. ನಾವು ಕೆಆರ್‌ಎಸ್ ನಲ್ಲಿ ವಾಸವಾಗಿದ್ದೆವು. ಅಲಿನ ಕ್ವಾಟ್ರರ್ಸ್‌ ನಮ್ಮ ವಸತಿಯಾಗಿತ್ತು. ನಮ್ಮ ಮನೆಯ ಒಂದಿಷ್ಟು ದೂರದಲ್ಲಿದ್ದ ಶ್ರೀಚಂದ್ರಮೌಳೇಶ್ವರ ದೇವಸ್ಥಾನದಲ್ಲಿ ಯಾವುದೋ ಉತ್ಸವ ನಡೆಯುತ್ತಿತ್ತು. ಈ ಉತ್ಸವದ ಮೆರವಣಿಗೆಯೊಂದು ದೇವಸ್ಥಾನದ ಮೆಟ್ಟಿಲಿನಿಂದ ಹೊರಡುತ್ತಿತ್ತು.

ನಾನು ಮನೆಯಿಂದ ಹೊರಗೋಡಿ ಬಂದೆ. ಮೆರವಣಿಗೆ ನೋಡುತ್ತಾ ನಿಂತಿದ್ದೆ. ಒಂದು ಹತ್ತು ನಿಮಿಷ ಕಳೆಯುವಷ್ಟರಲ್ಲಿ ಮೂತ್ರ ವಿಸರ್ಜನೆಯಾದಂತೆನಿಸಿತು. ಎಷ್ಟೊಂದು ವಯಸ್ಸಾಗಿದೆ ಕತ್ತೆಯಂತೆ; ಬಟ್ಟೆಯಲ್ಲಿ ಹೀಗೆ ಮಾಡಿಕೊಂಡೆನಲ್ಲ ಎಂದು ನನಗೆ ನಾಚಿಕೆ ಮತ್ತು ಭಯ ಉಂಟಾಯಿತು. ಅಲ್ಲಿಂದ ಓಡಿಬಂದು ನಾನು ಸೊಳ್ಳೆ ಪರದೆ ಸರಿಸಿ ಹಾಸಿಗೆಯಲ್ಲಿ ಸೇರಿಕೊಂಡೆ. ರಾತ್ರಿ ಇಡೀ ಗಡದ್ದು ನಿದ್ರೆ. ಬೆಳಿಗ್ಗೆ ಎದ್ದು ನೋಡುತ್ತೇನೆ ನನ್ನ ಕೆಳ ವಸ್ತ್ರವೆಲ್ಲ ಕೆಂಪು ಕೆಂಪು. ಅದರ ಬಗ್ಗೆ ನನಗಿದ ಅತೀವ ಕುತೂಹಲ. ಪಿಸುಮಾತಿನಲ್ಲಿಯೇ ಅನೇಕ ರಹಸ್ಯಗಳು ವರ್ಗಾವಣೆಯಾಗಿದ್ದರೂ ಅದು ಮುಟ್ಟು ಎಂಬುದು ನನಗೆ ತಿಳಿಯಲೇ ಇಲ್ಲ.

ವಿಪರೀತ ಭಯವಾಗಿ ಅಲ್ಲಲ್ಲಿಯೇ ಕುಕ್ಕರ ಬಡಿದು ದೊಡ್ಡ ಧ್ವನಿಯಲ್ಲಿ ನಾನು ಅಳಲಾರಂಭಿಸಿದೆ. ಇಡೀ ಮನೆ ಕ್ಷಣಾರ್ಧದಲ್ಲಿ ಅಲ್ಲಿ ಸೇರಿ ಹೋಯಿತು. ವಿಷಯ ಏನೆಂದು ತಿಳಿಯದೆ ಅಪ್ಪ ಬಂದು ನನ್ನನ್ನು ಎದೆಗವಚಿಕೊಂಡರು. ಅಮ್ಮನಿಗೆ ಸೂಕ್ಷ್ಮವಾಗಿ ತಿಳಿದು ‘ಬಿಡಿಬಿಡಿ ಅವಳಿಗೆ ಸ್ನಾನ ಮಾಡಿಸಬೇಕು’ ಎಂದು ನನ್ನನ್ನು ಬಚ್ಚಲು ಮನೆಗೆ ಕರೆದುಕೊಂಡು ಹೋದರು. ನಾನಿನ್ನೂ ಅಳುತ್ತಲೇ ಇದ್ದೆ. ಬೀಬೀ ಸಮಾಧಾನಪಡಿಸುತ್ತಲೇ ನನಗೆ ಸ್ನಾನ ಮಾಡಿಸಿದರು. ಮತ್ತು ಅಲ್ಲೇ ಇದ್ದ ಮುನಿಯಪ್ಪನನ್ನು ಓಡಿಸಿ ಬೇವಿನಸೊಪ್ಪನ್ನು ತರಿಸಿದ್ದರು. ಸ್ನಾನ ಮಾಡಿಸಿ ಬಂದಕೂಡಲೇ ನನ್ನ ಆರೈಕೆ ಆರಂಭವಾಯಿತು. ಹೀಗೆಲ್ಲಾ ನಮ್ಮ ಪ್ರಹಸನ ಮುಗಿಯುವವರೆಗೂ ಕಾಣೆಯಾಗಿದ್ದ ನನ್ನ ಅಬ್ಬಾಜಿ ತಮ್ಮ ರ‍್ಯಾಲಿ ಸೈಕಲ್ಲಿನ ಹಿಂಬದಿಯಲ್ಲಿ ಒಬ್ಬ ನರ್ಸನ್ನು ಕೂರಿಸಿಕೊಂಡು ನಮ್ಮ ಮನೆಗೆ ಬಂದರು. ನನ್ನ ತಂದೆ ಸೀನಿಯರ್ ಹೆಲ್ತ್ ಇನ್‌ಸ್ಪೆಕ್ಟರ್‌ ಆಗಿದ್ದರಿಂದ ಇಂತಹ ಸವಲತ್ತು ಅವರಿಗಿತ್ತು. 

ಆಕೆ ಎಲ್ಲರನ್ನೂ ಹೊರಗೆ ಕಳಿಸಿ ರೂಮಿನ ಬಾಗಿಲಿಗೆ ಬೋಲ್ಟ್ ಹಚ್ಚಿದಳು. ನಾನು ತೊಟ್ಟಿದ್ದ ಕೆಳ ವಸ್ತ್ರವನ್ನು ಕಳಚಿ ನನ್ನನ್ನು ಬೆತ್ತಲೆಯಾಗಿ ನಿಲ್ಲಿಸಿಕೊಂಡು ಮುಟ್ಟಿನ ಸಂದರ್ಭದಲ್ಲಿ ಸ್ರಾವವನ್ನು ತಡೆಯುವ ಬಟ್ಟೆಯನ್ನು ಹೇಗೆ ಬಳಸಬೇಕು ಎಂಬುದನ್ನು ವೈಜ್ಞಾನಿಕವಾಗಿ ತಿಳಿ ಹೇಳಿದಳು. ಅವಳು ಹೇಳಿಕೊಟ್ಟ ವಿಧಾನವನ್ನು ನಾನು ಕೊನೆಯವರೆಗೂ ಅನುಸರಿಸಿದೆ. ಪುರುಷನಾದರೂ ಅಬ್ಬಾಜಿ ನನ್ನ ತಂದೆಯಾಗಿ ತಮ್ಮ ಕರ್ತವ್ಯವನ್ನು ಈ ನಿಟ್ಟಿನಲ್ಲಿ ಅತ್ಯಂತ ಸಹೃದಯತೆಯಿಂದ ನಿಭಾಯಿಸಿದರು. ಬೀಬೀಯಂತೂ ಈ ನಿಟ್ಟಿನಲ್ಲಿ ತನ್ನದೇ ದೇಹವೆಂಬಂತೆ ನನ್ನನ್ನು ನೋಡಿಕೊಂಡರು. 

ಸಮರ್ಪಕವಾದ ಆರೈಕೆ ನಡೆದು ನಾನು ಶಾಲೆಗೆ ಹೋಗಲಾರಂಭಿಸಿದ ನಂತರ ಮುಟ್ಟಿನ ದೆಸೆಯಿಂದ ಅಪಾರ ಕಷ್ಟವನ್ನು ಅನುಭವಿಸಿದೆ. ಆಗ ಶಾಲೆಗಳಲ್ಲಿ ಶೌಚಾಲಯ ಇರಲೇಬೇಕೆಂಬ ಕಡ್ಡಾಯವೇನೂ ಇರಲಿಲ್ಲ. ನಾವೆಲ್ಲ ಬೆಳಿಗ್ಗೆ ಮನೆ ಬಿಟ್ಟಾಗ ನಿತ್ಯ ಕರ್ಮಗಳನ್ನು ನಿರ್ವಹಿಸಿ ಹೊರಬಿದ್ದರೆ ನಡುವೆ ಮೂತ್ರ ವಿಸರ್ಜನೆಗೂ ಎಲ್ಲಿಯೂ ಸೌಲಭ್ಯವಿರಲಿಲ್ಲ. ಮುಟ್ಟಿನ ದಿನಗಳಲ್ಲಂತೂ ಬೆಳಿಗ್ಗೆ ಬಟ್ಟೆಯನ್ನು ಧರಿಸಿ ಹೊರಬಿದ್ದಲ್ಲಿ ಸ್ರಾವವು ನೆನೆದು ತೊಯ್ದು ಒಣಗಿ ಗರಗಸದಂತೆ ಆಗಿ ನಡೆದಾಗ ತೊಡೆಗಳ ಇಕ್ಕೆಲಗಳಲ್ಲೂ ಉಜ್ಜಿ ಮನೆಗೆ ಬರುವ ವೇಳೆಗೆ ರಕ್ತ ಗಾಯಗಳೇ ಆಗಿರುತ್ತಿತ್ತು.

ಇದನ್ನೂ ಓದಿ: ಮುಟ್ಟು: ಏನಿದರ ಒಳಗುಟ್ಟು?

ಬೀಬೀ ಮುಲಾಮು ಹಚ್ಚುವಾಗ ಬಾಡಿದ ಮೋರೆಯನ್ನು ಕಂಡ ಇನ್ನಷ್ಟು ಅವರನ್ನು ನೋಯಿಸುವ ಹಟದಿಂದ ‘ನೋಡಿ ನೋಡಿ, ಮುಟ್ಟು ಅಂದರೆ ಇದೇ. ಅವತ್ತು ದನಕ್ಕೆ ಬಡಿದಂಗೆ ನನ್ನನ್ನು ಬಡಿದಿದ್ದರಲ್ಲಾ ಇವತ್ತು ಕಣ್ತುಂಬ ನೋಡಿಕೊಳ್ಳಿ’ ಎಂದು ರೊಚ್ಚಿನಿಂದ ನುಡಿಯುತ್ತಿದ್ದೆ. ಬೀಬೀ ಕಣ್ಣು ತುಂಬಾ ನೀರನ್ನು ತುಂಬಿ ಕೊಂಡು ‘ಮೂರು ದಿನಗಳ ಮಟ್ಟಿಗೆ ಆದರೂ ಶಾಲೆಗೆ ಹೋಗಬೇಡ’ ಎಂದು ತುಂಬಾ ಅನುನಯದಿಂದ ಹೇಳುತ್ತಿದ್ದರು. ಆದರೆ, ನಾನು ಶಾಲೆ ಬಿಡಲು ಸಿದ್ಧಳಿರಲಿಲ್ಲ. 

ಇಸ್ಲಾಮೀ ಧಾರ್ಮಿಕ ಪದ್ಧತಿಯ ಅನ್ವಯ ಮುಟ್ಟಾದ ಮಹಿಳೆಯರಿಗೆ ದೈನಂದಿನ ಕಡ್ಡಾಯ ಐದು ಹೊತ್ತಿನ ನಮಾಜ್ ಮಾಡುವುದರಿಂದ ವಿನಾಯಿತಿ ಇದೆ. ಆ ಸಂದರ್ಭದಲ್ಲಿ ಕುರಾನ್ ಅನ್ನು ಕೂಡ ಮುಟ್ಟುವಂತೆ ಇರುವುದಿಲ್ಲ. ರಂಜಾನ್ ತಿಂಗಳಿನಲ್ಲಿ ಕಡ್ಡಾಯವಾಗಿ ಪಾಲಿಸಬೇಕಾದ ತಿಂಗಳ ಉಪವಾಸದ ಅವಧಿಯಲ್ಲಿ ಯಾರಾದರೂ ಮಹಿಳೆಯರು ಮುಟ್ಟಾದಲ್ಲಿ ಆ ಅವಧಿಯ ಉಪವಾಸಗಳನ್ನು ಕೈಬಿಡಬೇಕು. ಆದರೆ ರಂಜಾನ್ ಹಬ್ಬ ಕಳೆದ ನಂತರ ಮುಂದಿನ ಹನ್ನೊಂದು ತಿಂಗಳ ಅವಧಿಯಲ್ಲಿ ಯಾವಾಗ ಬೇಕಾದರೂ ಹಾಗೆ ಬಿಟ್ಟು ಹೋದ ಉಪವಾಸಗಳ ವ್ರತ ಆಚರಿಸಬೇಕು.

ಆದರೆ, ಯಾರಾದರೂ ಮಹಿಳೆಯರು ಹಜ್‍ಗೆ ಹೋದಂತಹ ಸಂದರ್ಭದಲ್ಲಿ ಮುಟ್ಟಾದರೆ, ಅವರು ಮುಟ್ಟಾದರೂ ಕೂಡಾ ಹಜ್‍ನ ಎಲ್ಲಾ ವಿಧಿವಿಧಾನಗಳನ್ನು ಆಚರಿಸಬಹುದು. ಅಂದರೆ ಮುಝ್‍ದಲಿಫ ಮತ್ತು ಮೀನಾದಲ್ಲಿ ರಾತ್ರಿ ಕಳೆಯಬೇಕಾದ ಆಚರಣೆ ಹಾಗೂ ಜಮರಾತ್‍ಗೆ ಕಲ್ಲು ಹೊಡೆಯುವ ವಿಧಿ ಮೊದಲಾದ ಎಲ್ಲಾ ಆಚರಣೆಗಳನ್ನು ಕೂಡಾ ಮಾಡಬಹುದು. ಆದರೆ, ಆಕೆ ಮೆಕ್ಕಾದ ಕಾಬಾದ ಪ್ರದಕ್ಷಿಣೆಯನ್ನು ಮಾತ್ರ ಮಾಡುವಂತಿಲ್ಲ. ಬದಲಿಗೆ ಆಕೆ ಮುಟ್ಟಿನ ಸ್ರಾವ ನಿಂತ ನಂತರ ಮತ್ತು ಸ್ನಾನ ಮಾಡಿದ ನಂತರ ಕಾಬಾದ ಪ್ರದಕ್ಷಿಣೆಯನ್ನು ಮಾಡಬಹುದು. ನಿಮಗೇನಾದರೂ ಮುಟ್ಟಿಸಿಕೊಂಡಂತೆ ಆಯಿತೆ ಗಂಡಸರೆ? ನಿಮ್ಮ ಮನಸ್ಸುಗಳನ್ನು ಮುಟ್ಟಿ ನೋಡಿಕೊಳ್ಳಿ. 

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು