ಬುಧವಾರ, 6 ಡಿಸೆಂಬರ್ 2023
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕವಿ ಮನಸಿನ ಚೆಲುವೆಯ ನುಡಿಮುತ್ತು

Last Updated 1 ಜುಲೈ 2013, 19:59 IST
ಅಕ್ಷರ ಗಾತ್ರ

ನಿಮ್ಮ ಬಗ್ಗೆ ಹೇಳಿ
ನನ್ನೂರು ವಿಶಾಖಪಟ್ಟಣ. ನೋಡುವುದಕ್ಕೆ ತುಂಬಾ ಸುಂದರವಾಗಿದೆ. ಹೈಸ್ಕೂಲು ಶಿಕ್ಷಣದ ನಂತರ ಹೆಚ್ಚಿನ ಓದಿಗಾಗಿ ಕುಟುಂಬದವರೊಂದಿಗೆ ಮಹಾನಗರಿ ಮುಂಬೈಗೆ ಹೋದೆ. 2012ರಲ್ಲಿ ಬಿಕಾಂ ಪದವಿ ಮುಗಿಸಿದೆ.

ಮಾಡೆಲಿಂಗ್ ಕ್ಷೇತ್ರ ಪ್ರವೇಶಿಸಿದ್ದು ಯಾವಾಗ?
ಆಕಸ್ಮಿಕವಾಗಿ ಈ ಕ್ಷೇತ್ರ ಪ್ರವೇಶಿಸಿದ್ದು. ಹೈಸ್ಕೂಲಿನಲ್ಲಿ ಇರುವಾಗ ತಮಾಷೆಗಾಗಿ ರ‌್ಯಾಂಪ್ ಮೇಲೆ ವಾಕ್ ಮಾಡಿದ್ದೆ. ನನ್ನೂರಿನಲ್ಲಿಯೇ ಸೌಂದರ್ಯ ಸ್ಪರ್ಧೆಗಳಲ್ಲಿ ಭಾಗವಹಿಸಿ ಗೆದ್ದ ಖುಷಿ ನನಗಿದೆ. ಈಗ ಮಿಸ್ ಇಂಡಿಯಾ ರನ್ನರ್ ಅಪ್ ಆಗಿದ್ದೇನೆ.  ಮಾಡೆಲಿಂಗ್ ಹೊರತಾಗಿ ಮನೆಯಲ್ಲಿ ನಾನು ತುಂಬಾ ಸರಳ ಹುಡುಗಿ. ನಾನಾಯಿತು, ನನ್ನ ಓದಾಯಿತು.

ಈ ಕ್ಷೇತ್ರಕ್ಕೆ ಬಂದಾಗ ಮನೆಯವರ ಪ್ರತಿಕ್ರಿಯೆ ಹೇಗಿತ್ತು?
ನನ್ನೆಲ್ಲಾ ನಿರ್ಧಾರ, ಆಯ್ಕೆಗಳಿಗೆ ಮನೆಯವರು ಯಾವತ್ತೂ ವಿರೋಧ ವ್ಯಕ್ತಪಡಿಸಿಲ್ಲ. ಅಂತಹ ತಂದೆ-ತಾಯಿಯನ್ನು ಪಡೆದಿರುವ ನಾನೇ ಅದೃಷ್ಟವಂತೆ. ನಾನು ಏನೇ ಮಾಡಿದರೂ ಸರಿಯಾಗಿ ಮಾಡುತ್ತೇನೆ ಎಂಬ ವಿಶ್ವಾಸ ಅವರಿಗಿತ್ತು.

ರೂಪದರ್ಶಿ ಆಗಿಲ್ಲದಿದ್ದರೆ...?
ಕವಯಿತ್ರಿಯಾಗುತ್ತಿದ್ದೆ. ನನ್ನ ಸಮಯವನ್ನು ಸರಿಯಾಗಿ ಉಪಯೋಗಿಸುವ ಬುದ್ಧಿವಂತಿಕೆ ನನ್ನಲ್ಲಿದೆ. ಜೀವನದಲ್ಲಿ ಸಾಧಿಸುವುದಕ್ಕೆ ತುಂಬಾ ಇದೆ.

ನಿಮ್ಮಿಷ್ಟದ ರೂಪದರ್ಶಿ, ವಿನ್ಯಾಸಕಾರರು ಯಾರು?
ನಾನು ಇತ್ತೀಚೆಗೆಷ್ಟೆ ಈ ಕ್ಷೇತ್ರ ಪ್ರವೇಶಿಸಿದ್ದೇನೆ. ವಿನ್ಯಾಸಕಾರರು, ರೂಪದರ್ಶಿಗಳ ಬಗ್ಗೆ ಈಗಷ್ಟೇ ತಿಳಿದುಕೊಳ್ಳುತ್ತಿದ್ದೇನೆ. ಅಲೆಗ್ಸಾಂಡರ್, ಮಸಾಬ ಗುಪ್ತಾ, ಸವ್ಯಸಾಚಿ ಮುಖರ್ಜಿ ತುಂಬಾ ಚೆನ್ನಾಗಿ ವಿನ್ಯಾಸ ಮಾಡುತ್ತಾರೆ.

ಮಾಡೆಲಿಂಗ್ ಕ್ಷೇತ್ರದಲ್ಲಿ ನಿಮಗೆ ಇಷ್ಟವಾಗದೇ ಇರುವ ಅಂಶಗಳು ಯಾವುವು?
ಒಳ್ಳೆಯದು, ಕೆಟ್ಟದ್ದು ಎಲ್ಲಾ ಕಡೆ ಇರುತ್ತದೆ. ಅದು ಸ್ವಾಭಾವಿಕ ಕೂಡ. ನಾನು ಹೊಸಬಳಾದ್ದರಿಂದ ಇದು ಸರಿ, ಅದು ತಪ್ಪು ಎಂದು ತೀರ್ಪು ಹೇಳುವಷ್ಟರಮಟ್ಟಿಗೆ ಬೆಳೆದಿಲ್ಲ. ನನ್ನ ಕೆಲಸವನ್ನು ನಾನು ಪ್ರೀತಿಯಿಂದ ಮಾಡುತ್ತೇನೆ. ಇದರ ಹೊರತಾಗಿ ಬೇರೆ ವಿಷಯಕ್ಕೆ ನಾನು ತಲೆ ಹಾಕುವುದಿಲ್ಲ.

ಯಾರ ವಿನ್ಯಾಸದ ಉಡುಗೆಗೆ ನೀವು ರ‌್ಯಾಂಪ್ ವಾಕ್ ಮಾಡಿದ್ದೀರಿ?
ಮಿಸ್ ಇಂಡಿಯಾ ತರಬೇತಿ ವೇಳೆ ವಿನ್ಯಾಸಕ ಸತ್ಯಪಾಲ್ ಅವರ ವಿನ್ಯಾಸದ ಉಡುಗೆಗೆ ರ‌್ಯಾಂಪ್ ಮೇಲೆ ಹೆಜ್ಜೆ ಹಾಕಿದ್ದೇನೆ. ತುಂಬಾ ಖುಷಿಯಾಗಿತ್ತು.

ಬಿಡುವಿನ ಸಮಯವನ್ನು ಹೇಗೆ ಕಳೆಯುತ್ತೀರಿ?
ನೃತ್ಯ ನನಗಿಷ್ಟ. ಜತೆಗೆ ಬರವಣಿಗೆಯಲ್ಲಿ ನನ್ನನ್ನು ಹೆಚ್ಚು ತೊಡಗಿಸಿಕೊಳ್ಳುತ್ತೇನೆ. ಬ್ಯಾಡ್ಮಿಂಟನ್ ಆಡುವುದು, ಈಜುವುದು, ಫೋಟೊ ತೆಗೆಯುವುದು, ಕುಟುಂಬ ಮತ್ತು ಸ್ನೇಹಿತರೊಡನೆ ತಿರುಗಾಡುವುದು ನನಗಿಷ್ಟ.

ನಿಮ್ಮ ಇಷ್ಟದ ಆಹಾರ?
ಭಾರತೀಯ ಶೈಲಿಯ ಯಾವುದೇ ಅಡುಗೆಯಾದರೂ ನಾನು ತಿನ್ನುತ್ತೇನೆ.                                                                                                             

ನಿಮ್ಮ ಪ್ರಕಾರ ಮಹಿಳೆಯರಿಗೆ ಶಿಕ್ಷಣ ಎಷ್ಟು ಮುಖ್ಯ?
ಶಿಕ್ಷಣ ಪ್ರತಿಯೊಬ್ಬರಿಗೂ ಅಗತ್ಯ. ಹೆಣ್ಣಿಗೆ ಬದುಕನ್ನು ರೂಪಿಸಿಕೊಳ್ಳಲು ಶಿಕ್ಷಣ ಸಹಾಯವಾಗುತ್ತದೆ.

ನಿಮ್ಮ ಜೀವನದ ಟರ್ನಿಂಗ್ ಪಾಯಿಂಟ್ ಯಾವುದು?
ನನ್ನ ಜಿಲ್ಲೆಯಲ್ಲಿ ನಡೆದ ಸೃಜನಶೀಲ ಬರವಣಿಗೆ ಸ್ಪರ್ಧೆಯಲ್ಲಿ ಗೆದ್ದಾಗ ನನಗೆ ಯಶಸ್ಸಿನ ರುಚಿ ಸ್ವಲ್ಪ ಸಿಕ್ಕಿತು. ಬರವಣಿಗೆ ನನಗೆ ಹತ್ತಿರವಾಗಿದ್ದು ಆಗಲೇ. ಇದರಿಂದ ಸ್ಫೂರ್ತಿಗೊಂಡು ಜೀವನದಲ್ಲಿ ಏನಾದರೂ ಸಾಧಿಸಬಹುದು ಎಂಬ ಆತ್ಮವಿಶ್ವಾಸ ನನ್ನಲ್ಲಿ ಹೆಚ್ಚಿತು. ಭವಿಷ್ಯದ ಬಗ್ಗೆ ಯೋಚನೆ ಮಾಡುವುದನ್ನು ಕಲಿಸಿತು. ಜೀವನವನ್ನು ಪ್ರೀತಿಸುವ ಬಗ್ಗೆ ತಿಳಿದುಕೊಂಡೆ. ಎಲ್ಲಕ್ಕಿಂತ ದೊಡ್ಡ ಟರ್ನಿಂಗ್ ಪಾಯಿಂಟ್ ಎಂದರೆ `ಮಿಸ್ ಇಂಡಿಯಾ' ಸ್ಪರ್ಧೆಯ ಮೊದಲ ರನ್ನರ್‌ಅಪ್ ಆಗಿದ್ದು.

ಸಮಾಜ ಸೇವೆಯಲ್ಲಿ ಕೈ ಜೋಡಿಸಿದ್ದೀರಾ?
ವೈಯಕ್ತಿಕವಾಗಿ ಮಾಡುತ್ತಿದ್ದೇನೆ. ಪರಿಸರ ಸಂರಕ್ಷಣೆ ಕೆಲಸದಲ್ಲಿ ಕೈ ಜೋಡಿಸಿದ್ದೇನೆ. ಜತೆಗೆ ಕಾಮಾಟಿಪುರದಲ್ಲಿ ಬದುಕುತ್ತಿರುವ ಹೆಣ್ಣುಮಕ್ಕಳ ಜೀವನ ನನ್ನ ಮೇಲೆ ತುಂಬಾ ಪ್ರಭಾವ ಬೀರಿದೆ. ಕೊನೆಪಕ್ಷ ಇಬ್ಬರು ಮೂವರಿಗಾದರೂ ನನ್ನ ಕೈಲಾದ ಸಹಾಯ ಮಾಡಬೇಕು ಎಂಬ ಉದ್ದೇಶದಿಂದ ಅವರಿಗೆ ಶಿಕ್ಷಣ ಮತ್ತು ಆರೋಗ್ಯದ ಸವಲತ್ತುಗಳನ್ನು ನೀಡುತ್ತಿದ್ದೇನೆ. ಯಾವುದೋ ಅನೈತಿಕ ಚಟುವಟಿಕೆಯಿಂದ ಅವರ ಬದುಕು ನಲುಗದಿರಲಿ ಎಂಬ ಹಾರೈಕೆ ನನ್ನದು.

ಭಾರತದಲ್ಲಿ ರೂಪದರ್ಶಿಗಳಿಗೆ ಸಂಭಾವನೆ ಕಡಿಮೆ ಎಂಬ ಮಾತಿದೆ. ನಿಮ್ಮ ಅಭಿಪ್ರಾಯವೇನು?
ನಾವು ಮೊದಲು ಸರಿಯಾಗಿ ಕೆಲಸ ಮಾಡಬೇಕು. ಶ್ರಮಕ್ಕೆ ತಕ್ಕ ಪ್ರತಿಫಲ ಸಿಕ್ಕೆ ಸಿಗುತ್ತದೆ ಎಂಬುದು ನನ್ನ ನಂಬಿಕೆ.

ಬೆಂಗಳೂರಿನ ಬಗ್ಗೆ ನಿಮ್ಮ ಅಭಿಪ್ರಾಯ?
ಬೆಂಗಳೂರು ಎಲ್ಲಾ ಸಂಸ್ಕೃತಿಯ ಜನರಿಗೆ ಆಶ್ರಯ ನೀಡಿದೆ. ತುಂಬಾ ಸುಂದರವಾದ ನಗರ. ಶಾಪಿಂಗ್ ಮಾಡುವುದಕ್ಕೆ ಒಳ್ಳೆಯ ಜಾಗವಿದು. ಯಾವುದೇ ಒತ್ತಡವಿದ್ದರೂ ಬೆಂಗಳೂರಿನಲ್ಲಿ ಸುತ್ತಾಡಿದರೆ ತುಸು ನೆಮ್ಮದಿ ಸಿಗುತ್ತದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT