ಭಾನುವಾರ, 5 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮ್ಯಾಕ್ಸ್‌ಮುಲ್ಲರ್‌ ಶಾಲೆಗೆ 25ರ ಸಂಭ್ರಮ

Last Updated 9 ಸೆಪ್ಟೆಂಬರ್ 2018, 19:30 IST
ಅಕ್ಷರ ಗಾತ್ರ

ಸಾವಿರಾರು ವಿದ್ಯಾರ್ಥಿಗಳಿಗೆ ವಿದ್ಯೆಯನ್ನು ಧಾರೆ ಎರೆದು, ಅವರ ಭವಿಷ್ಯದ ಬದುಕನ್ನು ರೂಪಿಸುತ್ತಿರುವ ಶಾಲೆಗಳ ಪೈಕಿ ಬಸವೇಶ್ವರನಗರದ ಬಿಇಎಂಎಲ್ ಬಡಾವಣೆಯ 8ನೇ ಮುಖ್ಯರಸ್ತೆಯಲ್ಲಿರುವ ಮ್ಯಾಕ್ಸ್‌ಮುಲ್ಲರ್ ಶಿಕ್ಷಣ ಸಂಸ್ಥೆಯೂ ಒಂದು.

ಮಕ್ಕಳ ಸರ್ವತೋಮುಖ ಬೆಳವಣಿಗೆಗೆ ವಿಶೇಷ ಆದ್ಯತೆ ನೀಡುವುದರ ಜತೆಗೆ ಶಿಸ್ತು, ಸಂಯಮ, ನಯ, ವಿನಯ ಕಲಿಸುವುದು ಈ ಸಂಸ್ಥೆಯ ಮೂಲ ಉದ್ದೇಶ.

1993ರಲ್ಲಿ ಸ್ಥಾಪನೆಯಾದ ಈ ಶಾಲೆಗೀಗ25ರ ಹರ್ಷ. ಕಾಕತಾಳೀಯವೆಂಬಂತೆ ಇದೇ ಸಂದರ್ಭದಲ್ಲಿ, ಮ್ಯಾಕ್ಸ್‌ಮುಲ್ಲರ್ ಶಾಲೆಯ ಪ್ರಾಂಶುಪಾಲರಾದ ಹೇಮಲತಾ ಜನಾರ್ದನ್ ಅವರಿಗೆ ‘ಕೆಂಪೇಗೌಡ’ ಪ್ರಶಸ್ತಿಯೂ ದಕ್ಕಿದೆ. ಸಂಸ್ಥೆಗೆ ಒಂದೇ ವೇಳೆ ಎರೆಡೆರಡು ಖುಷಿ.

‘ಈ ಖುಷಿಗಿಂತ ದುಪ್ಪಟ್ಟು ಹೆಮ್ಮೆ ಎನಿಸುವುದು ನಮ್ಮ ಶಾಲೆಯಲ್ಲಿ ಓದಿದ ವಿದ್ಯಾರ್ಥಿಗಳು ಐಎಎಸ್, ಐಪಿಎಸ್ ಅಧಿಕಾರಿಗಳಾಗಿ ಸಮಾಜ ಸೇವೆಯಲ್ಲಿ ತೊಡಗಿಕೊಂಡಿರುವುದು. ಶಾಲೆಯಲ್ಲಿ ಓದಿದ ಅದೆಷ್ಟೊ ವಿದ್ಯಾರ್ಥಿಗಳು ಎಂಜಿನಿಯರ್‌ಗಳು, ವೈದ್ಯರು ಸೇರಿದಂತೆ ಉನ್ನತ ಸ್ಥಾನಮಾನ ಪಡೆದಿರುವುದನ್ನುಕಂಡು ಶಾಲೆಯ ಸ್ಥಾಪನೆಯ ಉದ್ದೇಶ ಈಡೇರಿದೆ ಎಂಬ ಸಂತೃಪ್ತ ಭಾವನೆ ನಮಗೆ ಖುಷಿ ಕೊಡುತ್ತಿದೆ’ ಎನ್ನುವುದು ಶಾಲೆಯ ಪ್ರಾಂಶುಪಾಲರಾದ ಹೇಮಲತಾ ಜನಾರ್ದನ್ ಅವರ ಮಾತು.

‘ವಿದ್ಯಾದಾನಕ್ಕಿಂತ ದೊಡ್ಡದಾನವಿಲ್ಲ’ ಎಂಬುದನ್ನು ಅಚಲವಾಗಿ ನಂಬಿದ್ದವರು ಮ್ಯಾಕ್ಸ್‌ಮುಲ್ಲರ್ ಶಿಕ್ಷಣ ಸಂಸ್ಥೆಯ ಸ್ಥಾಪಕ ಟಿ.ಗಂಗಾಧರ್. ಆ ನಂಬಿಕೆಯಿಂದಲೇ ಮ್ಯಾಕ್ಸ್‌ ಮುಲ್ಲರ್ ಶಾಲೆಯ ಹುಟ್ಟಿಗೆ ಕಾರಣ. ಗಂಗಾಧರ್ ಅವರಂತೆಯೇ ಅವರ ಮಗ ಜಿ.ಜನಾರ್ದನ್, ಈ ಶಾಲೆಯನ್ನು ಜನರ ಅಂಗಳಕ್ಕೆ ದೂಡಿ ಅವರ ಸಲಹೆ– ಸೂಚನೆಗಳನ್ನು ಸ್ವೀಕರಿಸಿ ಸಂಸ್ಥೆಯನ್ನು ಬೆಳೆಸಿದ್ದಾರೆ. ಜನಾರ್ದನ್ ಪತ್ನಿಯಾದ ಹೇಮಲತಾ, ಪ್ರಾಂಶುಪಾಲರಾಗಿ ಶಾಲೆಯ ನೊಗ ಹೊತ್ತು ಗುಣಮಟ್ಟದ ಶಿಕ್ಷಣ ನೀಡುವ ಮೂಲಕ ವಿದ್ಯಾರ್ಥಿಗಳ ಜೀವನ ರೂಪಿಸುತ್ತಿದ್ದಾರೆ.

ಪ್ರಾರಂಭದಲ್ಲಿ 70–80 ಮಕ್ಕಳಿಂದ ಪ್ರಾರಂಭವಾದ ಈ ಶಾಲೆಯಲ್ಲಿ ಸದ್ಯ 2,200ಕ್ಕೂ ಹೆಚ್ಚು ವಿದ್ಯಾರ್ಥಿಗಳು ವಿದ್ಯಾಭ್ಯಾಸ ಮಾಡುತ್ತಿದ್ದಾರೆ. ಮಾಂಟೆಸರಿಯಿಂದ 10ನೇ ತರಗತಿವರೆಗೆ ಇಲ್ಲಿ ಶಿಕ್ಷಣ ನೀಡಲಾಗುತ್ತದೆ. 90 ಮಂದಿ ನುರಿತ ಶಿಕ್ಷಕರು ವಿದ್ಯಾರ್ಥಿಗಳ ಏಳಿಗೆಗೆ ಶ್ರಮಿಸುತ್ತಿದ್ದಾರೆ. ಅದರಪ್ರತಿಫಲವಾಗಿ 2010 ರಿಂದ 2017ರ ವರೆಗೆ ಎಸ್‌ಎಸ್‌ಎಲ್‌ಸಿ ಪರೀಕ್ಷೆಯಲ್ಲಿ ಶೇ 100 ರಷ್ಟು ಫಲಿತಾಂಶ ದೊರೆತಿದೆ.

ಸುಸಜ್ಜಿತ ಕೊಠಡಿಗಳು, ಗ್ರಂಥಾಲಯ, ಪ್ರಯೋಗಾಲಯ, ಪ್ರತ್ಯೇಕ ಆಟದ ಮೈದಾನ, ಸುಂದರವಾದ ಕ್ಯಾಂಪಸ್‌ ಹಾಗೂ ಶುಚಿಯಾದ ಶೌಚಾಲಯ ವ್ಯವಸ್ಥೆಯನ್ನು ಈ ಶಾಲೆ ಒಳಗೊಂಡಿದೆ.

ಸಮಯ, ಶಿಸ್ತುಪಾಲನೆಗೂ ಆದ್ಯತೆ

ಈ ಶಾಲೆಯು ಮಕ್ಕಳಲ್ಲಿ ಸಮಯ ಪ್ರಜ್ಞೆ ಮತ್ತು ಶಿಸ್ತುಪಾಲನೆಗೆ ಹೆಚ್ಚಿನ ಆದ್ಯತೆ. ಮಾಂಟೆಸರಿಗೆ ಶಾಲೆಗೆ ದಾಖಲಾಗುವ ಬಹುತೇಕ ಮಕ್ಕಳು 10ನೇ ತರಗತಿ ಪೂರ್ಣಗೊಳ್ಳುವವರೆಗೂ ಇಲ್ಲಿಯೇ ಓದುತ್ತಾರೆ. ಹೀಗಾಗಿ, ಪ್ರಾರಂಭದಲ್ಲಿಯೇ ಮಕ್ಕಳಲ್ಲಿ ಸಮಯ ಪ್ರಜ್ಞೆ ಹಾಗೂ ಶಿಸ್ತುಪಾಲನೆಯ ಪರಿ‍ಪಾಠವನ್ನು ಬೆಳೆಯುತ್ತದೆ.

ಪಠ್ಯೇತರ ಚಟುವಟಿಕೆಗೂ ಒತ್ತು

ಸಂಗೀತ, ಸಾಹಿತ್ಯ, ಕಲೆ, ಕ್ರೀಡೆ ಸೇರಿದಂತೆ ಪಠ್ಯೇತರ ಚಟುವಟಿಕೆಗೆ ಈ ಶಾಲೆಯಲ್ಲಿ ಪ್ರೋತ್ಸಾಹವಿದೆ. ಮಕ್ಕಳ ಆಸಕ್ತಿ ಗುರುತಿಸಿ ಸಭೆ–ಸಮಾರಂಭಗಳಲ್ಲಿ ಅವರ ಪ್ರತಿಭೆ ಅನಾವರಣ ಮಾಡಲು ಇಲ್ಲಿನ ಶಿಕ್ಷಕರು ಸ್ವಯಂಪ್ರೇರಿತರಾಗಿ ವಿದ್ಯಾರ್ಥಿಗಳಿಗೆ ನೆರವಾಗುತ್ತಾರೆ. ಕ್ರೀಡೋತ್ಸವ, ಸಾಂಸ್ಕೃತಿ ಕಾರ್ಯಕ್ರಮಗಳನ್ನು ಕಾಲಕಾಲಕ್ಕೆ ಶಾಲೆಯಲ್ಲಿ ಆಯೋಜಿಸಿ ವಿದ್ಯಾರ್ಥಿಗಳ ಪ್ರತಿಭೆ ಅನಾವರಣಕ್ಕೆ ಸಾಕ್ಷಿಯಾಗಿದೆ.

ಶಾಲೆಯ ವಿದ್ಯಾರ್ಥಿಗಳು ರಾಜ್ಯ, ರಾಷ್ಟ್ರ ಹಾಗೂ ಅಂತರರಾಷ್ಟ್ರೀಯ ಮಟ್ಟದವರೆಗೂ ಸಾಧನೆ ಮಾಡಿದ್ದಾರೆ. ಈಚೆಗೆ 2018–19ನೇ ಸಾಲಿನ ಜಿಲ್ಲಾಮಟ್ಟದ ವಾಲಿಬಾಲ್ ಕ್ರೀಡಾಕೂಟದಲ್ಲಿ ಬಾಲಕ–ಬಾಲಕಿಯರು ಪ್ರಥಮ ಸ್ಥಾನ ಪಡೆದಿದ್ದಾರೆ. 8ನೇ ತರಗತಿಯ ವಿದ್ಯಾರ್ಥಿ ಚಿನ್ಮಯಿ ಕರಾಟೆಯಲ್ಲಿ ಅಂತರರಾಷ್ಟ್ರೀಯ ಮಟ್ಟದ ಸ್ಪರ್ಧೆಗೆ ಆಯ್ಕೆಯಾಗಿದ್ದಾರೆ.

ಶಾಲೆಯ ಆದ್ಯತೆಗಳು

* ವಿದ್ಯಾರ್ಥಿಗಳ ಆಸಕ್ತಿ ಗುರುತಿಸಿ ಅದಕ್ಕನುಗುಣವಾಗಿ ಪ್ರೋತ್ಸಾಹ

* ಕ್ರೀಡೋತ್ಸವ ಆಯೋಜಿಸಿ ಮಕ್ಕಳ ಪ್ರತಿಭೆ ಅನಾವರಣಗೊಳಿಸುವುದು

* ಮಕ್ಕಳಿಂದ ಸಸಿಗಳನ್ನು ನೆಡಿಸಿ, ಪರಿಸರ ಮಾಲಿನ್ಯದ ಬಗ್ಗೆ ಅರಿವು ಮೂಡಿಸುವುದು

* ರಾಷ್ಟ್ರೀಯ ಮನೋಭಾವ ಬೆಳೆಸುವುದು

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT