ಶನಿವಾರ, 4 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬಡವರ ಕಲ್ಪವೃಕ್ಷ ಪಬ್ಲಿಕ್‌ ಫ್ರಿಜ್‌

ಅಕ್ಷರ ಗಾತ್ರ

ಅಯ್ಯೋ ಎಷ್ಟೊಂದು ಆಹಾರ ಉಳಿದಿದೆ ಎಲ್ಲ ಚೆಲ್ಲಬೇಕೆ, ಎಷ್ಟು ಚೆಂದ ಬಟ್ಟೆ ಇದೆ ಧರಿಸೋಕೆ ಆಗಲ್ಲ, ಮಕ್ಕಳು ದೊಡ್ಡವರಾದರು ಬೊಂಬೆ, ಆಟಿಕೆಗಳನ್ನು ಏನು ಮಾಡೋದು ಎಂದು ಗೊತ್ತಾಗದೇ ಯೋಚಿಸುತ್ತಿದ್ದೀರಾ..?

ಬಿಟಿಎಂ ಲೇಔಟ್‌ನ ಡಾಲರ್‌ ಕಾಲೊನಿಯ ಪಬ್ಲಿಕ್‌ ಫ್ರಿಜ್‌ನೊಳಗಿಡಿ. ಅಗತ್ಯವಿದ್ದವರಿಗೆ ತಲುಪುತ್ತದೆ.

ದಿನನಿತ್ಯದ ವಸ್ತುಗಳು, ಆಹಾರವನ್ನು ಇಡಬಹುದು ಅಥವಾ ತೆಗೆದುಕೊಳ್ಳಬಹುದು. ಇದರಿಂದ ಒಂದಷ್ಟು ಮಂದಿ ಹೊಟ್ಟೆ ತುಂಬಿದರೆ ಸಾಕು. ಉಳಿದದ್ದನ್ನು ಹಾಳು ಮಾಡದೇ ಅಗತ್ಯವಿದ್ದವರಿಗೆ ತಲುಪಿಸುವುದೇ ಇದರ ಉದ್ದೇಶ.

ಒಂದೆಡೆ, ಸಮಾರಂಭ, ಹೋಟೆಲ್‌, ರೆಸ್ಟೋರೆಂಟ್ ಹೀಗೆ ಎಲ್ಲಾ ಕಡೆ ಹೋದಾಗಲೆಲ್ಲಾ ಉಳಿದ ಆಹಾರ, ಕಸದ ಬುಟ್ಟಿ ಸೇರುತ್ತಿತ್ತು. ಇನ್ನೊಂದೆಡೆ ಆಹಾರಕ್ಕಾಗಿ ಹಲವು ಜನ ಕಷ್ಟಪಡುತ್ತಿದ್ದರು. ಇವರಿಬ್ಬರ ನಡುವೆ ಒಂದು ಕಂದರವೇ ಇತ್ತು. ಇದಕ್ಕೆ ಪರಿಹಾರ ನೀಡಬೇಕೆಂದು. ಡಾ.ಐಸಾ ಫಾತಿಮಾ ಜಾಸ್ಮಿನ್‌ 2014ರಲ್ಲಿ ಚೆನೈನಲ್ಲಿಪಬ್ಲಿಕ್‌ ಫೌಂಡೇಷನ್‌ಆರಂಭಿಸಿದರು.

‘ಅಯ್ಯಮಿಟ್ಟು ಉನ್‌‘ ಸಮುದಾಯ ಫ್ರಿಜ್‌ ಸ್ಥಾಪಿಸಿದ್ದರು. ಇದಕ್ಕೆ ಚೆನೈನಲ್ಲಿ ಉತ್ತಮ ಪ್ರತಿಕ್ರಿಯೆ ದೊರೆತಿದ್ದು. ಈಗ ಚೆನ್ನೈನಲ್ಲಿ 4 ಕಡೆ ಪಬ್ಲಿಕ್‌ ಫ್ರಿಜ್‌ ತಲೆಎತ್ತಿವೆ. ಪ್ರತಿ ದಿನ 100 ರಿಂದ 150 ಮಂದಿ ಹೊಟ್ಟೆ ತುಂಬಿಸುತ್ತಿದೆ ಎನ್ನುತ್ತಾರೆ ಡಾ.ಐಸಾ ಫಾತಿಮಾ ಜಾಸ್ಮಿನ್‌.

ಅಲ್ಲಿಂದ ನಮ್ಮೂರು ಬೆಂಗಳೂರಿಗೂ ಈ ಫ್ರಿಜ್‌ ಬಂತು. ನಿಯತಕಾಲಿಕೆವೊಂದರಲ್ಲಿ ಬಂದ ಲೇಖನವನ್ನು ಓದಿ, ಪಬ್ಲಿಕ್‌ ಫೌಂಡೇಶನ್‌ ಅಡಿಯಲ್ಲಿಬಿಟಿಎಂ ಲೇಔಟ್‌ನ ಡಾಲರ್‌ ಕಾಲೋನಿಯ ಕೋತಾ ಲೈಫ್‌ಅಪಾರ್ಟ್‌ಮೆಂಟ್‌ ಮುಂಭಾಗದಲ್ಲಿ ಬಾಲ ಹರೀಶ್‌ ಕುಮಾರ್‌ ದಂಪತಿ ನವೆಂಬರ್‌ 2017ರಲ್ಲಿ ಪಬ್ಲಿಕ್‌ ಫ್ರಿಜ್‌ನನ್ನುಸ್ಥಾಪಿಸಿದ್ದಾರೆ.

ಫ್ರಿಜ್‌ ಅಂತ ಹೇಳಿ ತಿನ್ನಲು ಯೋಗ್ಯವಲ್ಲದ್ದು ತಂದು ಇಡೋಕೆ ಆಗಲ್ಲ. ಹಲವರ ಮಂದಿ ಹೊಟ್ಟೆ ತುಂಬಿಸಲು ಮಾಡಿರುವ ಇದರಲ್ಲಿ ಯೋಗ್ಯವಾದ ಪದಾರ್ಥಗಳನ್ನು ಸ್ವೀಕರಿಸುತ್ತಾರೆ.

ಇನ್ನು ಬಟ್, ಪುಸ್ತಕಗಳು, ಆಟಿಕೆಗಳು, ಬೂಟುಗಳು, ಚಪ್ಪಲಿ, ಪಾತ್ರೆಗಳು ಮುಂತಾದ ಉಪಯೋಗಿಸಲು ಯೋಗ್ಯವಾದ ವಸ್ತುಗಳನ್ನು ಇಡಬಹುದು. ಪ್ರತಿ ದಿನ ಈ ಫ್ರಿಜ್‌ 20 ರಿಂದ 30 ಮಂದಿಗೆ ಹೊಟ್ಟೆ ತುಂಬಿಸುವ ತಾಣವಾಗಿದೆ. ಇದು ಬೆಳಗ್ಗೆ 8 ರಿಂದ ಸಂಜೆ 8 ಗಂಟೆಯವರೆಗೆ ತೆರೆದಿದ್ದು ಇಲ್ಲಿ ಯಾರು ಬೇಕಾದರೂ ದಾನ ಮಾಡಬಹುದು ಮತ್ತು ದಾನ ಪಡೆಯಬಹುದಾಗಿದೆ.

ಹೀಗೆ ಸಿಲಿಕಾನ್‌ ಸಿಟಿಯಲ್ಲಿ ಕೋರಮಂಗಲ, ಇಂದಿರಾನಗರಗಳಲ್ಲಿ ರೆಸ್ಟೋರೆಂಟ್‌ ಮುಂಭಾಗ ಮಾಲೀಕರೇ ನಿರ್ಗತಿಕರಿಗೆ ಅನುಕೂಲವಾಗಲೆಂದು ಪಬ್ಲಿಕ್‌ ಫ್ರಿಜ್‌ಗಳನ್ನು ಸ್ಥಾಪಿಸಿದ್ದಾರೆ.
**
ಸ್ವೀಕರಿಸಲಾಗದ ವಸ್ತುಗಳು
ಹಸಿ ಮಾಂಸ, ಮೀನು, ಮೊಟ್ಟೆ, ತೆರೆದ ಆಹಾರ ಮತ್ತು ಹಾಲು, ಅರ್ಧ ತಿಂದುಳಿದ ಆಹಾರ, ಬೇಯಿಸದ ಆಹಾರ (ನೊಂದಾಯಿಸದೇ ಇರುವ ಸಂಸ್ಥೆಗಳು), ಮಾದಕ ಪಾನೀಯಗಳು, ಅವಧಿ ಮೀರಿದ ಆಹಾರ ಹಾಗೂ
ಕೊಳೆತ ಹಣ್ಣು ಮತ್ತು ತರಕಾರಿಗಳು.

ಸ್ವೀಕರಿಸುವ ಪದಾರ್ಥಗಳು
ಸೀಲ್ಡ್‌ ನೀರಿನ ಬಾಟೆಲ್, ಜ್ಯೂಸ್, ಬಿಸ್ಕೆಟ್ಸ್, ಡ್ರೈ ಸ್ನಾಕ್ಸ್, ತಾಜಾ ಹಣ್ಣು ಮತ್ತು ತರಕಾರಿ, ಬೇಯಿಸಿದ ಆಹಾರ ಪದಾರ್ಥಗಳು (ನೋಂದಾಯಿತ ಸಂಸ್ಥೆಗಳಿಂದ), ಮನೆಯಲ್ಲಿ ತಯಾರಿಸಿದ ಆಹಾರ, ಪ್ಯಾಕ್ ಮಾಡಿದ ಆಹಾರ (ಅವಧಿಯೊಳಗಿನ ಆಹಾರ ಪದಾರ್ಥಗಳು).

ಜನ ಏನಂತಾರೆ?
ಈ ಫ್ರಿಜ್‌ ನಮಗೆ ತುಂಬಾ ಅನುಕೂಲವಾಗಿದೆ. ಹೊಟ್ಟೆ ತುಂಬಾ ಊಟ ಸಿಗುತ್ತೆ. ನಾವು ಎಲ್ಲರಂತೆ ಶಾಲೆಗೆ ಶೂ, ಚಪ್ಪಲಿ ಹಾಕಿಕೊಂಡು ಹೋಗಲು ಸಹಾಯವಾಗಿದೆ.
–ವಿಘ್ನೇಶ್‌, 6ನೇ ತರಗತಿ ವಿದ್ಯಾರ್ಥಿ

ಅಪಾರ್ಟ್‌ಮೆಂಟ್‌ಗಳಿದ್ದ ಕಡೆ ಈ ರೀತಿಯ ಫ್ರಿಜ್‌ಗಳನ್ನು ಸ್ಥಾಪಿಸಿದರೆ ಅನೇಕ ಬಡಜನರಿಗೆ ಸಹಕಾರಿಯಾಗುತ್ತದೆ. ಈ ನಿಟ್ಟಿನಲ್ಲಿ ಸರ್ಕಾರ ಅಥವಾ ಸಂಘ ಸಂಸ್ಥೆಗಳು ಮುಂದಾಗಲಿ
–ರಾಜಲಕ್ಷ್ಮಿ, ಹಿರಿಯ ನಾಗರಿಕರು

ಈ ಫ್ರಿಜ್‌ ತುಂಬಾ ಅನುಕೂಲವಾಗಿದೆ ಇದರಲ್ಲಿ ಜೀವನಕ್ಕೆ ಉಪಯೋಗವಾಗುವ ಎಲ್ಲಾ ವಸ್ತುಗಳು ದೊರೆಯುತ್ತದೆ. ಬಿಸ್ಕೆಟ್‌ಗಳು ಮಕ್ಕಳ ತಿಂಡಿಯಾಗಿದೆ. ಶನಿವಾರ, ಭಾನುವಾರ‌ ಎಲ್ಲಾರೂ ಮನೆಯಲ್ಲಿಯೇ ಇದ್ದು ಹೆಚ್ಚು ಪದಾರ್ಥಗಳನ್ನು ಇಡುತ್ತಾರೆ.
–ನಾರಾಯಣ ನಾಯ್ಕ, ವಾಚ್‌ಮ್ಯಾನ್‌

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT