ಭಾನುವಾರ, 12 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಅಹೋರಾತ್ರಿ ನಾದದ ಬೆಳದಿಂಗಳು

ಆಲಾಪ
Last Updated 20 ಫೆಬ್ರುವರಿ 2014, 19:30 IST
ಅಕ್ಷರ ಗಾತ್ರ

ಅದೊಂದು ಸುಂದರ-ಹೃದಯಸ್ಪರ್ಶಿ ಸನ್ನಿವೇಶ. ಆಗಷ್ಟೇ ಹಾಡುಗಾರಿಕೆಯನ್ನು ಮುಗಿಸಿದ್ದ ಹಿಂದೂಸ್ತಾನಿ ಗಾಯಕ ಉಸ್ತಾದ್ ಫಯಾಜ್ ಖಾನ್ ಅವರಿಗೆ ಹೂಗುಚ್ಛ ನೀಡಲು ಬಂದಿದ್ದ ಅತಿಥಿಯೊಬ್ಬರು ಅವರನ್ನು ಬಾಚಿ ತಬ್ಬಿ, ಎರಡೂ ಅಂಗೈಗಳಲ್ಲಿ ಅವರ ಮುಖವನ್ನು ಹಿಡಿದು ಹಣೆಗೆ ಮುತ್ತಿಟ್ಟಾಗ, ಅದು ಅಪ್ಪಟ ಕಲಾವಿದನೊಬ್ಬನಿಗೆ ಸಂದ ನಿಜವಾದ ಗೌರವ-ಪ್ರೀತಿಯ ದ್ಯೋತಕ ಎನ್ನಿಸಿಬಿಟ್ಟಿತು.

ಖ್ಯಾತ ಹಿಂದೂಸ್ತಾನಿ ಸಂಗೀತಗಾರ ಪಂ. ಅರ್ಜುನ್‌ಸಾ ನಾಕೋಡರ ನೆನಪಿನಲ್ಲಿ ರೇಣುಕಾ ಸಂಗೀತ ಸಭಾ ‘ಸ್ಮೃತಿ’ ಎಂಬ ಅಹೋರಾತ್ರಿ ಸಂಗೀತೋತ್ಸವವನ್ನು ೧೨ ವರ್ಷಗಳಿಂದ ನಡೆಸಿಕೊಂಡು ಬರುತ್ತಿದೆ. ಅರ್ಜುನ್‌ಸಾ ನಾಕೋಡರ ಮಗ ವಿಶ್ವನಾಥ ನಾಕೋಡ್ ಪ್ರತಿವರ್ಷವೂ ದೇಶದ ಹಲವೆಡೆಗಳಿಂದ ಅತ್ಯುತ್ತಮ ಕಲಾವಿದರನ್ನು ಆಹ್ವಾನಿಸುವುದರಿಂದ ಈ ಸಂಗೀತೋತ್ಸವದ ಮೇಲೆ ಕಲಾರಸಿಕರಿಗೆ ಅಪಾರ ನಿರೀಕ್ಷೆ ಇರುತ್ತದೆ.

ಈ ಬಾರಿಯೂ ಹಲವು ಸಂಗೀತ ದಿಗ್ಗಜರು ಬಂದು ಶ್ರೋತೃಗಳಿಗೆ ಸಮಾಧಾನ ಎನಿಸುವಷ್ಟು ಸಂಗೀತದ ರಸದೌತಣ ಉಣಬಡಿಸಿದರು. ಕಾರ್ಯಕ್ರಮ ಆರಂಭವಾಗುವ ಹೊತ್ತಿಗೆ ರವೀಂದ್ರ ಕಲಾಕ್ಷೇತ್ರದ ಆವರಣ ಸಂಗೀತ ರಸಿಕರಿಂದ ತುಂಬಿ ತುಳುಕಲಾರಂಭಿಸಿತ್ತು.

ಅಭೋಗಿ ರಾಗ ಸುಧೆ
ಫಯಾಜ್‌ಖಾನರ ಹಿಂದೂಸ್ತಾನಿ ಶಾಸ್ತ್ರೀಯ ಗಾಯನದೊಂದಿಗೆ ಸಂಗೀತೋತ್ಸವ ಆರಂಭವಾಯಿತು. ಮೂಲತಃ ಕರ್ನಾಟಕ ಸಂಗೀತ ಪ್ರಕಾರಕ್ಕೆ ಸೇರಿದ ಅಭೋಗಿ (ಕಾಫಿ ಥಾಟ್) ರಾಗದಿಂದ ತಮ್ಮ ಗಾಯನ ಆರಂಭಿಸಿದ ಉಸ್ತಾದರು ಕೆಲ ಹೊತ್ತು ಬಹಳ ಹಿತವೆನ್ನಿಸುತ್ತಿದ್ದ ಆಲಾಪ್ ಗಾಯನದಲ್ಲಿ ತೊಡಗಿಸಿಕೊಂಡರು. ನಂತರ ವಿಲಂಬಿತ್ ಏಕ್‌ತಾಳದಲ್ಲಿ ‘ಲಾಜ ರಖೊ..’ ಎಂಬ ಬಂದಿಶನ್ನು ಹಾಡುತ್ತ ರಾಗವನ್ನು ವಿಸ್ತೃತಗೊಳಿಸಿದರು. 

ತೀನ್ ತಾಳದಲ್ಲಿ ‘ಹಮ್ ಗರೀಬ್.. ತುಮ್ ದಾತಾ...’ ಎಂಬ ಬಂದೀಶನ್ನು ಹಾಡುವಾಗ ಕರ್ತೃವಿನಲ್ಲಿ ‘ಗರೀಬ’ನ ವಿನೀತ ಕೋರಿಕೆಯ ಉತ್ಕಟ ಭಾವ ಅವರ ಗಾಯನದಲ್ಲಿ ಬಿಂಬಿತವಾಗುತ್ತಿತ್ತು. ಮತ್ತೆ ಮತ್ತೆ ಅವೇ ಸಾಲುಗಳನ್ನು ಹಲವು ರೀತಿಯಲ್ಲಿ ಹಾಡಿದಂತೆ, ಆ ಬಂದಿಶ್‌ನ ಅರ್ಥಭಾವವೂ ವಿಸ್ತಾರಗೊಳ್ಳತೊಡಗಿತ್ತು. ೩೦-–೪೦ ನಿಮಿಷ ವಿಲಂಬಿತ್ ಮಧ್ಯಲಯದಲ್ಲಿ ತೇಲುತ್ತಿದ್ದ ಗಾಯನ ನಂತರ ಸಮಯದ ತಿರುಗಾಣಿಗೆ ಸಿಕ್ಕು ವೇಗ ಪಡೆದುಕೊಂಡಂತೆ ಸರಗಂಗಳ ಮಳೆ ಆರಂಭವಾಯಿತು.

ಸಾಮಾನ್ಯವಾಗಿ ಫಯಾಜ್ ಖಾನರ ಸಂಗೀತ ಕಛೇರಿಗಳಲ್ಲಿ ಬಹುತೇಕ ಎಲ್ಲ ಸರಗಂಗಳ ಹಾಡುಗಾರಿಕೆಗೆ ಮೆಚ್ಚುಗೆಯ ಕರತಾಡನ ಸಿಗುವಂತೆ ಇಲ್ಲಿಯೂ ಸಿಕ್ಕಿತು. ಅವರ ಕ್ರಿಯಾತ್ಮಕ ಸ್ವರಮಾಲೆಗಳು ಹಾಗೂ ಹೆಬ್ಬಂಡೆಗಳ ನಡುವಣ ಹರಿಯುವ ನೀರಿನ ಅಲೆಯಂತೆ ಸುಗಮವಾಗಿ ತೇಲಿಬಂದ ಗಮಕೀಕೃತ ಆಲಾಪ್‌ಗಳಿಗೆ ಮತ್ತೆ ಮತ್ತೆ ಚಪ್ಪಾಳೆಯ ಮೆಚ್ಚುಗೆ ಸಂದಾಯವಾಗುತ್ತಿತ್ತು. ಸತತವಾಗಿ ಸ್ವರಮಂಡಲ ವಾದ್ಯದ ಮೇಲೆ ಚಲಿಸುತ್ತಿದ್ದ ಅವರ ಕೈ ಬೆರಳುಗಳಲ್ಲಿ ಮಾತ್ರ ಅದೇ ತಾದಾತ್ಮ್ಯ...

ಅಭೋಗಿಯ ತುಸು ಗಂಭೀರ ಪ್ರಸ್ತುತಿಯ ನಂತರ ‘ಯಾದ್ ಪಿಯಾಕೇ ಆಯೇ.. ಹಾಯೇ ರಾಮ್...’ ಎಂಬ ಠುಮ್ರಿಯನ್ನು ಪ್ರಸ್ತುತ ಪಡಿಸಿದರು. ಕಳೆದುಕೊಂಡ ತಮ್ಮ ಪತ್ನಿಯ ನೆನಪಿನಲ್ಲಿ ಉಸ್ತಾದ್ ಬಡೇ ಗುಲಾಮ್ ಅಲೀ ಸಾಹೇಬರು ಈ ಠುಮ್ರಿಯನ್ನು ಸಂಯೋಜಿಸಿದ್ದರು. ತಮ್ಮನ್ನು ಬಿಟ್ಟು ಹೋದ ಒಲವು ಮತ್ತೆ ಮತ್ತೆ ನೆನಪಾಗುತ್ತದೆ ಎಂಬ ಅರ್ಥದ ಸಾಹಿತ್ಯ ಇರುವ ಹಾಗೂ ತುಂಬು ಭಾವವನ್ನು ಸ್ಫುರಿಸುವ ಸಂಯೋಜನೆಯ ಮೂಲಕ ಅಸಂಖ್ಯಾತ ಶ್ರೋತೃಗಳನ್ನು ಒಲಿಸಿಕೊಂಡ ಗೀತೆ ಇದು.

ಒಲವಿನ ಬೇಗುದಿಯಲ್ಲಿ ಬೇಯುವ ಪ್ರೇಮಿಯೊಬ್ಬನ ಅಳಲು ಅವರ ಗಾಯನದಲ್ಲಿ ಗಂಧದಂತೆ ತೀಡುತ್ತಾ ಹೋದಂತೆ, ಸಭಾಂಗಣದಲ್ಲಿ ಒಂದು ಭಾವುಕ ವಾತಾವರಣ ಸೃಷ್ಟಿಯಾಗಿತ್ತು. ರವೀಂದ್ರ ಕಾಟೋಟಿಯವರ ಹಾರ್ಮೋನಿಯಂ ವಾದನ, ಉಸ್ತಾದರ ಗಾಯನ ಹಿತಾನುಭವ ನೀಡಿತು. ಕಾರ್ಯಕ್ರಮದುದ್ದಕ್ಕೂ ನಯವಾದ ತಬಲಾ ಸಾಥ್ ನೀಡಿದ ರಾಜೇಂದ್ರ ನಾಕೋಡರು ತನಿ ನುಡಿಸಾಣಿಕೆಯಲ್ಲಿ ಹೆಚ್ಚು ರಭಸವುಳ್ಳ ತುಣುಕುಗಳನ್ನು ನುಡಿಸುವ ಮೂಲಕ ಎಲ್ಲ ಶ್ರೋತೃಗಳನ್ನು ರಂಜಿಸಿದರು.

ವಯೊಲಿನ್‌ ಬಾನ್ಸುರಿ ಜುಗಲ್‌ಬಂದಿ
ನಂತರ ಚೆನೈ ಮೂಲದ ಪ್ರಖ್ಯಾತ ಕರ್ನಾಟಕಿ ವಯೊಲಿನ್ ವಾದಕ ವಿದ್ವಾನ್ ಕುಮರೇಶ್ ಹಾಗೂ ಬಾನ್ಸುರಿ ಪ್ರವೀಣ ಪಂ. ಪ್ರವೀಣ್ ಗೋಡ್ಖಿಂಡಿಯವರ ಜುಗಲ್‌ಬಂದಿ ಆರಂಭವಾಯಿತು. ೫ನೇ ವಯಸ್ಸಿಗೇ ವಯೊಲಿನ್ ಕಛೇರಿಗಳನ್ನು ನೀಡಲಾರಂಭಿಸಿದ್ದ ಕುಮರೇಶ್, ೧೦ನೇ ವಯಸ್ಸಿನಲ್ಲಿ ೧೦೦ನೇ ಕಾರ್ಯಕ್ರಮ ನೀಡಿದಂಥ ಅದ್ಭುತ ಪ್ರತಿಭೆ.

ತಮ್ಮ ಸಹೋದರ ಗಣೇಶ್ ಅವರೊಂದಿಗೆ ವಯೊಲಿನ್ ಜುಗಲ್‌ಬಂದಿ ನುಡಿಸುವ ಮೂಲಕ ಹೆಚ್ಚು ಜನಪ್ರಿಯರು. ರಾಗ ಭಿನ್ನಷಡ್ಜದೊಂದಿಗೆ (ಬಿಲಾವಲ್ ಥಾಟ್) ಜುಗಲ್‌ಬಂದಿ ಆರಂಭವಾಯಿತು. ಮೊದಲಿಗೆ ಹತ್ತು ನಿಮಿಷ ಆಲಾಪ್ ನುಡಿಸಿದ ನಂತರ ವಿದ್ವಾನ್ ಅರ್ಜುನ್ ಅವರ ಮೃದಂಗ ಹಾಗೂ ರಾಜೇಂದ್ರ ನಾಕೋಡರ ತಬಲಾ ಸಾಥಿಯೊಂದಿಗೆ ರಾಗದ ವಿಸ್ತರಣೆಗಿಳಿದರು. ಒಮ್ಮೆ ಕುಮರೇಶ್ ವಯೊಲಿನ್ ನಾದತರಂಗ ಇಷ್ಟವಾದರೆ, ಮತ್ತೊಮ್ಮೆ ಪ್ರವೀಣರ ಪ್ರಾವೀಣ್ಯ ಮೆಚ್ಚಾಗುತ್ತಿತ್ತು. ವಯೊಲಿನ್ ನುಡಿಸಾಣಿಕೆಯನ್ನು ಲಘು ವಿನೋದದಲ್ಲಿ ಹದಗೊಳಿಸಿ ಶ್ರೋತೃಗಳ ಮುಂದಿಡುತ್ತಿದ್ದ ಕುಮರೇಶ್ ಅವರ ಸರಳತೆ ಜುಗಲ್‌ಬಂದಿಯ ನಾದಕ್ಕೆ ಸೊಗಸನ್ನು ತಂದುಕೊಟ್ಟಿತ್ತು. ಗೋಡ್ಖಿಂಡಿ-, ಕುಮರೇಶ್ ಇಬ್ಬರೂ ಶಾಸ್ತ್ರೀಯ ಸಂಗೀತವನ್ನು ಕಲಿತು, ನಂತರ ಸಂಗೀತದ ಹಲವು ಪ್ರಕಾರಗಳೊಂದಿಗೆ ಪ್ರಯೋಗಕ್ಕಿಳಿದವರು. ಹಾಗಾಗಿ ಜುಗಲ್‌ಬಂದಿ ಹದವಾಗಿತ್ತು.

ತದ ನಂತರ ಕರ್ನಾಟಕಿ ಸಂಗೀತ ಮೂಲದ ಹೇಮಾವತಿ (೫೮ನೇ ಮೇಳಕರ್ತ ರಾಗ) ರಾಗದಲ್ಲಿ ಆಲಾಪ್, ಜೋಡ್ ನುಡಿಸುತ್ತ ಒಂದಷ್ಟು ಕಾಲ ಕೃಷಿ ಮಾಡಿದರು. ಕುಮರೇಶರ ಕ್ರಿಯಾಶೀಲತೆಯ ಗರಡಿಯಲ್ಲಿ ಪಳಗಿದ್ದ ತಾನ್‌ಗಳು ಅಪರಾತ್ರಿಯ ಕೇಳುಗಾರಿಕೆಗೆ ಉತ್ಸಾಹ ತುಂಬುತ್ತಿದ್ದವು. ಕಲಾವಿದರಿಬ್ಬರ ನಡುವಣ ಆರೋಗ್ಯಕರ ಸ್ಪರ್ಧಾ ಮನೋಭಾವದಿಂದ ಜುಗಲ್‌ಬಂದಿ ಪ್ರಕಾರಕ್ಕೊಂದು ಉತ್ತಮ ನಿದರ್ಶನ ಸಿಕ್ಕಿತು. ನಂತರ ಆದಿತಾಳದಲ್ಲಿ ತನಿ ಆವರ್ತನ ಆರಂಭಿಸಿದ ಅರ್ಜುನ್ ಹಾಗೂ ರಾಜೇಂದ್ರ ತಂತಮ್ಮ ವಾದ್ಯಗಳಲ್ಲಿ ತಾಳದ ಸೊಗಸನ್ನು ಅನಾರವಣಗೊಳಿಸಿದರು.

ಕೊನೆಗೆ ಪಲ್ಲವಿ ನುಡಿಸಿ, ಕ್ರಮವಾಗಿ ವಯೊಲಿನ್, ಬಾನ್ಸುರಿ, ಮೃದಂಗ ಹಾಗೂ ತಬಲಾಗಳ ಸವಾಲು--–ಜವಾಬಿನ ಪ್ರದರ್ಶನ ನಡೆಯಿತು. ಇದು ಕಾರ್ಯಕ್ರಮವನ್ನು ಕಳೆಗಟ್ಟಿಸಿತು. ತನ್ಮಯತೆಯ ಪ್ರತೀಕವೆನಿಸುವ ಬಾನ್ಸುರಿಯ ನಾದ, ಭಾವಸ್ಫುರಣೆಯ ದ್ಯೋತಕವೆನ್ನಿಸುವ ವಯೊಲಿನ್‌ ದನಿ ಒಟ್ಟಿಗೆ ಸೇರಿ ಬದುಕಿನ ಟ್ರಾಫಿಕ್‌ನೊಳಗೇ ಅಲೆದಾಡುವ ಬೆಂಗಳೂರಿನ ಶ್ರೋತೃಗಳನ್ನು ಅಕ್ಷರಶಃ ಮಂತ್ರಮುಗ್ಧಗೊಳಿಸಿದವು. ಜುಗಲ್ಬಂದಿ ಮುಗಿದ ತಕ್ಷಣ ಇಡೀ ಸಭಾಂಗಣವೇ ಎದ್ದು ಕರತಾಡನದ ಮಳೆಗರೆಯಿತು.

ನಿದ್ದೆ ಕಳೆದ ಸಂಗೀತ
ನಂತರ ದೆಹಲಿ ಮೂಲದ ಪಂ. ನರೇಶ್ ಮಲ್ಹೋತ್ರ ಅಪ್ಪಟ ಶಾಸ್ತ್ರೀಯ ಸಂಗೀತದ ಝರಿ ಹರಿಸಿದರು. ಹಂಸಧ್ವನಿ ರಾಗದಿಂದ ಗಾಯನ ಆರಂಭಿಸಿದ ನರೇಶ್, ಅಮೀರ್ ಖಾನರು ಸ್ಥಾಪಿಸಿದ ಇಂದೋರ್ ಘರಾಣೆಯ ಶುದ್ಧ ಸಂಗೀತದ ಮಟ್ಟುಗಳನ್ನು ಪ್ರಸ್ತುತಪಡಿಸಿದರು.
ಕಣ್ಣಿಗೆ ಹಗ್ಗ ಹಾಕಿ ನಿದ್ದೆಗೆ ಎಳೆಯುವ ರಾತ್ರಿ ೩ ಗಂಟೆಯ ಹೊತ್ತಿಗೆ ಕೊಲ್ಕತ್ತಾದ ಪಂ. ಸಂಜಯ್ ಮುಖರ್ಜಿಯವರ ತಬಲಾ ವಾದನ ಆರಂಭವಾಯಿತು.

ಸಂಜಯ್ ಮುಖರ್ಜಿ ಸ್ವತಃ ಸಂಗೀತಗಾರರಾಗಿದ್ದ ಅವರ ತಂದೆ ಪಂ. ಶಶಾಂಕ್ ಮುಖರ್ಜಿಯವರಲ್ಲಿ ಪ್ರಾಥಮಿಕ ಸಂಗೀತವನ್ನು ಕಲಿತು ನಂತರ ಪಂ. ಜ್ಞಾನಪ್ರಕಾಶ್ ಘೋಷ್ ಅವರಲ್ಲಿ ಉನ್ನತ ಅಭ್ಯಾಸವನ್ನು ಮಾಡಿದವರು. ೧೬ ಮಾತ್ರೆಗಳುಳ್ಳ ತೀನ್‌ತಾಳ ಹಿಂದೂಸ್ತಾನಿ ಸಂಗೀತ ಪ್ರಕಾರದಲ್ಲಿ ಸಾಮಾನ್ಯವಾಗಿ ಬಳಕೆಯಾಗುತ್ತದೆ.

ಲೆಹರಾ ಸಾಥ್ ನೀಡಲು ಬಂದಿದ್ದ ರಂಜನ್ ಬೆವ್ರಾ ಅವರ ವಯೊಲಿನ್ ವಾದನದಿಂದ ತಬಲಾ ಸೋಲೋ ಆರಂಭವಾಯಿತು. ಅಂದಿನ ಪ್ರಸ್ತುತಿಗೆ ತೀನ್ ತಾಳವನ್ನು ಆರಿಸಿಕೊಂಡಿದ್ದ ಅವರು ಹಲವು ರೀತಿಯಲ್ಲಿ ಖಾಯ್ದಾ, ಪೇಶ್ಕಾರ್‌ಗಳನ್ನು (ಸೋಲೋ ತಬಲಾದ ಆಲಾಪ್) ನುಡಿಸುತ್ತ ನಡುವೆ ಫರುಖಾಬಾದ್ ಘರಾಣೆಯ ಎಳೆಯೊಂದಿಗೆ ತಾಳದ ರೂಪಗಳನ್ನು ತೆರೆದಿಡುತ್ತ ಸಾಗಿದರು. ಅಲ್ಲದೇ ತಮ್ಮ ಗುರುಗಳು ಹಾಗೂ ಕೆಲವು ತಬಲಾ ದಿಗ್ಗಜರ ವಿಶಿಷ್ಟ ಸಂಯೋಜನೆಗಳನ್ನೂ ನುಡಿಸಿದರು. ತಬಲಾದ ಚಿಕ್ಕವಾದ್ಯದ ಮೇಲೆ ಒಂದೇ ಕೈಯಿಟ್ಟು ನುಡಿಸತೊಡಗಿದಾಗ ನಿದ್ದೆಯ ಅಮಲಿನಲ್ಲಿದ್ದ ಶ್ರೋತೃಗಳು ಕಣ್ಣರಳಿಸಿಕೊಂಡು ಕುಳಿತುಬಿಟ್ಟರು. ಹುಬ್ಬೇರಿಸಿ ನೆಟ್ಟಗೆ ಕುಳಿತ ಶ್ರೋತೃಗಳಿಗೆ ಮತ್ತೆ ನಿದ್ದೆ ಬರಲಿಲ್ಲ.

ದಣಿವಿಲ್ಲದಂತೆ ತಬಲಾ ನುಡಿಸುತ್ತಿದ್ದ ಅವರ ಮುಖದಲ್ಲಿ, ಒಂದೂವರೆ ಗಂಟೆಯ ನಂತರವೂ ಮಾಸದೇ ಇದ್ದ ಮಗುವಿನಂಥ ನಗೆ ಎಲ್ಲರನ್ನೂ ಸೆಳೆಯಿತು. ಕೊನೆಗೆ ಮುಕ್ಕಾಲು ಗಂಟೆ ಭಾಟಿಯಾರ್ (ಮಾರ್ವಾ ಥಾಟ್) ರಾಗವನ್ನು ನುಡಿಸಿದ ಖ್ಯಾತ ಸರೋದ್ ವಾದಕ ಪಂ. ಬ್ರಿಜ್ ನಾರಾಯಣ್, ಕೊನೆಗೆ ೧೫ ನಿಮಿಷಗಳ ಭೈರವಿಯ ಪ್ರಸ್ತುತಿಯೊಂದಿಗೆ ಕಾರ್ಯಕ್ರಮ ಮುಗಿಸಿದರು.
 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT