ಶನಿವಾರ, 18 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕೆಂಪು ನಗೆಯ ರತ್ನಗಂಧಿ!

Last Updated 12 ಮೇ 2013, 19:59 IST
ಅಕ್ಷರ ಗಾತ್ರ

ಆಗೀಗ ಒಂದಿಷ್ಟು ಮಳೆಯಾಗಿ ತಂಪೆನಿಸಿದರೂ ಬಿಸಿಲಿನ ಝಳ, ಸೆಕೆಯ ಸಂಕಟದಿಂದ ಬೆಂಗಳೂರು ಇನ್ನೂ ಪಾರಾಗಿಲ್ಲ.  ಹಾದಿ-ಬೀದಿಗಳಲ್ಲಿ ಕಾಣಸಿಗುವ ಮರಗಿಡಗಳೆಲ್ಲ ಬೋಳು ಬೋಳಾಗಿ ಕಂಡರೂ ಕಣ್ಮನ ಸೆಳೆಯುವ ಹೂಗಳು ನಗೆ ಬೀರುತ್ತಿವೆ. ಹಳದಿ ಗಂಟೆ ಹೂಗಳ ಬೃಹತ್ ಮೆರವಣಿಗೆ ಮುಗಿದಾದ ಮೇಲೆ ಈಗ ಎಲ್ಲೂ ನೋಡಿದರೂ ಗುಲ್‌ಮೊಹರ್‌ನ ಕೆಂಪು ರಂಗು ಮರಗಳ ಮೇಲೆ ಚೆಲ್ಲಾಡುತ್ತಿದೆ.

ಬೆಂಗಳೂರಿನ ಯಾವುದೇ ಬೀದಿಗೆ ಹೋದರೂ ಒಂದೆರಡಾದರೂ ಗುಲ್‌ಮೊಹರ್ ಮರಗಳು ಸಾಮಾನ್ಯ. ಗುಲ್‌ಮೊಹರ್ ಇಲ್ಲದ ಉದ್ಯಾನಗಳೂ ವಿರಳ. ಬೆಂಗಳೂರು ಕಂಟೋನ್ಮೆಂಟ್ ಪ್ರದೇಶದಲ್ಲಿ ಎಲ್ಲೇ ಓಡಾಡಿದರೂ ಮೇ ಫ್ಲವರ್ ಎಂದು ಕರೆಸಿಕೊಳ್ಳುವ ಗುಲ್‌ಮೊಹರ್ ನಿಮಗೆ ಕಾಣುತ್ತದೆ.  ಮಣೇಕ್ ಷಾ ಪೆರೇಡ್ ಮೈದಾನ, ರಣಜೀತ್ ಸಿಂಗ್ ಕ್ರೀಡಾಂಗಣ, ಎಚ್.ಎ.ಎಲ್.ಕಾರ್ಖಾನೆಯ ಆಸುಪಾಸು, ಲಾಲ್‌ಬಾಗ್, ಕಬ್ಬನ್‌ಪಾರ್ಕ್, ಮಹಾತ್ಮ ಗಾಂಧಿ ರಸ್ತೆ ಎಲ್ಲಿ ನೋಡಿದರೂ ಈ ಕೆಂಪು ಹೂಗಳ ಸ್ವಾಗತ ನಿಮಗೆ ಖಚಿತ. 

ಗುಲ್‌ಮೊಹರ್‌ಗೆ ಅಚ್ಚ ಕನ್ನಡದ ಹೆಸರು ಕತ್ತಿಕಾಯಿ ಮರ ಅಥವಾ ದೊಡ್ಡ ರತ್ನಗಂಧಿ. ಹಿಂದಿಯಲ್ಲಿ `ಗುಲ್' ಎಂದರೆ ಹೂ ಅಥವಾ ಗುಲಾಬಿ,  `ಮೊರ್' ಎಂದರೆ ನವಿಲು. ಇವೆರಡೂ ಸೇರಿ ಗುಲ್‌ಮೊಹರ್ ಎನ್ನಿಸಿಕೊಂಡಿರುವ ಈ ಮರವನ್ನು `ಫೈರ್‌ಟ್ರೀ' ಎಂದೂ ಕರೆಯುತ್ತಾರೆ.

ಬಹುಬೇಗ ಬೆಳೆಯುವ ಗುಲ್‌ಮೊಹರ್ ನೆಲದೊಳಗೆ ಹಾಗೂ ಹೊರಗೆ ಬೇರುಗಳನ್ನು ಬಿಡುತ್ತದೆ. ಹಾಗಾಗಿ ಅಗಲವಾದ ರಸ್ತೆ ಬದಿಯಲ್ಲಿ ಹಾಗೂ ಕಟ್ಟಡಗಳಿಂದ ಸ್ವಲ್ಪ ದೂರದಲ್ಲಿಯೇ ಬೆಳೆಸುವ ಅಭ್ಯಾಸವಿದೆ. ಗುಲ್‌ಮೊಹರ್ ನಮ್ಮ ದೇಶದ ಮರವಲ್ಲ. ಇದನ್ನು ಆಸ್ಟ್ರಿಯಾದ ವೆಂಜಿಲ್ ಬೋಝೇರ್ ಎಂಬ ಸಸ್ಯಶಾಸ್ತ್ರ ಪ್ರವೀಣ ಮಡಗಾಸ್ಕರ್‌ನ ಪೂರ್ವ ಕಡಲ ತೀರದ ಫೌಲ್ ಪಾಯಿಂಟ್ ಎಂಬಲ್ಲಿ ಮೊದಲಿಗೆ ಪತ್ತೆ ಹಚ್ಚಿದ್ದು 1828ರಲ್ಲಿ. ಅಲ್ಲಿಂದ ವಲಸೆ ಹೊರಟ ಗುಲ್‌ಮೊಹರ್ ಮಾರಿಷಸ್‌ಗೆ ಹೋಗಿ ನಂತರ ಭಾರತವನ್ನೂ ತಲುಪಿತು.
ಗುಲ್‌ಮೊಹರ್‌ಗೆ ಫ್ರೆಂಚ್ ಆ್ಯನ್‌ಟೆಲ್ಸ್‌ನ ರಾಜ್ಯಪಾಲ ಎಂಡೆ ಪೋಯನ್ಸಿ ಎಂಬಾತನ ನೆನಪಿನಲ್ಲಿ ಹೆಸರಿಡಲಾಯಿತು. ಹೀಗಾಗಿ ಸಸ್ಯಶಾಸ್ತ್ರದ ದಾಖಲೆಗಳಲ್ಲಿ ಇದರ ಪೂರ್ಣ ಹೆಸರು `ಪೋಯಿನ್ ಸಿಯಾನ ರೆಜಿಯಾ'. 

ಗುಲ್‌ಮೊಹರ್ ಎಲೆ ಉದುರುವ, ಸುಮಾರು 10ರಿಂದ 15 ಮೀಟರ್ ಎತ್ತರಕ್ಕೆ ಬೆಳೆಯುವ ಮರ. ಎಲೆಗಳು ಎರಡು ಭಾಗಗಳಾಗಿ ಒಡೆಯುವ ಗುಲ್‌ಮೊಹರ್‌ಗೆ ಆ ದಟ್ಟ ಹಸಿರು ಎಲೆಗಳೇ ಆಕರ್ಷಣೆ. ಬ್ರಿಟಿಷರು ಭಾರತಕ್ಕೆ ಬಂದ ಸಂದರ್ಭದಲ್ಲಿ ಅನೇಕ ಗಿಡ ಮರಗಳನ್ನು ತಂದು ನೆಡಲಾರಂಭಿಸಿದರು. ಅವರು ಇಂತಹ ಪ್ರಯೋಗಗಳನ್ನು ಮಾಡುವಾಗ ಗುಲ್‌ಮೊಹರ್ ಗಿಡವೂ ಮುಂಬೈಗೆ ಬಂದಿಳಿಯಿತು. 1840ರ ಮುಂಬೈ ಗೆಜೆಟಿಯರ್‌ನಲ್ಲಿ ಗುಲ್‌ಮೊಹರ್ ನೆಟ್ಟ ದಾಖಲೆಗಳಿವೆ. ಆನಂತರ ಬ್ರಿಟಿಷ್ ವಸಾಹತುಗಳಲ್ಲಿ ಗುಲ್‌ಮೊಹರ್ ಚಿಗುರೊಡೆಯಿತು. ದಕ್ಷಿಣ ಭಾರತದ ಪ್ರಮುಖ ಸೇನಾ ನೆಲೆಯನ್ನು ಹೊಂದಿದ್ದ ಬೆಂಗಳೂರಿನಲ್ಲಿಯೂ ಗುಲ್‌ಮೊಹರ್ ಮರಗಳು ಕಾಣಿಸಿಕೊಂಡವು. 

ತ್ವರಿತವಾಗಿ ಬೆಳೆದು ಕನಿಷ್ಠ 60 ಸೆ. ಮೀ ಉದ್ದದ ಹಸಿರು ಎಲೆಗಳನ್ನು ಸದಾ ಹೊತ್ತಿರುವ ಗುಲ್‌ಮೊಹರ್ ಕಡುಗೆಂಪು ಬಣ್ಣದ ಹೂಗಳನ್ನು ಗೊಂಚಲು ಗೊಂಚಲಾಗಿ ತುಂಬಿಕೊಳ್ಳುವುದಕ್ಕೆ ಮೊದಲು ಉದ್ದವಾದ ಕಾಯಿಗಳನ್ನು ಬಿಡುತ್ತದೆ. ಆಗ ಇಡೀ ಮರದಲ್ಲಿ ಒಂದೇ ಒಂದು ಹಸಿರೆಲೆ ಕಾಣುವುದಿಲ್ಲ. 30ರಿಂದ 45 ಸೆ.ಮೀ. ಉದ್ದದ ಚಪ್ಪಟೆಯಾದ ಕತ್ತಿಕಾಯಿಗಳೇ ಗುಲ್‌ಮೊಹರ್ ಕೊಂಬೆ ಕೊಂಬೆಗಳನ್ನು ಆವರಿಸಿರುತ್ತವೆ. 

ಪ್ರತಿವರ್ಷ ಫೆಬ್ರುವರಿ ಮಾರ್ಚ್ ನಡುವೆ ಎಲೆಯುದುರುವ ಈ ಮರದಲ್ಲಿ ಕಡುಗೆಂಪು ಬಣ್ಣದ ಹೂಗಳು ಗೊಂಚಲಾಗಿ ಕಾಣಿಸಿಕೊಂಡು ರೆಂಬೆಗಳನ್ನು ತುಂಬುತ್ತವೆ. ಕಿತ್ತಲೆ, ಕೆಂಪು ಹಾಗೂ ಅರುಣ ವರ್ಣದ ಕಣ್ಸೆಳೆಯುವ ಹೂಗಳು ನೋಡುಗರನ್ನು ಮುದಗೊಳಿಸುತ್ತವೆ. 
ಹಾದಿಬದಿಯ ಮರವೆಂದು ಜನಪ್ರಿಯತೆ ಪಡೆದುಕೊಂಡಿರುವ ಗುಲ್‌ಮೊಹರ್ ಸಾಮಾನ್ಯವಾಗಿ ವರ್ಷಕೊಮ್ಮೆ ಮಾತ್ರ ಹೂ ಬಿಡುತ್ತದೆ.

ಆದರೆ ಕೆಲವೊಮ್ಮೆ ಕಡಿಮೆ ಅಂತರದಲ್ಲಿ ಎರಡೆರಡು ಬಾರಿ ಹೂಗಳು ಕಾಣಿಸಿಕೊಳ್ಳುವುದೂ ಉಂಟು. ಪ್ರಕೃತಿಯಲ್ಲಿ ಬರುವ ಅಸಂಖ್ಯಾತ ಹೂಗಳಂತೆ ಗುಲ್‌ಮೊಹರ್ ಅಥವಾ ಮೇ ಫ್ಲವರ್ ವರ್ಷಕ್ಕೊಮ್ಮೆ ಕಾಣಿಸಿಕೊಂಡು ನೋಡುಗರನ್ನು ಸಂತೋಷಗೊಳಿಸಿ ಮತ್ತೆ ಮಣ್ಣು ಸೇರುತ್ತವೆ. ಅಲ್ಲಿಂದಲೇ ಮರುಹುಟ್ಟು. ಗಟ್ಟಿ ಬೀಜಗಳಿಂದ ಕೆಲವೆಡೆ ಗುಲ್‌ಮೊಹರ್ ಬೆಳೆದರೂ ಅದಕ್ಕೆ ಹೆಚ್ಚಿನ ಆರೈಕೆ ಬೇಕು. ಆದರೆ ಬೆಂಗಳೂರಿನಲ್ಲಿ ಬೆಳೆದಿರುವ ಗುಲ್‌ಮೊಹರ್‌ಗಳು ಸಸ್ಯದ ತುಂಡುಗಳಿಂದಲೇ ದೊಡ್ಡದಾಗಿವೆ. 

ನಿಸರ್ಗವೇ ನೀಡಿರುವ ಅಲಂಕಾರಿಕ ಹಾಗೂ ವಸಂತ ಋತುವಿನಲ್ಲಿ ಕಣ್ಸೆಳೆಯುವ ಗುಲ್‌ಮೊಹರ್ ಹೂಗಳು ಒಂದೇ ರೀತಿಯದಾಗಿರುವುದಿಲ್ಲ. ಒಂದಕ್ಕಿಂತ ಇನ್ನೊಂದು ಭಿನ್ನವಾಗಿರುವ ಗುಲ್‌ಮೊಹರ್ ಕೇಸರಿ ಮಿಶ್ರಿತ ಕೆಂಪು, ಅರುಣ ವರ್ಣದ ಪುಷ್ಟಗಳೇ ಹೆಚ್ಚು ಕಾಣಿಸುತ್ತವೆ.

ಆಕರ್ಷಕ ಕೆಂಪು ಹೂವಿನ ಪಕಳೆಗಳು ಈಗ ಬೆಂಗಳೂರಿನ ಎಲ್ಲಾ ಭಾಗಗಳಲ್ಲೂ ಕಣ್ತೆರೆದಿವೆ. ಕಾರ್ಮಿಕ ಕ್ರಾಂತಿಯ ಮೇ ಮಾಸಕ್ಕೆ ಮೊದಲೇ ರಸ್ತೆಯ ಇಕ್ಕೆಲಗಳಲ್ಲಿ ಮೇ ಫ್ಲವರ್ ಕೆಂಪು ಚೆಲ್ಲುತ್ತಿವೆ, ನೋಡುಗರನ್ನು ಆನಂದಗೊಳಿಸುತ್ತಿವೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT