ಮಂಗಳವಾರ, 30 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಜೀವಪ್ರೀತಿ ಬಿಂಬಿಸುವ ಕಲಾಕೃತಿಗಳು

ಕಲಾಪ
Last Updated 9 ನವೆಂಬರ್ 2016, 19:30 IST
ಅಕ್ಷರ ಗಾತ್ರ

ಭಾರತೀಯ ನವ್ಯ ಕಲೆಯ ಪ್ರವರ್ತಕರಲ್ಲಿ ಅರ್ಪಣಾ ಕೌರ್ ಕೂಡ ಒಬ್ಬರು. ಸ್ವಾತಂತ್ರ್ಯೋತ್ತರ ಭಾರತದಲ್ಲಿ ತಮ್ಮ ಕಲಾ ಜೀವನ ಪ್ರಾರಂಭಿಸಿದ ಕೆಲವೇ ಮಹಿಳಾ
ಕಲಾವಿದರಲ್ಲಿ ಇವರು ಪ್ರಮುಖರು.

ಪಂಜಾಬಿ ಜನಪದ ಸಾಹಿತ್ಯ, ಪಹಾಡಿ ಚಿಕಣಿ ಚಿತ್ರಗಳು ಮತ್ತು ತಾಯಿ ಅಜೀತ್ ಕೌರ್ ಅವರ ಬರಹಗಳು ಅವರ ಚಿತ್ರಕಲೆ ಮೇಲೆ ಪ್ರಭಾವ ಬೀರಿವೆ.  1954ರಲ್ಲಿ ದೆಹಲಿಯಲ್ಲಿ ಜನಿಸಿದ ಅರ್ಪಣಾ ಕೌರ್  ಕಲೆ, ಸಂಗೀತ, ಇತಿಹಾಸ ಮತ್ತು ಶ್ರೀಮಂತ ಸಾಂಸ್ಕೃತಿಕ ಪರಿಸರದಲ್ಲಿ ಹುಟ್ಟಿ ಬೆಳೆದವರು.  ದೇಶ ವಿಭಜನೆ ಸಂದರ್ಭದಲ್ಲಿ ಅವರ ಕುಟುಂಬ ಲಾಹೋರ್‌ನಿಂದ ದೆಹಲಿಗೆ ನಿರಾಶ್ರಿತವಾಗಿ ವಲಸೆ ಬಂದಿತ್ತು.

ಒಂದು ಅವಲೋಕನ
ಅರ್ಪಣಾ ಕೌರ್ ಅವರ ಚಿತ್ರಕಲೆ ಸರಣಿಗಳಾದ ‘ವಿಡೋಸ್ ಆಫ್ ಬೃಂದಾವನ’, ‘ಲವ್ ಬಿಯಾಂಡ್ ಮೆಸ್ಯುರ್’, ‘ಲೇಬರರ್‍ಸ್’, ‘ವರ್ಲ್ಡ್ ಗೋಸ್ ಆನ್...’ನಲ್ಲಿ  ಮಹಿಳಾ ಸಬಲೀಕರಣದ ವಿಷಯವನ್ನು ಆಪ್ತವಾಗಿ ವಿಶ್ಲೇಷಣೆಗೆ ಒಳಪಡಿಸಿದ್ದಾರೆ.

ವಂಚಿತ ಮತ್ತು ನಿರ್ಲಕ್ಷಿತರ ಧ್ವನಿಯಾಗಿ  ಅವರ ‘ಧೃತಿ’ ಹಾಗೂ ‘ಡೇ ಆಂಡ್ ನೈಟ್’ನಲ್ಲಿ ಬದಲಾಗುತ್ತಿರುವ ಕಾಲಘಟ್ಟದ ಪ್ರತಿರೋಧಕ ಶಕ್ತಿಯನ್ನು ಬಿಂಬಿಸುವ ಚಿತ್ರಕಲೆ ಈಗಾಗಲೇ ಕಲಾ ಪ್ರೇಮಿಗಳ ಗಮನ ಸೆಳೆದಿದೆ.

ಫೋರ್ ಡಿಕೇಡ್ಸ್: ಎ ಪೈಂಟರ್‍ಸ್ ಜರ್ನಿ
ಕೇಂದ್ರ ಸರ್ಕಾರದ ಸಂಸ್ಕೃತಿ ಸಚಿವಾಲಯದ ಅಧೀನದಲ್ಲಿರುವ ಬೆಂಗಳೂರಿನ ರಾಷ್ಟ್ರೀಯ ಆಧುನಿಕ ಕಲಾ ಸಂಗ್ರಹಾಲಯವು ನೋಯ್ಡಾ  ಸ್ವರಾಜ್ ಆರ್ಟ್ ಆರ್ಕೈವ್ ಸಹಯೋಗದೊಂದಿಗೆ ಅರ್ಪಣಾ ಕೌರ್ ಅವರ ಪೂರ್ವಾವಲೋಕನ ಕುರಿತು ‘ಫೋರ್ ಡಿಕೇಡ್ಸ್: ಎ ಪೈಂಟರ್‍ಸ್ ಜರ್ನಿ’ ಹೆಸರಿನಲ್ಲಿ  ಚಿತ್ರ ಪ್ರದರ್ಶನ  ಏರ್ಪಡಿಸಲಾಗಿದೆ.

ಸಹಜವಾಗಿಯೇ ಸ್ತ್ರೀಸಂವೇದನೆ ಅವರ ಚಿತ್ರಕಲೆಯಲ್ಲಿ ಅಭಿವ್ಯಕ್ತಿಗೊಂಡಿದೆ. ತಮ್ಮ ಕ್ಯಾನ್ವಾಸ್‌ಗಳಲ್ಲಿ ಕಬೀರ್, ಬುದ್ಧ, ಗುರುನಾನಕ್ ಅವರನ್ನು ಶಾಂತಿ ಮತ್ತು ಅಧ್ಯಾತ್ಮದ ಸಂಕೇತವಾಗಿ ಪದೇಪದೇ ಬಳಸಿದ್ದಾರೆ. ಗುರುನಾನಕ್, ಬುದ್ಧ ಮತ್ತು ಭಾರತೀಯ ಸಂತ ಪರಂಪರೆಯ ಮಹನೀಯರ ರೇಖಾಚಿತ್ರ, ವರ್ಣಚಿತ್ರಗಳನ್ನು  ಭಾರತ, ಜಪಾನ್ ಮತ್ತು ಜರ್ಮನಿಯ ಸಾರ್ವಜನಿಕ ಸ್ಥಳಗಳಲ್ಲಿ ಭಿತ್ತಿ ಚಿತ್ರಗಳನ್ನು ವಿನ್ಯಾಸ ಮಾಡಿ ಅವರ ಚಿಂತನೆ ಪಸರಿಸುವಂತೆ ಮಾಡಿದ್ದಾರೆ.

ಪ್ರಸ್ತುತ ಪ್ರದರ್ಶನವು ಅರ್ಪಣಾ ಕೌರ್‌ ಅವರ 1970ರಿಂದ 2015ರವರೆಗಿನ ಚಿತ್ರಕಲೆಯ ಪ್ರಥಮ ಸಿಂಹಾವಲೋಕನವಾಗಿದೆ. ಮೊದಲ ಬಾರಿಗೆ ಸಾರ್ವಜನಿಕ ಪ್ರದರ್ಶನಕ್ಕೆ ಇಟ್ಟಿರುವ ಚಿತ್ರಕಲೆಯೂ ಸೇರಿ ಒಟ್ಟು 40 ಬೃಹತ್ ವರ್ಣಚಿತ್ರಗಳು, 50ಕ್ಕಿಂತಲೂ ಅಧಿಕ ರೇಖಾಚಿತ್ರಗಳು  ಪ್ರದರ್ಶನಗೊಂಡಿವೆ.

1984ರ ಸಿಖ್ ನರಮೇಧ, ಗುರುನಾನಕ್ ಮತ್ತು ಬುದ್ಧ ಸರಣಿ, ಭಾರತೀಯ ಹಳ್ಳಿಗಳ ಕಡುಬಡತನ, ಕೈಗಾರೀಕರಣ, ದೇಸಿ ಕಲಾ ಪರಂಪರೆ, ಕೈಮಗ್ಗದ  ಮಹತ್ವ ಸಾರುವ ಚಿತ್ರಗಳು ಪ್ರದರ್ಶನದ ಪ್ರಮುಖ ಆಕರ್ಷಣೆಯಾಗಿವೆ.

ಸಾವು, ನೋವು ಹಾಗೂ ಹಿಂಸಾಚಾರದ ವಿರೋಧಿ ನೆಲೆಯನ್ನು ತಮ್ಮ ಚಿತ್ರಕಲೆಯ ಮೂಲಕ ಕೌರ್  ಸಾದರಪಡಿಸಿದ್ದಾರೆ. ದೇಶದ ವಿಷಮ ಸ್ಥಿತಿ, ಪ್ರಕೃತಿ ಮೇಲಿನ ದಾಳಿ ಬಗ್ಗೆಯೂ ಅವರ ಚಿತ್ರಕಲೆ ಬೆಳಕು ಚೆಲ್ಲುತ್ತದೆ.

ಅವರ ಇತ್ತೀಚಿನ ‘ಬಂದೂಕು ಮತ್ತು  ಹೂವಿನ ಚಿತ್ರಕಲೆ’ ಜೀವನ ಪ್ರೀತಿಯ  ದ್ಯೋತಕವಾಗಿ ಚಿತ್ರಕಲಾ ವಿಮರ್ಶಕರ ಗಮನ ಸೆಳೆದಿದೆ. ಅರ್ಪಣಾ ಅವರು ತಮ್ಮ ತಾಯಿಯ ಜೊತೆಗೆ ಕಳೆದ 35ವರ್ಷಗಳಿಂದ ಕೊಳೆಗೇರಿ ಮಹಿಳೆಯರಿಗೆ ಉಚಿತ ಶಾಲೆಯೊಂದನ್ನು ನಡೆಸುತ್ತಿದ್ದಾರೆ. ಅಲ್ಲದೆ, ವಿಧವೆಯರ ಮತ್ತು ಕುಷ್ಟರೋಗಿಗಳ ಸೇವಾ ಕಾರ್ಯದಲ್ಲೂ  ತೊಡಗಿಸಿಕೊಂಡಿದ್ದಾರೆ.

ಚಿತ್ರಕಲಾ ಪ್ರದರ್ಶನ ವಿವರ
ಕಲಾವಿದೆ– ಅರ್ಪಣಾ ಕೌರ್
ಸ್ಥಳ– ನ್ಯಾಷನಲ್ ಗ್ಯಾಲರಿ ಆಫ್ ಮಾರ್ಡನ್‌ ಆರ್ಟ್‌, ಅರಮನೆ ರಸ್ತೆ, ವಸಂತನಗರ
ಕೊನೆಯ ದಿನ– ಡಿ.4
ಬೆಳಿಗ್ಗೆ 10ರಿಂದ ಸಂಜೆ 5 (ಸೋಮವಾರ ಹೊರತುಪಡಿಸಿ) 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT