ಶನಿವಾರ, 18 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ದೇವನಾಗರಿಯ ದೈವಿಕ ಗಾಯನ

Last Updated 31 ಜನವರಿ 2011, 19:30 IST
ಅಕ್ಷರ ಗಾತ್ರ

ನ್ಯಾಷನಲ್ ಕಾಲೇಜು ಮೈದಾನದಲ್ಲಿ ಸಂಸ್ಕೃತ ಶಾಸ್ತ್ರೀಯ ಕೃತಿಗಳ ಗೋಷ್ಠಿಗಾಯನ ನಡೆಯಿತು. ಗಾನಕಲಾಭೂಷಣ ವಿದ್ವಾನ್ ಆರ್.ಕೆ. ಪದ್ಮನಾಭ ಇದನ್ನು ಅತ್ಯಂತ ಪರಿಣಾಮಕಾರಿಯಾಗಿ ನಡೆಸಿಕೊಟ್ಟರು. ಭವ್ಯ ವೇದಿಕೆಯಲ್ಲಿ 250ಕ್ಕೂ ಹೆಚ್ಚು ಗಾಯಕರನ್ನು ನೋಡುವುದೇ ವಿಸ್ಮಯವಾಗಿ ಭಾಸವಾಗುತ್ತಿತ್ತು. ಮೈಸೂರು ವಾಸುದೇವಾಚಾರ್ಯರ ಕಾನಡ ರಾಗದ ವಾರಣಾಸ್ಯಂ ವರ್ಣವು ಕಾರ್ಯಕ್ರಮಕ್ಕೆ ನಾಂದಿಯಾಯಿತು.

ಔಡವ ಷಾಡವ ರಾಗವಾದ ಮಲಹರಿ ರಾಗದಲ್ಲಿ ದೀಕ್ಷಿತರ ಕೃತಿಯನ್ನು ಪ್ರಸ್ತುತ ಪಡಿಸಿ, ಸ್ವರ ಕಲ್ಪನೆಯ ಸೋಂಕನ್ನಿತ್ತು, ಅದರ ಸೊಬಗಿಗೆ ಮತ್ತಷ್ಟು ವರ್ಧನೆ ತುಂಬಿದರು. ಮಧ್ಯಮಕಾಲದ ಕೃತಿಗಳಿಗೆ ಸೀಮಿತಗೊಳಿಸದೆ, ನಮ್ಮ ಶಾಸ್ತ್ರೀಯತೆಯ ಬಿಕ್ಕಟ್ಟು ಹಾಗೂ ಅದರ ವೈವಿಧ್ಯತೆಗಳನ್ನು ಪ್ರತಿಬಿಂಬಿಸುವಂತಹ ಕೃತಿಗಳ ಆಯ್ಕೆ ಮಾಡಿದ್ದು ಸ್ತುತ್ಯಾರ್ಹ.

ದೀಕ್ಷಿತರ ಸಾಮರಾಗದ ‘ಅನ್ನಪೂರ್ಣೆ ವಿಶಾಲಾಕ್ಷಿ’, ಯಮುನಾ ಕಲ್ಯಾಣಿ ರಾಗದ ‘ಜಂಬುಪತೆ’, ಆನಂದ ಭೈರವಿ ರಾಗದ ಪ್ರಥಮಾವರ್ಣದಲ್ಲಿ ‘ತ್ರಿಪುರ ತ್ರೈಲೋಕ’ ಮೋಹನ ಚಕ್ರದಲ್ಲಿ ಬರುವ ‘ಕಮಲಾಂಬಾಂ ಸಂರಕ್ಷತುಮಾಂ’, ಹಿಂದುಸ್ತಾನಿ ಸಂಗೀತದ ಛಾಪನ್ನುಳ್ಳ ದ್ವಿಜಾವಂತಿ ರಾಗದ ‘ಅಖಿಲಾಂಡೇಶ್ವರಿ’ ಎಂಬತಂಹ ಅದ್ವಿತೀಯ ಕೃತಿಗಳ ಸ್ಪಷ್ಟ ಮತ್ತು ಸ್ಫುಟ ನಿರೂಪಣೆ, ಶೃತಿ ಸಾಯುಜ್ಯತೆ, ಶಾರೀರಗಳ ಅದ್ವೆತ ಸಮನ್ವಯ, ಸೂಕ್ತ ವಿಶ್ರಮಗಳ ಬಳಕೆ, ಕೃತಿಗಳ ಗ್ರಹ ಮತ್ತು ನ್ಯಾಸಗಳ ನಿಖರತೆ ರಸಿಕರನ್ನು ಮೂಕ ವಿಸ್ಮಯಗೊಳಿಸಿತು.

ನಾದ ತಪಸ್ವಿ ಆರ್.ಕೆ.ಪಿಯವರ ರಚನೆ ‘ಪರಿಪಾ ಶ್ರೀ’ ಎಂಬ ವಲಚೆರಾಗದ ಕೃತಿಗೆ ಪೂರ್ವಭಾವಿಯಾಗಿ ಹಾಡಿದ ರಾಗಾಲಾಪನೆಯ ಮಾಧುರ್ಯ ಅವರ ಶಾರೀರದ ಗೌಳತ್ವ ಪ್ರದರ್ಶಿಸಿತು. ವಾಸುದೇವಾಚಾರ್ಯರ ರಂಜನಿ ರಾಗದ ಪ್ರಣಮಾಮ್ಯಹಂ, ಸ್ವಾತಿ ತಿರುನಾಳರ ಹಂಸಾನಂದಿ ರಾಗದ ಪಾಹಿ ಜಗಜ್ಜನನಿಯ ನಂತರ ಕರ್ನಾಟಕ ದೇವಗಾಂಧಾರ ರಾಗದ ಪಂಚಷತ್ವೀಠ ರೂಪಿಣಿ ಕೃತಿಯನ್ನು ವಿಸ್ತರಿಸಿ ರಾಗ, ನೆರವಲ್ ಮತ್ತು ಸ್ವರಕಲ್ಪನೆಯನ್ನು ಮನೋಹರವಾಗಿ ನಿರೂಪಿಸಿದರು.

ಕಾರ್ಯಕ್ರಮದ ಮುಕ್ತಾಯದಲ್ಲಿ 250 ಮಂದಿಯ ಒಕ್ಕೊರಳಿನ ಏಕ ಪ್ರಕಾರವಾಗಿ ಹಾಡಿವ ವಂದೇ ಮಾತರಂ ಎಲ್ಲರಲ್ಲೂ ಭಾರತೀಯತೆ ಜಾಗೃತಿಗೊಳಿಸುವಂತಿತ್ತು. ಸಿ.ಎನ್. ಚಂದ್ರಶೇಖರ ಪೀಟಿಲು, ಸಿ. ಚೆಲುವರಾಜ್ ಮೃದಂಗ ಹಾಗೂ ದಯಾನಂದ ಅವರ ಘಟ ಸಹಕಾರ ಮತ್ತಷ್ಟು ಮೆರುಗು ನೀಡಿತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT