ಶನಿವಾರ, 18 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬೊಂಬೆ ಕೌಶಲದ ಕೈಚಳಕ

ಹವ್ಯಾಸದ ಹಾದಿ
Last Updated 1 ಜನವರಿ 2015, 19:30 IST
ಅಕ್ಷರ ಗಾತ್ರ

ಚಿಕ್ಕಂದಿನಿಂದಲೇ ಅಂಟಿಕೊಂಡ ಬೊಂಬೆ ತಯಾರಿ ಹವ್ಯಾಸವನ್ನೂ ಇನ್ನೂ ಉಳಿಸಿಕೊಂಡು ಬಂದಿದ್ದಾರೆ ಉಷಾ. ಹೆಣಿಗೆ ಕೆಲಸ ಮಾಡುವವರಿಂದ ಕೌಶಲವನ್ನು ಕಲಿತುಕೊಂಡ ಇವರಿಗೆ ಪ್ರಾಣಿ ಪಕ್ಷಿಗಳ ಗೊಂಬೆ ಮಾಡುವುದೆಂದರೆ ತುಂಬಾ ಇಷ್ಟ.

ಒಬ್ಬೊಬ್ಬರಿಗೂ ಒಂದೊಂದು ವಿಷಯದಲ್ಲಿ ಆಸಕ್ತಿ ಇರುತ್ತದೆ. ಹಾಗೆಯೇ ಉಷಾ ಜಿ ರಾವ್ ಅವರಿಗೆ ಬೊಂಬೆಗಳನ್ನು ಮಾಡುವುದರಲ್ಲಿ ಇನ್ನಿಲ್ಲದ ಖುಷಿ. ಉಲ್ಲನ್‌ನಿಂದ ವಿವಿಧ ರೀತಿಯ ಬೊಂಬೆಗಳನ್ನು ತಯಾರಿಸುವ ಹವ್ಯಾಸ ಬೆಳೆಸಿಕೊಂಡಿರುವ ಅವರು, ಈಗ ಬೊಂಬೆಗಳ ಸಂಗ್ರಹವನ್ನೇ ಮಾಡಿದ್ದಾರೆ.

ಹತ್ತನೇ ತರಗತಿಯಲ್ಲಿದ್ದಾಗಲೇ ಇವರಲ್ಲಿ ಬೊಂಬೆ ಮಾಡುವ ಆಸಕ್ತಿ ಹುಟ್ಟುಕೊಂಡಿತ್ತು. ನಂತರ ಒಂದಷ್ಟು ವರ್ಷಗಳು ಅದರ ನಂಟೇ ಬಿಟ್ಟು ಹೋಗಿತ್ತು. ಇದೀಗ ಮತ್ತೆ ಆ ಕ್ರಿಯಾಶೀಲತೆಯನ್ನು ಬಳಸಿಕೊಂಡು ಹಲವು ರೀತಿಯ ಬೊಂಬೆಗಳನ್ನು ವಿನ್ಯಾಸ ಮಾಡುತ್ತಿದ್ದಾರೆ. 

ಉತ್ತರ ಭಾರತದಲ್ಲಿ ಸ್ವಲ್ಪ ದಿನಗಳ ಕಾಲ ಇದ್ದ ಉಷಾ, ಅಲ್ಲಿ ತುಂಬಾ ಮಂದಿ ಹೆಣಿಗೆ ಕೆಲಸ ಮಾಡುವುದನ್ನು ಕಂಡು ತಾವೂ ಅದರಲ್ಲಿ ತೊಡಗಿಕೊಂಡರು. ಅವರಲ್ಲಿ ಒಬ್ಬರಿಂದ ಹೆಣಿಗೆಯಿಂದ ಬೊಂಬೆ ಮಾಡುವುದು ಹೇಗೆ ಎಂಬುದನ್ನು ಕಲಿತುಕೊಂಡರು. ಆನಂತರ ಸ್ವತಃ ಬೊಂಬೆ ಮಾಡುವುದನ್ನು ಕಲಿತರು. ಒಂದು ವರ್ಷದಿಂದೀಚೆ ಹಲವು ರೀತಿಯ ಬೊಂಬೆಗಳನ್ನು ಮಾಡಿದ್ದಾರೆ.

ವಿವಿಧ ಪ್ರಾಣಿ, ಪಕ್ಷಿಗಳ ಬೊಂಬೆಗಳನ್ನು ಮಾಡುವುದನ್ನು ಕಲಿತ ಇವರು ಮೊದಲು ಮಾಡಿದ್ದು ಗಿಳಿ ಬೊಂಬೆಯನ್ನು. ಈಗೀಗ ಟೆಡ್ಡಿ ಬೇರ್ ಮಾಡಲೂ ಕಲಿತಿದ್ದಾರೆ.

‘ಮೊದ ಮೊದಲು ಚಿಕ್ಕ ಚಿಕ್ಕ ಬೊಂಬೆಗಳನ್ನು ಮಾಡಲು ಶುರುವಿಟ್ಟುಕೊಂಡೆ. ನಾಲ್ಕು ಐದು ಇಂಚುಗಳಲ್ಲಿ ಉಲ್ಲನ್‌ನಿಂದ ಬೊಂಬೆಗಳನ್ನು ಹೆಣೆಯುತ್ತಿದ್ದೆ. ವಿವಿಧ ಬಣ್ಣಗಳಲ್ಲಿ ಹೆಣೆಯುವುದು ಖುಷಿ ನೀಡುತ್ತದೆ. ಮೊಲ, ಕೋತಿ, ಆನೆ, ಒಂಟೆ, ಜಿರಾಫೆ, ಟೆಡ್ಡಿಬೇರ್, ನಾಯಿ ಮರಿಗಳು ಹಾಗು ಗಿಣಿ, ಪೆಂಗ್ವಿನ್ ಇನ್ನಿತರ ಪಕ್ಷಿಗಳನ್ನೂ ಮಾಡಿದ್ದೇನೆ’ ಎಂದು ಖುಷಿಯಿಂದ ಹೇಳಿಕೊಳ್ಳುತ್ತಾರೆ ಉಷಾ.

ಇವರಿಗೆ ಯಾವುದೇ ವಿಷಯ ಹೊಳೆಯುವುದೇ ತಡ, ಆ ಕುರಿತು ಕೆಲಸ ಮಾಡಲು ಶುರುವಿಟ್ಟುಕೊಳ್ಳುತ್ತಾರೆ. ಒಂದು ಅಥವಾ ಎರಡು ದಿನಗಳಲ್ಲಿ ಅದನ್ನು ಮಾಡಿ ಮುಗಿಸುತ್ತಾರೆ. ಕೆಲವೊಮ್ಮೆ ಇವರ ಕುಟುಂಬದವರೂ ಬಣ್ಣಗಳ ಆಯ್ಕೆ, ಹೊಂದಾಣಿಕೆಯಲ್ಲಿ ಸಲಹೆ ನೀಡುತ್ತಾರೆ.

ಬರೀ ಬೊಂಬೆಗಳಲ್ಲದೆ ಅವು ವಿಶೇಷವಾಗಿ ಕಾಣುವಂತೆ ಮಾಡಲು ಮಣಿಗಳನ್ನು ಬೊಂಬೆಗಳಲ್ಲಿ ವಿನ್ಯಾಸ ಮಾಡುತ್ತಾರೆ.

‘ನನಗೆ ವಿವಿಧ ಬಣ್ಣಗಳನ್ನು ಬಳಸಿ ಬೊಂಬೆಗಳನ್ನು ಮಾಡುವುದೆಂದರೆ ತುಂಬಾ ಇಷ್ಟ. ಗುಲಾಬಿ ಬಣ್ಣ, ಹಳದಿ, ಕೆಂಪು, ಕಪ್ಪು, ನೇರಳೆ, ಹಸಿರು, ಕೇಸರಿ ಮುಂತಾದ ಬಣ್ಣಗಳಲ್ಲಿ ಹೆಚ್ಚಿನ ಬೊಂಬೆಗಳನ್ನು ಮಾಡಿದೆ. ಬೊಂಬೆಗಳಿಗೆ ಆಕಾರ ನೀಡಲು ಹತ್ತಿಯನ್ನು ಬಳಸುತ್ತೇನೆ’ ಎಂದು ವಿವರಿಸಿದರು.

ಅವರ ಬಳಿ ಇದೀಗ 40ಕ್ಕೂ ಹೆಚ್ಚು ಬೊಂಬೆಗಳಿವೆ. ಕೆಲವೊಮ್ಮೆ ಮಕ್ಕಳಿಗೆ ಹುಟ್ಟು ಹಬ್ಬದ ಉಡುಗೊರೆಯಾಗಿ ಬೊಂಬೆಗಳನ್ನು ತಯಾರಿಸಿ ನೀಡುತ್ತಾರೆ. ಅವರ ಮನೆಯ ಡ್ರಾಯಿಂಗ್ ರೂಂ ತುಂಬಾ ಬೊಂಬೆಗಳಿಂದಲೇ ಅಲಂಕಾರ ಮಾಡಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT