ಭಾನುವಾರ, 19 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

'ಭಾಳ ಛಂದ ಹಾಡಿದೀಯವ್ವಾ...’

Last Updated 16 ಅಕ್ಟೋಬರ್ 2017, 19:30 IST
ಅಕ್ಷರ ಗಾತ್ರ

ಅದು 1984ನೇ ಇಸವಿ. ಆಕಾಶವಾಣಿಯಲ್ಲಿ ಸಂಗೀತ ಕಾರ್ಯಕ್ರಮ ನಡೆದಿತ್ತು. ಹಾಡುಗಾರಿಕೆಗೆ ಹಾರ್ಮೋನಿಯಂ ಸಾಥ್‌ ನೀಡಬೇಕಿದ್ದ ದಿವಂಗತ ವಸಂತ ಕನಕಾಪುರ ಅವರು ಅಂದು ಕಾರಣಾಂತರಗಳಿಂದ ಬಂದಿರಲಿಲ್ಲ. ತಬಲಾ (ರಘುನಾಥ್ ನಾಕೋಡ) ಮತ್ತು ತಂಬೂರಿಯ ಸಾಥ್‌ನೊಂದಿಗೆ ಹಾಡು ಕೇಳಿ ಬರುತ್ತಿತ್ತು.

ಹಾಡಿನ ಜತೆ ಹಾರ್ಮೋನಿಯಂ ಏಕೆ ಕೇಳಿ ಬರುತ್ತಿಲ್ಲ ಎಂದು ಚಿಂತೆಗೀಡಾದರು ಹಿರಿಯ ಹಿಂದೂಸ್ತಾನಿ ಗಾಯಕ ಮಲ್ಲಿಕಾರ್ಜುನ ಮನಸೂರ. ತಾವು ಕೇಳುತ್ತಿದ್ದ ರೇಡಿಯೊ ಹಿಡಿದುಕೊಂಡೇ ಆಕಾಶವಾಣಿಯ ಸ್ಟುಡಿಯೋ ಒಳಕ್ಕೆ ಬಂದರು. ಅಲ್ಲಿ ಹಾರ್ಮೋನಿಯಂ ನುಡಿಸುವವರೇ ಇರಲಿಲ್ಲ. ಅದನ್ನು ನೋಡಿ ಅವರಿಗೆ ಅಚ್ಚರಿಯಾಯಿತು.

ಅಂತೂ ಹಾಡು ಮುಗಿದ ಬಳಿಕ ಮನಸೂರರು ಗಾಯಕಿಯ ಬೆನ್ನು ಚಪ್ಪರಿಸಿದರು. ಭಾಳ ಛಂದ ಹಾಡಿದೀಯವ್ವಾ... ನನ್ನ ಮಾನ ಉಳಿಸೀ ನೋಡು... ಎಂದು ಮುಕ್ತಕಂಠದಿಂದ ಆಕೆಯನ್ನು ಪ್ರಶಂಸಿಸಿದರು.

ಆ ಕಲಾವಿದೆ ಮಲ್ಲಿಕಾರ್ಜುನ ಮನಸೂರರ ಮಗಳು, ಜೈಪುರ ಘರಾಣೆಯ ಹಿರಿಯ ಅಪ್ರತಿಮ ಗಾಯಕಿ ನೀಲಾ ಕೊಡ್ಲಿ.

ಮನೆಯಲ್ಲೇ ಸಂಗೀತ ದಿಗ್ಗಜ ಮನಸೂರರು ಇದ್ದರೂ ನೀಲಾ ಅವರು ಸಂಗೀತವನ್ನು ಗಂಭೀರವಾಗಿ ಕಲಿಯಲು ಆರಂಭಿಸಿದ್ದು ಬಹಳ ತಡವಾಗಿ. 1945ರ ಡಿಸೆಂಬರ್‌ 30ರಂದು ಜನಿಸಿದ ನೀಲಾ ಸಂಗೀತದ 'ಓ ನಾಮ' ಹಾಡಿದ್ದು 1976ರಲ್ಲಿ. ಆಗಿನಿಂದಲೇ ಆಕಾಶವಾಣಿಯ ಯುವವಾಣಿಯಲ್ಲಿ ಸುಗಮ ಸಂಗೀತ ಕಾರ್ಯಕ್ರಮ ನೀಡಲು ಆರಂಭಿಸಿದರು. 1982ರಿಂದ ಶಾಸ್ತ್ರೀಯ ಸಂಗೀತ ಕಾರ್ಯಕ್ರಮಗಳನ್ನೂ ಆಕಾಶವಾಣಿಯಲ್ಲಿ ನೀಡಲು ಆರಂಭಿಸಿದ ನೀಲಾ ಅವರು ಸುಗಮ ಸಂಗೀತ ಮತ್ತು ಶಾಸ್ತ್ರೀಯ ಸಂಗೀತ ಎರಡೂ ಪ್ರಕಾರಗಳಲ್ಲಿ ಆಕಾಶವಾಣಿಯ 'ಎ’ ಗ್ರೇಡ್‌ ಕಲಾವಿದೆ.

ಇದೀಗ 72ರ ಹರೆಯದಲ್ಲಿರುವ ನೀಲಾ ಅವರು 1983ರಲ್ಲೇ ಆಕಾಶವಾಣಿಯಲ್ಲಿ ಮೊದಲ ಬಾರಿಗೆ ಮಂಗಳವಾರದ ರಾಷ್ಟ್ರೀಯ ಸಂಗೀತ ಕಾರ್ಯಕ್ರಮ ನೀಡಿದ್ದಾರೆ. ಇದಲ್ಲದೇ 2011 ಮತ್ತು 2015ರಲ್ಲಿ ರಾಷ್ಟ್ರೀಯ ಸಂಗೀತ ಕಾರ್ಯಕ್ರಮ ಕೊಟ್ಟಿದ್ದಾರೆ.

‘ದೆಹಲಿಯ ಇಂದಿರಾಗಾಂಧಿ ರಾಷ್ಟ್ರೀಯ ಕಲಾಕೇಂದ್ರದಲ್ಲಿ 2013ರಲ್ಲಿ ಕಾರ್ಯಕ್ರಮ ನೀಡಿದ್ದು ಜೀವನದ ಮರೆಯಲಾರದ ಅನುಭವ. ಅಂದು ಶ್ರೋತೃಗಳು ಒಂದಾದ ಮೇಲೆ ಒಂದರಂತೆ ಬೇಡಿ, ಬಯಸಿ ವಿವಿಧ ರಾಗಗಳಲ್ಲಿ ವಚನಗಳನ್ನು ಹಾಡಿಸಿ ಖುಷಿ ಪಟ್ಟರು. ಅವರ ಸಂಗೀತಾಸಕ್ತಿ ನೋಡಿ ನನಗೂ ಖುಷಿಯಾಯಿತು’ ಎಂದು ನೀಲಾ ತಮ್ಮ ಅನುಭವ ಹಂಚಿಕೊಂಡರು.

ಖ್ಯಾತ ಸಾಹಿತಿ ಅ.ನ.ಕೃಷ್ಣರಾಯರು ಮಲ್ಲಿಕಾರ್ಜುನ ಮನಸೂರರಿಗೆ ವಚನಗಳನ್ನು ಹಾಡಲು ಪ್ರೇರೇಪಿಸಿದರು. ವಚನಗಳನ್ನು ಹಾಡಲು ಆಗುವುದಿಲ್ಲ ಎಂದು ಮನಸೂರರು ಹೇಳಿದಾಗ ಸ್ವತಃ ಅನಕೃ ಅವರೇ ‘ಯಾಕೆ ಬರುವುದಿಲ್ಲ. ನಾನೇ ಹಾಡ್ತೀನಿ ನೋಡು’ ಎಂದು ವಚನ ಹಾಡಿ ತೋರಿಸಿಯೇ ಬಿಟ್ಟರು. ಧಾರವಾಡಕ್ಕೆ ಬಂದಾಗಲೆಲ್ಲ ಅನಕೃ ಮನಸೂರರ ಮನೆಗೆ ಬರುತ್ತಿದ್ದರು.

ಬೆಂಗಳೂರು, ಹೈದರಾಬಾದ್‌ ದೂರದರ್ಶನ ಕೇಂದ್ರಗಳಿಂದ ನೀಲಾ ಅವರ ಹಾಡುಗಾರಿಕೆ ಕಾರ್ಯಕ್ರಮಗಳು ಪ್ರಸಾರವಾಗಿವೆ. ನೀಲಾ ಅವರು ಹಾಡಿರುವ ವಚನಗಳನ್ನು ಒಳಗೊಂಡ ‘ವಚನಾಮೃತ’ ಸಿ.ಡಿ ಜನಪ್ರಿಯವಾಗಿದೆ.

ಪುಣೆ, ದೆಹಲಿ, ಬೆಂಗಳೂರು, ಮುಂಬೈ, ಮಂಗಳೂರು, ಮೈಸೂರು, ಗುಲ್ಬರ್ಗ ಹುಬ್ಬಳ್ಳಿ– ಧಾರವಾಡ ಮತ್ತಿತರ ಕಡೆಗಳಲ್ಲಿ ಕಾರ್ಯಕ್ರಮ ನೀಡಿರುವ ನೀಲಾ ಅವರಿಗೆ 2010–11ರಲ್ಲಿ ರಾಜ್ಯ ಸರ್ಕಾರವು ಕರ್ನಾಟಕ ಕಲಾಶ್ರೀ ಪ್ರಶಸ್ತಿ ನೀಡಿ ಗೌರವಿಸಿದೆ. ಅಲ್ಲದೇ ಗಂಗೂಬಾಯಿ ಹಾನಗಲ್‌ ಮ್ಯೂಸಿಕ್‌ ಫೌಂಡೇಷನ್‌ ವತಿಯಿಂದ ನೀಲಾ ಅವರಿಗೆ ‘ಸ್ತ್ರೀಕುಲ ಕಣ್ಮಣಿ’ ಪ್ರಶಸ್ತಿ ಲಭಿಸಿದೆ. ಬಾಗಲಕೋಟೆಯ ಬಸವೇಶ್ವರ ವಿದ್ಯಾವರ್ಧಕ ಸಂಘದ ಅಕ್ಕನ ಬಳಗದವರು 2017ರಲ್ಲಿ ಮಹಾದೇವಿ ಅಕ್ಕ ಪ್ರಶಸ್ತಿ ನೀಡಿ ಸನ್ಮಾನಿಸಿದೆ.

ಕೇವಲ ಎಸ್‌ಎಸ್‌ಎಲ್‌ಸಿ ವರೆಗೆ ಮಾತ್ರ ಓದಿದ್ದ ನೀಲಾ ಅವರು, ಎಪ್ಪತ್ತರ ದಶಕದಲ್ಲಿ ಕರ್ನಾಟಕ ವಿಶ್ವವಿದ್ಯಾಲಯದಲ್ಲಿ ಸಂಗೀತ ವಿಭಾಗ ಆರಂಭವಾದಾಗ ಅಲ್ಲಿ ಪ್ರವೇಶ ಪಡೆದು ಸಂಗೀತ ರತ್ನ (ಎಂ.ಎ. ತತ್ಸಮಾನ ಪದವಿ) ಪರೀಕ್ಷೆಯಲ್ಲಿ ಪ್ರಥಮ ದರ್ಜೆಯಲ್ಲಿ ಉತ್ತೀರ್ಣರಾದರು.

ತಂದೆ ಮಲ್ಲಿಕಾರ್ಜುನ ಮನಸೂರ, ಸಿದ್ರಾಮಪ್ಪ ಜಂಬಲದಿನ್ನಿ ಅವರ ಬಳಿ ಸಂಗೀತ ಅಭ್ಯಾಸ ಮಾಡಿದವರು ನೀಲಾ. ಬಸವಣ್ಣ ಮತ್ತು ಅಕ್ಕ ಮಹಾದೇವಿ ಅವರ ವಚನಗಳನ್ನು ಸುಶ್ರಾವ್ಯವಾಗಿ ಹಾಡುವ ನೀಲಾ ಅವರು ಮನಸೂರ ಮನೆತನದ ಸಂಗೀತ ಪರಂಪರೆಯನ್ನು ಮುಂದುವರಿಸಿಕೊಂಡು ಹೋಗುತ್ತಿದ್ದಾರೆ.

'ನಾಲ್ಕೈದು ವರ್ಷ ವಿದ್ಯಾರ್ಥಿಗಳಿಗೆ ಸಂಗೀತ ಹೇಳಿ ಕೊಡುತ್ತಿದ್ದೆ. ಆದರೆ ಶಿಷ್ಯಂದಿರಿಗೆ ಕಲಿಸುವುದರಲ್ಲೇ ಸಮಯ ಕಳೆದರೆ ನಿನ್ನ ಸ್ವಂತಿಕೆ ಉಳಿಯುವುದಿಲ್ಲ ಎಂದು ತಂದೆ ಸಲಹೆ ನೀಡಿದರು. ಹೀಗಾಗಿ ಸಂಗೀತದ ಕ್ಲಾಸ್‌ಗಳನ್ನು ಕೈಬಿಟ್ಟೆ' ಎಂದು ನೀಲಾ ತಿಳಿಸಿದರು.

‘ತವರು ಮನೆಯಲ್ಲಿ ಸಿಕ್ಕ ಪ್ರೋತ್ಸಾಹ ಅತ್ತೆಯ ಮನೆಯಲ್ಲೂ ದೊರೆಯಿತು. ನಮ್ಮ ಮಾವನವರು ಕುಂದಗೋಳ ತಾಲ್ಲೂಕಿನ ಸುಲ್ತಾನಪುರ ಗ್ರಾಮದ ರೈತರಾದರೂ ದೊಡ್ಡಾಟದ ಕಲಾವಿದರಾಗಿದ್ದರು. ಮಾವ ಚನ್ನಬಸಪ್ಪ ಹಾಗೂ ಪತಿ ಪ್ರೊ.ಎಂ.ಸಿ.ಕೊಡ್ಲಿ (ಅರ್ಥಶಾಸ್ತ್ರಜ್ಞರು) ಅವರ ಪ್ರೋತ್ಸಾಹ ಎಂದಿಗೂ ಮರೆಯಲಾಗದ್ದು’ ಎನ್ನುವಾಗ ನೀಲಾ ಭಾವುಕರಾಗುತ್ತಾರೆ.

ಪ್ರೊ. ಎಂ.ಸಿ. ಕೊಡ್ಲಿ ಮತ್ತು ನೀಲಾ ಅವರ ಮಕ್ಕಳಾದ ಉದಯ ಧಾರವಾಡದಲ್ಲಿ ನೆಲೆಸಿದ್ದರೆ, ಇನ್ನೊಬ್ಬ ಮಗ ಅರುಣ ಅವರು ಇಳಕಲ್‌ನಲ್ಲಿ ವಾಸವಾಗಿದ್ದಾರೆ.

**

ಮಲ್ಲಣ್ಣ ಕಲಿಸಿದ್ರ ಛಲೋ ಇತ್ತು...

ಖ್ಯಾತ ಹಿಂದೂಸ್ತಾನಿ ಗಾಯಕಿ ಗಂಗೂಬಾಯಿ ಹಾನಗಲ್‌ ಅವರಿಗೂ, ನೀಲಾ ಕೊಡ್ಲಿ ಅವರಿಗೂ ವಿಶೇಷ ನಂಟಿತ್ತು. ನಂಟು ಮಾತ್ರ ಅಲ್ಲ; ನೀಲಾ ಅವರ ಬಗ್ಗೆ ಗಂಗೂಬಾಯಿ ಅವರಿಗೆ ವಿಶೇಷ ಅಕ್ಕರೆ ಕೂಡ ಇತ್ತು.

ನೀ ಛಲೋ ಹಾಡ್ತೀಯವ್ವಾ. ಇದನ್ನ.. ಮುಂದುವರಿಸು. ಯಾವುದೇ ಕಾರಣಕ್ಕೂ ಅಭ್ಯಾಸ ಮಾಡೋದು ಬಿಡಬ್ಯಾಡ. ನನ್ನ ಒಂದು ಇಚ್ಛಾ ಅಂದ್ರ ಮಲ್ಲಣ್ಣ (ಮಲ್ಲಿಕಾರ್ಜುನ ಮನಸೂರ) ನಿನಗ ಕಲಿಸಿದ್ರ ಚೆನ್ನಾಗಿತ್ತು.ಇದು ಗಂಗೂಬಾಯಿ ಅವರು ನೀಲಾ ಅವರಿಗೆ ಹೇಳಿದ ಮಾತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT