ಶನಿವಾರ, 11 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮನೆ ಮನೆಗೆ ಮಣ್ಣಿನ ಗಣಪ

Last Updated 24 ಆಗಸ್ಟ್ 2017, 19:30 IST
ಅಕ್ಷರ ಗಾತ್ರ

ಬಿ ಪ್ಯಾಕ್‌ ಸಂಘಟನೆ ‘ಮನೆ ಮನೆಗೆ ಮಣ್ಣಿನ ಗಣಪ’ ಹೆಸರಿನಲ್ಲಿ ನಗರದ 15 ವಾರ್ಡ್‌ಗಳಲ್ಲಿ ನಡೆಸಿದ ಕಾರ್ಯಾಗಾರ ಮುಕ್ತಾಯವಾಗಿದೆ. ಪ್ರತಿ ವಾರ್ಡ್‌ನಲ್ಲಿ ಸ್ಥಳೀಯರನ್ನು ಒಂದೆಡೆ ಸೇರಿಸಿ, ಹಬ್ಬಕ್ಕೆ ಮಣ್ಣಿನ ಗಣಪನನ್ನೇ ಪ್ರತಿಷ್ಠಾಪಿಸುವಂತೆ ಪ್ರೇರೇಪಿಸುವುದು ಕಾರ್ಯಾಗಾರದ ಉದ್ದೇಶವಾಗಿತ್ತು.

ಕಾರ್ಯಾಗಾರದಲ್ಲಿ ಮಹಿಳೆಯರು, ಪುರುಷರು ಮತ್ತು ಮಕ್ಕಳು ಪಾಲ್ಗೊಂಡು ಮಣ್ಣಿನ ಗೌರಿ–ಗಣೇಶ ಮೂರ್ತಿಗಳನ್ನು ತಯಾರಿಸಿದರು. ಅವರವರು ತಯಾರಿಸಿದ ಮೂರ್ತಿಗಳನ್ನು ಅವರಿಗೇ ಕೊಡಲಾಯಿತು.

‘ಶಿಬಿರಾರ್ಥಿಗಳು ತಾವೇ ತಯಾರಿಸಿದ ಮೂರ್ತಿಗಳನ್ನು ಮನೆಗೊಯ್ದು ಅದೇ ಮೂರ್ತಿಗಳನ್ನು ಹಬ್ಬದ ದಿನ ಪ್ರತಿಷ್ಠಾಪಿಸಿ ಪೂಜಿಸುವಂತೆ ಮನವೊಲಿಸುತ್ತಿದೆ ಬಿ ಪ್ಯಾಕ್‌. ವಾರ್ಡ್‌ನ ‍ಪ್ರತಿ ಮನೆಯಿಂದ ಯಾರಾದರೂ ಬಂದು ಕಾರ್ಯಾಗಾರದಲ್ಲಿ ಭಾಗವಹಿಸಬಹುದು ಎಂದು ತಿಳಿಸಲಾಗಿತ್ತು.

ಈ ಬಾರಿಯ ಕಾರ್ಯಾಗಾರದಲ್ಲಿ 5000ಕ್ಕೂ ಹೆಚ್ಚು ಮಣ್ಣಿನ ಗಣೇಶ ಮೂರ್ತಿಗಳನ್ನು ತಯಾರಿಸುವ ಗುರಿ ಹೊಂದಲಾಗಿತ್ತು. ಆದರೆ, 3000 ಮೂರ್ತಿಗಳನ್ನು ತಯಾರಿಸಲಾಯಿತು’ ಎಂದು ಮಾಹಿತಿ ನೀಡುತ್ತಾರೆ, ಬಿ ಪ್ಯಾಕ್‌ನ ಸಂಯೋಜಕ ರಾಘವೇಂದ್ರ.

ಹಣ ಇರುವವರು ಅದ್ದೂರಿಯಾಗಿ ಗಣೇಶ ಉತ್ಸವ ಮಾಡುತ್ತಾರೆ. ಪರಿಸರಸ್ನೇಹಿ ಗಣಪನನ್ನು ಹಬ್ಬಕ್ಕೆ ಕರೆತನ್ನಿರೆಂದು ಅಂತಹವರನ್ನು ಮನವೊಲಿಸುವುದು ಕಷ್ಟ. ಆದರೆ, ಗೃಹಿಣಿಯರು, ಕಾಲೇಜು ವಿದ್ಯಾರ್ಥಿಗಳಿಗೆ ತಿಳಿ ಹೇಳಿದರೆ ಅವರು ಖಂಡಿತಾ ಪರಿಸರಸ್ನೇಹಿ ನಡೆ ಅನುಸರಿಸುತ್ತಾರೆ ಎಂಬ ಆಶಾವಾದ ಅವರದು.

‘ಕಾರ್ಯಾಗಾರದಲ್ಲಿ ತಯಾರಿಸಲಾದ ಮಣ್ಣಿನ ಗಣಪನ ಮೂರ್ತಿಗಳ ಹೊಟ್ಟೆಯೊಳಗೆ ಒಂದೊಂದು ಬೀಜವನ್ನೂ ಇಡಲಾಗಿದೆ. ಗಣಪನನ್ನು ವಿಸರ್ಜಿಸುವಾಗ ಮನೆಯ ಕುಂಡದಲ್ಲಿಯೇ ವಿಸರ್ಜಿಸಲು ಕಾರ್ಯಾಗಾರದಲ್ಲಿ ಭಾಗಿಯಾದವರಿಗೆ ಹೇಳಲಾಗಿದೆ. ಹಾಗಾಗಿ ಹಬ್ಬ ಮುಗಿದ ನಂತರ ಗಣಪ ಹೋದನಲ್ಲ ಎಂದು ಮನೆಮಕ್ಕಳು ಬೇಸರಿಬೇಕಿಲ್ಲ. ಗಿಡದ ರೂಪ ತಾಳಿ ಮನೆಯಲ್ಲಿಯೇ ಉಳಿಯುತ್ತಾನೆ. ಅಕ್ಕರೆಯಿಂದ ಆರೈಕೆ ಮಾಡಿದರೆ, ವೃಕ್ಷವಾಗುತ್ತಾನೆ’ ಎಂದು ಅವರು ಮುಗುಳ್ನಗುತ್ತಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT