ಭಾನುವಾರ, 19 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸಣ್ಣಕಥೆಗಳ ಜನಕ ನೆನಪಾಗಲಿಲ್ಲವೇ?

Last Updated 2 ಜೂನ್ 2016, 19:57 IST
ಅಕ್ಷರ ಗಾತ್ರ

ಜೂನ್ 6 ಮಾಸ್ತಿಯವರ 125ನೇ ಜನ್ಮದಿನ. ಕನ್ನಡಕ್ಕೆ ಸಣ್ಣಕಥೆಗಳು ಎಂಬ ಮಹತ್ವದ ಪ್ರಕಾರವನ್ನು ಪರಿಚಯಿಸಿದವರು ಜ್ಞಾನಪೀಠ ಪ್ರಶಸ್ತಿ ವಿಜೇತರಾದ ಮಾಸ್ತಿ ವೆಂಕಟೇಶ ಅಯ್ಯಂಗಾರ್. ಅನೇಕ ಕಿರಿಯ ಲೇಖಕರನ್ನು ಬೆನ್ನುತಟ್ಟಿ ಪ್ರೋತ್ಸಾಹಿಸಿದ ಮಾಸ್ತಿ ಅವರ ಸ್ಮಾರಕ ಸ್ಥಾಪನೆಗೆ ಸರ್ಕಾರ ಇನ್ನು ಮುಂದಾದರೂ ಮನಸ್ಸು ಮಾಡಬೇಕಿದೆ.

ಮಾಸ್ತಿ, ಕನ್ನಡದ ಆಸ್ತಿ ಎಂದು ಡಾ. ಮಾಸ್ತಿ ವೆಂಕಟೇಶ ಅಯ್ಯಂಗಾರ್ ಅವರನ್ನು ಹೆಮ್ಮೆಯಿಂದ ಸ್ಮರಿಸುವುದು ಕರ್ನಾಟಕದಲ್ಲಿ ಒಂದು ಪರಂಪರೆಯೇ ಆಗಿದೆ. ಬ್ರಿಟಿಷ್ ಆಡಳಿತದಲ್ಲಿ ಉತ್ತಮ ಇಂಗ್ಲಿಷ್ ಶಿಕ್ಷಣ ಪಡೆದು, ಇಂಗ್ಲಿಷ್ ಸಾಹಿತ್ಯದಲ್ಲಿ ಸ್ನಾತಕೋತ್ತರ ಪದವೀಧರರಾಗಿ ಉನ್ನತ ಶ್ರೇಣಿಯ ಅಧಿಕಾರಿಯಾಗಿದ್ದವರು ಮಾಸ್ತಿ. ಅವರು ಪಡೆದಿದ್ದ ಇಂಗ್ಲಿಷ್ ಶಿಕ್ಷಣವಾಗಲೀ, ಹೊಂದಿದ್ದ ಅಧಿಕಾರವಾಗಲೀ ಅವರ ಕನ್ನಡದ ಆಸಕ್ತಿಗೆ ತಡೆ ಬೇಲಿಯಾಗಲಿಲ್ಲ.

ಮಾಸ್ತಿ ತೀರಿಕೊಂಡಾಗ ಅವರಿಗೆ 95 ವರ್ಷವಾಗಿತ್ತು. ತುಂಬು ಜೀವನ ಬಾಳಿ, ಇಹದ ವ್ಯಾಪಾರ ಪೂರೈಸಿದರು. ನಾವು ಅವರನ್ನು ಕ್ರಮೇಣ ಮರೆಯುತ್ತಿದ್ದೇವೆ ಎನ್ನುವುದು ಅವರು ಹಂಚಿದ ಸಂತಸವನ್ನೆಲ್ಲ ಸವಿದ ನಮಗೆಲ್ಲ ಎದುರಾಗಿರುವ ಬೇಸರದ ಸಂಗತಿ. ಸಾಹಿತ್ಯಕ್ಕೆ ನೀಡಿದ ಕೊಡುಗೆಯೇ ಅವರನ್ನು ಅಮರರನ್ನಾಗಿಸುತ್ತದೆ ಎಂಬ ಮಾತಿದೆ. ಆ ವಿಚಾರದಲ್ಲಿ ಮಾಸ್ತಿ ಸತ್ಯವಾಗಿದ್ದಾರೆ.

ಆದರೆ ನಮಗೆ ನಮ್ಮದೇ ಆದೊಂದು ಹೊಣೆಗಾರಿಕೆ ಇರಬೇಕಲ್ಲವೇ...? ಅದು ಕಾಣಿಸುತ್ತಿಲ್ಲ ಎನ್ನುವುದು ಖೇದದ ಸಂಗತಿ. ಮಾಸ್ತಿಯವರು ಸತ್ತು 30 ವರ್ಷವಾಗಿದೆ. ಇವತ್ತಿಗೂ ಅವರ ಯೋಗ್ಯತೆಗೆ ತಕ್ಕುದಾದ ಸ್ಮಾರಕವೊಂದು ರಾಜ್ಯದಲ್ಲಿ ನಿರ್ಮಾಣವಾಗಿಲ್ಲ ಎನ್ನುವುದು ಬೇಸರದ ಸಂಗತಿ. ಬಸವನಗುಡಿಯಲ್ಲಿರುವ ಮಾಸ್ತಿ ವೆಂಕಟೇಶ ಅಯ್ಯಂಗಾರ್ ಅವರ ಮನೆಯಲ್ಲಿ ‘ಮಾಸ್ತಿ ವೆಂಕಟೇಶ ಅಯ್ಯಂಗಾರ್ ಜೀವನ ಕಾರ್ಯಾಲಯ ಟ್ರಸ್ಟ್’ ಇದೆ.

ಕೆಲವು ಖಾಸಗಿ ಸಂಘಟನೆಗಳು ಮಾಸ್ತಿ ನೆನಪಿನಲ್ಲಿ ಸಾಹಿತ್ಯಕ ಚಟುವಟಿಕೆ ನಡೆಸುತ್ತಿವೆ, ಮಾವಿನಕೆರೆ ರಂಗನಾಥನ್ ಮಾಸ್ತಿ ಪ್ರಶಸ್ತಿ ಪ್ರದಾನ ಮಾಡುತ್ತಿದ್ದಾರೆ. ಇವೆಲ್ಲ ವೈಯಕ್ತಿಕ ಆಸಕ್ತಿ, ಭಕ್ತಿ ಗೌರವದ ಕಾರಣವಾಗಿ ನಡೆಯುತ್ತವೆ. ಶಾಶ್ವತವಾಗಿ ನಡೆಯುತ್ತದೆನ್ನುವ ಭರವಸೆ ಇಲ್ಲ. ಯಾವುದೋ ಒಂದು ಹಂತದಲ್ಲಿ ಆಸಕ್ತಿ ಕಮರಿ ಹೋಗಬಹುದು. ಆದರೆ ಸರ್ಕಾರವೇ ಯೋಜನೆಯನ್ನು ಕೈಗೆತ್ತಿಕೊಂಡರೆ ಅದಕ್ಕೆ ಶಾಶ್ವತ ರೂಪ ಬರುವುದು ಖಚಿತ.

ಬೆಂಗಳೂರಿನ ಶಂಕರಪುರದಲ್ಲಿ ಚಟುವಟಿಕೆಯೇ ನಡೆಯದ ಮಾಸ್ತಿ ರಂಗಮಂದಿರದ ಪ್ರಸ್ತಾಪ ಈ ಸಂದರ್ಭದಲ್ಲಿ ಅನುಚಿತವಾಗದು.
ಬೆಂಗಳೂರು ಮಹಾನಗರ ಪಾಲಿಕೆ ಆಶ್ರಯದ ಮಾಸ್ತಿ ರಂಗಮಂದಿರದಲ್ಲಿ ಸಾಹಿತ್ಯ, ಸಾಂಸ್ಕೃತಿಕ ಚಟುವಟಿಕೆ ಸ್ತಬ್ಧಗೊಂಡು ವರ್ಷಗಳೇ ಉರುಳಿವೆ. ಸಾಹಿತ್ಯ ಸರಸ್ವತಿಯ ದೇಗುಲ ಆಗಬೇಕಿದ್ದ  ರಂಗಮಂದಿರ, ಪಾಲಿಕೆ ಕೃಪೆಯಿಂದ ಗೋಡೋನ್ ಆಗಿದೆ.

ಮಾಸ್ತಿ ಹೆಸರಿಗೆ, ಆ ದಿವ್ಯ ಸ್ಮೃತಿಗೆ ಮಾಡುತ್ತಿರುವ ಅಪಚಾರ ಇದು ಎನ್ನುವುದೂ ತಿಳಿಯದಷ್ಟು ಪಾಲಿಕೆ ಆಡಳಿತ ಜಡ್ಡುಗಟ್ಟಿಹೋಗಿದೆ. ಜೂನ್ 6 ಮಾಸ್ತಿಯವರ 125ನೇ ಜನ್ಮದಿನ. ಕನ್ನಡದ ಎಲ್ಲ ಜ್ಞಾನಪೀಠ ಪ್ರಶಸ್ತಿ ಪುರಸ್ಕೃತರ ಸಾಕ್ಷ್ಯಚಿತ್ರವನ್ನು ಸರ್ಕಾರ ಸಿದ್ಧಪಡಿಸಿದೆ. ಆದರೆ ಮಾಸ್ತಿಯವರ ಸಾಕ್ಷ್ಯಚಿತ್ರ ಸಿದ್ಧವಾಗಲೇ ಇಲ್ಲ. ಅನೇಕ ಹಿರಿಯ ಸಾಹಿತಿಗಳ ಟ್ರಸ್ಟ್‌ಗೆ ಸರ್ಕಾರದಿಂದ ಸಾಕಷ್ಟು ಅನುದಾನ ಹರಿದು ಬರುತ್ತದೆ.

ಕಟ್ಟಡಗಳಾಗಿವೆ, ತಕ್ಕುದಾದ ರೀತಿಯಲ್ಲಿ ಚಟುವಟಿಕೆಗಳೂ ನಡೆಯುತ್ತಿದೆ. ಆದರೆ ಮಾಸ್ತಿ ಟ್ರಸ್ಟ್‌ಗೆ ಸಹಾಯ ಶೂನ್ಯ. ನನ್ನ ತಂಡ ‘ನಟರಂಗ’ ಆರಂಭವಾಗಿದ್ದೇ ಮಾಸ್ತಿಯವರ ‘ಕಾಕನಕೋಟೆ’ ನಾಟಕದ ಪ್ರಯೋಗದೊಂದಿಗೆ. 125ನೇ ಜನ್ಮ ದಿನದ ಹಿನ್ನೆಲೆಯಲ್ಲಿ ಅವರ ಮನೆಯನ್ನು ಸರ್ಕಾರ ತನ್ನ ಸ್ವಾಧೀನಕ್ಕೆ ತೆಗೆದುಕೊಂಡು ಅಲ್ಲಿ ಶಾಶ್ವತ ಸ್ಮಾರಕ ನಿರ್ಮಿಸುವುದಕ್ಕೆ ಮುಂದಾಗಬೇಕು. ಅದರ ನಿರ್ವಹಣೆಯ ಹೊಣೆಯನ್ನು ಮಾಸ್ತಿ ಸ್ಮಾರಕ ಟ್ರಸ್ಟ್‌ಗೆ ಒಪ್ಪಿಸಬೇಕು ಎಂಬುದು ಸರ್ಕಾರಕ್ಕೆ ನನ್ನದು ವಿನಮ್ರ ಒತ್ತಾಯ.

‘ಜೀವನ’ ನಿಯತಕಾಲಿಕ ಅವರ ಹೆಮ್ಮೆಯ ಕುಡಿಗಳಲ್ಲಿ ಒಂದು. ಕನ್ನಡದ ಮೇರು ಸಾಹಿತಿಗಳು ಎಂದು ಈಗಲೂ ನಾವೆಲ್ಲ ಗೌರವಿಸುವ ಹತ್ತಾರು ಬರಹಗಾರರು ಬೆಳಕಿಗೆ ಬಂದಿದ್ದು ಈ ನಿಯತಕಾಲಿಕದ ಮೂಲಕವೇ. ಮಾಸ್ತಿಯವರು ಆ ‘ಹುಡುಗರ’ ಬರಹದಲ್ಲಿ ವಿಶೇಷ ಕಾಣದೇ ಹೋಗಿದ್ದರೆ, ಬೆನ್ನು ತಟ್ಟಿ ಪ್ರೋತ್ಸಾಹಿಸದೇ ಇದ್ದಿದ್ದರೆ, ‘ನೀನು ಚೆನ್ನಾಗಿ ಬರೆಯಬಲ್ಲೆ, ಬರಿಯಯ್ಯಾ’ ಎಂದು ಹುರಿದುಂಬಿಸದೇ ಇದ್ದಿದರೆ ಅನೇಕ ಬರಹಗಾರರು ಅಕ್ಷರ ಆಕಾಶಕ್ಕೇ ಬರುತ್ತಿರಲಿಲ್ಲ ಎನ್ನುವುದು ನಾವೆಲ್ಲ ಬಲ್ಲ ಸತ್ಯ.

ಅವರಿಗಿಂತ ಕಿರಿಯರಾದವರಿಗೆ ಜ್ಞಾನಪೀಠ ಪ್ರಶಸ್ತಿ ಬಂದ ಎಷ್ಟೋ ವರ್ಷದ ಬಳಿಕ ತಮ್ಮನ್ನು ಅದೇ ಪ್ರಶಸ್ತಿಗೆ ಆಯ್ಕೆ ಮಾಡಿದಾಗ ಬೆಂಗಳೂರು ಆಕಾಶವಾಣಿಗೆ ನೀಡಿದ ಸಂದರ್ಶನದಲ್ಲಿ ಅವರು ಹೇಳಿದ ಮಾತು ‘ಮನೆಯಲ್ಲಿ ಸಿಹಿ ಮಾಡಿದಾಗ ಮೊದಲು ಕೊಡುವುದು ಮಕ್ಕಳಿಗೇ ಅಲ್ಲವೇ...’ ಇದು ಮಾಸ್ತಿಯವರ ಸದ್ಗುಣವನ್ನೂ, ಸಮಯ ಪ್ರಜ್ಞೆಯನ್ನೂ ನಮ್ಮ ಮುಂದೆ ಇಡುತ್ತದೆ. ಮಾಸ್ತಿಯವರ ಅನಾರೋಗ್ಯದ ಕಾರಣವಾಗಿ ಜ್ಞಾನಪೀಠ ಪ್ರಶಸ್ತಿ ಪ್ರದಾನ ಬೆಂಗಳೂರಿನಲ್ಲಿ ನಡೆಯಿತು.

ಈ ಪ್ರಶಸ್ತಿ ಪ್ರದಾನ ಸಮಾರಂಭ ದೆಹಲಿಯಿಂದ ಹೊರಕ್ಕೆ ನಡೆದ ಮೊದಲ ನಿದರ್ಶನ ಅದಾಯಿತು. ಈಗ ತಡವಾಗಿದೆ. ಅವರೇ ಹೇಳಿದಂತೆ ಕಿರಿಯರನ್ನೆಲ್ಲ ಗೌರವಿಸಿದ್ದಾಗಿದೆ. ಈಗ ಹಿರಿಯಜ್ಜ ಮಾಸ್ತಿಯವರನ್ನು ಗೌರವಿಸುವ ಸರದಿ. ಸರ್ಕಾರ ಸ್ಮಾರಕ ಸ್ಥಾಪಿಸುವ ಮೂಲಕ ಇದನ್ನು ಆಗು ಮಾಡಿದರೆ ಅದು ಖಂಡಿತವಾಗಿಯೂ ಒಂದು ಮೈಲಿಗಲ್ಲಾಗುತ್ತದೆ. ಸರ್ಕಾರ ಮನಸ್ಸು ಮಾಡಿದರೆ ಯಾವುದೂ ದೊಡ್ಡದಲ್ಲ, ಕಷ್ಟದ್ದಂತೂ ಅಲ್ಲವೇ ಅಲ್ಲ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT