ಭಾನುವಾರ, 19 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸನ್‌ಗ್ಲಾಸ್‌ ಮೋಹಿ ರವಿಕಾಂತ್

Last Updated 14 ಮೇ 2014, 19:30 IST
ಅಕ್ಷರ ಗಾತ್ರ

ಸನ್‌ಗ್ಲಾಸ್‌ಗಳನ್ನು ಅವಶ್ಯಕತೆಗಷ್ಟೇ ಖರೀದಿಸುವವರು ಹಲವರು. ಆದರೆ ದುಬಾರಿ ಸನ್‌ಗ್ಲಾಸ್‌ಗಳನ್ನು ಖರೀದಿಸಿ ಸಂಗ್ರಹಿಸುವುದನ್ನೇ ಹವ್ಯಾಸ ಮಾಡಿಕೊಂಡಿದ್ದಾರೆ ರವಿಕಾಂತ್ ಶಂಕರ್.

ತರಹೇವಾರಿ ಕನ್ನಡಕಗಳನ್ನು ಖರೀದಿಸಿ, ಅವುಗಳ ಸಂಗ್ರಹವನ್ನೇ ಹೊಂದಿರುವ ರವಿ ಅವರಿಗೆ ಚಿಕ್ಕಂದಿನಿಂದಲೇ ಸನ್‌ಗ್ಲಾಸ್‌ಗಳ ಕುರಿತು ವಿಪರೀತ ಆಸೆ. ತಮ್ಮ ಹನ್ನೆರಡನೇ ವಯಸ್ಸಿಗೇ ಸನ್‌ಗ್ಲಾಸ್‌ ಸಂಗ್ರಹಿಸುವ ಹವ್ಯಾಸ ಆರಂಭಿಸಿದ್ದು, ಇಂದು ಅವರ ಬಳಿ ಐವತ್ತಕ್ಕೂ ಹೆಚ್ಚು ಸನ್‌ಗ್ಲಾಸ್‌ಗಳು ಸಂಗ್ರಹವಾಗಿವೆ.

ದಿನದಿಂದ ದಿನಕ್ಕೆ ಅವುಗಳ ಸಂಖ್ಯೆಯೂ ಹೆಚ್ಚುತ್ತಿದೆ. ರವಿ ಅವರು ಮೊದಲ ಸನ್‌ಗ್ಲಾಸ್‌ ತೆಗೆದುಕೊಂಡಿದ್ದು 1972ರಲ್ಲಿ. ಅದರ ಹಿಂದೆ ಪುಟ್ಟದೊಂದು ಕತೆಯಿದೆ. ಅದನ್ನು ಅವರು ಹೇಳಿಕೊಂಡಿದ್ದು ಹೀಗೆ...

‘ನಾನಾಗ ಏಳನೇ ತರಗತಿಯಲ್ಲಿದ್ದೆ. ನನ್ನ ತಂದೆ, ತಾಯಿ ನನ್ನನ್ನು ಸಂಬಂಧಿಗಳ ಮನೆಗೆಂದು ದೆಹಲಿಗೆ ಕಳುಹಿಸಲು ಅಣಿಯಾದರು. ಆಗ ಅಲ್ಲಿನ ಬಿಸಿಲ ತಾಪ ತಡೆದುಕೊಳ್ಳಲು ಸನ್‌ಗ್ಲಾಸ್ ಅನಿವಾರ್ಯ ಎಂದು ತಿಳಿದುಬಂದಿತು. ಆಗ ಅಮ್ಮ ಸನ್‌ಗ್ಲಾಸ್‌ ತೆಗೆದುಕೊಟ್ಟರು. ಅದೇ ನನ್ನ ಮೊದಲ ಸನ್‌ಗ್ಲಾಸ್’ ಎಂದು ಖುಷಿಯಿಂದ ಹೇಳಿಕೊಂಡರು ರವಿ.

ರವಿಕಾಂತ್‌, ಅಮಿತಾಭ್ ಬಚ್ಚನ್ ಅವರ ಅಪ್ಪಟ ಅಭಿಮಾನಿ. ಸಿನಿಮಾವೊಂದರಲ್ಲಿ ಅಮಿತಾಭ್ ತೊಟ್ಟ ಕಪ್ಪು ಶೇಡ್‌ನ ಸನ್‌ಗ್ಲಾಸ್‌ ನೋಡಿದಾಗ ಸನ್‌ಗ್ಲಾಸ್‌ ಬಗೆಗಿನ ಮೋಹ ಇನ್ನಷ್ಟು ಹೆಚ್ಚಾಯಿತಂತೆ. ಆ ದಿನವೇ ರೇಬ್ಯಾನ್ ಬ್ರ್ಯಾಂಡ್‌ನ ಸನ್‌ಗ್ಲಾಸ್‌ ತೆಗೆಸಿಕೊಡುವಂತೆ ಅಪ್ಪ, ಅಮ್ಮನಿಗೆ ದುಂಬಾಲು ಬಿದ್ದರಂತೆ.

ಸನ್‌ಗ್ಲಾಸ್‌ಗಳನ್ನು ಸಂಗ್ರಹಿಸುವ ಆಸೆ ದಿನದಿಂದ ದಿನಕ್ಕೆ ಹೆಚ್ಚುತ್ತಾ ಹೋದಾಗ, ತಮ್ಮ ಪಾಕೆಟ್‌ ಮನಿಯನ್ನೂ ಅದಕ್ಕೆಂದೇ ಮೀಸಲಿಟ್ಟರು ರವಿ.
‘ಆಗೆಲ್ಲಾ ಸನ್‌ಗ್ಲಾಸ್‌ ಕೊಳ್ಳಲು ದುಡ್ಡು ಹೊಂದಿಸಿಕೊಳ್ಳುವುದು ತುಂಬಾ ಕಷ್ಟವಾಗಿತ್ತು. ಆದ್ದರಿಂದ ಪಾಕೆಟ್ ಮನಿಯನ್ನೂ ಕೂಡಿಡಲು ಆರಂಭಿಸಿದೆ.

ಆ ಹಣದಲ್ಲಿ ಒಂದು ಪೈಸೆಯನ್ನೂ ಖರ್ಚು ಮಾಡದೆ ಕನ್ನಡಕ  ತೆಗೆದುಕೊಳ್ಳುತ್ತಿದ್ದೆ. ಆ ಹಣದಲ್ಲೇ ಎರಡು ಜೊತೆ ರೇ ಬ್ಯಾನ್‌ ಸನ್‌ಗ್ಲಾಸ್‌ ತೆಗೆದುಕೊಂಡ ಖುಷಿ ನನ್ನದಾಗಿತ್ತು. ಪ್ರತಿದಿನವೂ ಅವನ್ನು ಹೊರತೆಗೆದು ಪಾಲಿಶ್ ಮಾಡುವುದನ್ನು ಮರೆಯುತ್ತಿರಲಿಲ್ಲ. ಜೋಪಾನವಾಗಿ ಇಟ್ಟುಕೊಳ್ಳುತ್ತಿದ್ದೆ. ಸ್ನೇಹಿತರಿಗೂ ಅವನ್ನು ಮುಟ್ಟಲು ಬಿಡುತ್ತಿರಲಿಲ್ಲ. ಅವರು ಕೂಡ ಗ್ಲಾಸ್‌ಗಳನ್ನು ಕುತೂಹಲದಿಂದ ನೋಡುತ್ತಿದ್ದರು’ ಎಂದು ಅಂದಿನ ದಿನಗಳನ್ನು ನೆನಪಿಸಿಕೊಂಡರು ರವಿ.
ಎಂಜಿನಿಯರಿಂಗ್ ಪದವಿ ಮುಗಿದ ಮೇಲೆ ಅವರ ಈ ಹವ್ಯಾಸ ಗರಿಗೆದರಿತು. ಇಷ್ಟವೆನಿಸಿದ ಗ್ಲಾಸ್‌ಗಳನ್ನು ಖರೀದಿಸಲು ಶುರು ಮಾಡಿದರು.

ಸನ್‌ಗ್ಲಾಸ್‌ಗಳಿಗೆಂದು ಸಾಕಷ್ಟು ಹಣ ಖರ್ಚಾದರೂ ಅವರ ಸಂಗ್ರಹ ದೊಡ್ಡದಾಗುತ್ತಾ ಹೋಯಿತು. ‌‌ಅಮಿತಾಭ್ ಅವರಿಂದ ಹಿಡಿದು ಟಾಮ್ ಕ್ರೂಸ್ವರೆಗೆ, ಅಕ್ಷಯ್ ಕುಮಾರ್‌ ಅವರಿಂದ ಹಿಡಿದು ರಣಬೀರ್ ಕಪೂರ್‌ವರೆಗೆ ತೊಟ್ಟ, ಎಲ್ಲರಿಗೂ ಅಚ್ಚುಮೆಚ್ಚೆನಿಸುವ ಬಗೆಬಗೆಯ ಏವಿಯೇಟರ್‌ಗಳು ರವಿ ಅವರಿಗೆ ಫೇವರಿಟ್.

ರೇಬ್ಯಾನ್ ಪರಿಚಯಿಸಿರುವ ಸುಮಾರು ಎಲ್ಲ ಬಗೆಯ ಸನ್‌ಗ್ಲಾಸ್‌ಗಳು ಸೇರಿದಂತೆ ಪೊಲೀಸ್, ವಿಟ್ಟೋರಿಯೊ ಹಾಗೂ ಫಾಸ್ಟ್‌ಟ್ರಾಕ್‌ನ ಗ್ಲಾಸ್‌ಗಳೂ ಇವರ ಸಂಗ್ರಹದಲ್ಲಿವೆ. 1980ರಲ್ಲಿ ಖರೀದಿಸಿದ್ದ ‘ಮರ್ಕ್ಯುರಿ ಐ’ ಅತಿ ಅಪರೂಪದ ಸನ್‌ಗ್ಲಾಸ್‌ಗಳಲ್ಲಿ ಒಂದು. ಫ್ರ್ಯಾಂಕ್‌ಫರ್ಟ್‌ ಹಾಗೂ ಹಾಂಕಾಂಗ್‌ನಿಂದ ತಂದ ಹಲವು ಕನ್ನಡಕಗಳು ಇವರ ಬಳಿ ಇದ್ದು, ಕಪ್ಪು, ನೀಲಿ, ಕೆಂಪು ಶೇಡ್‌ಗಳ ಸನ್‌ಗ್ಲಾಸ್‌ಗಳು ಗಮನ ಸೆಳೆಯುತ್ತವೆ. ಇರುವ ಐವತ್ತು ಸನ್‌ಗ್ಲಾಸ್‌ಗಳಲ್ಲಿ ಒಂದನ್ನು ಮಗ ಉಡುಗೊರೆಯಾಗಿ ನೀಡಿದ್ದು ಬಿಟ್ಟರೆ, ಉಳಿದೆಲ್ಲವನ್ನೂ ರವಿ ಖುದ್ದು ಖರೀದಿಸಿದ್ದು.

ಇವರ ಮಗ ರಿಶಬ್‌ಗೆ ಕೂಡ ರೇ ಬ್ಯಾನ್ ಸನ್‌ಗ್ಲಾಸ್‌ಗಳೆಂದರೆ ಇಷ್ಟ. ಅವನ ಬಳಿಯೂ ಸನ್‌ಗ್ಲಾಸ್‌ಗಳ ಸಂಗ್ರಹವಿದೆ. ‘ರಿಶಬ್ ಇಂಗ್ಲೆಂಡ್‌ಗೆ ಓದಲೆಂದು ಹೋಗಿದ್ದ. ಭಾರತಕ್ಕೆ ಬರಲು ಎರಡು ಬಾರಿ ಅವನಿಗೆ ಅವಕಾಶ ಸಿಕ್ಕಿತ್ತು. ಆ ಎರಡೂ ಭೇಟಿಯಲ್ಲೂ ನನಗೆ ಎರಡು ಜೊತೆ ರೇ ಬ್ಯಾನ್ ಸನ್‌ಗ್ಲಾಸ್‌ಗಳನ್ನು ತಂದಿದ್ದ’ ಎಂದು ಸಂತೋಷದಿಂದ ಹೇಳಿಕೊಂಡರು.

ಈ ಗ್ಲಾಸ್‌ಗಳನ್ನು ಜೋಪಾನವಾಗಿ ಇಡಲೆಂದೇ ಕಬೋರ್ಡ್‌ ಅನ್ನು ಮೀಸಲಿರಿಸಿದ್ದಾರೆ. ‘ಗ್ಲಾಸ್‌ಗಳು ಶುದ್ಧವಾಗಿರುವಂತೆ ನೋಡಿಕೊಳ್ಳಬೇಕು. ಒಂದು ಸಣ್ಣ ಗೀರೂ ಆಗದಂತೆ ನೋಡಿಕೊಳ್ಳುತ್ತೇನೆ. ಮೆತ್ತನೆ ಬಟ್ಟೆಯಲ್ಲಿಟ್ಟಿದ್ದೇನೆ’ ಎಂದು ಕಾಳಜಿ ತೋರುತ್ತಾರೆ.

ಸದಾ ತಮ್ಮ ಸಂಗ್ರಹಕ್ಕೆ ಹೊಸ ಹಾಗೂ ಅಪರೂಪದ ಗ್ಲಾಸ್‌ಗಳನ್ನು ಸೇರಿಸುವ ಹಂಬಲ ಇವರದ್ದು. ಸದ್ಯಕ್ಕೆ ‘ಔಟ್‌ಡೋರ್ಸ್‌ಮನ್’ ಸನ್‌ಗ್ಲಾಸ್‌ನ ಹುಡುಕಾಟದಲ್ಲಿದ್ದಾರೆ ರವಿ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT