ಬುಧವಾರ, 15 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸರ್ವ ಜನಾಂಗದ ಶಾಂತಿ ಮಾರ್ಗ

Last Updated 7 ನವೆಂಬರ್ 2011, 19:30 IST
ಅಕ್ಷರ ಗಾತ್ರ

ದಿನಬೆಳಗಾದರೆ ಮಾಧ್ಯಮಗಳಲ್ಲಿ ದೇಶದ ಯಾವುದೋ ಮೂಲೆಯಲ್ಲಿ ನಡೆದ ಕೋಮ ಗಲಭೆ, ಹಿಂಸಾ ಪ್ರಕರಣ ವರದಿಯಾಗಿರುತ್ತವೆ. ಆದರೆ ಇದಕ್ಕೆ ಭಿನ್ನವಾಗಿ ಪರಧರ್ಮ ಸಹಿಷ್ಣುತೆ, ಜಾತ್ಯತೀತ ಮನೋಭಾವ ಪ್ರದರ್ಶಿಸಿ ದೇಶಕ್ಕೆ ಮಾದರಿಯಾಗುವಂತಹ ಬಡಾವಣೆಯೊಂದು ಬೆಂಗಳೂರಿನ ವ್ಯಾಪ್ತಿಯಲ್ಲಿದೆ.

ಹಿಂದುಗಳು ಪೂಜೆ ಸಲ್ಲಿಸುವ ರಾಘವೇಂದ್ರ ಸ್ವಾಮಿಗಳ ಬೃಂದಾವನ, ಅದಕ್ಕೆ ಹೊಂದಿಕೊಂಡೇ ಇರುವ ಕ್ರೈಸ್ತರ ಚರ್ಚ್, ಅದರ ಬದಿಗೆ ಮುಸ್ಲಿಮರ ಮಸೀದಿ. ಯಲಹಂಕ ಉಪನಗರದ ಕರ್ನಾಟಕ ಗೃಹಮಂಡಳಿ ಬಡಾವಣೆಯಲ್ಲಿ ಇಂತಹ ವೈಶಿಷ್ಟ್ಯ ಕಾಣಬಹುದು. ಹೌಸಿಂಗ್ ಬೋರ್ಡ್ ಬಡಾವಣೆಯ ಶರಾವತಿ ಹೋಟೆಲ್ ಹಿಂಭಾಗದ ರಸ್ತೆಯಲ್ಲಿ ಈ ಸರ್ವಜನಾಂಗದ ಶಾಂತಿಯ ತೋಟವಿದೆ.

 ಈ ಮೂರೂ ಪ್ರಾರ್ಥನಾ ಸ್ಥಳಗಳಿಗೆ ಜಾಗ ನೀಡಿದವರು ಕರ್ನಾಟಕ ಗೃಹಮಂಡಳಿ. ಅದರ ಜಾತ್ಯಾತೀತ ಧೋರಣೆಗೆ ಸಾಕ್ಷಿ ಈ ಮಂದಿರ, ಚರ್ಚು ಮತ್ತು ಮಸೀದಿ. 1988 ರಲ್ಲಿ ಕರ್ನಾಟಕ ಗೃಹಮಂಡಳಿ ಮೂರು ಧರ್ಮದವರಿಗೂ ಪೂಜೆ, ಪ್ರಾರ್ಥನೆ ಸಲ್ಲಿಸಲು ಅಕ್ಕ, ಪಕ್ಕವೇ ಸಿ.ಎ. ನಿವೇಶನ ನೀಡಿತ್ತು.

ಹೌಸಿಂಗ್ ಬೋರ್ಡ್ ಬಡಾವಣೆಯ ಹಿಂದುಗಳು ಮತ್ತು ಕ್ರೈಸ್ತರು ತಮಗೆ ನೀಡಿದ ನಿವೇಶನದಲ್ಲಿ ಮಠ ಮತ್ತು ಚರ್ಚ್ ಕಟ್ಟಿಕೊಂಡರು. ಆದರೆ ಇಲ್ಲಿಯ ಸುಮಾರು 300 ಮುಸ್ಲಿಂ ಬಾಂಧವರ ಕುಟುಂಬಗಳಿಗೆ ಭೂಮಿ ಸಿಕ್ಕರೂ ಪ್ರಾರ್ಥನೆಗೆ ಸರಿಯಾದ ಕಟ್ಟಡ ಇರಲೇ ಇಲ್ಲ. ಒಂದು ತಗಡಿನ ಶೆಡ್ಡಿನಲ್ಲಿ ನಮಾಜ್ ಪ್ರಾರಂಭವಾಯಿತು.
 
ಈಗಲೂ ಅದೇ ಶೆಡ್ಡಿನಲ್ಲಿ ಪ್ರಾರ್ಥನೆ ನಡೆಯುತ್ತಿದೆ. ಐದಾರು ತಿಂಗಳ ಹಿಂದೆ ನೂರ್ ಅಹ್ಮದ್ ಶರೀಫ್, ನುಶ್ರತ್ ಪಾಶಾ, ಎಂ.ಎಸ್. ಖಾನ್, ನಖಿ ಅಹಮ್ಮದ್ ಶರೀಫ್ ಮುಂತಾದ ಹಿರಿಯರ ಪ್ರಯತ್ನದಿಂದ ಮಸೀದಿ ನಿರ್ಮಾಣಕ್ಕೆ ಚಾಲನೆ ದೊರೆತಿದೆ.

ಇದು ಕೇವಲ ಪ್ರಾರ್ಥನಾ ಮಂದಿರವಲ್ಲ. ಇಲ್ಲಿ ಶಾಲೆ, ಕಂಪ್ಯೂಟರ್ ತರಬೇತಿ ಕೇಂದ್ರ, ಕಲ್ಯಾಣ ಮಂಟಪ ಮುಂತಾದವು ಸಹ ತಲೆಯೆತ್ತಲಿವೆ. ಈ ಕಟ್ಟಡ ಸಮುಚ್ಚಯಕ್ಕೆ ಸುಮಾರು ಹತ್ತು ಕೋಟಿ ರೂಪಾಯಿಗಳು ವೆಚ್ಚವಾಗುವ ಅಂದಾಜು ಇದ್ದು, ಬಿರುಸಿನಿಂದ ಕಾಮಗಾರಿ ನಡೆಯುತ್ತಿದೆ. ಅಗತ್ಯ ಹಣವನ್ನು ಸಂಗ್ರಹಿಸಿ ಶೀಘ್ರ ಪೂರ್ಣಗೊಳಿಸುವ ವಿಶ್ವಾಸ ವ್ಯವಸ್ಥಾಪಕರಿಗೆ ಇದೆ.

ಪರಧರ್ಮ ಸಹಿಷ್ಣುತೆ- ಸಹಬಾಳ್ವೆ ಮುಂತಾದ ಅಪರಿಚಿತ ಪದಗಳು ಕೇವಲ ಪದಗಳಾಗದೇ ಇಡೀ ದೇಶಕ್ಕೆ ಮಾದರಿಯಾಗುವಂತೆ ಇರುವ ಯಲಹಂಕದ ಈ ಬಡಾವಣೆ ಎಲ್ಲರೂ ಅಗತ್ಯವಾಗಿ ಭೇಟಿ ನೀಡಲೇಬೇಕಾದ ಸ್ಥಳ. 

ಹಿಂದು, ಮುಸ್ಲಿಂ ಹಾಗೂ ಕ್ರೈಸ್ತರ ಪ್ರಾರ್ಥನಾ ಸ್ಥಳಗಳು ಒಂದೇ ದಾರಿಯಲ್ಲಿ ಇರುವ ಈ ಸೌಹಾರ್ದಮಯ ಮಾರ್ಗಕ್ಕೆ ಶಾಂತಿ ಮಾರ್ಗವೆಂದು ಕರೆಯುವುದು ಅತ್ಯಂತ ಸೂಕ್ತ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT