‘ಪ್ರೇಮ್ ರತನ್ ಧನ್ ಪಾಯೋ’, ‘ರಾಂಝನಾ’ ಮತ್ತು ಈಗ ಬಿಡುಗಡೆ ಆಗಿರುವ ‘ವೀರೆ ದಿ ವೆಡ್ಡಿಂಗ್’ ಚಿತ್ರಗಳಲ್ಲಿ ನಟಿಯರಾದ ಸೋನಂ ಕಪೂರ್ ಹಾಗೂ ಸ್ವರಾ ಭಾಸ್ಕರ್ ನಟಿಸಿದ್ದರು.
‘ವೀರೆ ದಿ ವೆಡ್ಡಿಂಗ್’ ಚಿತ್ರದ ಪ್ರಚಾರ ಸಂದರ್ಭದಲ್ಲೂ ಇವರಿಬ್ಬರು ಹೆಚ್ಚಾಗಿ ಜೊತೆಯಾಗೇ ಕಾಣಿಸಿಕೊಂಡಿದ್ದರು. ಸ್ವರಾ, ಸೋನಂ ಮತ್ತು ಅವರ ಸಹೋದರಿ ರಿಯಾ ಕಪೂರ್ಗೂ ಸ್ನೇಹಿತೆ. ಅವರು ಮೂವರೂ ಆಗಾಗ ಸಮಯ ಕಳೆಯುತ್ತಾರೆ. ಶಾಪಿಂಗ್ ಮಾಡುತ್ತಾರೆ.
ಇಂತಿಪ್ಪ ಇವರ ಸ್ನೇಹದಿಂದಲೇ ರಿಯಾ ‘ವೀರೆ...’ಚಿತ್ರದಲ್ಲಿ ಸ್ವರಾಗೆ ವಿಶೇಷ ಪಾತ್ರ ನೀಡಿದ್ದರು. ಇದೀಗ ಸೋನಂ ಸಹ ನಿರ್ದೇಶಕಿಯಾಗುತ್ತಿದ್ದು, ತಮ್ಮ ಚಿತ್ರದಲ್ಲಿ ಸ್ವರಾ ನಾಯಕಿಯಾಗಲಿದ್ದಾಳೆ ಎಂದು ಘೋಷಿಸಿದ್ದಾರೆ.
ತಾವು ಮೂವರೂ ಕೆಲಸ ಮಾಡುತ್ತಿದ್ದರೆ ಅದನ್ನೂ ಆನಂದಿಸುತ್ತೇವೆ. ಪಿಕ್ನಿಕ್ನಂತೆಯೇ ದಿನಕಳೆಯುತ್ತೇವೆ ಎನ್ನುವುದು ಸೋನಂ ಕಪೂರ್ ಮಾತು. ಹಾಗಾಗಿ ಸೋನಂ ನಿರ್ದೇಶನ ಮಾಡುತ್ತಿರುವ ಪ್ರಥಮ ಚಿತ್ರದಲ್ಲಿ ಸ್ವರಾ ಭಾಸ್ಕರ್ ನಾಯಕಿಯಾಗಿ ನಟಿಸಲಿದ್ದಾರೆ.
ಈ ಸುದ್ದಿಯನ್ನು ಸ್ವತಃ ಅವರೇ ಸ್ಪಷ್ಟಪಡಿಸಿದ್ದಾರೆ. ತನ್ನ ಸ್ನೇಹಿತೆ ಸ್ವರಾ ಅವರ ನಟನಾ ಚಾತುರ್ಯ, ನಟನಾ ಪ್ರೀತಿಯನ್ನು ಕಂಡು ಸೋನಂ ಆಕರ್ಷಿತಳಾಗಿದ್ದು, ತಮ್ಮ ಮೊದಲ ಚಿತ್ರದಲ್ಲೇ ಅವರನ್ನು ನಾಯಕಿಯಾಗಿ ಮಾಡಲು ಎಲ್ಲಾ ಸಿದ್ಧತೆ ನಡೆಸಿದ್ದಾರೆ.
ಸ್ವರಾ ಅವರಿಗಾಗಿ ಸೋನಂ ಕೆಲವು ಕತೆಗಳನ್ನು ಬರೆದಿದ್ದು, ಎಲ್ಲವೂ ಸರಿಹೋದರೆ ಈ ಇಬ್ಬರ ಸಹಯೋಗದ ಸಿನಿಮಾವನ್ನು ಪ್ರೇಕ್ಷಕರು ಶೀಘ್ರದಲ್ಲೇ ಕಣ್ತುಂಬಿಕೊಳ್ಳಬಹುದಾಗಿದೆ. ಸೋನಂ ಚಿತ್ರದ ಭಾಗವಾಗಿರುವುದಕ್ಕೆ ಸ್ವರಾ ಸಹ ಉತ್ಸಾಹ ತೋರಿದ್ದಾರಂತೆ.