ಭಾನುವಾರ, 12 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸ್ಫುಟವಾದ ರಾಗ, ಸಾಹಿತ್ಯ ಭಾವಗಳು

ಲಯ-ಲಾಸ್ಯ
Last Updated 22 ಮೇ 2013, 19:59 IST
ಅಕ್ಷರ ಗಾತ್ರ

ಗಾಯಕಿ ಎಂ.ಎಸ್. ಶೀಲಾ ಅವರ ಗಾಯನವೆಂದರೆ ಅದೊಂದು ಮಧುರ ಹಾಗೂ ಶ್ರೀಮಂತ ಭಾವಮಯ ಲೋಕದಲ್ಲಿ ವಿಹರಿಸಿದಂತೆ. ಅವರ ಕಛೇರಿಯ ಶಿಲ್ಪ ಮತ್ತು ಬಂಧ ಆಕರ್ಷಿಸುವಂತಹವು.

ರಾಗ ಮತ್ತು ಸಾಹಿತ್ಯ ಭಾವಗಳು ಸ್ಫುಟವಾಗಿ ತೆರೆದುಕೊಂಡು ಅವರ ಗಾಯನ ಕೌಶಲ, ಅಭಿವ್ಯಕ್ತಿ ವಿಧಾನ ದೀರ್ಘ ಕಾಲದವರೆಗೆ ಕೇಳುಗರ ಕಿವಿಗಳಲ್ಲಿ ಅನುರಣಿಸುವಂತಹುದು. ಭಾವನಾಮಯತೆ ಹಾಗೂ ಸಾಂಪ್ರದಾಯಿಕ ಮೌಲ್ಯಗಳೆಡೆಗೆ ಒಲವು, ಪ್ರಬುದ್ಧ ಕಲೆಗಾರಿಕೆ ಮತ್ತು ಸಹಜ ಗತಿಯ ಪ್ರತಿಭಾ ಪ್ರಕಟಣೆ ಸಾಮಾನ್ಯ ಶ್ರೋತೃವನ್ನೂ ಮುಗ್ಧಗೊಳಿಸುವಂತಹುದು.

ಶ್ರೀ ರಾಮಾನುಜ ಸಹಸ್ರ ಸಂಭ್ರಮ 2017ರ ನಿಮಿತ್ತ ಶ್ರೀರಾಮಾನುಜ ಸೇವಾ ಟ್ರಸ್ಟ್‌ನ ಆಶ್ರಯದಲ್ಲಿ ಗಾಯನ ಸಮಾಜದ ಸಭಾಂಗಣದಲ್ಲಿ ಸುಮಾರು ತೊಂಬತ್ತು ನಿಮಿಷಗಳಿಗೂ ಹೆಚ್ಚು ಸಮಯ ನಡೆದ ಅವರ ವಿಷಯ-ನಿಷ್ಠ ಗಾಯನ ಕಛೇರಿ ನಿತ್ಯನವೀನ ಅನುಭವವ ನೀಡಿತು. ಇದೇ ಸಮಯದಲ್ಲಿ ಮಹತ್ವಾಕಾಂಕ್ಷಿ  ಶ್ರೀರಾಮಾನುಜ ಕಲಾಕ್ಷೇತ್ರ ಕಲಾ ಸಂಸ್ಥೆಗೆ ಚಾಲನೆ ನೀಡಲಾಯಿತು. ಇವಿಷ್ಟೂ ಕಾರ್ಯಕ್ರಮಗಳು ಇಸ್ಕಾನ್‌ನ ಶ್ರೀ ತಿರುಸ್ವಾಮಿ ಅವರ ಉಪಸ್ಥಿತಿಯಲ್ಲಿ ನಡೆದವು.

ಸುವ್ಯವಸ್ಥಿತವಾಗಿದ್ದ ಅವರ ಕಛೇರಿಯು ಗಂಭೀರವಾದ ಶಾಸ್ತ್ರೀಯ ಆಶಯಗಳನ್ನು ಒಳಗೊಂಡಿತ್ತು. ಶ್ರೀರಂಗನಾಥನ ಸ್ತುತಿಗೇ ತಮ್ಮ ಕಛೇರಿಯನ್ನು ಮೀಸಲಾಗಿಟ್ಟು ಬಿಗಿಯಾದ ಶ್ರವಣ ಸುಖದ ಹಾಗೂ ವಸ್ತು ವಿನ್ಯಾಸ ಏರ್ಪಟ್ಟಿತು. ಅಗ್ರ ಪಂಕ್ತಿಯ ಗಾಯಕಿಯರಲ್ಲಿ ಪ್ರಮುಖ ಸ್ಥಾನದಲ್ಲಿ ರಾರಾಜಿಸುತ್ತಿರುವ ಶೀಲಾ ಅವರು ರಮಣಿಯವಾದ ಅಲಂಕರಣಗಳು, ಮಹಾಕಾವ್ಯದ ಮಾದರಿಯ ರಾಗ ಮತ್ತು ರಚನೆಗಳ ವರ್ಣನೆಗಳು ರಸಾನಂದಕ್ಕೆ ಉತ್ತಮ ಪೋಷಣೆ ನೀಡಿದವು. ಸಿರಿಕಂಠವನ್ನು ಮತ್ತು ಅಗಾಧವಾದ ಮನೋಧರ್ಮವನ್ನು ಚಿಕ್ಕದಾದರೂ ಚೊಕ್ಕವಾದ ನಾದಕ್ರಿಯೆಗೆ ಹೇಗೆ ದುಡಿಸಿಕೊಳ್ಳಬಹುದು ಎಂಬುದಕ್ಕೆ ಅವರ ಗಾಯನ ಸ್ಪಷ್ಟ ನಿದರ್ಶನವಾಯಿತು.

ನಿಖರತೆ ಮತ್ತು ನಿಷ್ಕಳಂಕವಾಗಿ ಗಾಯಕಿಯು ಶ್ರೀರಂಗನಾಥನನ್ನು ಕುರಿತಾದ ನಾಲ್ಕೈದು ಕೃತಿಗಳನ್ನು ಮಾತ್ರ ಹಾಡಿದರಾದರೂ ಸಹ ಅದರ ಪ್ರಭಾವ ಮನಸ್ಸಿನಲ್ಲಿ ಹಲವು ಕಾಲ ಹಸಿರಾಗಿರುವಂತಾಯಿತು. ತ್ಯಾಗರಾಜರ `ಚೂತಾಮು ರಾರೆ ಸುದತುಲಾರ' (ಆರಭಿ) ಕೀರ್ತನೆಯ ಶುಭಾರಂಭ ಹಾಗೂ ನಂತರದ `ಕರುಣಜೂಡ' ಕೇಳಿದಾಕ್ಷಣ ಸುನಾದದ ಕಲಾತ್ಮಕ ಸೃಜನ ಹಾಗೂ ಭಾವ ಸೌಂದರ್ಯ ಆಕರ್ಷಿಸಿತು.

ತ್ರಿಸ್ಥಾಯಿಯ ಸುಗಮ
ವ್ಯಾಪ್ತಿಯುಳ್ಳ ಕಂಠದಲ್ಲಿ ಭಾವಾಭಿವ್ಯಕ್ತಿ ಎಷ್ಟು ಸುಲಭ ಸಾಧ್ಯವೋ ಅಷ್ಟೇ ಕಲಾತ್ಮಕವಾಗಿ ಲಯ ವಿನ್ಯಾಸವೂ ಶೀಲ ಅವರಿಗೆ ಒದಗಿ ಬಂದಿದೆ. ಅವರ ಸಾಹಿತ್ಯ ಮತ್ತು ಸ್ವರ ಪ್ರಸ್ತಾರಗಳಲ್ಲಿ ಈ ಅಂಶವು ಎದ್ದು ಕಾಣುತ್ತದೆ. ತೋಡಿ ರಾಗದ ವಿಸ್ತರಣೆಯಲ್ಲಿ ಅವರು ಮಿಂಚಿದರು. `ರಾಜುವೆಡಲ' ರಚನೆಯನ್ನು ಕಲಾತ್ಮಕವಾಗಿ ಸಜ್ಜುಗೊಳಿಸಿ ರಸಿಕರನ್ನು ಪುಳಕಗೊಳಿಸಿದರು.

ಶ್ರೀ ರಂಗನಾಥನ ಸ್ತುತಿಯು ತ್ಯಾಗರಾಜರ ವಿಳಂಬ ಕಾಲದ ಕಾಂಭೋಜಿ ರಾಗದ `ಓ ರಂಗಶಾಯಿ' ಮೇರು ಕೃತಿಯನ್ನು ಬಿಟ್ಟು ಸಂಪೂರ್ಣವಾಗಲು ಸಾಧ್ಯವೇ ಇಲ್ಲ. ನನಗೆ ಇಂತಹ ಅನಿಸಿಕೆ ಮೂಡುತ್ತಿರುವಾಗಲೇ ಆ ಕೃತಿಯು ಶೀಲ ಅವರ ಗಾಯನದಲ್ಲಿ ಪ್ರತ್ಯಕ್ಷವಾಯಿತು. ಆ ಶೇಷಶಾಯಿ ರಂಗನಾಥನ ವೈಭವ ಸಾವಧಾನವಾಗಿ ಹಬ್ಬಿ ಹರಡಿ ಮುದ ನೀಡಿತು.

ಬಿರುದು ಪ್ರದಾನ
ಬಸವೇಶ್ವರನಗರದ ಶ್ರೀವರಪ್ರದ ಲಕ್ಷ್ಮಿ ವೆಂಕಟೇಶ್ವರ ದೇವಾಲಯದಲ್ಲಿ ಆರಾಧನಾ  ಸಂಸ್ಥೆಯ ಆಶ್ರಯದಲ್ಲಿ ನಡೆದ ಮೂರು ದಿನಗಳ 16ನೇ ಆರಾಧನಾ ಸಂಗೀತೋತ್ಸವದ ಸಮಾರೋಪದಲ್ಲಿ ಹಿರಿಯ ಮೃದಂಗ ವಿದ್ವಾಂಸ ಎಂ.ಟಿ. ರಾಜಕೇಸರಿ ಅವರಿಗೆ ಆರಾಧನಾಶ್ರೀ ಬಿರುದನ್ನು ನೀಡಿ ಗೌರವಿಸಲಾಯಿತು.

ಸಂಗ್ರಹ ಯೋಗ್ಯ ಸಿ.ಡಿ.
ನಂತರ ನುರಿತ ಭರತನಾಟ್ಯ ಕಲಾವಿದೆ-ಗಾಯಕಿ ಸುಮಾ ಕೃಷ್ಣಮೂರ್ತಿ ಅವರು ಸಂಯೋಜಿಸಿರುವ ಭರತನಾಟ್ಯ ಮಾರ್ಗ ರಚನೆಗಳ ಸೀಡಿಯನ್ನು ಅವರ ಗುರುಗಳಾದ ಲಲಿತಾ ಶ್ರೀನಿವಾಸನ್ ಅವರು ಲೋಕಾರ್ಪಣೆ ಮಾಡಿದರು.

ಬಹಳ ಜಾಗರೂಕತೆ ಮತ್ತು ಸುಯೋಜನೆಯೊಂದಿಗೆ ನಿರೂಪಿತವಾಗಿರುವ ಈ ಸಿ.ಡಿ.ಯಲ್ಲಿ ಸುಮಾ ಅವರ ಮಾಧ್ಯಮದ ಮೇಲಿನ ಹಿಡಿತ, ಲಯ ಪ್ರಭುತ್ವ ಹಾಗೂ ಸುಬದ್ಧ ಜತಿಗಳ ಸಂರಚನೆ ಗಮನ ಸೆಳೆಯುತ್ತದೆ. ನಿಜಕ್ಕೂ ಅದೊಂದು ಸಂಗ್ರಹ ಯೋಗ್ಯ ಕೊಡುಗೆಯಾಗಿದೆ.

ಮನ ಗೆದ್ದ ಮಾನಸಿ ಗಾಯನ
ಐದು ದಿನಗಳ ಅನನ್ಯ ಸಂಗೀತೋತ್ಸವ 2013 ಕಳೆದ ಭಾನುವಾರದಂದು ಸಮಾಪ್ತಗೊಂಡಿತು. ಮಲ್ಲೇಶ್ವರದ ಸೇವಾ ಸದನದಲ್ಲಿ ನಡೆದ ಸಮಾರೋಪ ಸಮಾರಂಭದಲ್ಲಿ ಅನನ್ಯ ಪ್ರಶಸ್ತಿ-ಪುರಸ್ಕಾರಗಳನ್ನು ವಿತರಿಸಲಾಯಿತು.

ಪುರಸ್ಕಾರಕ್ಕೆ ಭಾಜನರಾದ ಯುವ ಪ್ರತಿಭಾನ್ವಿತ ಗಾಯಕಿ ಮಾನಸಿ ಪ್ರಸಾದ್ ಅವರು ಹಾಡಿದಾಗ ಅವರ ರಾಗೋಜ್ವಲತೆ ಮತ್ತು ಕಲಾಪರಿಪೂರ್ಣತೆಯಿಂದ ಸಂಗೀತ ಪ್ರೇಮಿಗಳು ಮೋಹಿತರಾದರು.

ಪ್ರತಿಭಾ ಸ್ಫುರಣದಿಂದ ತಮ್ಮ ಮನೋಧರ್ಮದ ಆಳಗಳನ್ನು ಬೆಳಗುವ ಶಕ್ತಿ ಮಾನಸಿ ಅವರಿಗಿದೆ. ತಮ್ಮ ಸಂಪತ್ಭರಿತವಾದ ಕಂಠದಲ್ಲಿ ಕರ್ನಾಟಕ ಸಂಗೀತದ ಮಾತು ಮತ್ತು ಧಾತುಗಳ ಸೂಕ್ಷ್ಮತೆಗಳನ್ನು ಸರಿ ಪ್ರಮಾಣದಲ್ಲಿ ಸೆರೆ ಹಿಡಿದು ಅವುಗಳನ್ನು ಕಲಾಮಯವಾಗಿ ಕೇಳುಗರಿಗೆ ಸಂವಹಿಸುವ ಅವರ ಗಾನ ಕುಶಲತೆ ಅಸಾಧಾರಣವಾದುದು.

ಸ್ವಾತಿ ತಿರುನಾಳರ `ದೇವ ದೇವ' (ಪೂರ್ವಿಕಲ್ಯಾಣಿ) ಕೃತಿಗೆ ಆಕರ್ಷಕ ಕಲ್ಪನಾಸ್ವರಗಳನ್ನು ಪೋಣಿಸಿ ಆನಂದದ ವಿನಿಕೆಯನ್ನು ಮಾಡಿದರು. `ಶಾಂತಮು ಲೇಕ' (ಸಾಮ, ತ್ಯಾಗರಾಜರು) ಮನಸ್ಸನ್ನು ಶಾಂತಗೊಳಿಸಿತು. ಭೈರವಿ ರಾಗದ ಬೆಡಗನ್ನು ಶಿಸ್ತಿನ ಕ್ರಮ ಬದ್ಧ ವಿಸ್ತರಣೆಯಲ್ಲಿ ಮಾನಸಿ ಅವರು ಚಿತ್ರಿಸಿದರು. ಅವರ ರಾಗ ವಿಸ್ತರಣೆಯಲ್ಲಿ ಸರಳತೆ ಮತ್ತು ಸಹಜತೆಗಳು ಹೃದಯ ಗುಣಗಳಾಗಿ ನೆಲೆಸಿದ್ದವು. ಜಿಎನ್‌ಬಿ ಅವರ `ಗತಿ ವೇರವರಮ್ಮ' (ಮಿಶ್ರ ಛಾಪು) ಕೃತಿಯ ಆಯ್ಕೆಯಂತೂ ರೋಚಕವೆನಿಸಿತು.

ಸೂಕ್ತವಾಗಿದ್ದ ನೆರೆವಲ್ ಮತ್ತು ಸ್ವರವಿನ್ಯಾಸದೊಂದಿಗೆ ಶ್ರವಣಾನಂದವನ್ನು ವರ್ಧಿಸಿದ ಮಾನಸಿ ಅವರ ಗಾಯನ ಚಾತುರ್ಯ ಮತ್ತು ಅವರು ಒದಗಿಸಿದ ಸಾಮಗ್ರಿ ಅನನ್ಯವೆನಿಸಿತು. `ಇದೇನೇ ಸಖಿ' (ಬೇಹಾಗ್) ಜಾವಳಿಯನ್ನು ಭಾವಪೂರ್ಣವಾಗಿ ಹಾಡಿ ಅವರು ತಮ್ಮ ಗಾಯನವನ್ನು ಮುಗಿಸಿದರು. ಮತ್ತೂರು ಶ್ರೀನಿಧಿ (ಪಿಟೀಲು), ರಂಜಿನಿ ವೆಂಕಟೇಶ್ (ಮೃದಂಗ) ಮತ್ತು ಭಾಗ್ಯಲಕ್ಷ್ಮಿ (ಮೋರ್ಸಿಂಗ್) ವಾದ್ಯ ಸಹಕಾರ ನೀಡಿದರು.

ಲಾವಣ್ಯಮಯ ಭರತನಾಟ್ಯ

ಸ್ತುತ್ಯರ್ಹ ಕ್ರಿಯಾಶೀಲತೆ ಮತ್ತು ನಿರಂತರ ಕಾರ್ಯಚಟುವಟಿಕೆಗಳಿಂದ ಭರತನಾಟ್ಯ ಕ್ಷೇತ್ರಕ್ಕೆ ವೈವಿಧ್ಯಮಯ ಕೊಡುಗೆಯನ್ನು ನೀಡುತ್ತಿರುವ ಸಕ್ರಿಯ ನೃತ್ಯಗಾತಿ, ಗುರು ಮತ್ತು ಸಂಯೋಜಕಿ ಶುಭಾ ಧನಂಜಯ್ ಅವರು ಮತ್ತೊಮ್ಮೆ ತಮ್ಮ ಹಿರಿಮೆಯನ್ನು ಮೆರೆದರು.

ಎಡಿಎ ರಂಗಮಂದಿರದಲ್ಲಿ ತಮ್ಮ ಶಿಷ್ಯೆ ಲಾವಣ್ಯ ಸುಂದರ್ ಅವರನ್ನು ಶಾಸ್ತ್ರೀಯ ನೃತ್ಯ ಕ್ಷೇತ್ರಕ್ಕೆ ಯಶಸ್ವಿಯಾಗಿ ಅವರು ಮೇ.15ರಂದು ಸಮರ್ಪಿಸಿದರು. ಹೆಸರಿಗೆ ತಕ್ಕಂತೆ ರೂಪು-ಲಾವಣ್ಯಗಳನ್ನು ಹೊಂದಿರುವ ಲಾವಣ್ಯ ತಮ್ಮ ಗುರುವಿಗೆ ತಕ್ಕ ಶಿಷ್ಯೆ ಎನಿಸಿಕೊಂಡರು. ಸುಬ್ರಹ್ಮಣ್ಯಪದ (ಬಾಗೇಶ್ರೀ)ದಂತೆ ಸುಬ್ರಹ್ಮಣ್ಯನ ಗುಣಗಾನವನ್ನು ತಮ್ಮ ಸುಂದರ ಅಭಿನಯದಲ್ಲಿ ಮಾಡಿ ಪಾಪನಾಶಂ ಶಿವನ್ ಅವರ ನಾಟ್ಟಿಕುರಂಜಿ ವರ್ಣವನ್ನು ಸುಮಾರು ಇಪ್ಪತ್ತೈದು ನಿಮಿಷಗಳ ಕಾಲ ನಿರ್ವಹಿಸಿದರು.

ಆ ನಿರ್ವಹಣೆಯಲ್ಲಿ ಅವರು ತೋರಿದ ಅಡುವು ವೈವಿಧ್ಯ, ವಿವಿಧ ಜತಿ ಮಾದರಿಗಳು ಮತ್ತು ತೀರ್ಮಾನಗಳು ಅಭಿನಂದನಾರ್ಹವಾಗಿದ್ದು, ಅವರ ನೃತ್ತ ವೈಶಿಷ್ಟ್ಯ ಸುವ್ಯಕ್ತವಾಯಿತು. ಅದಕ್ಕೆ ಪೂರಕವಾಗಿದ್ದ ನೃತ್ಯ ಮತ್ತು ಅಭಿನಯ ಭಾಗಗಳು ಅವರ ಕಠಿಣ ಸಾಧನೆಯನ್ನು ಪುಷ್ಟೀಕರಿಸಿದವು. ವಿರಾಮದ ನಂತರದ ದಾಸರ ಪದಾಭಿನಯ (ರಾಗಮಾಲಿಕೆ) ಮತ್ತು ತಿಲ್ಲಾನ (ಧನಾಶ್ರೀ) ಲಾವಣ್ಯ ಅವರ ನಟನಾ ಸಾಮರ್ಥ್ಯ ಮತ್ತು ಸುಲಲಿತ ನೃತ್ತವನ್ನು ಪ್ರಕಟಗೊಳಿಸಿತು. ಮೋಹಕ ಗ್ರೀವಾ ಕಟಿ ಭೇದಗಳು ಮತ್ತು ಚಲನೆಗಳ ಮಯೂರ ನೃತ್ಯ ರಂಜಿಸಿತಾದರೂ ಸಹ ಅದರ ಪ್ರದರ್ಶನ ಅವಶ್ಯಕವಾಗಿತ್ತೇ ಎಂಬ ಪ್ರಶ್ನೆ ಮೂಡಿತು.

ಗುರು ಶುಭಾ ಧನಂಜಯ (ನಟುವಾಂಗ), ಇಂದಿರಾ ಶಂಕರ್ (ಗಾಯನ), ನಟರಾಜಮೂರ್ತಿ (ಪಿಟೀಲು), ಜನಾರ್ದನರಾವ್ (ಮೃದಂಗ), ವಿವೇಕ್ (ಕೊಳಲು) ಮತ್ತು ಪ್ರಸನ್ನ ಕುಮಾರ್ (ರಿದಂಪ್ಯಾಡ್) ಅವರುಗಳ ಸಹಕಾರ ಪೋಷಕವಾಗಿತ್ತು.                  

-ಡಾ. ಎಂ. ಸೂರ್ಯ ಪ್ರಸಾದ್

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT