ಮನಾಲಿಯ ಮಂಜಿನಲ್ಲಿ...

ಶುಕ್ರವಾರ, ಏಪ್ರಿಲ್ 19, 2019
30 °C

ಮನಾಲಿಯ ಮಂಜಿನಲ್ಲಿ...

Published:
Updated:
Prajavani

ಹಿಮಾಲಯದ ತಪ್ಪಲಿನಲ್ಲಿ ಹಿಮಚ್ಛಾದಿತ ಬೆಟ್ಟಗಳು, ಜಲಧಾರೆಗಳು, ನದಿ ತೊರೆಗಳು.. ಹೀಗೆ ಸಾಕಷ್ಟು ಅದ್ಭುತ ತಾಣಗಳಿವೆ. ಅದರಲ್ಲಿ ‘ಮನಾಲಿ ಮತ್ತು ಸೋಲಂಗ್’ ಕೂಡ ರಮಣೀಯ ತಾಣಗಳು.

ಇಂಥ ಅಪೂರ್ವ ತಾಣಕ್ಕೆ ಭೇಟಿ ನೀಡಲು ನನಗೆ ಅವಕಾಶ ಕಲ್ಪಿಸಿದ್ದು ಅಕ್ಕಮಹಾದೇವಿ ಮಹಿಳಾ ವಿಶ್ವವಿದ್ಯಾಲಯದ ರಾಷ್ಟ್ರೀಯ ಸೇವಾ ಯೋಜನೆ (ಎನ್‌ಎಸ್‌ಎಸ್‌). ಎನ್‌ಎಸ್‌ಎಸ್‌ನಿಂದ ಅಲ್ಲಿ ಆಯೋಜಿಸಿದ್ದ ಅಡ್ವೆಂಚರ್‌ ಕ್ಯಾಂಪ್‍ನಲ್ಲಿ ಭಾಗವಹಿಸಲು ನನಗೆ ಅವಕಾಶ ಸಿಕ್ಕಿತು.

ಧಾರವಾಡದಿಂದ ದೆಹಲಿಗೆ ರೈಲಿನಲ್ಲಿ ಪಯಣ. ಅಲ್ಲಿಂದ ಮನಾಲಿಗೆ ಬಸ್‌ನಲ್ಲಿ ಹೊರಟೆ. ಹಿಮಾಚಲ ಪ್ರದೇಶ ರಾಜ್ಯಕ್ಕೆ ಸೇರುವ ಊರುಗಳಲ್ಲಿ ಬಸ್‌ ಪ್ರಯಾಣ ಮಾಡುವುದು ನಿಜಕ್ಕೂ ಒಂದು ಅವರ್ಣನೀಯ ಅನುಭವ. ದಾರಿಯುದ್ದಕ್ಕೂ ಸಿಗುವ ಹಸಿರು ಸಿರಿಯ ಸ್ವಾಗತ ಸ್ವೀಕರಿಸುತ್ತಾ, ಸುರಂಗಗಳ ಒಳಗೆ ನುಸುಳುವಾಗ ಆಗುವ ಅನುಭವ ವರ್ಣಿಸಲಸದಳ. ಇಂಥದ್ದೊಂದು ಅಹ್ಲಾದಕರ ವಾತಾವರಣದೊಂದಿಗೆ ಮನಾಲಿ ತಲುಪಿದಾಗ ಮೈ ನಡುಗುವಂತಹ ಚಳಿ ನನ್ನನ್ನು ಆವರಿಸಿತ್ತು.

ಶಿಬಿರದ ಅನುಭವ

ಮೊದಲ ದಿನ ಅಟಲ್ ಬಿಹಾರಿ ವಾಜಪೇಯಿ ಅಡ್ವೆಂಚರ್‌ ಸಂಸ್ಥೆಯಲ್ಲಿ ಶಿಬಿರ ಆರಂಭ. ಶಿಬಿರದಲ್ಲಿ ನಮ್ಮ ಹಾಗೆ ಗೋವಾ, ಉತ್ತರ ಪ್ರದೇಶ, ತಮಿಳುನಾಡು ರಾಜ್ಯಗಳ ವಿದ್ಯಾರ್ಥಿಗಳೂ ಭಾಗವಹಿಸಿದ್ದರು. ಮೊದಲ ದಿನ ಪರಿಚಯವಾಯಿತು. ವಿಭಿನ್ನ ಸಂಸ್ಕ್ರತಿ, ಭಾಷೆಯ ಸ್ನೇಹಿತರು ಸಿಕ್ಕಿದ್ದು ತುಂಬಾ ಖುಷಿ ಕೊಟ್ಟಿತು. ಎರಡನೇ ದಿನ ಮೈ ಕೊರೆಯುವ ಚಳಿಯಲ್ಲಿ ಓಟ. ನಂತರ ರಾಕ್ ಕ್ಲೈಂಬಿಗ್‍. ಎಂದೂ ಬೆಟ್ಟ ಏರದ ನನಗೆ, ಇಂಥ ಕಠಿಣ ಸವಾಲು ಎದುರಿಸಲು ಭಯವಾಯಿತು. ಹೀಗೆ ಪ್ರತಿದಿನ ಬೆಳಿಗ್ಗೆ 5 ಗಂಟೆ, ರನ್ನಿಂಗ್, ಟ್ರೆಕ್ಕಿಂಗ್ ಅಭ್ಯಾಸವಾಯಿತು. ಒಂದು ದಿನ 6500 ಅಡಿಯಿರುವ ‘ಫಿರ್ ಪಂಜಾರ್’ ಎಂಬ ಹಿಮಾಲಯ ಪರ್ವತ ಹತ್ತಿಸಿದರು.

ಹಡಿಂಬಾ ದೇವಾಸ್ಥಾನ

ಶಿಬಿರದ ಕಾರ್ಯಕ್ರಮಗಳ ಬಿಡುವಿನಲ್ಲಿ ಸುತ್ತಲಿನ ಐತಿಹಾಸಿಕ ತಾಣಗಳಿಗೆ ಭೇಟಿ ನೀಡಿದೆವು. ಅದರಲ್ಲಿ ಹಡಿಂಬಾ ದೇವಾಯಲವೂ ಒಂದು. ಇದೊಂದು ನೈಸರ್ಗಿಕ ಗುಹೆ. ಇಲ್ಲಿ ಹೊಳೆಯುವ ದೇವಿ ಹೆಜ್ಜೆ ಗುರುತುಗಳಿವೆ. ಮರದಲ್ಲಿ ಪೌರಾಣಿಕ ಪಾತ್ರಗಳ ಚಿತ್ರಗಳನ್ನು ಕೆತ್ತಲಾಗಿದೆ. ಈ ಚಿತ್ರಗಳು ಗೋಡೆಯ ಅಂದ ಹೆಚ್ಚಿಸಿವೆ.

ದೇವಾಲಯ ನೋಡಿಕೊಂಡು ಎದುರಿಗಿದ್ದ ಪರ್ವತವನ್ನು ಕಷ್ಟಪಟ್ಟು ಏರಿ ತುದಿ ತಲುಪಿದೆವು. ತುದಿಯಲ್ಲಿ ನಿಂತ ಮೇಲೆ ‘ಎಷ್ಟು ಎತ್ತರದ ಬೆಟ್ಟವನ್ನು ಏರಿದ್ದೇವಲ್ಲಾ’ ಎಂದು ಖುಷಿಪಟ್ಟೆವು. ಪುನಃ‌ ಬಂದ ದಾರಿಯಲ್ಲೇ ಪರ್ವತದಿಂದ ಇಳಿದೆವು. ಮುಂದೆ ಸಮೀಪದಲ್ಲಿರುವ ‘ಅಂಜನೀ ಗುಫಾ’ ಎಂಬ ದೇವಾಲಯಕ್ಕೆ ಭೇಟಿ ನೀಡಿ ದೇವರ ದರ್ಶನ ಪಡೆದೆವು.

ಹಿಮದ ಮಳೆಯ ಸಂಭ್ರಮ

ಮನಾಲಿಯಲ್ಲಿ ಶಿಬಿರ ಮುಗಿದ ನಂತರ ನಾವು ಹೊರಟಿದ್ದು ಸೋಲಂಗ್‍ ಕಡೆಗೆ. ಅಲ್ಲಿ, ಮನಾಲಿಗಿಂತ ಸಿಕ್ಕಾಪಟ್ಟೆ ಚಳಿ. ನಾವು ಅಲ್ಲಿಗೆ ಭೇಟಿ ನೀಡಿದ ಮಾರನೆಯ ದಿನ ಹಿಮ ಸುರಿಯಲಾರಂಭಿಸಿತು. ಟಿವಿ, ಸಿನಿಮಾಗಳಲ್ಲಷ್ಟೇ ನೋಡಿದ್ದ ಹಿಮದ ಮಳೆಯನ್ನು ನೈಜವಾಗಿ ನೋಡಿದಾಗ ಖುಷಿಯೋ ಖುಷಿ. ಎಲ್ಲರೂ ಬೊಗಸೆಯಲ್ಲಿ ಮಂಜಿನ ಚೂರುಗಳನ್ನು ಹಿಡಿದು ಕುಣಿದಾಡಿದೆವು. ಹಿಮದ ಮಳೆಯ ಸಂಭ್ರಮವನ್ನು ಫೋಟೊಗಳಲ್ಲಿ ಸೆರೆಹಿಡಿದೆವು.

ಹಿಮ ಬೆಟ್ಟದಲ್ಲಿ ಕನ್ನಡದ ಕಂಪು

ಸೋಲಂಗ್‌ಗೆ ಭೇಟಿ ನೀಡಿದ ಮಾರನೆಯ ದಿನವೇ ನವೆಂಬರ್ 1. ಕನ್ನಡ ರಾಜ್ಯೋತ್ಸವ ದಿನ. ಎಲ್ಲರೂ ಸೇರಿ ಹಿಮ ಬೆಟ್ಟದ ಮೇಲೆ ಕನ್ನಡದ ಬಾವುಟ ಹಾರಿಸಿ, ರಾಜ್ಯೋತ್ಸವ ಆಚರಿಸಿದೆವು. ನಮ್ಮೊಟ್ಟಿಗೆ ಬೇರೆ ಬೇರೆ ರಾಜ್ಯದ ವಿದ್ಯಾರ್ಥಿಗಳು ಮತ್ತು ಕಾರ್ಯಕ್ರಮ ಅಧಿಕಾರಿಗಳು ಕನ್ನಡದಲ್ಲೇ ನಮಗೆ ಶುಭಕೋರಿದರು. ಪ್ರತಿ ವರ್ಷ ಕನ್ನಡ ರಾಜ್ಯೋತ್ಸವ ಬಂದಾಗಲೆಲ್ಲ ಹಿಮಾಲಯದಲ್ಲಿ ಕನ್ನಡದ ಬಾವುಟ ಹಾರಾಡಿದ ಕ್ಷಣವೂ ನೆನಪಾಗುತ್ತದೆ. ನಂತರ ಸೋಲಂಗ್‍ನಿಂದ ಮನಾಲಿಗೆ ವಾಪಸಾದೆವು. ನಾವು ಊರಿಗೆ ಹೊರಡುವ ದಿನ ಬಂದಿತು. ಒಂದೊಂದೇ ರಾಜ್ಯದವರು ಶಿಬಿರ ತೊರೆಯಲು ಪ್ರಾರಂಭ ಮಾಡಿದಾಗ ಎಲ್ಲರೂ ಒಂದು ಕ್ಷಣ ಭಾವುಕರಾದೆವು. ನಾವು ಅಲ್ಲಿಂದ ಹೊರಟು ದೆಹಲಿ ತಲುಪಿದೆವು. ಅಲ್ಲೆರಡು ದಿನ ವಾಸ್ತವ್ಯವಿದ್ದು, ಕೆಂಪುಕೋಟೆ, ರಾಷ್ಟ್ರಪತಿ ಭವನ, ರಾಜ್‍ಘಾಟ್, ಕಮಲ್ ಮಹಲ್, ಮರುದಿನ ಆಗ್ರಾದ ತಾಜಮಹಲ್, ಕೋಟೆ, ಮಥುರಾ ನೋಡಿಕೊಂಡು ಧಾರವಾಡಕ್ಕೆ ವಾಪಸಾದೆವು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !