ಮಂಡ್ಯ: ರೋಮಾಂಚನ ಮೂಡಿಸಿದ ಎತ್ತಿನಗಾಡಿ ಓಟ!

7
ಕಾಳಿಕಾಂಬ ರೈಸ್‌ಮಿಲ್ ಬಳಿ ಜಾತ್ರೆಯ ವಾತಾವರಣ, ಎರಡು ದಿನಗಳ ರಾಜ್ಯಮಟ್ಟದ ಸ್ಪರ್ಧೆ

ಮಂಡ್ಯ: ರೋಮಾಂಚನ ಮೂಡಿಸಿದ ಎತ್ತಿನಗಾಡಿ ಓಟ!

Published:
Updated:
Deccan Herald

ಮಂಡ್ಯ: ಎತ್ತುಗಳ ಓಟ ನೋಡುಗರಲ್ಲಿ ರೋಮಾಂಚನ ಸೃಷ್ಟಿಸಿತು. ಮೈನವಿರೇಳಿಸುವ ಓಟದಲ್ಲಿ ಗ್ರಾಮೀಣ ಯುವ ರೈತರು ಸ್ಪರ್ಧಾ ಮನೋಭಾವ ಮೆರೆದರು. 31 ಜೋಡಿ ರಾಸುಗಳು ಸ್ಪರ್ಧಿಸಿದ್ದ ಎತ್ತಿನಗಾಡಿ ಓಟದಲ್ಲಿ ಗ್ರಾಮೀಣ ಸೊಗಡು ಅನಾವರಣಗೊಂಡಿತು.

ರಾಜ್ಯಮಟ್ಟದ ಎರಡು ದಿನದ ಎತ್ತಿನಗಾಡಿ ಓಟದ ಸ್ಪರ್ಧೆ ನಗರದ ಹೊರವಲಯ ಕಾಳಿಕಾಂಬ ರೈಸ್‌ಮಿಲ್ ಬಳಿ ಶನಿವಾರ ಆರಂಭವಾಯಿತು. ಹೊಸಹಳ್ಳಿಯ ವಿನಾಯಕ ಮಿತ್ರ ಬಳಗ ಹಾಗೂ ರಾಮನಹಳ್ಳಿ ಗ್ರಾಮಸ್ಥರ ವತಿಯಿಂದ ಸ್ಪರ್ಧೆ ಆಯೋಜನೆ ಮಾಡಲಾಗಿತ್ತು. ಜಿಲ್ಲೆ ಹಾಗೂ ಹೊರ ಜಿಲ್ಲೆಗಳಿಂದ ಬಂದಿದ್ದ ರಾಸುಗಳು ನಾಮುಂದು, ತಾ ಮುಂದು ಎಂದು ಓಡಿ ಗುರಿ ಮುಟ್ಟುವ ದೃಶ್ಯಗಳು ಸಾಮಾನ್ಯವಾಗಿದ್ದವು. ಸ್ಪರ್ಧೆಯಲ್ಲಿ ಪ್ರಥಮ ಬಹುಮಾನ ಗಳಿಸಿದ ಎತ್ತುಗಳಿಗೆ ₹ 50 ಸಾವಿರ, ಹಸುಗಳಿಗೆ ₹ 25 ಸಾವಿರ ನೀಡಲಾಗುವುದು.

ಹಳ್ಳಿಕಾರ್ ತಳಿಯ ಆರ್ಭಟ
ಸ್ಪರ್ಧೆಯಲ್ಲಿ ಹಳ್ಳಿಕಾರ್ ತಳಿಯ ಹಸು, ಎತ್ತುಗಳು ಆರ್ಭಟಿಸಿದವು. ಇವು ಎತ್ತಿನಗಾಡಿ, ಉಳಿಮೆಗೆ ಜನಸ್ನೇಹಿಯಾಗಿದ್ದು ಸ್ಪರ್ಧೆಯಲ್ಲಿ ಗಮನ ಸೆಳೆದವು. ರಾಸುಗಳ ಮೈತೊಳೆದು ಅಲಂಕಾರ ಮಾಡಲಾಗಿತ್ತು. ಜಿಂಕೆಯನ್ನೂ ಮೀರಿಸುವ ವೇಗ ಕಂಡು ಬಂತು. ಮಾಲೀಕನ ಅಣತಿಯಂತೆ ಏಕಚಿತ್ತವಾಗಿ ಓಡಿ ಗುರಿ ಮುಟ್ಟಿದವು. ನೋಡುಗರ ಸಂಭ್ರಮ ಮುಗಿಲು ಮುಟ್ಟಿತ್ತು. ಚಪ್ಪಾಳೆ, ಸಿಳ್ಳೆಗಳ ಮೂಲಕ ಜನರು ಪ್ರೋತ್ಸಾಹ ನೀಡಿದರು.

ಜಾತ್ರೆಯ ರೂಪ:
ಮಂಡ್ಯ ನಗರ ಪ್ರದೇಶವಾಗಿದ್ದರೂ ಗ್ರಾಮೀಣ ಸೊಗಡನ್ನು ತನ್ನ ಮಡಿಲಲ್ಲಿ ಉಳಿಸಿಕೊಂಡಿದೆ. ಎತ್ತುಗಳ ಓಟದ ಸ್ಪರ್ಧೆ ನೋಡಲು ಗ್ರಾಮೀಣ ಜನರು ಪಂಚೆ, ಪಟಾಪಟಿ ಚಡ್ಡಿ, ದಪ್ಪ ಮೀಸೆ ಹಾಗೂ ಯುವಕರ ಹೆಸರು ಬರೆಸಿರುವ ಟೀ ಶರ್ಟ್, ಪ್ಯಾಂಟ್ ಧರಿಸಿ ಗಮನ ಸೆಳೆದರು.

ಜಾತ್ರೆಯ ವಾತಾವರಣ ಮನೆಮಾಡಿತ್ತು. ಚಹಾ ಅಂಗಡಿ, ಚುರುಮುರಿ, ಐಸ್‌ಕ್ರೀಮ್ ಅಂಗಡಿ, ಸೌತೆಕಾಯಿ, ಕಬ್ಬಿನ ಜ್ಯೂಸ್, ಎಳನೀರು ಅಂಗಡಿಗಳು ತಲೆ ಎತ್ತಿದ್ದವು. ಎತ್ತುಗಳ ಅಲಂಕಾರಕ್ಕೆ ಬೇಕಾದ ಜೂಲ, ರಿಬ್ಬನ್ ಅಂಗಡಿಗಳನ್ನು ತೆರೆಯಲಾಗಿತ್ತು. ದೂರದಲ್ಲಿ ನಿಂತು ನೋಡಲು ವೇದಿಕೆ ಹಾಗೂ ಮರದ ಬಂಬುಗಳಿಂದ ತಡೆಗೋಡೆ ನಿರ್ಮಾಣ ಮಾಡಲಾಗಿತ್ತು. ಕಟ್ಟನಿಟ್ಟಿನ ಪೊಲೀಸ್‌ ಭದ್ರತೆ ಒದಗಿಸಲಾಗಿತ್ತು.  ಮುಂಜಾಗೃತಾ ಕ್ರಮವಾಗಿ ಆಂಬುಲೆನ್ಸ್ ಸಿದ್ಧಗೊಂಡಿದ್ದವು. ಜನರಿಗೆ ಕುಡಿಯುವ ನೀರಿನ ವ್ಯವಸ್ಥೆ, ಮಹಿಳೆಯರ ವೀಕ್ಷಣೆಗಾಗಿ ಪ್ರತ್ಯೇಕ ವೇದಿಕೆ ನಿರ್ಮಿಸಲಾಗಿತ್ತು.

ಕೆಪಿಸಿಸಿ ಪ್ರಧಾನ ಕಾರ್ಯದರ್ಶಿ ಎಂ.ಎಸ್.ಆತ್ಮಾನಂದ ಸ್ಪರ್ಧೆಗೆ ಚಾಲನೆ ನೀಡಿದರು. ಆರ್ಗ್ಯಾನಿಕ್ ಸಂಸ್ಥೆಯ ಮಧುಚಂದನ್, ಪಿಎಲ್‌ಡಿ ಬ್ಯಾಂಕ್ ಅಧ್ಯಕ್ಷ ಎಚ್.ಸಿ.ಶಿವಲಿಂಗೇಗೌಡ, ನಗರಸಭೆ ಸದಸ್ಯರಾದ ಪವಿತ್ರಾ ಬೋರೇಗೌಡ, ಎಚ್.ಎಸ್.ಮಂಜು, ಮೀನಾಕ್ಷಿ ಪುಟ್ಟಸ್ವಾಮಿ, ಮುಖಂಡರಾದ ಇಂಡುವಾಳು ಸಚ್ಚಿದಾನಂದ, ನಾಗೇಶ್, ತಮ್ಮಣ್ಣ, ಸ್ವಾಮಿಗೌಡ, ಮಲ್ಲೇಶ್, ಹೊಸಹಳ್ಳಿ ಶಿವು ಇದ್ದರು.

*****

ಬಾಹುಬಲಿ, ಸುಂಟರಗಾಳಿ!

ಸ್ಪರ್ಧೆಯಲ್ಲಿ ಭಾಗವಹಿಸಿದ್ದ ರಾಸುಗಳ ಗುಂಪಿಗೆ ವಿಶೇಷ ಹೆಸರು ನೀಡಲಾಗಿತ್ತು. ಮನೆಯ ದೇವರು, ಗ್ರಾಮದೇವತೆ ಹಾಗೂ ಸಿನಿಮಾ ಹೆಸರು ನೀಡಿದ್ದು ವಿಶೇಷವಾಗಿತ್ತು. ಬಿಸಿಲು ಮಾರಮ್ಮ, ಆದಿಶಕ್ತಿ ಹುಚ್ಚಮ್ಮ, ಜೈ ಮಾರುತಿ, ಚಾಮುಂಡೇಶ್ವರಿ, ನಂದಿ ಬಸವೇಶ್ವರ ಎಂಬ ಹೆಸರುಗಳು ಗಮನ ಸೆಳೆದವು. ಜೊತೆಗೆ ಬಾಹುಬಲಿ, ಸುಂಟರಗಾಳಿ, ಬಿರುಗಾಳಿ, ಚಂದು, ಗಂಗಾ, ಹೇಮಾಗ್ನಿ, ಶಿವಕುಮಾರ್ ಎಂದು ನಾಮಕರಣ ಮಾಡಲಾಗಿತ್ತು.

 

ಬರಹ ಇಷ್ಟವಾಯಿತೆ?

 • 1

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !