ಇಸ್ರೇಲ್‌ನಲ್ಲೇ ಈ ಜೀವ ಹೋಗಬೇಕಾಗಿತ್ತು: ಕಣ್ಣೀರು ಹಾಕಿದ ಕುಮಾರಸ್ವಾಮಿ

ಬುಧವಾರ, ಏಪ್ರಿಲ್ 24, 2019
28 °C
ಆರೋಗ್ಯ ವಿಚಾರ ಬಿಚ್ಚಿಟ್ಟು ಕಣ್ಣೀರು

ಇಸ್ರೇಲ್‌ನಲ್ಲೇ ಈ ಜೀವ ಹೋಗಬೇಕಾಗಿತ್ತು: ಕಣ್ಣೀರು ಹಾಕಿದ ಕುಮಾರಸ್ವಾಮಿ

Published:
Updated:
Prajavani

ಮಂಡ್ಯ: ಚುನಾವಣೆ ದಿನಾಂಕ ಸಮೀಪವಾಗುತ್ತಿದ್ದಂತೆ ಮುಖ್ಯಮಂತ್ರಿ ಎಚ್‌.ಡಿ.ಕುಮಾರಸ್ವಾಮಿ ತಮ್ಮ ಆರೋಗ್ಯ ಸಮಸ್ಯೆ ಮುಂದೆ ತಂದು ಮತಯಾಚನೆ ಮಾಡುತ್ತಿದ್ದಾರೆ. ಸೋಮವಾರ ಕೆ.ಆರ್‌.ಪೇಟೆಯಲ್ಲಿ ನಡೆದ ಪ್ರಚಾರ ಸಭೆಯಲ್ಲಿ ಅವರು ಸಾವಿನ ಸನಿಹ ಹೋಗಿ ಬಂದ ವಿಚಾರ ಬಿಚ್ಚಿಟ್ಟು ಕಣ್ಣೀರು ಹಾಕಿದ್ದಾರೆ.

‘ನಾನು ಎರಡು ಬಾರಿ ಹೃದಯ ಶಸ್ತ್ರಚಿಕಿತ್ಸೆಗೆ ಒಳಗಾಗಿದ್ದೇನೆ. ಇಸ್ರೇಲ್‌ಗೆ ಹೋಗಿದ್ದಾಗಲೇ ಈ ಜೀವ ಹೋಗಬೇಕಾಗಿತ್ತು. ಅಲ್ಲಿ ಆರೋಗ್ಯ ಸಮಸ್ಯೆ ತೀವ್ರಗೊಂಡಿತು. ವೈದ್ಯರು ತಕ್ಷಣ ಚಿಕಿತ್ಸೆ ನೀಡಬೇಕು ಎಂದರು. ಆದರೆ ಅಲ್ಲಿಗೆ ಕೃಷಿ ಅಧ್ಯಯನಕ್ಕೆ ಹೋಗಿದ್ದ ಕಾರಣ ನಾನು ಚಿಕಿತ್ಸೆ ಪಡೆಯದೆ ಕೇವಲ ಮಾತ್ರೆ ಪಡೆದೆ. ಆಗಲೇ ಸಾವಿನ ಸನಿಹ ಹೋಗಿ ಬದುಕಿ ಬಂದೆ’ ಎಂದು ಹೇಳುತ್ತಾ ಕಣ್ಣೀರು ಸುರಿಸಿದರು.

‘ನಾನು ಅಳುವುದನ್ನು ನಿಲ್ಲಿಸಿದ್ದೆ. ಆದರೆ ಎಚ್‌.ವಿಶ್ವನಾಥ್‌ ಅವರು ಕೆಲ ವಿಚಾರ ಹೇಳಿದರು. ಯಾರೂ ನಿನ್ನ ಸ್ಥಿತಿ ಅರ್ಥಮಾಡಿಕೊಂಡಿಲ್ಲ, ನಿನ್ನ ಆರೋಗ್ಯದ ಮೇಲೆ ಯಾವ ಪರಿಣಾಮ ಬೀರಿದೆ ಎಂಬುದು ಗೊತ್ತಿಲ್ಲ ಎಂದರು. ಆ ಮಾತುಗಳು ನನ್ನ ಮನಸ್ಸಿನ ಮೇಲೆ ಪರಿಣಾಮ ಬೀರಿದವು. ನೋವು ತಡೆಯಲಿಕ್ಕೆ ಆಗದೆ ಕಣ್ಣೀರು ಹಾಕಿದ್ದೇನೆ’ ಎಂದು ಭಾವುಕರಾದರು.

‘ನಾನು ಮುಖ್ಯಮಂತ್ರಿಯಾದ ದಿನದಿಂದ ನೆಮ್ಮದಿಯಾಗಿ ಆಡಳಿತ ನಡೆಸಲು ಒಂದು ದಿನವೂ ಬಿಟ್ಟಿಲ್ಲ. 120 ಸೀಟು ಗೆದ್ದಿದ್ದರೆ ನೆಮ್ಮದಿಯಾಗಿ ಆಡಳಿತ ನಡೆಸುತ್ತಿದ್ದೆ’ ಎಂದರು.

ಸುಮಲತಾ ವಿರುದ್ಧ ವಾಗ್ದಾಳಿ:

ಸುಮಲತಾ ವಿರುದ್ಧ ವಾಗ್ದಾಳಿ ನಡೆಸಿದ ಅವರು ‘ಅಂಬರೀಷ್‌ ಮೃತಪಟ್ಟ ಸುದ್ದಿ ಕೇಳಿದ ತಕ್ಷಣ ಆಸ್ಪತ್ರೆಗೆ ಹೋದೆ. ಅಲ್ಲಿ ಈ ತಾಯಿ (ಸುಮಲತಾ) ಇರಲಿಲ್ಲ. ಅಂಬರೀಷ್‌ ಅವರ ಮನೆಗೆ ಮೃತದೇಹ ಕೊಂಡೊಯ್ಯಲು ವ್ಯವಸ್ಥೆ ಮಾಡಿಸಿದೆ. ಮಧ್ಯರಾತ್ರಿ ಒಂದು ಕೊಠಡಿ ಸ್ವಚ್ಛ ಮಾಡಿಸಿದೆ. ಅವರು ಬಾಳಿ, ಬದುಕಿದ ಮನೆಯಲ್ಲಿ ಅಂತಿಮ ದರ್ಶನಕ್ಕೆ ವ್ಯವಸ್ಥೆ ಮಾಡಿಸಿದೆ. ಈಗ ಇಲ್ಲಿ ಬಂದು ಕಣ್ಣೀರು ಹಾಕುತ್ತಿದ್ದಾರೆ. ಆ ತಾಯಿಗೆ ಕನಿಷ್ಠ ಸೌಜನ್ಯ ಇದೆಯಾ. ಅಂತಹ ದರ್ದು ನನಗೇನಿತ್ತು’ ಎಂದು ಪ್ರಶ್ನಿಸಿದರು.

‘ಆಸ್ಪತ್ರೆಯಲ್ಲಿ ಅನಾಥವಾಗಿದ್ದ ಹುಡುಗನನ್ನು ಕಂಡು ನಿಖಿಲ್‌ನನ್ನು ಕಳುಹಿಸಿ ನೀವಿಬ್ಬರೂ ಅಣ್ಣ– ತಮ್ಮಂದಿರಂತೆ ಇರಿ ಎಂದು ಹೇಳಿದ್ದೆ. ಅಂಬರೀಷ್‌ ಮೃತದೇಹವನ್ನು ಮಂಡ್ಯಕ್ಕೆ ತೆಗೆದುಕೊಂಡು ಹೋಗೋಣ ಎಂದಾಗ ಮಗನೊಂದಿಗೆ ಬೇಡ ಎಂದ ಮಹಾನ್‌ ತಾಯಿ, ಇವತ್ತು ಕಣ್ಣೀರು ಹಾಕಿ ಜನರ ಮುಂದೆ ಡ್ರಾಮಾ ಮಾಡುತ್ತಿದ್ದಾರೆ. ಅಂಬರೀಷ್‌ ಅವರನ್ನು ಮೊದಲು ಎಂ.ಪಿ ಮಾಡಿದ್ದು ಜನತಾ ಪಕ್ಷ. ಜನರ ಸಮಸ್ಯೆ ಕಂಡಾಗ ನಾನು ಹಾಗೂ ನನ್ನ ತಂದೆ ಕಣ್ಣಲ್ಲಿ ನೀರು ಬರುತ್ತದೆ. ಆದರೆ ಇವರು ಅಳುವುದು ಏಕೆ’ ಎಂದು ಪ್ರಶ್ನಿಸಿದರು.

ಮಾಧ್ಯಮಗಳ ವಿರುದ್ಧ ಮತ್ತೆ ಹರಿಹಾಯ್ದ ಅವರು ‘ನಾನು ಮಾಧ್ಯಮಗಳಿಂದ ಬದುಕಿಲ್ಲ. ಅವರು ಏನು ಬೇಕಾದರೂ ಮಾಡಿಕೊಳ್ಳಲಿ. ನಾನು ಬದುಕಿರುವುದು ಜನರಿಂದ’ ಎಂದರು.

ಯಶ್‌, ದರ್ಶನ್‌ ವಿರುದ್ಧ ಗುಡುಗು

ಯಶ್‌, ದರ್ಶನ್‌ ವಿರುದ್ಧ ಗುಡುಗಿದ ಮುಖ್ಯಮಂತ್ರಿ ‘ಅವ್ಯಾವೋ ಸಿನಿಮಾದವು ಬಂದು ಮಂಡ್ಯ ಸ್ವಾಭಿಮಾನ ಎಂದು ಮಾತನಾಡುತ್ತಿವೆ. ಯಾವನೋ ಅವನು ಯಶ್‌ ನನ್ನ ಪಕ್ಷವನ್ನು ಕಳ್ಳರ ಪಕ್ಷ ಎನ್ನುತ್ತಾನೆ. ಅವರಿಗೆ ಇನ್ನೂ ಗೊತ್ತಿಲ್ಲ, ನನ್ನ ಬಗ್ಗೆ ತಪ್ಪು ಸಂದೇಶ ಹೋಗಬಾರದು ಎಂಬ ಕಾರಣಕ್ಕೆ ಕಾರ್ಯಕರ್ತರು ಸುಮ್ಮನಿದ್ದಾರೆ. ನಾನೂ ನಿರ್ಮಾಪಕ ಆಗಿದ್ದವನು, ನನ್ನಂಥ ನಿರ್ಮಾಪಕ ಇಲ್ಲದಿದ್ದರೆ ಎಲ್ಲಿ ಬದುಕುತ್ತವೆ ಇವು. ಇಲ್ಲಿಯವರೆಗೆ ಬಾಯಿ ಮುಚ್ಚಿಕೊಂಡಿದ್ದೆ. ಕಲಾವಿದರು ಎಂದು ಗೌರವ ಕೊಟ್ಟಿದ್ದಕ್ಕೆ ಹಳ್ಳಿ ಹಳ್ಳಿಯಲ್ಲಿ ಬಾಯಿಗೆ ಬಂದಂತೆ ಮಾತನಾಡುತ್ತಿವೆ' ಎಂದರು.

ಪತ್ನಿ ಜತೆಗಿಲ್ಲ, ಮೋದಿಗೆ ಎಷ್ಟು ಶಿಕ್ಷೆ?

ಜೆಡಿಎಸ್‌ ರಾಜ್ಯ ಘಟಕದ ಅಧ್ಯಕ್ಷ ಎಚ್‌.ವಿಶ್ವನಾಥ್‌ ಮಾತನಾಡಿ ‘ತ್ರಿವಳಿ ತಲಾಖ್‌ ನೀಡಿದರೆ ಮೂರು ವರ್ಷ ಜೈಲು ಶಿಕ್ಷೆ ವಿಧಿಸುತ್ತಾರೆ. ಆದರೆ ಪ್ರಧಾನಿ ನರೇಂದ್ರ ಮೋದಿ ಅವರಿಗೆ ಒಂದು ಪ್ರಶ್ನೆ ಕೇಳುವೆ, ನಿಮ್ಮ ಧರ್ಮಪತ್ನಿ ನಿಮ್ಮ ಜೊತೆಗೆಇಲ್ಲ, ನಿಮಗೆ ಎಷ್ಟು ವರ್ಷ ಶಿಕ್ಷೆ ವಿಧಿಸಬೇಕು’ ಎಂದರು.

‘ವರನಟ ಡಾ.ರಾಜ್‌ಕುಮಾರ್‌ ಸಮಾಧಿ ಪಕ್ಕದಲ್ಲಿ ಅಂಬರೀಷ್‌ ಅಂತ್ಯಸಂಸ್ಕಾರಕ್ಕೆ ಕುಮಾರಸ್ವಾಮಿ ಜಾಗ ಮಾಡಿಕೊಟ್ಟರು. ಆದರೆ ಇಂದು ಕೆಲವರು ಎರಡೂ ಕುಟುಂಬಗಳ ನಡುವೆ ವಿಷ ಬೀಜ ಬಿತ್ತಿದ್ದಾರೆ’ ಎಂದರು.

ಬರಹ ಇಷ್ಟವಾಯಿತೆ?

 • 14

  Happy
 • 5

  Amused
 • 2

  Sad
 • 2

  Frustrated
 • 23

  Angry

Comments:

0 comments

Write the first review for this !