ಬುಧವಾರ, ಅಕ್ಟೋಬರ್ 23, 2019
23 °C

ಮೌಂಟ್ ಅಬು: ಧ್ಯಾನದ ನಾಡು

Published:
Updated:

ಎತ್ತ ನೋಡಿದರೂ ಅಚ್ಚ ಹಸಿರಿನ ಅರಣ್ಯಪ್ರದೇಶ. ಸುಂದರವಾದ ಬೆಟ್ಟಗಳು. ಶ್ವೇತವರ್ಣದ ಕಟ್ಟಡಗಳು. ಇಡೀ ವಾತಾವರಣ ಯೋಗ, ಧ್ಯಾನಕ್ಕೆ ಪ್ರಾಶಸ್ತ್ಯ ಸ್ಥಳ.

ಇದು ರಾಜಸ್ಥಾನದ ಮೌಂಟ್ ಅಬು. ಜೀವಿತಾವಧಿಯಲ್ಲಿ ಒಮ್ಮೆ ಇಲ್ಲಿಗೆ ಭೇಟಿ ನೀಡಬೇಕೆಂಬ ಆಸೆ ಇತ್ತು. ಅದು ಈ ಬಾರಿ ಫಲಿಸಿತು. ಮೌಂಟ್ ಅಬು ಪರಿಸರದಲ್ಲಿ ಪ್ರಜಾಪಿತ ಬಹ್ಮಕುಮಾರಿ ಈಶ್ವರೀಯ ವಿಶ್ವವಿದ್ಯಾಲಯಕ್ಕೆ ಸೇರಿದ ಧ್ಯಾನಮಂದಿರವಿದೆ. ಇದು ಇರುವುದು ಪಾಂಡವ ಬನದಲ್ಲಿ. ಇಲ್ಲಿ ಒಂದೇ ಬಾರಿಗೆ ಸುಮಾರು 2000 ಜನರು ಆಸೀನರಾಗಬಹುದು. ಇಲ್ಲಿ, ಯೂನಿವರ್ಸಲ್ ಹಾರ್ಮೋನಿ ಹಾಲ್, ಶಾಂತಿ ಬನದ ಡೈಮಂಡ್ ಹಾಲ್ ಇದೆ. ಇಲ್ಲಿ ಒಂದೇಬಾರಿಗೆ ಸುಮಾರು 20 ಸಾವಿರ ಮಂದಿಗೆ ಭೋಜನ ತಯಾರಾಗುವಂತಹ ಪಾಕಶಾಲೆಯೂ ಇದೆ. ಈ ತಾಣ ಆಸ್ತಿಕರನ್ನಲ್ಲದೆ ಪ್ರವಾಸಿಗರನ್ನೂ ಆಕರ್ಷಿಸುತ್ತದೆ. ಇಲ್ಲಿಯ ಆಹ್ಲಾದಕರವಾದ, ಸ್ವಚ್ಛಂದ ಪರಿಸರ, ಶಿಸ್ತು, ಸಂಯಮ, ಸೌಹಾರ್ದದ ಸಂಕೇತವಾಗಿರುವ ಮೌಂಟ್ ಅಬು ಪರಿಸರ, ನಮ್ಮ ಮನದಾಳದಲ್ಲಂತೂ ಬಹುಕಾಲ ನೆನಪಿನಲ್ಲಿ ಉಳಿಯುತ್ತದೆ.

ಪೀಸ್ ಪಾರ್ಕ್

ಮೌಂಟ್ ಅಬುವಿನ ಮಧುಬನದಿಂದ ಏಳೆಂಟು ಕಿ.ಮೀ. ದೂರದಲ್ಲಿರುವುದೇ ಪೀಸ್ ಪಾರ್ಕ್. ಇದು ಸಮುದ್ರಮಟ್ಟದಿಂದ 5500 ಅಡಿ ಎತ್ತರದಲ್ಲಿದೆ. ರಾಜಸ್ಥಾನದ ಅತಿ ಎತ್ತರದ ಪರ್ವತವೂ ಹೌದು. ಇದನ್ನು ಗುರುಶಿಖರದ ತಪ್ಪಲು ಎನ್ನುತ್ತಾರೆ. ಪ್ರಜಾಪಿತ ಬ್ರಹ್ಮಕುಮಾರಿಯ ಈಶ್ವರೀಯ ಆಶ್ರಮದವರು ಸ್ಥಾಪಿಸಿರುವ ಪಾರ್ಕ್‌ ಇದು.

ಸದಾ ಹಸಿರು ವನಸಿರಿಯಲ್ಲಿ ನೂರಾರು ಗಿಡ ಮರ ಬಳ್ಳಿಗಳಿವೆ. ಅಪರೂಪದ ಹಾಗೂ ಬಣ್ಣ ಬಣ್ಣದ ಹೂವುಗಳಿವೆ. ಹೂವು, ಗಿಡಗಳಷ್ಟೇ ಅಲ್ಲದೇ, ಆಯುರ್ವೇದ ಔಷಧೀಯ ಗುಣವಿರುವ ಸಸ್ಯಗಳೂ ಇವೆ. ಎಲ್ಲದಕ್ಕೂ ಕಳಸವಿಟ್ಟಂತೆ ಕಂಗೊಳಿಸುವ ಓಂಕಾರ ಬಿತ್ತರಿಸಿರುವ ಹಸಿರ ಬನ, ಪಕ್ಕದ ಗುರುಶಿಖರದ ವಿಹಂಗಮ ನೋಟ, ಅದರ ತುದಿಯಿಂದ ದೂರದ ದಿಗಂತದಂಚಿನಲ್ಲಿ ಕಂಗೊಳಿಸುವ ಥಾರ್ ಮರುಭೂಮಿಯ ನಯನಮನೋಹರ ದೃಶ್ಯ, ಪಾಕಿಸ್ತಾನದ ಗಡಿಭಾಗ, ಮತ್ತಿರ ತಾಣಗಳು ಇಡೀ ಶಾಂತಿ ಉದ್ಯಾನವನವನ್ನು ನೆನಪಿನಂಗಳದಲ್ಲಿ ಹಸಿರಾಗಿ ಉಳಿಸುತ್ತವೆ. ಇಲ್ಲಿ ಸೂರ್ಯೋದಯದ ದೃಶ್ಯ ಹಾಗೂ ಗುರುಶಿಖರದಿಂದ ಕಂಗೊಳಿಸುವ ಸೂರ್ಯಾಸ್ತದ ದೃಶ್ಯ ಮನಮೋಹಕವಾಗಿರುತ್ತೆ.

ದಿಲ್ವಾರ ಟೆಂಪಲ್

ಮೌಂಟ್‌ ಅಬುವಿನಲ್ಲಿ ಸುಮಾರು ಒಂದು ಸಾವಿರ ವರ್ಷಗಳ ಭವ್ಯ ಇತಿಹಾಸವಿರುವ ಜೈನ ಸಮುದಾಯದ ಅಮೃತ ಶಿಲೆಯ ದಿಲ್ವಾರ ಟೆಂಪಲ್ ಇದೆ. ಇದು ಇಲ್ಲಿನ ಪ್ರಮುಖ ಪ್ರೇಕ್ಷಣೀಯ ಸ್ಥಳಗಳಲ್ಲಿ ಅಗ್ರಗಣ್ಯ. ಈ ದೇವಾಲಯದ ಸಂಕೀರ್ಣವು ತನ್ನೊಳಗೆ ಮನಮೋಹಕವಾದ ಐದು ಜೈನ ದೇವಾಲಯಗಳನ್ನು ಹೊಂದಿದೆ. ಇವು ರಾಜಸ್ಥಾನದಲ್ಲಿಯೆ ಅತ್ಯಂತ ಸುಂದರವಾದ ಜೈನ ದೇವಾಲಯಗಳು ಎಂದು ಪರಿಗಣಿಸಲ್ಪಟ್ಟಿವೆ. ಐದು ದೇವಾಲಯಗಳು ಒಂದಕ್ಕಿಂತ ಒಂದು ವಿಭಿನ್ನವಾಗಿ ನಿರ್ಮಾಣಗೊಂಡಿವೆ. ಅಲ್ಲದೆ ಈ ಐದು ದೇವಾಲಯಗಳ ಹೆಸರಿನಲ್ಲಿ ರಾಜಸ್ಥಾನದಲ್ಲಿ ಒಂದೊಂದು ಹಳ್ಳಿಗಳು ಇವೆ.

ಇದು ಪ್ರಜಾಪಿತ ಬ್ರಹ್ಮಕುಮಾರಿ ಆಶ್ರಮದಿಂದ ಮೂರು ಕಿ.ಮೀ. ದೂರದಲ್ಲಿದೆ. ಕ್ರಿ.ಶ. 1031 ರಿಂದ 1582 ರ ಅವಧಿಯಲ್ಲಿ ನಿರ್ಮಾಣವಾಗಿವೆ. ರಾಜಾಸ್ಥಾನದ ದೊರೆಗಳ ಅವಧಿಯಲ್ಲಿ ನಿರ್ಮಿತವಾದಂತಹ ಈ ಭವ್ಯ ದೇಗುಲ ಸಮುಚ್ಛ ಯವು ಒಂದು ಕ್ಷಣ ನಮ್ಮ ಬೇಲೂರು, ಹಳೇಬೀಡು, ಸೋಮನಾಥಪುರ ದೇಗುಲಗಳ ಶಿಲ್ಪಕಲಾ ವೈಭವವನ್ನು ನೆನಪಿಗೆ ತರುತ್ತವೆ. ದೇವಾಲಯಕ್ಕೆ ಪ್ರತಿ ದಿನ ಮಧ್ಯಾಹ್ನ 12 ರಿಂದ ಪ್ರವಾಸಿಗರ ವೀಕ್ಷಣೆಗೆ ಅವಕಾಶ ಕಲ್ಪಿಸಲಾಗಿದೆ.

ನಕ್ಕಿ ಲೇಕ್‌

ಮೌಂಟ್ ಅಬುವಿನ ಪ್ರಜಾಪಿತ ಬ್ರಹ್ಮಾ ಮಧುಬನ ಆಶ್ರಮದಿಂದ ಕೇವಲ 2 ಕಿ.ಮಿ. ದೂರದಲ್ಲಿರುವ ನಕ್ಕಿ ಲೇಕ್ ಇಲ್ಲಿಯ ಮತ್ತೊಂದು ಆಕರ್ಷಣೀಯ ಪ್ರೇಕ್ಷಣೀಯ ಸ್ಥಳ. ವಿಶಾಲವಾಗಿ ಹಬ್ಬಿರುವ ಈ ಸರೋವರವು ಸುತ್ತಲು ಬೆಟ್ಟ ಗುಡ್ಡ ಪ್ರದೇಶಗಳಿಂದ, ರಾಜಾಸ್ಥಾನದ ಅರಸು ಮನೆತನದ ಮನೆಗಳಿಂದ ಕಂಗೊಳಿಸುತ್ತದೆ.

ಇದನ್ನೂ ಓದಿ: ಮೌಂಟ್ ಅಬು ಮರುಭೂಮಿಯ ಓಯಸಿಸ್

ಬೋಟಿಂಗ್ ಇಲ್ಲಿಯ ಪ್ರಮುಖ ಆಕರ್ಷಣೆ. ಪ್ರವಾಸಿಗರು ರಾಜಾಸ್ಥಾನದ ವೈವಿಧ್ಯಮಯ ಪಾದರಕ್ಷೆ ಹಾಗೂ ವಸ್ತ್ರಗಳನ್ನು, ವಿಧ ವಿಧ ಅಲಂಕಾರಿಕ ವಸ್ತುಗಳನ್ನು ಖರೀದಿಸಲು ಇದು ಪ್ರಮುಖ ಕೇಂದ್ರ. ಇಲ್ಲಿರುವಂತೆಯೇ ಮೌಂಟ್ ಅಬುವಿನ ಕೆಳಗಿನ ಶಾಂತಿಬನದ ಪರಿಸರದಲ್ಲೂ ಶಾಪಿಂಗ್ ಕಾಂಪ್ಲೆಕ್ಸ್ ಇದೆ.

ಹೋಗುವುದು ಹೇಗೆ ?

ಬೆಂಗಳೂರಿನಿಂದ ಸುಮಾರು 1800 ಕಿಲೋ ಮೀಟರ್ ದೂರದಲ್ಲಿರುವ ಮೌಂಟ್ ಅಬು, ಪ್ರಜಾಪಿತ ಬ್ರಹ್ಮಕುಮಾರಿ ಈಶ್ವರೀಯ ವಿದ್ಯಾಲಯದ ಪ್ರಮುಖ ಕೇಂದ್ರವೂ ಹೌದು. ಗುಜರಾತಿನ ಅಹಮದಾಬಾದ್‌ನಿಂದ ಸುಮಾರು 225 ಕಿಲೋ ಮೀಟರ್ ದೂರದಲ್ಲಿದೆ.  ಅಬು ರಸ್ತೆಯಿಂದ ಸುಮಾರು 25 ಕಿಲೋ ಮೀಟರ್ ದೂರದಲ್ಲಿದೆ.

ಚಿತ್ರಗಳು: ಲೇಖಕರವು

ಚುನಾವಣಾ ಫಲಿತಾಂಶ 2019 | ಹರಿಯಾಣ ಮತ್ತು ಮಹಾರಾಷ್ಟ್ರ ವಿಧಾನಸಭೆ 2019 ಚುನಾವಣೆಗೆ ಸಂಬಂಧಿಸಿದ ಸಮಗ್ರ ಸುದ್ದಿ, ಮಾಹಿತಿ, ವಿಶ್ಲೇಷಣೆ ಇಲ್ಲಿ ಲಭ್ಯ.

ಮಹಾರಾಷ್ಟ್ರ ವಿಧಾನಸಭೆಯ ಫಲಿತಾಂಶಕ್ಕಾಗಿ ಇಲ್ಲಿ ಕ್ಲಿಕ್ ಮಾಡಿ

ಹರಿಯಾಣ ವಿಧಾನಸಭೆಯ ಫಲಿತಾಂಶಕ್ಕಾಗಿ ಇಲ್ಲಿ ಕ್ಲಿಕ್ ಮಾಡಿ

ಪ್ರತಿಕ್ರಿಯಿಸಿ (+)