ಶ್ರೀಗಳಿಗೆ ಭಾರತ ರತ್ನ: ಕೇಂದ್ರ ಸ್ಪಂದಿಸದಿದ್ದರೆ ಸಂಸದರು ಪ್ರತಿಭಟಿಸಲಿ– ಯತ್ನಾಳ

7
ಸಿದ್ಧಗಂಗೆಯ ಲಿಂಗೈಕ್ಯ ಶಿವಕುಮಾರ ಸ್ವಾಮೀಜಿಗೆ ‘ಭಾರತ ರತ್ನ’ ಘೋಷಿಸದಿದ್ದಕ್ಕೆ ಆಕ್ಷೇಪ

ಶ್ರೀಗಳಿಗೆ ಭಾರತ ರತ್ನ: ಕೇಂದ್ರ ಸ್ಪಂದಿಸದಿದ್ದರೆ ಸಂಸದರು ಪ್ರತಿಭಟಿಸಲಿ– ಯತ್ನಾಳ

Published:
Updated:

ವಿಜಯಪುರ: ‘ತುಮಕೂರು ಸಿದ್ಧಗಂಗಾ ಮಠದ ಲಿಂಗೈಕ್ಯ ಶಿವಕುಮಾರ ಸ್ವಾಮೀಜಿಗೆ ‘ಭಾರತ ರತ್ನ’ ನೀಡುವಂತೆ ರಾಜ್ಯದ ಲೋಕಸಭಾ ಹಾಗೂ ರಾಜ್ಯಸಭಾ ಸದಸ್ಯರು ಕೇಂದ್ರ ಸರ್ಕಾರದ ಮೇಲೆ ಒತ್ತಡ ಹಾಕಬೇಕು’ ಎಂದು ಬಿಜೆಪಿ ಶಾಸಕ ಬಸನಗೌಡ ಪಾಟೀಲ ಯತ್ನಾಳ ಆಗ್ರಹಿಸಿದರು.

‘ಶ್ರೇಷ್ಠ ಕಾಯಕ ಯೋಗಿ, ರಾಷ್ಟ್ರೀಯ ಸಂತನಿಗೆ ‘ಭಾರತ ರತ್ನ’ ನೀಡಲು ಕೇಂದ್ರ ಸರ್ಕಾರ ಸ್ಪಂದಿಸದಿದ್ದರೆ, ರಾಜ್ಯದ ಸಂಸದರು ಪ್ರತಿಭಟಿಸಬೇಕು. ನಮ್ಮ ರಾಜ್ಯ ಪ್ರತಿನಿಧಿಸುತ್ತಿರುವ ಕೇಂದ್ರ ಸಚಿವರು ಈ ವಿಷಯದಲ್ಲಿ ಏನು ಮಾಡುತ್ತಿದ್ದಾರೆ ಎಂಬುದೊಂದು ಅರ್ಥವಾಗುತ್ತಿಲ್ಲ’ ಎಂದು ಗಣರಾಜ್ಯೋತ್ಸವದ ಬಳಿಕ ಶನಿವಾರ ತಮ್ಮನ್ನು ಭೇಟಿಯಾದ ಮಾಧ್ಯಮದವರ ಬಳಿ, ತಮ್ಮದೇ ಪಕ್ಷದ ಕೇಂದ್ರ ಸರ್ಕಾರದ ಪ್ರತಿನಿಧಿಗಳ ವಿರುದ್ಧ ಅಸಮಾಧಾನ ವ್ಯಕ್ತಪಡಿಸಿದರು.

* ಇದನ್ನೂ ಓದಿ: ‘ಸ್ವಾಮೀಜಿಗೆ ಭಾರತ ರತ್ನ ಕೊಡಲು ಸಾಧ್ಯವಿಲ್ಲ’: ‘ಟೀಂಮೋದಿ’ ಕೊಡುವ ಕಾರಣ ನಿಜವೇ?

‘ಪಕ್ಷಾತೀತವಾಗಿ ಮೂವರಿಗೆ ಭಾರತ ರತ್ನ ನೀಡಿದ್ದಕ್ಕೆ ಅಭ್ಯಂತರವಿಲ್ಲ. ಆದರೆ, ಲಕ್ಷ ಲಕ್ಷ ಸಂಖ್ಯೆಯ ಬಡ ಮಕ್ಕಳ ಬಾಳಿಗೆ ಬೆಳಕಾದ ಸಿದ್ಧಗಂಗಾ ಶ್ರೀಗಳಿಗೆ ನೀಡದಿರುವುದಕ್ಕೆ ಜನರಲ್ಲಿ ಆಕ್ರೋಶವಿದೆ. ಇದು ಭವಿಷ್ಯದಲ್ಲಿ ಜನರ ಅಸಮಾಧಾನಕ್ಕೆ ಕಾರಣವಾಗಲಿದೆ. ಇದನ್ನು ಪ್ರಧಾನಿ ಅರಿತುಕೊಳ್ಳುತ್ತಾರೆ ಎಂಬ ವಿಶ್ವಾಸವಿದೆ. ಮರಣೋತ್ತರವಾಗಿಯಾದರೂ ಭಾರತ ರತ್ನ ನೀಡುತ್ತಾರೆಂಬ ನಂಬಿಕೆಯಿದೆ’ ಎಂದು ಯತ್ನಾಳ ಹೇಳಿದರು.

* ಇದನ್ನೂ ಓದಿ: ಭಾರತ ರತ್ನ ಎಂದರೇನು? ಭಾರತ ರತ್ನ ನೀಡಲು ಮಾನದಂಡಗಳು, ಅರ್ಹತೆಗಳೇನು?

‘ಬಳ್ಳಾರಿಯ ಗಣಿ ಧಣಿಗಳಿಂದಲೇ ರಾಜ್ಯದ ರಾಜಕಾರಣ ಹಾಳಾಗಿದೆ. ಈ ಹಿಂದೆ ಕಡಿಮೆ ಖರ್ಚು ಮಾಡಿ ಚುನಾವಣೆ ಗೆಲ್ಲುತ್ತಿದ್ದೆವು. ಇದೀಗ ಅನಾವಶ್ಯಕವಾಗಿ ಹೆಚ್ಚಿಗೆ ಹಣ ಖರ್ಚಾಗುತ್ತಿದೆ. ರೆಸಾರ್ಟ್‌ ಹೊಡೆದಾಟಕ್ಕೆ ಅಯೋಗ್ಯರ ಆಯ್ಕೆಯೇ ಕಾರಣವಾಗಿದೆ’ ಎಂದು ಯತ್ನಾಳ ಪ್ರಶ್ನೆಯೊಂದಕ್ಕೆ ಪ್ರತಿಕ್ರಿಯಿಸಿದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 2

  Angry

Comments:

0 comments

Write the first review for this !